026 ಸುಪರ್ಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 26

ಸಾರ ವಾಲಖಿಲ್ಯರಿರುವ ಮರದ ರೆಂಬೆಯನ್ನೂ ಹಿಡಿದು ಗರುಡನು ಹಾರಿದುದು (1-15). ಮರದ ರೆಂಬೆಯನ್ನು ಪರ್ವತದ ಮೇಲಿರಿಸಿ ಗರುಡನು ಆನೆ-ಕಚ್ಛಪರನ್ನು ಭಕ್ಷಿಸುವುದು (16-25). ದೇವತೆಗಳಿಗೆ ಅಪಶಕುನಗಳು ಕಂಡುಬರುವುದು, ದೇವತೆಗಳು ಆಯುಧಗಳನ್ನು ಧರಿಸಿದುದು (26-47).

01026001 ಸೂತ ಉವಾಚ।
01026001a ಸ್ಪೃಷ್ಟಮಾತ್ರಾ ತು ಪದ್ಭ್ಯಾಂ ಸಾ ಗರುಡೇನ ಬಲೀಯಸಾ।
01026001c ಅಭಜ್ಯತ ತರೋಃ ಶಾಖಾ ಭಗ್ನಾಂ ಚೈನಾಮಧಾರಯತ್।।

ಸೂತನು ಹೇಳಿದನು: “ಮಹಾಬಲಿ ಗರುಡನು ತನ್ನ ಪಂಜುಗಳಿಂದ ಆ ರೆಂಬೆಯನ್ನು ಮುಟ್ಟಿದಾಕ್ಷಣವೇ ಅದು ಮುರಿಯಲು ಅವನು ಆ ತುಂಡಾದ ರೆಂಬೆಯನ್ನೂ ಹಿಡಿದುಕೊಂಡನು.

01026002a ತಾಂ ಭಗ್ನಾಂ ಸ ಮಹಾಶಾಖಾಂ ಸ್ಮಯನ್ಸಮವಲೋಕಯನ್।
01026002c ಅಥಾತ್ರ ಲಂಬತೋಽಪಶ್ಯದ್ವಾಲಖಿಲ್ಯಾನಧೋಮುಖಾನ್।।

ತುಂಡಾದ ಆ ಮಹಾಶಾಖೆಯನ್ನು ಮುಗುಳ್ನಗುತ್ತಾ ನೋಡುತ್ತಿರಲು ಅಲ್ಲಿ ಅಧೋಮುಖರಾಗಿ ನೇಲುತ್ತಿದ್ದ ವಾಲಖಿಲ್ಯರನ್ನು ಕಂಡನು.

01026003a ಸ ತದ್ವಿನಾಶಸಂತ್ರಾಸಾದನುಪತ್ಯ ಖಗಾಧಿಪಃ।
01026003c ಶಾಖಾಮಾಸ್ಯೇನ ಜಗ್ರಾಹ ತೇಷಾಮೇವಾನ್ವವೇಕ್ಷಯಾ।
01026003e ಶನೈಃ ಪರ್ಯಪತತ್ಪಕ್ಷೀ ಪರ್ವತಾನ್ಪ್ರವಿಶಾತಯನ್।।

ಅವರ ನಾಶದ ಭಯಪಟ್ಟ ಖಗಾಧಿಪನು ಅವರನ್ನು ಉಳಿಸುವ ಅಪೇಕ್ಷೆಯಿಂದ ಆ ರೆಂಬೆಯನ್ನು ತನ್ನ ಕೊಕ್ಕಿನಲ್ಲಿ ಹಿಡಿದು, ಪರ್ವತವನ್ನೇ ನಡುಗಿಸುತ್ತಾ ನಿಧಾನವಾಗಿ ಮೇಲೇರಿದನು.

01026004a ಏವಂ ಸೋಽಭ್ಯಪತದ್ದೇಶಾನ್ಬಹೂನ್ಸಗಜಕಚ್ಛಪಃ।
01026004c ದಯಾರ್ಥಂ ವಾಲಖಿಲ್ಯಾನಾಂ ನ ಚ ಸ್ಥಾನಮವಿಂದತ।।

ಈ ರೀತಿ ಆನೆ-ಕಚ್ಛಪ-ವಾಲಖಿಲ್ಯರನ್ನು ಹಿಡಿದು ಹಾರುತ್ತಿದ್ದ ಅವನು ಬಹಳಷ್ಟು ದೇಶಗಳನ್ನು ನೋಡಿದರೂ ಇಳಿಯಲು ಯೋಗ್ಯವಾದ ಯಾವ ಪ್ರದೇಶವನ್ನೂ ಕಾಣಲಿಲ್ಲ.

01026005a ಸ ಗತ್ವಾ ಪರ್ವತಶ್ರೇಷ್ಠಂ ಗಂಧಮಾದನಮವ್ಯಯಂ।
01026005c ದದರ್ಶ ಕಶ್ಯಪಂ ತತ್ರ ಪಿತರಂ ತಪಸಿ ಸ್ಥಿತಂ।।

ಆಗ ಅವ್ಯಯ ಪರ್ವತಶ್ರೇಷ್ಠ ಗಂಧಮಾದನಕ್ಕೆ ಹೋಗಿ ಅಲ್ಲಿ ತಪಸ್ಸಿನಲ್ಲಿ ನಿರತನಾಗಿದ್ದ ತಂದೆ ಕಶ್ಯಪನನ್ನು ಕಂಡನು.

