ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 25
ಸಾರ
ಅಕಸ್ಮಾತ್ತಾಗಿ ನುಂಗಿದ ಬ್ರಾಹ್ಮಣನನ್ನು ಗರುಡನು ಬಿಡುಗಡೆಮಾಡುವುದು (1-5). ತಂದೆ ಕಶ್ಯಪನನ್ನು ಭೇಟಿಯಾದುದು (6-9). ಆನೆ-ಕಚ್ಛಪರ ಜನ್ಮವೃತ್ತಾಂತ (10-25). ಗರುಡನು ಆನೆ-ಕಚ್ಛಪರನ್ನು ಹಿಡಿದು ಹಾರಿದುದು (26-30).01025001 ಸೂತ ಉವಾಚ।
01025001a ತಸ್ಯ ಕಂಠಮನುಪ್ರಾಪ್ತೋ ಬ್ರಾಹ್ಮಣಃ ಸಹ ಭಾರ್ಯಯಾ।
01025001c ದಹನ್ದೀಪ್ತ ಇವಾಂಗರಸ್ತಮುವಾಚಾಂತರಿಕ್ಷಗಃ।।
ಸೂತನು ಹೇಳಿದನು: “ಪತ್ನಿಸಹಿತ ಓರ್ವ ಬ್ರಾಹ್ಮಣನು ಅವನ ಗಂಟಲನ್ನು ಸೇರಿ ಉರಿಯುತ್ತಿರುವ ಬೆಂಕಿಯ ಕೆಂಡದಹಾಗೆ ಸುಡುತ್ತಿರಲು ಆ ಅಂತರಿಕ್ಷಗನು ಅವನನ್ನುದ್ದೇಶಿಸಿ ಹೇಳಿದನು:
01025002a ದ್ವಿಜೋತ್ತಮ ವಿನಿರ್ಗಚ್ಛ ತೂರ್ಣಮಾಸ್ಯಾದಪಾವೃತಾತ್।
01025002c ನ ಹಿ ಮೇ ಬ್ರಾಹ್ಮಣೋ ವಧ್ಯಃ ಪಾಪೇಷ್ವಪಿ ರತಃ ಸದಾ।।
“ದ್ವಿಜೋತ್ತಮ! ನಿನಗಾಗಿ ನನ್ನ ಬಾಯಿಯನ್ನು ತೆರೆಯುತ್ತೇನೆ. ತಕ್ಷಣವೇ ಹೊರಗೆ ಬಾ. ಸದಾ ಪಾಪ-ಕರ್ಮಗಳಲ್ಲಿ ನಿರತನಾದವನಾಗಿದ್ದರೂ ಸಹ ನಾನು ಯಾವ ಬ್ರಾಹ್ಮಣನನ್ನೂ ವಧಿಸುವುದಿಲ್ಲ.”
01025003a ಬ್ರುವಾಣಮೇವಂ ಗರುಡಂ ಬ್ರಾಹ್ಮಣಃ ಸಮಭಾಷತ।
01025003c ನಿಷಾದೀ ಮಮ ಭಾರ್ಯೇಯಂ ನಿರ್ಗಚ್ಛತು ಮಯಾ ಸಹ।।
ಗರುಡನು ಹೀಗೆ ಹೇಳಿದುದಕ್ಕೆ ಬ್ರಾಹ್ಮಣನೂ ಸಹ ಹೇಳಿದನು: “ನನ್ನ ಜೊತೆಗೆ ನನ್ನ ಪತ್ನಿ ನಿಷದಿಯೂ ಹೊರಬರಲಿ.”
01025004 ಗರುಡ ಉವಾಚ।
01025004a ಏತಾಮಪಿ ನಿಷಾದೀಂ ತ್ವಂ ಪರಿಗೃಹ್ಯಾಶು ನಿಷ್ಪತ।
01025004c ತೂರ್ಣಂ ಸಂಭಾವಯಾತ್ಮಾನಮಜೀರ್ಣಂ ಮಮ ತೇಜಸಾ।।
ಗರುಡನು ಹೇಳಿದನು: “ನಿಷದಿಯನ್ನೂ ಕೂಡ ನಿನ್ನ ಸಂಗಡ ಕರೆದುಕೊಂಡು ಕೂಡಲೇ ಹೊರಬೀಳು. ನನ್ನ ತೇಜಸ್ಸಿನಿಂದ ಇನ್ನೂ ಜೀರ್ಣವಾಗಿರದೇ ಇದ್ದ ನೀವು ತಡಮಾಡದೇ ನಿಮ್ಮ ಜೀವವನ್ನು ಉಳಿಸಿಕೊಳ್ಳಿ.””
