ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 27
ಸಾರ
ಇಂದ್ರನಿಂದ ಅಪಮಾನಿಸಲ್ಪಟ್ಟ ವಾಲಖಿಲ್ಯರು ಗರುಡೋತ್ಪತ್ತಿಗೆ ಯುಜ್ಞ ಮಾಡುವುದು (1-10). ಯಜ್ಞ-ಫಲವಾಗಿ ವಿನತೆಯಲ್ಲಿ ಅರುಣ-ಗರುಡರ ಜನನ (11-35).01027001 ಶೌನಕ ಉವಾಚ।
01027001a ಕೋಽಪರಾಧೋ ಮಹೇಂದ್ರಸ್ಯ ಕಃ ಪ್ರಮಾದಶ್ಚ ಸೂತಜ।
01027001c ತಪಸಾ ವಾಲಖಿಲ್ಯಾನಾಂ ಸಂಭೂತೋ ಗರುಡಃ ಕಥಂ।।
ಶೌನಕನು ಹೇಳಿದನು: “ಸೂತಜ! ಮಹೇಂದ್ರನ ಅಪರಾಧ ಮತ್ತು ಪ್ರಮಾದವಾದರೂ ಏನಿತ್ತು? ವಾಲಖಿಲ್ಯರ ತಪಸ್ಸಿನಿಂದ ಗರುಡನ ಜನ್ಮವು ಹೇಗಾಯಿತು?
01027002a ಕಶ್ಯಪಸ್ಯ ದ್ವಿಜಾತೇಶ್ಚ ಕಥಂ ವೈ ಪಕ್ಷಿರಾಟ್ಸುತಃ।
01027002c ಅಧೃಷ್ಯಃ ಸರ್ವಭೂತಾನಾಮವಧ್ಯಶ್ಚಾಭವತ್ಕಥಂ।।
ಬ್ರಾಹ್ಮಣ ಕಶ್ಯಪನಿಗೆ ಮಗನಾಗಿ ಪಕ್ಷಿಯೊಂದು ಹೇಗೆ ಜನಿಸಿದನು? ಅವನು ಹೇಗೆ ಸರ್ವಭೂತರಲ್ಲಿ ಅವಧ್ಯನೂ ಅಧೃಷ್ಯನೂ ಆದನು?
01027003a ಕಥಂ ಚ ಕಾಮಚಾರೀ ಸ ಕಾಮವೀರ್ಯಶ್ಚ ಖೇಚರಃ।
01027003c ಏತದಿಚ್ಛಾಮ್ಯಹಂ ಶ್ರೋತುಂ ಪುರಾಣೇ ಯದಿ ಪಥ್ಯತೇ।।
ಆ ಖೇಚರನು ಹೇಗೆ ಕಾಮಚಾರಿ ಮತ್ತು ಕಾಮವೀರ್ಯನಾದನು? ಇದೆಲ್ಲವನ್ನೂ ಪುರಾಣಗಳಲ್ಲಿ ಹೇಳಿರುವಂತೆ ಕೇಳಲು ಬಯಸುತ್ತೇನೆ.”
01027004 ಸೂತ ಉವಾಚ।
01027004a ವಿಷಯೋಽಯಂ ಪುರಾಣಸ್ಯ ಯನ್ಮಾಂ ತ್ವಂ ಪರಿಪೃಚ್ಛಸಿ।
01027004c ಶೃಣು ಮೇ ವದತಃ ಸರ್ವಮೇತತ್ಸಂಕ್ಷೇಪತೋ ದ್ವಿಜ।।
ಸೂತನು ಹೇಳಿದನು: “ದ್ವಿಜ! ನೀನು ಕೇಳಿರುವ ವಿಷಯಗಳನ್ನೆಲ್ಲವನ್ನೂ ಪುರಾಣಗಳಲ್ಲಿ ವಿವರಿಸಲಾಗಿದೆ. ಅವೆಲ್ಲವನ್ನೂ ಸಂಕ್ಷಿಪ್ತವಾಗಿ ಹೇಳುತ್ತೇನೆ. ಕೇಳು.