01026006a ದದರ್ಶ ತಂ ಪಿತಾ ಚಾಪಿ ದಿವ್ಯರೂಪಂ ವಿಹಂಗಮಂ।
01026006c ತೇಜೋವೀರ್ಯಬಲೋಪೇತಂ ಮನೋಮಾರುತರಂಹಸಂ।।
01026007a ಶೈಲಶೃಂಗಪ್ರತೀಕಾಶಂ ಬ್ರಹ್ಮದಂಡಮಿವೋದ್ಯತಂ।
01026007c ಅಚಿಂತ್ಯಮನಭಿಜ್ಞೇಯಂ ಸರ್ವಭೂತಭಯಂಕರಂ।।
01026008a ಮಾಯಾವೀರ್ಯಧರಂ ಸಾಕ್ಷಾದಗ್ನಿಮಿದ್ಧಮಿವೋದ್ಯತಂ।
01026008c ಅಪ್ರಧೃಷ್ಯಮಜೇಯಂ ಚ ದೇವದಾನವರಾಕ್ಷಸೈಃ।।
01026009a ಭೇತ್ತಾರಂ ಗಿರಿಶೃಂಗಾಣಾಂ ನದೀಜಲವಿಶೋಷಣಂ।
01026009c ಲೋಕಸಂಲೋಡನಂ ಘೋರಂ ಕೃತಾಂತಸಮದರ್ಶನಂ।।
01026010a ತಮಾಗತಮಭಿಪ್ರೇಕ್ಷ್ಯ ಭಗವಾನ್ಕಶ್ಯಪಸ್ತದಾ।
01026010c ವಿದಿತ್ವಾ ಚಾಸ್ಯ ಸಂಕಲ್ಪಮಿದಂ ವಚನಮಬ್ರವೀತ್।।

ತೇಜಸ್ಸು ಮತ್ತು ಬಲದಿಂದೊಡಗೂಡಿದ, ಮನೋಮಾರುತದ ವೇಗವುಳ್ಳ, ಶೈಲಶೃಂಗದಂತೆ ಮಹಾಕಾಯನಾದ, ಬ್ರಾಹ್ಮಣನ ಶಾಪದಂತೆ ತೀಕ್ಷ್ಣನಾದ, ಅಚಿಂತ್ಯನೂ ಅನಭಿಜ್ಞೇಯನೂ ಆದ, ಸರ್ವಭೂತಭಯಂಕರ, ಮಹಾವೀರ್ಯಧರ, ಸಾಕ್ಷಾತ್ ಅಗ್ನಿಯಂತೆ ದೇದೀಪ್ಯಮಾನನಾದ, ದೇವದಾನವರಾಕ್ಷಸರಿಂದ ಅಜೇಯನಾದ, ಗಿರಿಶೃಂಗಗಳನ್ನು ಪುಡಿಪುಡಿಮಾಡಬಲ್ಲ, ಸಾಗರದ ನೀರನ್ನೆಲ್ಲ ಹೀರಬಲ್ಲ, ಲೋಕಗಳನ್ನೆಲ್ಲ ನಾಶಪಡಿಸಬಲ್ಲ, ಕೃತಾಂತ ಸದೃಶ, ಆ ದಿವ್ಯರೂಪೀ ವಿಹಂಗಮನನ್ನು ನೋಡಿದ ಅವನ ತಂದೆ ಭಗವಾನ್ ಕಶ್ಯಪನು ಅವನ ಸಂಕಲ್ಪವೇನೆಂದು ತಿಳಿದು ಅವನನ್ನುದ್ದೇಶಿಸಿ ಹೇಳಿದನು:

01026011a ಪುತ್ರ ಮಾ ಸಾಹಸಂ ಕಾರ್ಷೀರ್ಮಾ ಸದ್ಯೋ ಲಪ್ಸ್ಯಸೇ ವ್ಯಥಾಂ।
01026011c ಮಾ ತ್ವಾ ದಹೇಯುಃ ಸಂಕ್ರುದ್ಧಾ ವಾಲಖಿಲ್ಯಾ ಮರೀಚಿಪಾಃ।।

“ಪುತ್ರ! ಮುಂದೆ ನೋವನ್ನು ಅನುಭವಿಸಬೇಕಾಗಿ ಬರುವಂಥಹ ಯಾವ ಸಾಹಸವನ್ನೂ ಮಾಡಬೇಡ. ಸೂರ್ಯನ ಕಿರಣಗಳಿಂದ ಜೀವಿಸುತ್ತಿರುವ ವಾಲಖಿಲ್ಯರು ಕುಪಿತರಾದರೆ ನಿನ್ನನ್ನು ಸುಟ್ಟುಬಿಡಬಲ್ಲರು.”