01025005 ಸೂತ ಉವಾಚ।
01025005a ತತಃ ಸ ವಿಪ್ರೋ ನಿಷ್ಕ್ರಾಂತೋ ನಿಷಾದೀಸಹಿತಸ್ತದಾ।
01025005c ವರ್ಧಯಿತ್ವಾ ಚ ಗರುಡಮಿಷ್ಟಂ ದೇಶಂ ಜಗಾಮ ಹ।।
ಸೂತನು ಹೇಳಿದನು: “ಆಗ ಆ ವಿಪ್ರನು ನಿಷದಿಯ ಸಹಿತ ಹೊರಬಂದನು ಮತ್ತು ಗರುಡನಿಗೆ ಕೃತಘ್ನತೆಗಳನ್ನು ಹೇಳಿ ತನಗಿಷ್ಟ ಪ್ರದೇಶಕ್ಕೆ ತೆರಳಿದನು.
01025006a ಸಹಭಾರ್ಯೇ ವಿನಿಷ್ಕ್ರಾಂತೇ ತಸ್ಮಿನ್ ವಿಪ್ರೇ ಸ ಪಕ್ಷಿರಾಟ್।
01025006c ವಿತತ್ಯ ಪಕ್ಷಾವಾಕಾಶಮುತ್ಪಪಾತ ಮನೋಜವಃ।।
ವಿಪ್ರನು ತನ್ನ ಪತ್ನಿಯ ಸಹಿತ ಹೊರಬಂದ ತಕ್ಷಣ ಆ ಪಕ್ಷಿರಾಜನು ಒಂದು ಕ್ಷಣದಲ್ಲಿ ತನ್ನ ರೆಕ್ಕೆಗಳನ್ನು ಬಿಚ್ಚಿ ಮನೋವೇಗದಲ್ಲಿ ಗಗನವನ್ನೇರಿದನು.
01025007a ತತೋಽಪಶ್ಯತ್ಸ ಪಿತರಂ ಪೃಷ್ಟಶ್ಚಾಖ್ಯಾತವಾನ್ಪಿತುಃ।
01025007c ಅಹಂ ಹಿ ಸರ್ಪೈಃ ಪ್ರಹಿತಃ ಸೋಮಮಾಹರ್ತುಮುದ್ಯತಃ।
01025007e ಮಾತುರ್ದಾಸ್ಯವಿಮೋಕ್ಷಾರ್ಥಮಾಹರಿಷ್ಯೇ ತಮದ್ಯ ವೈ।।
ದಾರಿಯಲ್ಲಿ ಕಂಡ ತನ್ನ ತಂದೆಯು ಪ್ರಶ್ನಿಸಲು ಹೇಳಿದನು: “ಸರ್ಪಗಳಿಂದ ಕಳುಹಿಸಲ್ಪಟ್ಟ ನಾನು ಸೋಮವನ್ನು ತರಲು ಹೊರಟಿರುವೆ. ಅದನ್ನು ತಂದು ಇಂದು ನಾನು ತಾಯಿಗೆ ದಾಸತ್ವದಿಂದ ವಿಮೋಚನೆ ದೊರಕಿಸುತ್ತೇನೆ.
01025008a ಮಾತ್ರಾ ಚಾಸ್ಮಿ ಸಮಾದಿಷ್ಟೋ ನಿಷಾದಾನ್ಭಕ್ಷಯೇತಿ ವೈ।
01025008c ನ ಚ ಮೇ ತೃಪ್ತಿರಭವದ್ಭಕ್ಷಯಿತ್ವಾ ಸಹಸ್ರಶಃ।।
ನಿಷಾದರನ್ನು ಭಕ್ಷಿಸಲು ತಾಯಿಯು ಹೇಳಿದಳು. ಅವರನ್ನು ಸಹಸ್ರಾರು ಸಂಖ್ಯೆಗಳಲ್ಲಿ ಭಕ್ಷಿಸಿದೆನಾದರೂ ನನಗೆ ತೃಪ್ತಿಯಾಗಲಿಲ್ಲ.