01027005a ಯಜತಃ ಪುತ್ರಕಾಮಸ್ಯ ಕಶ್ಯಪಸ್ಯ ಪ್ರಜಾಪತೇಃ।
01027005c ಸಾಹಾಯ್ಯಂ ಋಷಯೋ ದೇವಾ ಗಂಧರ್ವಾಶ್ಚ ದದುಃ ಕಿಲ।।
ಪ್ರಜಾಪತಿ ಕಶ್ಯಪನು ಸಂತಾನಕ್ಕೋಸ್ಕರ ಯಜ್ಞವನ್ನು ಕೈಗೊಂಡಾಗ ಋಷಿ, ದೇವತೆಗಳು ಮತ್ತು ಗಂಧರ್ವರೆಲ್ಲರೂ ಬಹಳಷ್ಟು ಸಹಾಯ ಮಾಡಿದರು.
01027006a ತತ್ರೇಧ್ಮಾನಯನೇ ಶಕ್ರೋ ನಿಯುಕ್ತಃ ಕಶ್ಯಪೇನ ಹ।
01027006c ಮುನಯೋ ವಾಲಖಿಲ್ಯಾಶ್ಚ ಯೇ ಚಾನ್ಯೇ ದೇವತಾಗಣಾಃ।।
ಕಶ್ಯಪನು ಇಂದ್ರ, ವಾಲಖಿಲ್ಯ ಮುನಿವರ್ಯರು ಮತ್ತು ಇತರ ದೇವಗಣಗಳಿಗೆ ಸಮಿತ್ತುಗಳನ್ನು ತರುವ ಕಾರ್ಯವನ್ನು ವಹಿಸಿದ್ದನು.
01027007a ಶಕ್ರಸ್ತು ವೀರ್ಯಸದೃಶಮಿಧಂ ಭಾರಂ ಗಿರಿಪ್ರಭಂ।
01027007c ಸಮುದ್ಯಮ್ಯಾನಯಾಮಾಸ ನಾತಿಕೃಚ್ಛ್ರಾದಿವ ಪ್ರಭುಃ।।
ಶಕ್ರನು ಸ್ವಲ್ಪವೂ ಆಯಾಸವಿಲ್ಲದೇ ತನ್ನ ಶಕ್ತಿಗನುಗುಣವಾದ ಒಂದು ಪರ್ವತದಷ್ಟು ಸಮಿತ್ತುಗಳನ್ನು ಹೊತ್ತು ತಂದನು.
01027008a ಅಥಾಪಶ್ಯದೃಷೀನ್ ಹ್ರಸ್ವಾನಂಗುಷ್ಟೋದರಪರ್ವಣಃ।
01027008c ಪಲಾಶವೃಂತಿಕಾಮೇಕಾಂ ಸಹಿತಾನ್ವಹತಃ ಪಥಿ।।
ದಾರಿಯಲ್ಲಿ ಅವನು ಗಾತ್ರದಲ್ಲಿ ಅಂಗುಷ್ಠದಷ್ಟು ಸಣ್ಣವರಾಗಿದ್ದ ಋಷಿಗಳೆಲ್ಲರೂ ಸೇರಿ ಒಂದೇ ಒಂದು ಪಲಾಶದ ಕಡ್ಡಿಯನ್ನು ಹೊತ್ತು ತರುತ್ತಿರುವುದನ್ನು ನೋಡಿದನು.
01027009a ಪ್ರಲೀನಾನ್ಸ್ವೇಷ್ವಿವಾಂಗೇಷು ನಿರಾಹಾರಾಂಸ್ತಪೋಧನಾನ್।
01027009c ಕ್ಲಿಶ್ಯಮಾನಾನ್ಮಂದಬಲಾನ್ಗೋಷ್ಪದೇ ಸಂಪ್ಲುತೋದಕೇ।।
ನಿರಾಹಾರದಿಂದ ಬಡಕಲಾಗಿದ್ದ ಆ ತಪೋಧನರು ಮಾರ್ಗದಲ್ಲಿ ಗೋವಿನ ಹೆಜ್ಜೆಯಿಂದ ಉಂಟಾಗಿದ್ದ ಕುಣಿಯೊಂದರಲ್ಲಿ ನೋಡದೇ ಬಿದ್ದು ಸಾಕಷ್ಟು ಹಿಂಸೆಗೊಳಗಾದರು.