01026012a ಪ್ರಸಾದಯಾಮಾಸ ಸ ತಾನ್ಕಶ್ಯಪಃ ಪುತ್ರಕಾರಣಾತ್।
01026012c ವಾಲಖಿಲ್ಯಾಂಸ್ತಪಃ ಸಿದ್ಧಾನಿದಮುದ್ದಿಶ್ಯ ಕಾರಣಂ।।
01026013a ಪ್ರಜಾಹಿತಾರ್ಥಮಾರಂಭೋ ಗರುಡಸ್ಯ ತಪೋಧನಾಃ।
01026013c ಚಿಕೀರ್ಷತಿ ಮಹತ್ಕರ್ಮ ತದನುಜ್ಞಾತುಮರ್ಹಥ।।

ತನ್ನ ಪುತ್ರನ ಸಲುವಾಗಿ ಕಶ್ಯಪನು ತಪಃಸಿದ್ಧ ವಾಲಖಿಲ್ಯರನ್ನು ಸಂತುಷ್ಟಗೊಳಿಸಲೋಸುಗ ಈ ರೀತಿ ಹೇಳಿದನು: “ತಪೋಧನರೇ! ಪ್ರಜಾಹಿತಾರ್ಥಕ್ಕಾಗಿಯೇ ಗರುಡನ ಉದ್ಭವವಾಗಿದೆ. ಒಂದು ಮಹತ್ತರ ಕರ್ಯವನ್ನು ಕೈಗೊಂಡಿದ್ದಾನೆ. ಅದಕ್ಕೆ ನಿಮ್ಮ ಅನುಜ್ಞೆಯನ್ನು ನೀಡಬೇಕು.”

01026014a ಏವಮುಕ್ತಾ ಭಗವತಾ ಮುನಯಸ್ತೇ ಸಮಭ್ಯಯುಃ।
01026014c ಮುಕ್ತ್ವಾ ಶಾಖಾಂ ಗಿರಿಂ ಪುಣ್ಯಂ ಹಿಮವಂತಂ ತಪೋರ್ಥಿನಃ।।

ಭಗವಾನ್ ಮುನಿಯ ಮಾತುಗಳನ್ನು ಕೇಳಿದ ತಪಾರ್ಥಿ ಮುನಿಗಳು ಆ ರೆಂಬೆಯನ್ನು ಬಿಟ್ಟು ಪುಣ್ಯಕರ ಹಿಮವತ್ ಗಿರಿಗೆ ತೆರಳಿದರು.

01026015a ತತಸ್ತೇಷ್ವಪಯಾತೇಷು ಪಿತರಂ ವಿನತಾತ್ಮಜಃ।
01026015c ಶಾಖಾವ್ಯಾಕ್ಷಿಪ್ತವದನಃ ಪರ್ಯಪೃಚ್ಛತ ಕಶ್ಯಪಂ।।

ಅವರು ಹೊರಟುಹೋದ ನಂತರ ವಿನತಾತ್ಮಜನು ರೆಂಬೆಯನ್ನು ಕಚ್ಚಿಹಿಡಿದ ಬಾಯಿಯಿಂದಲೇ ತನ್ನ ತಂದೆ ಕಶ್ಯಪನನ್ನು ಕೇಳಿದನು:

01026016a ಭಗವನ್ಕ್ವ ವಿಮುಂಚಾಮಿ ತರುಶಾಖಾಮಿಮಾಮಹಂ।
01026016c ವರ್ಜಿತಂ ಬ್ರಾಹ್ಮಣೈರ್ದೇಶಮಾಖ್ಯಾತು ಭಗವಾನ್ಮಮ।।

“ಭಗವನ್! ಈ ಮುಹಾವೃಕ್ಷದ ಶಾಖೆಯನ್ನು ಎಲ್ಲಿ ಇಳಿಸಲಿ? ಭಗವನ್! ಬ್ರಾಹ್ಮಣರಿಲ್ಲದಿರುವ ಒಂದು ಪ್ರದೇಶವನ್ನು ನನಗೆ ತೋರಿಸಿಕೊಡು.”

01026017a ತತೋ ನಿಷ್ಪುರುಷಂ ಶೈಲಂ ಹಿಮಸಂರುದ್ಧಕಂದರಂ।
01026017c ಅಗಮ್ಯಂ ಮನಸಾಪ್ಯನ್ಯೈಸ್ತಸ್ಯಾಚಖ್ಯೌ ಸ ಕಶ್ಯಪಃ।।

ಆಗ ಕಶ್ಯಪನು ಬ್ರಾಹ್ಮಣರು ಇಲ್ಲದೇ ಇರುವ ಹಿಮಸಂವೃದ್ಧ ಕಂದರಗಳಿರುವ, ಸಾಧಾರಣ ಮನುಷ್ಯರ ಯೋಚನೆಗೂ ನಿಲುಕದ ಪರ್ವತವೊಂದನ್ನು ತೋರಿಸಿದನು.

