024 ಸುಪರ್ಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 24

ಸಾರ ಗರುಡನು ಅಮೃತವನ್ನು ತರಲು ಹೊರಡುವುದು, ವಿನತೆಯು ಅವನಿಗೆ ನಿಷಾದರನ್ನು ಆಹಾರವನ್ನಾಗಿ ಸೂಚಿಸಿ, ಬ್ರಾಹ್ಮಣರನ್ನು ತಿನ್ನಬಾರದೆಂದು ಹೇಳಿ, ಮಗನನ್ನು ಬೀಳ್ಕೊಡುವುದು (1-9). ಗರುಡನು ನಿಷಾದರನ್ನು ಭಕ್ಷಿಸುವುದು (10-14).

01024001 ಸೂತ ಉವಾಚ।
01024001a ಇತ್ಯುಕ್ತೋ ಗರುಡಃ ಸರ್ಪೈಸ್ತತೋ ಮಾತರಮಬ್ರವೀತ್।
01024001c ಗಚ್ಛಾಮ್ಯಮೃತಮಾಹರ್ತುಂ ಭಕ್ಷ್ಯಮಿಚ್ಛಾಮಿ ವೇದಿತುಂ।।

ಸೂತನು ಹೇಳಿದನು: “ಸರ್ಪಗಳು ಹೀಗೆ ಹೇಳಲು ಗರುಡನು ಮಾತೆಯನ್ನು ಕುರಿತು ಹೇಳಿದನು: “ಅಮೃತವನ್ನು ತರಲು ಹೋಗುತ್ತಿದ್ದೇನೆ. ಏನನ್ನಾದರೂ ತಿನ್ನಲು ಬಯಸುತ್ತೇನೆ. ಏನನ್ನು ತಿನ್ನಲಿ ಹೇಳು.”

01024002 ವಿನತೋವಾಚ।
01024002a ಸಮುದ್ರಕುಕ್ಷಾವೇಕಾಂತೇ ನಿಷಾದಾಲಯಮುತ್ತಮಂ।
01024002c ಸಹಸ್ರಾಣಾಮನೇಕಾನಾಂ ತಾನ್ಭುಕ್ತ್ವಾಮೃತಮಾನಯ।।

ವಿನತೆಯು ಹೇಳಿದಳು: “ಸಮುದ್ರಕುಕ್ಷದ ಅಡಿಯಲ್ಲಿ ಉತ್ತಮ ನಿಷಾದಾಲಯವಿದೆ. ಸಹಸ್ರಾರು ಸಂಖ್ಯೆಯ ಅವರನ್ನು ತಿಂದು ಅಮೃತವನ್ನು ತೆಗೆದುಕೊಂಡು ಬಾ.

01024003a ನ ತು ತೇ ಬ್ರಾಹ್ಮಣಂ ಹಂತುಂ ಕಾರ್ಯಾ ಬುದ್ಧಿಃ ಕಥಂ ಚನ।
01024003c ಅವಧ್ಯಃ ಸರ್ವಭೂತಾನಾಂ ಬ್ರಾಹ್ಮಣೋ ಹ್ಯನಲೋಪಮಃ।।

ಆದರೆ ಎಂದೂ ನೀನು ಬ್ರಾಹ್ಮಣನನ್ನು ಕೊಲ್ಲುವ ಕೆಲಸವನ್ನು ಮಾಡಬೇಡ. ಸರ್ವಭೂತಗಳಲ್ಲಿಯೂ ಬ್ರಾಹ್ಮಣನು ಅವಧ್ಯ. ಅವನು ಬೆಂಕಿಯ ಹಾಗೆ.