01027010a ತಾಂಶ್ಚ ಸರ್ವಾನ್ಸ್ಮಯಾವಿಷ್ಟೋ ವೀರ್ಯೋನ್ಮತ್ತಃ ಪುರಂದರಃ।
01027010c ಅವಹಸ್ಯಾತ್ಯಗಾಶ್ಚೀಘ್ರಂ ಲಂಘಯಿತ್ವಾವಮನ್ಯ ಚ।।
ಇದೆಲ್ಲವನ್ನೂ ನೋಡಿ ವೀರ್ಯಮತ್ತ ಪುರಂದರನು ಅವರನ್ನು ಅಪಹಾಸ್ಯಮಾಡಿ ನಗುತ್ತಾ ವೇಗದಿಂದ ಅವರನ್ನು ದಾಟಿ ಅಪಮಾನಗೊಳಿಸಿದನು.
01027011a ತೇಽಥ ರೋಷಸಮಾವಿಷ್ಟಾಃ ಸುಭೃಶಂ ಜಾತಮನ್ಯವಃ।
01027011c ಆರೇಭಿರೇ ಮಹತ್ಕರ್ಮ ತದಾ ಶಕ್ರಭಯಂಕರಂ।।
ಇದರಿಂದ ಅವರಿಗೆ ಅತಿ ಕೋಪವುಂಟಾಯಿತು. ದುಃಖ ಮತ್ತು ರೋಷಸಮಾವಿಷ್ಠರಾದ ಅವರು ಶಕ್ರನಿಗೆ ಒಂದು ಭಯಂಕರ ಮಹಾ ಯಜ್ಞವನ್ನು ಆರಂಭಿಸಿದರು.
01027012a ಜುಹುವುಸ್ತೇ ಸುತಪಸೋ ವಿಧಿವಜ್ಜಾತವೇದಸಂ।
01027012c ಮಂತ್ರೈರುಚ್ಚಾವಚೈರ್ವಿಪ್ರಾ ಯೇನ ಕಾಮೇನ ತಚ್ಶೃಣು।।
ಆ ಸುತಪಸ್ವಿಗಳು ವಿಧಿವತ್ತಾಗಿ ಯಜ್ಞೇಶ್ವರನಲ್ಲಿ ಮಂತ್ರೋಚ್ಛಾರಣೆಗಳೊಂದಿಗೆ ಹವಿಸ್ಸನ್ನು ಹಾಕಿದರು. ಇದರ ಉದ್ದೇಶವನ್ನು ಕೇಳು.
01027013a ಕಾಮವೀರ್ಯಃ ಕಾಮಗಮೋ ದೇವರಾಜಭಯಪ್ರದಃ।
01027013c ಇಂದ್ರೋಽನ್ಯಃ ಸರ್ವದೇವಾನಾಂ ಭವೇದಿತಿ ಯತವ್ರತಾಃ।।
“ದೇವರಾಜನಿಗೆ ಭಯಪ್ರದ ಕಾಮವೀರ್ಯ ಮತ್ತು ಕಾಮಗಾಮಿಯಾದ ಬೇರೊಬ್ಬ ಸರ್ವ ದೇವತೆಗಳ ಇಂದ್ರನು ಬರಲಿ.
01027014a ಇಂದ್ರಾಚ್ಛತಗುಣಃ ಶೌರ್ಯೇ ವೀರ್ಯೇ ಚೈವ ಮನೋಜವಃ।
01027014c ತಪಸೋ ನಃ ಫಲೇನಾದ್ಯ ದಾರುಣಃ ಸಂಭವತ್ವಿತಿ।।
ನಮ್ಮ ಈ ತಪಸ್ಸಿನಿಂದ ಇಂದ್ರನಿಗಿಂತಲೂ ನೂರುಪಟ್ಟು ವೀರ್ಯ-ಶೌರ್ಯಗಳಿರುವ ಮನೋವೇಗೀ ದಾರುಣನೋರ್ವನ ಉತ್ಪತ್ತಿಯಾಗಲಿ.”
01027015a ತದ್ಬುದ್ಧ್ವಾ ಭೃಶಸಂತಪ್ತೋ ದೇವರಾಜಃ ಶತಕ್ರತುಃ।
01027015c ಜಗಾಮ ಶರಣಂ ತತ್ರ ಕಶ್ಯಪಂ ಸಂಶಿತವ್ರತಂ।।
ಇದನ್ನು ತಿಳಿದು ಭಯಸಂತಪ್ತನಾದ ಶತಕ್ರತು ದೇವರಾಜನು ಸಂಶಿತವ್ರತ ಕಶ್ಯಪನ ಶರಣು ಹೊಕ್ಕನು.