01026018a ತಂ ಪರ್ವತಮಹಾಕುಕ್ಷಿಮಾವಿಶ್ಯ ಮನಸಾ ಖಗಃ।
01026018c ಜವೇನಾಭ್ಯಪತತ್ತಾರ್ಕ್ಷ್ಯಃ ಸಶಾಖಾಗಜಕಚ್ಛಪಃ।।

ಆ ಮಹಾಕಂದರವನ್ನು ಮನಸ್ಸಿನಲ್ಲಿಯೇ ಕಂಡ ಪಕ್ಷಿ ತಾರ್ಕ್ಷನು ರೆಂಬೆ, ಆಮೆ ಮತ್ತು ಆನೆಗಳನ್ನು ಹಿಡಿದು ಅದರೆಡೆಗೆ ಅತ್ಯಂತ ವೇಗದಿಂದ ಹೊರಟನು.

01026019a ನ ತಾಂ ವಧ್ರಃ ಪರಿಣಹೇತ್ ಶತಚರ್ಮಾ ಮಹಾನಣುಃ।
01026019c ಶಾಖಿನೋ ಮಹತೀಂ ಶಾಖಾಂ ಯಾಂ ಪ್ರಗೃಹ್ಯ ಯಯೌ ಖಗಃ।।

ಆ ಪಕ್ಷಿಯು ಕಚ್ಚಿ ಹಾರುತ್ತಿದ್ದ ಮಹಾಶಾಖೆಯನ್ನು ಒಂದು ನೂರು ಮಹಾಮೃಗಗಳ ಚರ್ಮದಿಂದ ತಯಾರಿಸಿದ ತೆಳು ವಸ್ತ್ರದಿಂದಲೂ ಸುತ್ತಲು ಸಾಧ್ಯವಾಗುತ್ತಿರಲಿಲ್ಲ.

01026020a ತತಃ ಸ ಶತಸಾಹಸ್ರಂ ಯೋಜನಾಂತರಮಾಗತಃ।
01026020c ಕಾಲೇನ ನಾತಿಮಹತಾ ಗರುಡಃ ಪತತಾಂ ವರಃ।।

ಪಕ್ಷಿಶ್ರೇಷ್ಠ ಗರುಡನು ಸ್ವಲ್ಪವೇ ಸಮಯದಲ್ಲಿ ನೂರು ಸಾವಿರ ಯೋಜನೆಗಳನ್ನು ದಾಟಿದನು.

01026021a ಸ ತಂ ಗತ್ವಾ ಕ್ಷಣೇನೈವ ಪರ್ವತಂ ವಚನಾತ್ಪಿತುಃ।
01026021c ಅಮುಂಚನ್ಮಹತೀಂ ಶಾಖಾಂ ಸಸ್ವನಾಂ ತತ್ರ ಖೇಚರಃ।।

ಆ ಖೇಚರನು ಕ್ಷಣಮಾತ್ರದಲ್ಲಿ ತಂದೆಯು ಹೇಳಿದ ಪರ್ವತವನ್ನು ತಲುಪಿ ಮಹಾಶಾಖೆಯನ್ನು ಬಿಡುಗಡೆ ಮಾಡಿದಾಗ ಅದು ಅಬ್ಬರದಿಂದ ಕೆಳಗುರುಳಿತು.

01026022a ಪಕ್ಷಾನಿಲಹತಶ್ಚಾಸ್ಯ ಪ್ರಾಕಂಪತ ಸ ಶೈಲರಾಟ್।
01026022c ಮುಮೋಚ ಪುಷ್ಪವರ್ಷಂ ಚ ಸಮಾಗಲಿತಪಾದಪಃ।।

ಅವನ ರೆಕ್ಕೆಗಳಿಂದ ಎಬ್ಬಿಸಲ್ಪಟ್ಟ ಭಿರುಗಾಳಿಯಿಂದ ಶೈಲರಾಜನು ತತ್ತರಿಸಿದನು ಮತ್ತು ಅಲ್ಲಿರುವ ಮರಗಳು ಕೆಳಗುರುಳಿ ಬೀಳುವಾಗ ಪುಷ್ಪವರ್ಷವೇ ಆಯಿತು.

01026023a ಶೃಂಗಾಣಿ ಚ ವ್ಯಶೀರ್ಯಂತ ಗಿರೇಸ್ತಸ್ಯ ಸಮಂತತಃ।
01026023c ಮಣಿಕಾಂಚನಚಿತ್ರಾಣಿ ಶೋಭಯಂತಿ ಮಹಾಗಿರಿಂ।।

ಆ ಮಹಾಗಿರಿಯ ಶಿಖರಗಳನ್ನು ಅಲಂಕರಿಸಿದ್ದ ಮಣಿ-ಕಾಂಚನಗಳು ಸಡಿಲವಾಗಿ ಪರ್ವತದ ಎಲ್ಲ ಕಡೆಗಳಿಂದ ಉದುರಿದವು.

01026024a ಶಾಖಿನೋ ಬಹವಶ್ಚಾಪಿ ಶಾಖಯಾಭಿಹತಾಸ್ತಯಾ।
01026024c ಕಾಂಚನೈಃ ಕುಸುಮೈರ್ಭಾಂತಿ ವಿದ್ಯುತ್ವಂತ ಇವಾಂಬುದಾಃ।।

ಕಾಂಚನ ಕುಸುಮಗಳ ಹಲವಾರು ರೆಂಬೆಗಳ ಮೇಲೆ ಈ ರೆಂಬೆಯು ಬಿದ್ದಾಗ ಅವು ಮಿಂಚುಬಡಿದ ಕಪ್ಪು ಮೋಡಗಳಂತೆ ಕಂಡವು.