01024004a ಅಗ್ನಿರರ್ಕೋ ವಿಷಂ ಶಸ್ತ್ರಂ ವಿಪ್ರೋ ಭವತಿ ಕೋಪಿತಃ।
01024004c ಭೂತಾನಾಮಗ್ರಭುಗ್ವಿಪ್ರೋ ವರ್ಣಶ್ರೇಷ್ಠಃ ಪಿತಾ ಗುರುಃ।।

ಕುಪಿತ ವಿಪ್ರನು ಅಗ್ನಿ, ಸೂರ್ಯ, ವಿಷ ಅಥವಾ ಹರಿತ ಶಸ್ತ್ರದ ಸಮಾನ. ಎಲ್ಲ ಜೀವಿಗಳಲ್ಲಿಯೂ ವಿಪ್ರನು ಅಗ್ರಸ್ಥಾನವನ್ನು ಹೊಂದಿದ್ದಾನೆ. ಪಿತ ಮತ್ತು ಗುರುವಿನಂತೆ ಅವನ ಸ್ಥಾನವು ಶ್ರೇಷ್ಠವಾದದ್ದು.”

01024005 ಗರುಡ ಉವಾಚ।
01024005a ಯಥಾಹಮಭಿಜಾನೀಯಾಂ ಬ್ರಾಹ್ಮಣಂ ಲಕ್ಷಣೈಃ ಶುಭೈಃ।
01024005c ತನ್ಮೇ ಕಾರಣತೋ ಮಾತಃ ಪೃಚ್ಛತೋ ವಕ್ತುಮರ್ಹಸಿ।।

ಗರುಡನು ಹೇಳಿದನು: “ಮಾತೆ! ಬ್ರಾಹ್ಮಣನನ್ನು ಹೇಗೆ ಗುರುತಿಸಬಹುದು ಹೇಳು. ಅವರ ಶುಭ ಲಕ್ಷಣಗಳು ಯಾವುವು?”

01024006 ವಿನತೋವಾಚ।
01024006a ಯಸ್ತೇ ಕಂಠಮನುಪ್ರಾಪ್ತೋ ನಿಗೀರ್ಣಂ ಬಡಿಶಂ ಯಥಾ।
01024006c ದಹೇದಂಗಾರವತ್ಪುತ್ರ ತಂ ವಿದ್ಯಾದ್ಬ್ರಾಹ್ಮಣರ್ಷಭಂ।।

ವಿನತೆಯು ಹೇಳಿದಳು: “ಪುತ್ರ! ಗಂಟಲು ಸೇರುತ್ತಿದ್ದಂತೆ ಮೀನುಹಿಡಿಯಲು ಬಳಸುವ ಕೊಕ್ಕೆಯ ಹಾಗೆ ಪೀಡಿಸುವವನು ಅಥವಾ ಬಿಸಿ ಕೆಂಡದಂತೆ ಸುಡುವವನೇ ಬ್ರಾಹ್ಮಣರ್ಷಭನೆಂದು ತಿಳಿ.””

01024007 ಸೂತ ಉವಾಚ।
01024007a ಪ್ರೋವಾಚ ಚೈನಂ ವಿನತಾ ಪುತ್ರಹಾರ್ದಾದಿದಂ ವಚಃ।
01024007c ಜಾನಂತ್ಯಪ್ಯತುಲಂ ವೀರ್ಯಮಾಶೀರ್ವಾದಸಮನ್ವಿತಂ।।

ಸೂತನು ಹೇಳಿದನು: “ಮಗನ ಅತುಲ ವೀರ್ಯವನ್ನು ತಿಳಿದಿದ್ದರೂ ವಿನತೆಯು ಹಾರ್ದಿಕವಾಗಿ ಈ ಮಾತುಗಳಿಂದ ಆಶೀರ್ವದಿಸಿದಳು:

01024008a ಪಕ್ಷೌ ತೇ ಮಾರುತಃ ಪಾತು ಚಂದ್ರಃ ಪೃಷ್ಠಂ ತು ಪುತ್ರಕ।
01024008c ಶಿರಸ್ತು ಪಾತು ತೇ ವಹ್ನಿರ್ಭಾಸ್ಕರಃ ಸರ್ವಮೇವ ತು।।