01027016a ತತ್ ಶ್ರುತ್ವಾ ದೇವರಾಜಸ್ಯ ಕಶ್ಯಪೋಽಥ ಪ್ರಜಾಪತಿಃ।
01027016c ವಾಲಖಿಲ್ಯಾನುಪಾಗಮ್ಯ ಕರ್ಮಸಿದ್ಧಿಮಪೃಚ್ಛತ।।
ದೇವರಾಜನ ಮಾತುಗಳನ್ನು ಕೇಳಿದ ಪ್ರಜಾಪತಿ ಕಶ್ಯಪನು ವಾಲಖಿಲ್ಯರ ಬಳಿಬಂದು ಅವರ ಕರ್ಮಸಿದ್ಧಿಯ ಕುರಿತು ವಿಚಾರಿಸಿದನು.
01027017a ಏವಮಸ್ತ್ವಿತಿ ತಂ ಚಾಪಿ ಪ್ರತ್ಯೂಚುಃ ಸತ್ಯವಾದಿನಃ।
01027017c ತಾನ್ಕಶ್ಯಪ ಉವಾಚೇದಂ ಸಾಂತ್ವಪೂರ್ವಂ ಪ್ರಜಾಪತಿಃ।।
ಹೀಗೆ ಕೇಳಲು ಆ ಸತ್ಯವಾದಿಗಳು “ಇದು ಹಾಗೆಯೇ ಆಗುತ್ತದೆ” ಎಂದರು. ಅವರನ್ನು ಸಾಂತ್ವನ ಗೊಳಿಸಲು ಪ್ರಜಾಪತಿ ಕಶ್ಯಪನು ಹೇಳಿದನು:
01027018a ಅಯಮಿಂದ್ರಸ್ತ್ರಿಭುವನೇ ನಿಯೋಗಾದ್ಬ್ರಹ್ಮಣಃ ಕೃತಃ।
01027018c ಇಂದ್ರಾರ್ಥಂ ಚ ಭವಂತೋಽಪಿ ಯತ್ನವಂತಸ್ತಪೋಧನಾಃ।।
“ಈ ಇಂದ್ರನು ಮೂರು ಲೋಕಗಳ ಇಂದ್ರನೆಂದು ಬ್ರಹ್ಮನಿಂದಲೇ ನಿಯುಕ್ತಗೊಂಡಿದ್ದಾನೆ. ತಪೋಧನರಾದ ನೀವು ಇನ್ನೊಬ್ಬ ಇಂದ್ರನಿಗಾಗಿ ಪ್ರಯತ್ನಿಸುತ್ತಿದ್ದೀರಿ.
01027019a ನ ಮಿಥ್ಯಾ ಬ್ರಹ್ಮಣೋ ವಾಕ್ಯಂ ಕರ್ತುಮರ್ಹಥ ಸತ್ತಮಾಃ।
01027019c ಭವತಾಂ ಚ ನ ಮಿಥ್ಯಾಯಂ ಸಂಕಲ್ಪೋ ಮೇ ಚಿಕೀರ್ಷಿತಃ।।
ಸತ್ತಮರೇ! ಬ್ರಹ್ಮವಾಕ್ಯವನ್ನು ಸುಳ್ಳುಮಾಡುವುದು ಸರಿಯಲ್ಲ. ನಿಮ್ಮ ಸಂಕಲ್ಪವನ್ನು ಸುಳ್ಳನ್ನಾಗಿ ಮಾಡುವುದೂ ನನಗೆ ಇಷ್ಟವಿಲ್ಲ.
01027020a ಭವತ್ವೇಷ ಪತತ್ರೀಣಾಂ ಇಂದ್ರೋಽತಿಬಲಸತ್ತ್ವವಾನ್।
01027020c ಪ್ರಸಾದಃ ಕ್ರಿಯತಾಂ ಚೈವ ದೇವರಾಜಸ್ಯ ಯಾಚತಃ।।
ಅತಿಬಲನೂ ಸತ್ವವಂತನೂ ಆದ ಪಕ್ಷಿಗಳ ಇಂದ್ರನೊಬ್ಬನಾಗಲಿ. ಯಾಚಿಸುತ್ತಿರುವ ದೇವೇಂದ್ರನ ಮೇಲೆ ಪ್ರಸನ್ನರಾಗಿರಿ.”