01025009a ತಸ್ಮಾದ್ಭೋಕ್ತವ್ಯಮಪರಂ ಭಗವನ್ಪ್ರದಿಶಸ್ವ ಮೇ।
01025009c ಯದ್ಭುಕ್ತ್ವಾಮೃತಮಾಹರ್ತುಂ ಸಮರ್ಥಃ ಸ್ಯಾಮಹಂ ಪ್ರಭೋ।।
ಭಗವನ್! ಪ್ರಭೋ! ಭುಂಜಿಸಿ ಅಮೃತವನ್ನು ತರಲು ಸಮರ್ಥನಾಗುವಂತೆ ಬೇರೆ ಯಾವುದಾದರೂ ಭೋಜನವನ್ನು ತೋರಿಸಿಕೊಡು.”
01025010 ಕಶ್ಯಪ ಉವಾಚ।
01025010a ಆಸೀದ್ವಿಭಾವಸುರ್ನಾಮ ಮಹರ್ಷಿಃ ಕೋಪನೋ ಭೃಶಂ।
01025010c ಭ್ರಾತಾ ತಸ್ಯಾನುಜಶ್ಚಾಸೀತ್ಸುಪ್ರತೀಕೋ ಮಹಾತಪಾಃ।।
ಕಶ್ಯಪನು ಹೇಳಿದನು: “ಹಿಂದೆ ವಿಭಾವಸು ಎಂಬ ಹೆಸರಿನ ಕೋಪಸ್ವಭಾವದ ಮಹರ್ಷಿಯೊಬ್ಬನಿದ್ದನು. ಅವನಿಗೆ ಮಹಾತಪಸ್ವಿ ಸುಪ್ರತೀಕನೆಂಬ ತಮ್ಮನಿದ್ದನು.
01025011a ಸ ನೇಚ್ಛತಿ ಧನಂ ಭ್ರಾತ್ರಾ ಸಹೈಕಸ್ಥಂ ಮಹಾಮುನಿಃ।
01025011c ವಿಭಾಗಂ ಕೀರ್ತಯತ್ಯೇವ ಸುಪ್ರತೀಕೋಽಥ ನಿತ್ಯಶಃ।।
01025012a ಅಥಾಬ್ರವೀಚ್ಚ ತಂ ಭ್ರಾತಾ ಸುಪ್ರತೀಕಂ ವಿಭಾವಸುಃ।
ಮಹಾಮುನಿ ಸುಪ್ರತೀಕನು ಅಣ್ಣನಲ್ಲಿ ಧನವನ್ನು ಇಡಲು ಇಚ್ಛಿಸದೇ ಅದರ ವಿಭಜನೆಯಾಗಬೇಕೆಂದು ನಿತ್ಯವೂ ಕೇಳುತ್ತಿದ್ದನು. ಆಗ ವಿಭಾವಸುವು ತಮ್ಮ ಸುಪ್ರತೀಕನಿಗೆ ಹೇಳಿದನು:
01025012c ವಿಭಾಗಂ ಬಹವೋ ಮೋಹಾತ್ಕರ್ತುಮಿಚ್ಛಂತಿ ನಿತ್ಯದಾ।
01025012e ತತೋ ವಿಭಕ್ತಾ ಅನ್ಯೋನ್ಯಂ ನಾದ್ರಿಯಂತೇಽರ್ಥಮೋಹಿತಾಃ।।
“ಬಹಳಷ್ಟು ಜನರು ಮೋಹದಿಂದ ವಿಭಜನೆಯನ್ನು ಮಾಡಲು ಸದಾ ಬಯಸುತ್ತಿರುತ್ತಾರೆ. ಆದರೆ ವಿಭಜನೆಯಾದ ನಂತರ ಅರ್ಥಮೋಹಿತರಾಗಿ ಅವರು ಅನ್ಯೋನ್ಯರನ್ನು ಕಡೆಗಣಿಸುತ್ತಾರೆ.