01026025a ತೇ ಹೇಮವಿಕಚಾ ಭೂಯೋ ಯುಕ್ತಾಃ ಪರ್ವತಧಾತುಭಿಃ।
01026025c ವ್ಯರಾಜನ್ ಶಾಖಿನಸ್ತತ್ರ ಸೂರ್ಯಾಂಶುಪ್ರತಿರಂಜಿತಾಃ।।

ಪರ್ವತ ಖನಿಜಗಳನ್ನೊಡಗೂಡಿ ಕೆಳಗೆ ಉರುಳುತ್ತಿದ್ದ ಬಂಗಾರದ ಹೊಳಪಿನ ರೆಂಬೆಗಳು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತಿದ್ದವು.

01026026a ತತಸ್ತಸ್ಯ ಗಿರೇಃ ಶೃಂಗಮಾಸ್ಥಾಯ ಸ ಖಗೋತ್ತಮಃ।
01026026c ಭಕ್ಷಯಾಮಾಸ ಗರುಡಸ್ತಾವುಭೌ ಗಜಕಚ್ಛಪೌ।।

ಆಗ ಆ ಖಗೋತ್ತಮ ಗರುಡನು ಗಿರಿಶಿಖರದ ಮೇಲೇರಿ ಆನೆ-ಆಮೆಗಳೆರಡನ್ನೂ ಭಕ್ಷಿಸಿದನು.

01026027a ತತಃ ಪರ್ವತಕೂಟಾಗ್ರಾದುತ್ಪಪಾತ ಮನೋಜವಃ।
01026027c ಪ್ರಾವರ್ತಂತಾಥ ದೇವಾನಾಮುತ್ಪಾತಾ ಭಯವೇದಿನಃ।।

ಮನಸ್ಸಿನಷ್ಟೇ ವೇಗವಾಗಿ ಅವನು ಆ ಪರ್ವತ ಶಿಖರದಿಂದ ಮೇಲೇರುತ್ತಿದ್ದಂತೆ ದೇವತೆಗಳಿಗೆ ಭಯ-ನೋವುಗಳನ್ನು ಸೂಚಿಸುವ ಅಪಶಕುನಗಳು ಕಾಣಿಸಿಕೊಂಡವು.

01026028a ಇಂದ್ರಸ್ಯ ವಜ್ರಂ ದಯಿತಂ ಪ್ರಜಜ್ವಾಲ ವ್ಯಥಾನ್ವಿತಂ।
01026028c ಸಧೂಮಾ ಚಾಪತತ್ಸಾರ್ಚಿರ್ದಿವೋಲ್ಕಾ ನಭಸಶ್ಚ್ಯುತಾ।।

ಇಂದ್ರನ ಪ್ರಿಯ ವಜ್ರವು ಭಯದಿಂದ ಪ್ರಜ್ವಲಗೊಂಡಿತು. ಹಗಲಿನಲ್ಲಿಯೂ ನಭದಿಂದ ಹೊಗೆ-ಬೆಂಕಿಗಳನ್ನೊಡಗೂಡಿದ ಉಲ್ಕೆಗಳು ಬೀಳತೊಡಗಿದವು.

01026029a ತಥಾ ವಸೂನಾಂ ರುದ್ರಾಣಾಮಾದಿತ್ಯಾನಾಂ ಚ ಸರ್ವಶಃ।
01026029c ಸಾಧ್ಯಾನಾಂ ಮರುತಾಂ ಚೈವ ಯೇ ಚಾನ್ಯೇ ದೇವತಾಗಣಾಃ।
01026029e ಸ್ವಂ ಸ್ವಂ ಪ್ರಹರಣಂ ತೇಷಾಂ ಪರಸ್ಪರಮುಪಾದ್ರವತ್।।

ವಸು, ರುದ್ರ, ಆದಿತ್ಯ, ಸಾಧ್ಯ, ಮರುತ ಮತ್ತು ಅನ್ಯ ದೇವಗಣಗಳ ಆಯುಧಗಳೆಲ್ಲವೂ ಪರಸ್ಪರ ಹೊಡೆದಾಡಲು ಪ್ರಾರಂಭಿಸಿದವು.

01026030a ಅಭೂತಪೂರ್ವಂ ಸಂಗ್ರಾಮೇ ತದಾ ದೇವಾಸುರೇಽಪಿ ಚ।
01026030c ವವುರ್ವಾತಾಃ ಸನಿರ್ಘಾತಾಃ ಪೇತುರುಲ್ಕಾಃ ಸಮಂತತಃ।।

ಇದಕ್ಕೆ ಮೊದಲು ಎಂದೂ - ದೇವಾಸುರ ಸಂಗ್ರಾಮದ ಸಮಯದಲ್ಲಿಯೂ - ಹೀಗೆ ಆಗಿರಲಿಲ್ಲ. ಗುಡುಗಿನೊಂದಿಗೆ ಭಿರುಗಾಳಿ ಬೀಸುತ್ತಾ ಒಂದೇ ಸಮನೆ ಉಲ್ಕೆಗಳು ತೂರತೊಡಗಿದವು.