01027021a ಏವಮುಕ್ತಾಃ ಕಶ್ಯಪೇನ ವಾಲಖಿಲ್ಯಾಸ್ತಪೋಧನಾಃ।
01027021c ಪ್ರತ್ಯೂಚುರಭಿಸಂಪೂಜ್ಯ ಮುನಿಶ್ರೇಷ್ಠಂ ಪ್ರಜಾಪತಿಂ।।
ಕಶ್ಯಪನು ಈ ರೀತಿ ಹೇಳಲು ತಪೋಧನ ವಾಲಖಿಲ್ಯರು ಆ ಪ್ರಜಾಪತಿ ಮುನಿಶ್ರೇಷ್ಠನನ್ನು ನಮಸ್ಕರಿಸಿ ಉತ್ತರಿಸಿದರು:
01027022a ಇಂದ್ರಾರ್ಥೋಽಯಂ ಸಮಾರಂಭಃ ಸರ್ವೇಷಾಂ ನಃ ಪ್ರಜಾಪತೇ।
01027022c ಅಪತ್ಯಾರ್ಥಂ ಸಮಾರಂಭೋ ಭವತಶ್ಚಾಯಮೀಪ್ಸಿತಃ।।
“ಪ್ರಜಾಪತೇ! ನಮ್ಮ ಈ ಕಾರ್ಯುಗಳೆಲ್ಲವೂ ಇಂದ್ರನನ್ನು ಸೃಷ್ಟಿಸುವುದಕ್ಕಾಗಿ. ನಿನಗಿಷ್ಟವಾದ ಮಗನು ನಿನಗೆ ಹುಟ್ಟಲೆಂದೇ ಈ ಕಾರ್ಯ ನಡೆಯುತ್ತಿದೆ.
01027023a ತದಿದಂ ಸಫಲಂ ಕರ್ಮ ತ್ವಯಾ ವೈ ಪ್ರತಿಗೃಹ್ಯತಾಂ।
01027023c ತಥಾ ಚೈವ ವಿಧತ್ಸ್ವಾತ್ರ ಯಥಾ ಶ್ರೇಯೋಽನುಪಶ್ಯಸಿ।।
ಆದುದರಿಂದ ಈ ಸಫಲ ಕರ್ಮವನ್ನು ನೀನು ಪ್ರತಿಗ್ರಹಿಸಬೇಕು. ನೀನು ಹೇಗೆ ಶ್ರೇಯಸ್ಸನ್ನು ಕಾಣುತ್ತೀಯೋ ಹಾಗೆ ನಡೆಸಿಕೊಡು.”
01027024a ಏತಸ್ಮಿನ್ನೇವ ಕಾಲೇ ತು ದೇವೀ ದಾಕ್ಷಾಯಣೀ ಶುಭಾ।
01027024c ವಿನತಾ ನಾಮ ಕಲ್ಯಾಣೀ ಪುತ್ರಕಾಮಾ ಯಶಸ್ವಿನೀ।।
01027025a ತಪಸ್ತಪ್ತ್ವಾ ವ್ರತಪರಾ ಸ್ನಾತಾ ಪುಂಸವನೇ ಶುಚಿಃ।
01027025c ಉಪಚಕ್ರಾಮ ಭರ್ತಾರಂ ತಾಮುವಾಚಾಥ ಕಶ್ಯಪಃ।।
ಅದೇ ಸಮಯದಲ್ಲಿ ದೇವಿ, ಶುಭೆ, ಕಲ್ಯಾಣೀ, ಯಶಸ್ವಿನಿ, ತಪಸ್ವಿನಿ, ವ್ರತಪರ ವಿನತೆಯೆಂಬ ಹೆಸರಿನ ದಾಕ್ಷಾಯಣಿಯು ಪುತ್ರಕಾಮಿಯಾಗಿ ಪುಂಸವನ ಸ್ನಾನಮಾಡಿ ಶುಚಿಯಾಗಿ ಪತಿಯ ಬಳಿ ಬಂದಾಗ ಕಶ್ಯಪನು ಅವಳಿಗೆ ಹೇಳಿದನು:
01027026a ಆರಂಭಃ ಸಫಲೋ ದೇವಿ ಭವಿತಾಯಂ ತವೇಪ್ಸಿತಃ।
01027026c ಜನಯಿಷ್ಯಸಿ ಪುತ್ರೌ ದ್ವೌ ವೀರೌ ತ್ರಿಭುವನೇಶ್ವರೌ।।
“ಆರಂಭಿಸಿದ ಯಜ್ಞವು ಸಫಲವಾಯಿತು ಮತ್ತು ದೇವೀ! ನಿನ್ನ ಇಚ್ಛೆಯುಂತೆ ನಿನಗೆ ಈರ್ವರು ವೀರ, ಮೂರೂ ಲೋಕಗಳ ಈಶ್ವರರಾಗಬಲ್ಲ ಮಕ್ಕಳು ಜನಿಸುತ್ತಾರೆ.