01025013a ತತಃ ಸ್ವಾರ್ಥಪರಾನ್ಮೂಡಾನ್ ಪೃಥಗ್ಭೂತಾನ್ಸ್ವಕೈರ್ಧನೈಃ।
01025013c ವಿದಿತ್ವಾ ಭೇದಯಂತ್ಯೇತಾನಮಿತ್ರಾ ಮಿತ್ರರೂಪಿಣಃ।।
ಅವರು ಬೇರೆಬೇರೆಯಾದದ್ದನ್ನು ತಿಳಿದು ಸ್ವಾರ್ಥಿ ಶತ್ರುಗಳು ಮಿತ್ರರೂಪದಲ್ಲಿ ಬಂದು ಅದೇ ಧನದ ಸಲುವಾಗಿ ಅವರಲ್ಲಿ ಇನ್ನೂ ದೊಡ್ಡ ಬಿರುಕನ್ನು ಹುಟ್ಟಿಸುತ್ತಾರೆ.
01025014a ವಿದಿತ್ವಾ ಚಾಪರೇ ಭಿನ್ನಾನಂತರೇಷು ಪತಂತ್ಯಥ।
01025014c ಭಿನ್ನಾನಾಮತುಲೋ ನಾಶಃ ಕ್ಷಿಪ್ರಮೇವ ಪ್ರವರ್ತತೇ।।
ಇನ್ನೂ ದೂರವಾಗಿದ್ದಾರೆಂದು ತಿಳಿದು ಇತರರು ಅವರ ಪತನಕ್ಕೆ ಕಾರಣರಾಗುತ್ತಾರೆ. ಹೀಗೆ ಬೇರೆಬೇರೆಯಾದ ಸಹೋದರರು ಬೇಗನೇ ನಾಶವನ್ನು ಹೊಂದುತ್ತಾರೆ.
01025015a ತಸ್ಮಾಚ್ಚೈವ ವಿಭಾಗಾರ್ಥಂ ನ ಪ್ರಶಂಸಂತಿ ಪಂಡಿತಾಃ।
01025015c ಗುರುಶಾಸ್ತ್ರೇ ನಿಬದ್ಧಾನಾಮನ್ಯೋನ್ಯಮಭಿಶಂಕಿನಾಂ।।
ಆದ್ದರಿಂದ ಗುರುಶಾಸ್ತ್ರಗಳಲ್ಲಿ ನಿಬದ್ಧ ಪಂಡಿತರು ಅನ್ಯೋನ್ಯರಲ್ಲಿ ಪ್ರೀತಿಯಿರುವವರ ನಡುವೆ ಅರ್ಥವಿಭಜನೆಯನ್ನು ಒಪ್ಪುವುದಿಲ್ಲ.
01025016a ನಿಯಂತುಂ ನ ಹಿ ಶಕ್ಯಸ್ತ್ವಂ ಭೇದತೋ ಧನಮಿಚ್ಛಸಿ।
01025016c ಯಸ್ಮಾತ್ತಸ್ಮಾತ್ಸುಪ್ರತೀಕ ಹಸ್ತಿತ್ವಂ ಸಮವಾಪ್ಸ್ಯಸಿ।।
ಆದರೆ ಸುಪ್ರತೀಕ! ಧನವನ್ನು ವಿಂಗಡಿಸಲು ಇಚ್ಛಿಸುತ್ತಿರುವ ನಿನ್ನನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಆದುದರಿಂದ ನೀನು ಒಂದು ಆನೆಯಾಗುತ್ತೀಯೆ.”
01025017a ಶಪ್ತಸ್ತ್ವೇವಂ ಸುಪ್ರತೀಕೋ ವಿಭಾವಸುಮಥಾಬ್ರವೀತ್।
01025017c ತ್ವಮಪ್ಯಂತರ್ಜಲಚರಃ ಕಚ್ಛಪಃ ಸಂಭವಿಷ್ಯಸಿ।।
ಈ ರೀತಿ ಶಪಿಸಲ್ಪಟ್ಟ ಸುಪ್ರತೀಕನು ವಿಭಾವಸುವಿಗೆ ಹೇಳಿದನು: “ನೀನೂ ಕೂಡ ನೀರಿನಲ್ಲಿ ಚಲಿಸುವ ಆಮೆಯಾಗುತ್ತೀಯೆ.”