“ಪಕ್ಷಿಯೇ! ಮಾರುತಗಳು ನಿನ್ನ ರೆಕ್ಕೆಗಳನ್ನು ರಕ್ಷಿಸಲಿ. ಚಂದ್ರನು ನಿನ್ನ ಬೆನ್ನನ್ನು ರಕ್ಷಿಸಲಿ. ಅಗ್ನಿಯು ನಿನ್ನ ಶಿರವನ್ನು ಮತ್ತು ಭಾಸ್ಕರನು ನಿನ್ನ ಸರ್ವವನ್ನೂ ರಕ್ಷಿಸಲಿ.

01024009a ಅಹಂ ಚ ತೇ ಸದಾ ಪುತ್ರ ಶಾಂತಿಸ್ವಸ್ತಿಪರಾಯಣಾ।
01024009c ಅರಿಷ್ಟಂ ವ್ರಜ ಪಂಥಾನಂ ವತ್ಸ ಕಾರ್ಯಾರ್ಥಸಿದ್ಧಯೇ।।

ಪುತ್ರ! ನಾನೂ ಕೂಡ ಸದಾ ಶಾಂತಿಸ್ವಸ್ತಿಪರಾಯಣಳಾಗಿ ನಿನ್ನ ದಾರಿಯನ್ನು ಕಾಯುತ್ತಿರುತ್ತೇನೆ. ವತ್ಸ! ನಿನ್ನ ಕಾರ್ಯಾರ್ಥಸಿದ್ದಿಯಾಗಲಿ.”

01024010a ತತಃ ಸ ಮಾತುರ್ವಚನಂ ನಿಶಮ್ಯ ವಿತತ್ಯ ಪಕ್ಷೌ ನಭ ಉತ್ಪಪಾತ।
01024010c ತತೋ ನಿಷಾದಾನ್ಬಲವಾನುಪಾಗಮದ್ ಬುಭುಕ್ಷಿತಃ ಕಾಲ ಇವಾಂತಕೋ ಮಹಾನ್।।

ಮಾತುರ್ವಚನವನ್ನು ಕೇಳಿದ ಅವನು ರೆಕ್ಕೆಗಳೆರಡನ್ನೂ ಹರಡಿ ನಭವನ್ನೇರಿದನು. ಹಸಿವೆಯಿಂದ ಬಳಲುತ್ತಿದ್ದ ಆ ಬಲವಂತನು ಅಂತಕ ಮಹಾ ಕಾಲನೋ ಎನ್ನುವಂತೆ ನಿಷಾದರ ಮೇಲೆ ಎರಗಿದನು.

01024011a ಸ ತಾನ್ನಿಷಾದಾನುಪಸಂಹರಂಸ್ತದಾ ರಜಃ ಸಮುದ್ಧೂಯ ನಭಹಸ್ಪೃಶಂ ಮಹತ್।
01024011c ಸಮುದ್ರಕುಕ್ಷೌ ಚ ವಿಶೋಷಯನ್ಪಯಃ ಸಮೀಪಗಾನ್ಭೂಮಿಧರಾನ್ವಿಚಾಲಯನ್।।

ಆ ನಿಷಾದರನ್ನು ಉಪಸಂಹರಿಸಲು ಉದ್ಯುಕ್ತನಾಗಿ ಅವನು ಆಕಾಶದಲ್ಲಿ ಒಂದು ಮಹತ್ತರ ಧೂಳಿನ ಭಿರುಗಾಳಿಯನ್ನೇ ಎಬ್ಬಿಸಿ, ಸಮುದ್ರದ ತಳದಿಂದ ನೀರನ್ನು ಹೀರಿಕೊಂಡು ಹತ್ತಿರದ ಪರ್ವತಗಳಲ್ಲಿ ಬೆಳೆದಿದ್ದ ವೃಕ್ಷಗಳು ತತ್ತರಿಸುವಂತೆ ಮಾಡಿದನು.