01026031a ನಿರಭ್ರಮಪಿ ಚಾಕಾಶಂ ಪ್ರಜಗರ್ಜ ಮಹಾಸ್ವನಂ।
01026031c ದೇವಾನಾಮಪಿ ಯೋ ದೇವಃ ಸೋಽಪ್ಯವರ್ಷದಸೃಕ್ತದಾ।।

ಮೋಡಗಳಿಲ್ಲದಿದ್ದರೂ ಆಕಾಶವು ಜೋರಾಗಿ ಗರ್ಜಿಸಿತು. ದೇವತೆಗಳ ದೇವನು ರಕ್ತದ ಮಳೆಯನ್ನು ಸುರಿಸಿದನು.

01026032a ಮಮ್ಲುರ್ಮಾಲ್ಯಾನಿ ದೇವಾನಾಂ ಶೇಮುಸ್ತೇಜಾಂಸಿ ಚೈವ ಹಿ।
01026032c ಉತ್ಪಾತಮೇಘಾ ರೌದ್ರಾಶ್ಚ ವವರ್ಷುಃ ಶೋಣಿತಂ ಬಹು।
01026032e ರಜಾಂಸಿ ಮುಕುಟಾನ್ಯೇಷಾಮುತ್ಥಿತಾನಿ ವ್ಯಧರ್ಷಯನ್।।

ದೇವತೆಗಳ ಮಾಲೆಗಳು ಮಾಸಿದವು. ಅವರ ತೇಜಸ್ಸು ಕುಂದಿತು. ಮೋಡಗಳು ಮೇಲೆದ್ದು ರೌದ್ರಾಕಾರವಾಗಿ ಗರ್ಜಿಸುತ್ತಾ ಅತಿಯಾಗಿ ರಕ್ತದ ಮಳೆಯನ್ನು ಸುರಿಸಿದವು. ಮೇಲೆದ್ದ ಧೂಳಿನ ಭಿರುಗಾಳಿಯು ದೇವತೆಗಳ ಕಿರೀಟಗಳನ್ನು ಮರೆಮಾಡಿತು.

01026033a ತತಸ್ತ್ರಾಸಸಮುದ್ವಿಗ್ನಃ ಸಹ ದೇವೈಃ ಶತಕ್ರತುಃ।
01026033c ಉತ್ಪಾತಾನ್ದಾರುಣಾನ್ಪಶ್ಯನ್ನಿತ್ಯುವಾಚ ಬೃಹಸ್ಪತಿಂ।।

ಈ ದಾರುಣ ಉತ್ಪಾತಗಳನ್ನು ಕಂಡು ಉದ್ವಿಗ್ನನಾದ ಶತಕ್ರತುವು ಇತರ ದೇವತೆಗಳೊಡಗೂಡಿ ಬೃಹಸ್ಪತಿಯನ್ನು ಕೇಳಿದನು:

01026034a ಕಿಮರ್ಥಂ ಭಗವನ್ ಘೋರಾ ಮಹೋತ್ಪಾತಾಃ ಸಮುತ್ಥಿತಾಃ।
01026034c ನ ಚ ಶತ್ರುಂ ಪ್ರಪಶ್ಯಾಮಿ ಯುಧಿ ಯೋ ನಃ ಪ್ರಧರ್ಷಯೇತ್।।

“ಭಗವನ್! ಈ ಘೋರ ಮಹೋತ್ಪಾತಗಳು ಏಕೆ ಕಾಣಿಸಿಕೊಳ್ಳುತ್ತಿವೆ? ಯುದ್ಧದಲ್ಲಿ ನಮ್ಮ ಮೇಲೆ ಜಯಗಳಿಸುವ ಶತ್ರು ಯಾರೂ ಕಾಣಬರುತ್ತಿಲ್ಲವಲ್ಲ?”

01026035 ಬೃಹಸ್ಪತಿರುವಾಚ।
01026035a ತವಾಪರಾಧಾದ್ದೇವೇಂದ್ರ ಪ್ರಮಾದಾಚ್ಚ ಶತಕ್ರತೋ।
01026035c ತಪಸಾ ವಾಲಖಿಲ್ಯಾನಾಂ ಭೂತಮುತ್ಪನ್ನಮದ್ಭುತಂ।।
01026036a ಕಶ್ಯಪಸ್ಯ ಮುನೇಃ ಪುತ್ರೋ ವಿನತಾಯಾಶ್ಚ ಖೇಚರಃ।
01026036c ಹರ್ತುಂ ಸೋಮಮನುಪ್ರಾಪ್ತೋ ಬಲವಾನ್ಕಾಮರೂಪವಾನ್।।

ಬೃಹಸ್ಪತಿಯು ಹೇಳಿದನು: “ಶತಕ್ರತು ದೇವೇಂದ್ರ! ನಿನ್ನದೇ ಅಪರಾಧದಿಂದ ಮತ್ತು ವಾಲಖಿಲ್ಯರ ತಪಸ್ಸಿನಿಂದ ಅದ್ಭುತ ಜೀವಿಯೊಂದು ಮುನಿ ಕಶ್ಯಪ ಮತ್ತು ವಿನತೆಯರ ಪುತ್ರನಾಗಿ ಉತ್ಪನ್ನನಾಗಿದ್ದಾನೆ. ಇಷ್ಟಬಂದ ರೂಪ ಧರಿಸಬಲ್ಲ ಆ ಬಲಶಾಲಿ ಪಕ್ಷಿಯು ಅಮೃತವನ್ನು ಎತ್ತಿಕೊಂಡು ಹೋಗಲು ಬರುತ್ತಿದ್ದಾನೆ.