01025018a ಏವಮನ್ಯೋನ್ಯಶಾಪಾತ್ತೌ ಸುಪ್ರತೀಕವಿಭಾವಸೂ।
01025018c ಗಜಕಚ್ಛಪತಾಂ ಪ್ರಾಪ್ತಾವರ್ಥಾರ್ಥಂ ಮೂಢಚೇತಸೌ।।
ಈ ರೀತಿ ಸಂಪತ್ತಿನ ಸಲುವಾಗಿ ಮೂಢಚೇತಸ ಸುಪ್ರತೀಕ ಮತ್ತು ವಿಭಾವಸು ಇಬ್ಬರೂ ಅನ್ಯೋನ್ಯರಿಗೆ ಶಾಪವನ್ನಿತ್ತು ಗಜ-ಕಚ್ಛಪ ರೂಪಗಳನ್ನು ಹೊಂದಿದರು.
01025019a ರೋಷದೋಷಾನುಷಂಗೇಣ ತಿರ್ಯಗ್ಯೋನಿಗತಾವಪಿ।
01025019c ಪರಸ್ಪರದ್ವೇಷರತೌ ಪ್ರಮಾಣಬಲದರ್ಪಿತೌ।।
ರೋಷದೋಷದಿಂದ ಕೀಳುಯೋನಿಗಳಲ್ಲಿ ಜನಿಸಿದರೂ ಕೂಡ ಅವರವರ ಪ್ರಮಾಣ ಮತ್ತು ಬಲದಿಂದ ದರ್ಪಿತ ಅವರೀರ್ವರು ಪರಸ್ಪರರಲ್ಲಿ ದ್ವೇಷವನ್ನು ಸಾಧಿಸಿಕೊಂಡೇ ಬಂದಿದ್ದಾರೆ.
01025020a ಸರಸ್ಯಸ್ಮಿನ್ಮಹಾಕಾಯೌ ಪೂರ್ವವೈರಾನುಸಾರಿಣೌ।
01025020c ತಯೋರೇಕತರಃ ಶ್ರೀಮಾನ್ಸಮುಪೈತಿ ಮಹಾಗಜಃ।।
ಆ ಈರ್ವರು ಮಹಾಕಾಯರು ಈ ಸರೋವರದಲ್ಲಿ ಅವರ ಪೂರ್ವ ವೈರತ್ವವನ್ನು ಮುಂದುವರಿಸಿದ್ದಾರೆ. ನೋಡು! ಆ ಸುಂದರ ಮಹಾಗಜವು ನೀರಿನಕಡೆಗೆ ಬರುತ್ತಿದೆ.
01025021a ತಸ್ಯ ಬೃಂಹಿತಶಬ್ದೇನ ಕೂರ್ಮೋಽಪ್ಯಂತರ್ಜಲೇಶಯಃ।
01025021c ಉತ್ಥಿತೋಽಸೌ ಮಹಾಕಾಯಃ ಕೃತ್ಸ್ನಂ ಸಂಕ್ಷೋಭಯನ್ಸರಃ।।
ಅವನ ಕೂಗಿನ ಶಬ್ಧದಿಂದ ನೀರಿನ ಒಳಗಿದ್ದ ಮಹಾಕಾಯ ಆಮೆಯು ಸರೋವರವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಾ ಮೇಲೆ ಏರುತ್ತಿದೆ.
01025022a ತಂ ದೃಷ್ಟ್ವಾವೇಷ್ಟಿತಕರಃ ಪತತ್ಯೇಷ ಗಜೋ ಜಲಂ।
01025022c ದಂತಹಸ್ತಾಗ್ರಲಾಂಗೂಲಪಾದವೇಗೇನ ವೀರ್ಯವಾನ್।।
ಅವನನ್ನು ನೋಡಿದ ವೀರ ಆನೆಯು ತನ್ನ ದಂತ, ಸೊಂಡಿಲು, ಮತ್ತು ಬಾಲಗಳನ್ನು ಸುರುಳಿಸುತ್ತಿ ವೇಗದಿಂದ ನೀರನ್ನು ಪ್ರವೇಶಿಸುತ್ತಿದೆ.