01024012a ತತಃ ಸ ಚಕ್ರೇ ಮಹದಾನನಂ ತದಾ ನಿಷಾದಮಾರ್ಗಂ ಪ್ರತಿರುಧ್ಯ ಪಕ್ಷಿರಾಟ್।
01024012c ತತೋ ನಿಷಾದಾಸ್ತ್ವರಿತಾಃ ಪ್ರವವ್ರಜುಃ ಯತೋ ಮುಖಂ ತಸ್ಯ ಭುಜಂಗಭೋಜಿನಃ।।

ಅನಂತರ ಆ ಪಕ್ಷಿರಾಜನು ತನ್ನ ಅಗಲ ಬಾಯಿಯನ್ನು ನಿಷಾದರ ಮಾರ್ಗದಲ್ಲಿ ಇಟ್ಟು ತಡೆಗಟ್ಟಿದನು; ನಿಷಾದರು ಆ ಭುಜಂಗಭೋಜಿನಿಯ ಬಾಯಿಯೆಡೆಗೆ ಒಟ್ಟಾಗಿ ಎಳೆಯಲ್ಪಟ್ಟರು.

01024013a ತದಾನನಂ ವಿವೃತಮತಿಪ್ರಮಾಣವತ್ ಸಮಭ್ಯಯುರ್ಗಗನಮಿವಾರ್ದಿತಾಃ ಖಗಾಃ।
01024013c ಸಹಸ್ರಶಃ ಪವನರಜೋಭ್ರಮೋಹಿತಾ ಮಹಾನಿಲಪ್ರಚಲಿತಪಾದಪೇ ವನೇ।।

ಭಯಭರಿತ ಪಕ್ಷಿಗಳು ಹೆದರಿ ಗಗನವನ್ನೇರುವಂತೆ ಅವರು ಅವನ ಅಗಲ ಬಾಯಿಯಬಳಿ ಮುತ್ತಿಗೆಹಾಕಿದರು. ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಧೂಳಿನ ಮೋಡಗಳಿಂದ ಸಮ್ಮೋಹಿತರಾಗಿ ಅವರು ಸಹಸ್ರ ಸಂಖ್ಯೆಯಲ್ಲಿ ಭಿರುಗಾಳಿಯಿಂದ ತರುಬಲ್ಪಟ್ಟ ಪಕ್ಷಿಗಳಂತೆ ಅವನ ಬಾಯಿಯ ಹತ್ತಿರ ಬಂದರು.

01024014a ತತಃ ಖಗೋ ವದನಮಮಿತ್ರತಾಪನಃ ಸಮಾಹರತ್ಪರಿಚಪಲೋ ಮಹಾಬಲಃ।
01024014c ನಿಷೂದಯನ್ಬಹುವಿಧಮತ್ಸ್ಯಭಕ್ಷಿಣೋ ಬುಭುಕ್ಷಿತೋ ಗಗನಚರೇಶ್ವರಸ್ತದಾ।।

ಆಗ ಹಸಿವೆಯಿಂದ ತನ್ನ ಬಾಯಿಯನ್ನು ದೊಡ್ಡದಾಗಿ ತೆರೆದಿಟ್ಟಿದ್ದ ಶತ್ರುತಾಪನ ಮಹಾಬಲಿ ಪಕ್ಷಿಯು ತನ್ನ ಬಾಯಿಯನ್ನು ಮುಚ್ಚಿ ಬಹುವಿಧದ ಮೀನುಗಳನ್ನು ಸೇವಿಸುವ ಆ ನಿಷಾದ ಸಂಕುಲವನ್ನು ಭಕ್ಷಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಚತುರ್ವಿಂಶೋಽಧ್ಯಾಯಃ।
ಇದು ಶ್ರೀ ಮಹಾಭಾರತಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ನಾಲ್ಕನೇ ಅಧ್ಯಾಯವು.