01026037a ಸಮರ್ಥೋ ಬಲಿನಾಂ ಶ್ರೇಷ್ಠೋ ಹರ್ತುಂ ಸೋಮಂ ವಿಹಂಗಮಃ।
01026037c ಸರ್ವಂ ಸಂಭಾವಯಾಮ್ಯಸ್ಮಿನ್ನಸಾಧ್ಯಮಪಿ ಸಾಧಯೇತ್।।

ಬಲಶಾಲಿಗಳಲ್ಲೇ ಶ್ರೇಷ್ಠ ಆ ಪಕ್ಷಿಯು ಸೋಮವನ್ನು ತೆಗೆದುಕೊಂಡು ಹೋಗಲು ಸಮರ್ಥನಾಗಿದ್ದಾನೆ. ಅವನಿಗೆ ಎಲ್ಲ ಅಸಾಧ್ಯಗಳೂ ಸಾಧ್ಯವಾಗುತ್ತವೆ.””

01026038 ಸೂತ ಉವಾಚ।
01026038a ಶ್ರುತ್ವೈತದ್ವಚನಂ ಶಕ್ರಃ ಪ್ರೋವಾಚಾಮೃತರಕ್ಷಿಣಃ।
01026038c ಮಹಾವೀರ್ಯಬಲಃ ಪಕ್ಷೀ ಹರ್ತುಂ ಸೋಮಮಿಹೋದ್ಯತಃ।।

ಸೂತನು ಹೇಳಿದನು: “ಈ ವಚನವನ್ನು ಕೇಳಿದ ಶಕ್ರನು ಅಮೃತ ರಕ್ಷಕರಿಗೆ ಹೇಳಿದನು: “ಮಹಾ ವೀರ ಬಲಶಾಲಿ ಪಕ್ಷಿಯೋರ್ವನು ಸೋಮವನ್ನು ಅಪಹರಿಸಲು ನಿಶ್ಚಯಿಸಿದ್ದಾನೆ.

01026039a ಯುಷ್ಮಾನ್ಸಂಬೋಧಯಾಮ್ಯೇಷ ಯಥಾ ಸ ನ ಹರೇದ್ಬಲಾತ್।
01026039c ಅತುಲಂ ಹಿ ಬಲಂ ತಸ್ಯ ಬೃಹಸ್ಪತಿರುವಾಚ ಮೇ।।

ಅವನು ಬಲಾತ್ಕಾರವಾಗಿ ಅದನ್ನು ಎತ್ತಿಕೊಂಡು ಹೋಗಬಾರದೆಂದು ನಾನು ನಿಮಗೆ ಮೊದಲೇ ಚೇತಾಗ್ನಿಯನ್ನು ನೀಡುತ್ತಿದ್ದೇನೆ. ಬೃಹಸ್ಪತಿಯ ಮಾತಿನಂತೆ ಬಲದಲ್ಲಿ ಅವನ ಸರಿಸಾಟಿ ಯಾರೂ ಇಲ್ಲ.”

01026040a ತತ್ ಶೃತ್ವಾ ವಿಬುಧಾ ವಾಕ್ಯಂ ವಿಸ್ಮಿತಾ ಯತ್ನಮಾಸ್ಥಿತಾಃ।
01026040c ಪರಿವಾರ್ಯಾಮೃತಂ ತಸ್ಥುರ್ವಜ್ರೀ ಚೇಂದ್ರಃ ಶತಕ್ರತುಃ।।

ಈ ಮಾತನ್ನು ಕೇಳಿ ವಿಸ್ಮಿತರಾದ ದೇವತೆಗಳು ವಜ್ರಧಾರಿ ಶತಕ್ರತು ಇಂದ್ರನ ಜೊತೆಗೂಡಿ ಅಮೃತದ ಸುತ್ತಲೂ ಕಾವಲು ನಿಂತರು.

01026041a ಧಾರಯಂತೋ ಮಹಾರ್ಹಾಣಿ ಕವಚಾನಿ ಮನಸ್ವಿನಃ।
01026041c ಕಾಂಚನಾನಿ ವಿಚಿತ್ರಾಣಿ ವೈಢೂರ್ಯವಿಕೃತಾನಿ ಚ।।

ಅವರು ಮನಸೂಸುವ, ಬೆಲೆಬಾಳುವ, ಕಾಂಚನ ಮತ್ತು ವಿಚಿತ್ರ ವೈಢೂರ್ಯಗಳಿಂದ ತಯಾರಿಸಿದ ಕವಚಗಳನ್ನು ಧರಿಸಿದ್ದರು.