01025023a ತಂ ವಿಕ್ಷೋಭಯಮಾಣಂ ತು ಸರೋ ಬಹುಝಷಾಕುಲಂ।
01025023c ಕೂರ್ಮೋಽಪ್ಯಭ್ಯುದ್ಯತಶಿರಾ ಯುದ್ಧಾಯಾಭ್ಯೇತಿ ವೀರ್ಯವಾನ್।।
ಮೀನುಗಳಿಂದ ತುಂಬಿದ ಸರೋವರವನ್ನು ಅದು ಅಲ್ಲೋಲಕಲ್ಲೋಲಗೊಳಿಸುತ್ತಿದೆ. ವೀರ ಆಮೆಯೂ ಕೂಡ ತನ್ನ ತಲೆಯನ್ನು ಮೇಲೆತ್ತಿ ಯುದ್ಧಕ್ಕಾಗಿ ಮುಂದೆ ಬರುತ್ತಿದೆ.
01025024a ಷಡುಚ್ಛ್ರಿತೋ ಯೋಜನಾನಿ ಗಜಸ್ತದ್ದ್ವಿಗುಣಾಯತಃ।
01025024c ಕೂರ್ಮಸ್ತ್ರಿಯೋಜನೋತ್ಸೇಧೋ ದಶಯೋಜನಮಂಡಲಃ।।
ಆ ಅನೆಯ ಎತ್ತರ ಆರು ಯೋಜನ ಮತ್ತು ಪರಿಧಿಯು ಅದರ ಎರಡರಷ್ಟು. ಆಮೆಯೂ ಕೂಡ ಮೂರು ಯೋಜನ ಎತ್ತರ ಮತ್ತು ಅದರ ಎರಡು ಪಟ್ಟು ಅಗಲವಾಗಿದೆ.
01025025a ತಾವೇತೌ ಯುದ್ಧಸಮ್ಮತ್ತೌ ಪರಸ್ಪರಜಯೈಷಿಣೌ।
01025025c ಉಪಯುಜ್ಯಾಶು ಕರ್ಮೇದಂ ಸಾಧಯೇಪ್ಸಿತಮಾತ್ಮನಃ।।
ಈ ರೀತಿ ಪರಸ್ಪರರನ್ನು ಕೊಲ್ಲುವ ಹಠದಿಂದ ಯುದ್ಧನಿರತರಾದ ಇವರೀರ್ವರನ್ನೂ ಭಕ್ಷಿಸಿ ನಿನ್ನ ಕಾರ್ಯವನ್ನು ಮುಂದುವರೆಸು.””
01025026 ಸೂತ ಉವಾಚ 01025026a ಸ ತತ್ ಶೃತ್ವಾ ಪಿತುರ್ವಾಕ್ಯಂ ಭೀಮವೇಗೋಂಽತರಿಕ್ಷಗಃ।
01025026c ನಖೇನ ಗಜಮೇಕೇನ ಕೂರ್ಮಮೇಕೇನ ಚಾಕ್ಷಿಪತ್।।
ಸೂತನು ಹೇಳಿದನು: “ಪಿತೃವಾಕ್ಯವನ್ನು ಕೇಳಿದ ಆ ಅಂತರಿಕ್ಷಗನು ಭೀಮವೇಗದಲ್ಲಿ ಒಂದು ನಖದಿಂದ ಆನೆಯನ್ನೂ ಇನ್ನೊಂದರಿಂದ ಆಮೆಯನ್ನೂ ಹಿಡಿದನು.
01025027a ಸಮುತ್ಪಪಾತ ಚಾಕಾಶಂ ತತ ಉಚ್ಚೈರ್ವಿಹಂಗಮಃ।
01025027c ಸೋಽಲಂಬತೀರ್ಥಮಾಸಾದ್ಯ ದೇವವೃಕ್ಷಾನುಪಾಗಮತ್।।
01025028a ತೇ ಭೀತಾಃ ಸಮಕಂಪಂತ ತಸ್ಯ ಪಕ್ಷಾನಿಲಾಹತಾಃ।
01025028c ನ ನೋ ಭಂಜ್ಯಾದಿತಿ ತದಾ ದಿವ್ಯಾಃ ಕನಕಶಾಖಿನಃ।।
01025029a ಪ್ರಚಲಾಂಗಾನ್ಸ ತಾನ್ದೃಷ್ಠ್ವಾ ಮನೋರಥಫಲಾಂಕುರಾನ್।
01025029c ಅನ್ಯಾನತುಲರೂಪಾಂಗಾನುಪಚಕ್ರಾಮ ಖೇಚರಃ।।
ಬಯಸಿದ ಫಲಗಳನ್ನು ಕೊಡುವ ಆ ವೃಕ್ಷಗಳು ಹೆದರಿ ತತ್ತರಿಸುವುದನ್ನು ಕಂಡ ಖೇಚರನು ರೂಪದಲ್ಲಿ ಸರಿಸಾಟಿ ಇರದ ಅನ್ಯ ವೃಕ್ಷಗಳ ಕಡೆ ಹಾರಿದನು.