01027027a ತಪಸಾ ವಾಲಖಿಲ್ಯಾನಾಂ ಮಮ ಸಂಕಲ್ಪಜೌ ತಥಾ।
01027027c ಭವಿಷ್ಯತೋ ಮಹಾಭಾಗೌ ಪುತ್ರೌ ತೇ ಲೋಕಪೂಜಿತೌ।।
ವಾಲಖಿಲ್ಯರ ತಪಸ್ಸಿನಿಂದ ಮತ್ತು ನನ್ನ ಸಂಕಲ್ಪದಿಂದ ಜನಿಸುವ ಈ ಪುತ್ರರು ಮಹಾಭಾಗರೂ ಲೋಕಪೂಜಿತರೂ ಆಗುತ್ತಾರೆ.”
01027028a ಉವಾಚ ಚೈನಾಂ ಭಗವಾನ್ಮಾರೀಚಃ ಪುನರೇವ ಹ।
01027028c ಧಾರ್ಯತಾಮಪ್ರಮಾದೇನ ಗರ್ಭೋಽಯಂ ಸುಮಹೋದಯಃ।।
ಭಗವಾನ್ ಮಾರೀಚನು ಪುನಃ ಪುನಃ ಅವಳಿಗೆ “ಈ ಸುಮಹೋದಯ ಗರ್ಭಗಳನ್ನು ಜಾಗ್ರತೆಯಲ್ಲಿ ಧರಿಸಿಟ್ಟುಕೋ!” ಎಂದು ಹೇಳಿದನು.
01027029a ಏಕಃ ಸರ್ವಪತತ್ರೀಣಾಮಿಂದ್ರತ್ವಂ ಕಾರಯಿಷ್ಯತಿ।
01027029c ಲೋಕಸಂಭಾವಿತೋ ವೀರಃ ಕಾಮವೀರ್ಯೋ ವಿಹಂಗಮಃ।।
“ಒಬ್ಬನು ಸರ್ವ ಪಕ್ಷಿಗಳ ಇಂದ್ರನಾಗುತ್ತಾನೆ. ವೀರನೂ ಕಾಮವೀರ್ಯನೂ ಆದ ಆ ಪಕ್ಷಿಯು ಲೋಕದಲ್ಲಿ ಎಲ್ಲರ ಗೌರವಾನ್ವಿತನಾಗುತ್ತಾನೆ.”
01027030a ಶತಕ್ರತುಮಥೋವಾಚ ಪ್ರೀಯಮಾಣಃ ಪ್ರಜಾಪತಿಃ।
01027030c ತ್ವತ್ಸಹಾಯೌ ಖಗಾವೇತೌ ಭ್ರಾತರೌ ತೇ ಭವಿಷ್ಯತಃ।।
ಪ್ರಜಾಪತಿಯು ಶತಕ್ರತುವಿಗೆ ಪ್ರೀತಿಯಿಂದ ಹೇಳಿದನು: “ಈ ಈರ್ವರು ಪಕ್ಷಿ ಸಹೋದರರು ನಿನ್ನ ಸಹಾಯಕರಾಗುತ್ತಾರೆ.