01026042a ವಿವಿಧಾನಿ ಚ ಶಸ್ತ್ರಾಣಿ ಘೋರರೂಪಾಣ್ಯನೇಕಶಃ।
01026042c ಶಿತತೀಕ್ಷ್ಣಾಗ್ರಧಾರಾಣಿ ಸಮುದ್ಯಮ್ಯ ಸಹಸ್ರಶಃ।।

ಸಹಸ್ರ ಸಂಖ್ಯೆಗಳಲ್ಲಿದ್ದ ಅವರು ಮೊನಚಾಗಿ ಮಸೆದ ಅನೇಕ ಘೋರರೂಪೀ ಆಯುಧಗಳನ್ನು ಧರಿಸಿದ್ದರು.

01026043a ಸವಿಸ್ಫುಲಿಂಗಜ್ವಾಲಾನಿ ಸಧೂಮಾನಿ ಚ ಸರ್ವಶಃ।
01026043c ಚಕ್ರಾಣಿ ಪರಿಘಾಂಶ್ಚೈವ ತ್ರಿಶೂಲಾನಿ ಪರಶ್ವಧಾನ್।।
01026044a ಶಕ್ತೀಶ್ಚ ವಿವಿಧಾಸ್ತೀಕ್ಷ್ಣಾಃ ಕರವಾಲಾಂಶ್ಚ ನಿರ್ಮಲಾನ್।
01026044c ಸ್ವದೇಹರೂಪಾಣ್ಯಾದಾಯ ಗದಾಶ್ಚೋಗ್ರಪ್ರದರ್ಶನಾಃ।।

ಎಲ್ಲರೂ ತಮ್ಮ ತಮ್ಮ ದೇಹಗಳಿಗೆ ತಕ್ಕಂತೆ ಧೂಮ-ಜ್ವಾಲೆಗಳನ್ನು ಹೊರಚೆಲ್ಲುತ್ತಿದ್ದ ಚಕ್ರ, ಪರಿಘ, ತ್ರಿಶೂಲ, ಪರಶು, ವಿವಿಧ ಶಕ್ತಿ, ತೀಕ್ಷ್ಣ ಕರವಾಲಗಳು ಮತ್ತು ಉಗ್ರ ಗದೆಗಳನ್ನು ಧರಿಸಿದ್ದರು.

01026045a ತೈಃ ಶಸ್ತ್ರೈರ್ಭಾನುಮದ್ಭಿಸ್ತೇ ದಿವ್ಯಾಭರಣಭೂಷಿತಾಃ।
01026045c ಭಾನುಮಂತಃ ಸುರಗಣಾಸ್ತಸ್ಥುರ್ವಿಗತಕಲ್ಮಷಾಃ।।

ದಿವ್ಯಾಭರಣ ಭೂಷಿತ ಸುರಗಣವು ಶಸ್ತ್ರಗಳ ಕಾಂತಿಯಿಂದ ಬೆಳಗುತ್ತಾ ನಿರ್ಭಯವಾಗಿ ಅಲ್ಲಿ ನಿಂತಿತು.

01026046a ಅನುಪಮಬಲವೀರ್ಯತೇಜಸೋ ಧೃತಮನಸಃ ಪರಿರಕ್ಷಣೇಽಮೃತಸ್ಯ।
01026046c ಅಸುರಪುರವಿದಾರಣಾಃ ಸುರಾ ಜ್ವಲನಸಮಿದ್ಧವಪುಹ್ಪ್ರಕಾಶಿನಃ।।

ಅನುಪಮ ಬಲವೀರ್ಯ ತೇಜಸರೂ, ಅಸುರಪುರಗಳನ್ನು ಪುಡಿಮಾಡಬಲ್ಲ, ಜ್ವಾಲೆಯಂತೆ ಪ್ರಕಾಶಿಸುತ್ತಿರುವ ಸುರರೆಲ್ಲರೂ ಧೃಢಮನಸ್ಕರಾಗಿ ಅಮೃತಕ್ಕೆ ಕಾವಲು ನಿಂತರು.

01026047a ಇತಿ ಸಮರವರಂ ಸುರಾಸ್ಥಿತಂ ಪರಿಘಸಹಸ್ರಶತೈಃ ಸಮಾಕುಲಂ।
01026047c ವಿಗಲಿತಮಿವ ಚಾಂಬರಾಂತರೇ ತಪನಮರೀಚಿವಿಭಾಸಿತಂ ಬಭೌ।।

ನೂರಾರು ಸಹಸ್ರಾರು ಪರಿಘಗಳನ್ನು ಹಿಡಿದು ನಿಂತ ಸುರರಿಂದಾಗಿ ಆ ಸಮರಭೂಮಿಯು ಆಕಾಶದಲ್ಲಿ ಸೂರ್ಯನ ಬಿಸಿಲಿನಿಂದ ಸುಡುತ್ತಿರುವ ಒಲೆಯಂತೆ ಕಂಡುಬಂದಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಷಷ್ಠವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವಣಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತಾರನೇ ಅಧ್ಯಾಯವು.