01025030a ಕಾಂಚನೈ ರಾಜತೈಶ್ಚೈವ ಫಲೈರ್ವೈಢೂರ್ಯಶಾಖಿನಃ।
01025030c ಸಾಗರಾಂಬುಪರಿಕ್ಷಿಪ್ತಾನ್ ಭ್ರಾಜಮಾನಾನ್ಮಹಾದ್ರುಮಾನ್।।
ಕಾಂಚನ-ರಜತ ಫಲ ಮತ್ತು ವೈಢೂರ್ಯದ ರೆಂಬೆಗಳಿಂದ ಕೂಡಿದ ಆ ಮಹಾದ್ರುಮಗಳು ಸಾಗರದ ಅಲೆಗಳಿಂದ ತೊಳೆಯಲ್ಪಟ್ಟು ಹೊಳೆಯುತ್ತಿದ್ದವು.
01025031a ತಮುವಾಚ ಖಗಶ್ರೇಷ್ಠಂ ತತ್ರ ರೋಹಿಣಪಾದಪಃ।
01025031c ಅತಿಪ್ರವೃದ್ಧಃ ಸುಮಹಾನಾಪತಂತಂ ಮನೋಜವಂ।।
01025032a ಯೈಷಾ ಮಮ ಮಹಾಶಾಖಾ ಶತಯೋಜನಮಾಯತಾ।
01025032c ಏತಾಮಾಸ್ಥಾಯ ಶಾಖಾಂ ತ್ವಂ ಖಾದೇಮೌ ಗಜಕಚ್ಛಪೌ।।
ಅಲ್ಲಿಯೇ ವಿಸ್ತಾರವಾಗಿ ಬೆಳೆದಿದ್ದ ರೋಹಿಣಪಾಪದವೊಂದು ಮನೋವೇಗದಲ್ಲಿ ಇಳಿಯುತ್ತಿದ್ದ ಆ ಖಗಶ್ರೇಷ್ಠನಿಗೆ “ಶತಯೋಜನ ವಿಸ್ತೀರ್ಣವುಳ್ಳ ನನ್ನ ಈ ಮಹಾಶಾಖೆಗಳ ಮೇಲೆ ಬಂದಿಳಿದು ಆ ಆನೆ-ಆಮೆಗಳನ್ನು ತಿನ್ನು!” ಎಂದು ಹೇಳಿತು.
01025033a ತತೋ ದ್ರುಮಂ ಪತಗಸಹಸ್ರಸೇವಿತಂ ಮಹೀಧರಪ್ರತಿಮವಪುಃ ಪ್ರಕಂಪಯನ್।
01025033c ಖಗೋತ್ತಮೋ ದ್ರುತಮಭಿಪತ್ಯ ವೇಗವಾನ್ ಬಭಂಜ ತಾಮವಿರಲಪತ್ರಸಂವೃತಾಂ।।
ಖಗೋತ್ತಮನು ತನ್ನ ವೇಗವನ್ನು ಕಡಿಮೆ ಮಾಡುತ್ತಾ ನಿಧಾನವಾಗಿ ಬಂದಿಳಿದಾಗ, ಸಹಸ್ರಾರು ಪಕ್ಷಿಗಳನ್ನೊಡಗೂಡಿದ ಆ ಪರ್ವತ ಸಮಾನ ವೃಕ್ಷವು ತತ್ತರಿಸಿ, ದಪ್ಪ ದಪ್ಪ ಎಲೆಗಳ ಆ ರೆಂಭೆಯು ತುಂಡಾಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಪಂಚವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೈದನೇ ಅಧ್ಯಾಯವು.