01027031a ನೈತಾಭ್ಯಾಂ ಭವಿತಾ ದೋಷಃ ಸಕಾಶಾತ್ತೇ ಪುರಂದರ।
01027031c ವ್ಯೇತು ತೇ ಶಕ್ರ ಸಂತಾಪಸ್ತ್ವಮೇವೇಂದ್ರೋ ಭವಿಷ್ಯಸಿ।।
ಪುರಂದರ! ಅವರಿಂದ ನಿನಗೆ ಯಾವುದೇ ರೀತಿಯ ಬಾಧೆಯೂ ಬರುವುದಿಲ್ಲ. ಶಕ್ರ! ಇಂದು ನಿನ್ನ ಸಂತಾಪವು ಕಳೆಯಿತು. ನೀನೇ ಇಂದ್ರನಾಗಿರುತ್ತೀಯೆ!
01027032a ನ ಚಾಪ್ಯೇವಂ ತ್ವಯಾ ಭೂಯಃ ಕ್ಷೇಪ್ತವ್ಯಾ ಬ್ರಹ್ಮವಾದಿನಃ।
01027032c ನ ಚಾವಮಾನ್ಯಾ ದರ್ಪಾತ್ತೇ ವಾಗ್ವಿಷಾ ಭೃಶಕೋಪನಾಃ।।
ಆದರೆ ಇನ್ನು ಮುಂದೆ ನೀನು ಯಾವ ಬ್ರಹ್ಮವಾದಿಯನ್ನೂ ಕೀಳಾಗಿ ಕಾಣಬೇಡ. ಕೋಪವೇ ಪೆಟ್ಟು ಮತ್ತು ಮಾತೇ ವಿಷವಾಗಬಲ್ಲ ಅವರನ್ನು ದರ್ಪದಿಂದ ಎಂದೂ ಅವಮಾನಿಸಬೇಡ!”
01027033a ಏವಮುಕ್ತೋ ಜಗಾಮೇಂದ್ರೋ ನಿರ್ವಿಶಂಕಸ್ತ್ರಿವಿಷ್ಟಪಂ।
01027033c ವಿನತಾ ಚಾಪಿ ಸಿದ್ಧಾರ್ಥಾ ಬಭೂವ ಮುದಿತಾ ತದಾ।।
ಈ ಮಾತುಗಳನ್ನು ಕೇಳಿದ ಇಂದ್ರನು ನಿರ್ವಿಶಂಕನಾಗಿ ತನ್ನ ಸ್ವರ್ಗಕ್ಕೆ ತೆರಳಿದನು. ವಿನತೆಯೂ ಕೂಡ ತನ್ನ ಬಯಕೆಯು ಸಿದ್ಧಿಯಾಯಿತೆಂದು ಸಂತೋಷಗೊಂಡಳು.
01027034a ಜನಯಾಮಾಸ ಪುತ್ರೌ ದ್ವಾವರುಣಂ ಗರುಡಂ ತಥಾ।
01027034c ಅರುಣಸ್ತಯೋಸ್ತು ವಿಕಲ ಆದಿತ್ಯಸ್ಯ ಪುರಃಸರಃ।।
ಅವಳು ಅರುಣ ಮತ್ತು ಗರುಡರೆಂಬ ಈರ್ವರು ಪುತ್ರರಿಗೆ ಜನ್ಮವಿತ್ತಳು. ದೇಹದಲ್ಲಿ ವಿಕಲನಾಗಿದ್ದ ಅರುಣನು ಸೂರ್ಯನ ಮುಂದೆ ಕುಳಿತು ಸಾರಥಿಯಾದನು.
01027035a ಪತತ್ರೀಣಾಂ ತು ಗರುಡ ಇಂದ್ರತ್ವೇನಾಭ್ಯಷಿಚ್ಯತ।
01027035c ತಸ್ಯೈತತ್ಕರ್ಮ ಸುಮಹಶ್ರೂಯತಾಂ ಭೃಗುನಂದನ।।
ಗರುಡನಾದರೋ ಪಕ್ಷಿಗಳ ಇಂದ್ರನೆಂದು ಅಭಿಷಿಕ್ತನಾದನು. ಭೃಗುನಂದನ! ಅವನದೇ ಸುಮಹತ್ತರ ಕಾರ್ಯಗಳನ್ನು ನಾನು ಈಗ ವರ್ಣಿಸುತ್ತಿದ್ದೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಸಪ್ತವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೇಳನೇ ಅಧ್ಯಾಯವು.