ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಆಸ್ತೀಕ ಪರ್ವ
ಅಧ್ಯಾಯ 23
ಸಾರ
ಗರುಡನು ಸರ್ಪಗಳನ್ನು ದ್ವೀಪವೊಂದಕ್ಕೆ ಕೊಂಡೊಯ್ದುದು (1-5). ತಮ್ಮ ದಾಸತ್ವದ ಕಾರಣವನ್ನು ಗರುಡನಿಗೆ ವಿನತೆಯು ವಿವರಿಸಿದುದು (6-10). ದಾಸತ್ವದ ಮುಕ್ತಿಗೆ ಬದಲಾಗಿ ಸರ್ಪಗಳು ಗರುಡನಲ್ಲಿ ಅಮೃತವನ್ನು ಕೇಳಿದುದು (11-12).01023001 ಸೂತ ಉವಾಚ।
01023001a ಸುಪರ್ಣೇನೋಹ್ಯಮಾನಾಸ್ತೇ ಜಗ್ಮುಸ್ತಂ ದೇಶಮಾಶು ವೈ।
01023001c ಸಾಗರಾಂಬುಪರಿಕ್ಷಿಪ್ತಂ ಪಕ್ಷಿಸಂಘನಿನಾದಿತಂ।।
ಸೂತನು ಹೇಳಿದನು: “ಸುಪರ್ಣನಿಂದ ಕರೆದೊಯ್ಯಲ್ಪಟ್ಟ ನಾಗಗಳು ಸಾಗರದ ನೀರನ್ನು ದಾಟಿ ಪಕ್ಷಿಯೊಡನೆ ಸಂತೋಷದಿಂದ ಆ ದ್ವೀಪವನ್ನು ತಲುಪಿದವು.
01023002a ವಿಚಿತ್ರಫಲಪುಷ್ಪಾಭಿರ್ವನರಾಜಿಭಿರಾವೃತಂ।
01023002c ಭವನೈರಾವೃತಂ ರಮ್ಯೈಸ್ತಥಾ ಪದ್ಮಾಕರೈರಪಿ।।
ಅದು ವಿಚಿತ್ರ ಫಲ ಪುಷ್ಪಗಳನ್ನು ಹೊತ್ತ ವನರಾಶಿಯಿಂದ ತುಂಬಿಕೊಂಡಿತ್ತು ಹಾಗೂ ರಮ್ಯ ಭವನ ಪದ್ಮಾಕರಗಳನ್ನು ಹೊಂದಿತ್ತು.
01023003a ಪ್ರಸನ್ನಸಲಿಲೈಶ್ಚಾಪಿ ಹ್ರದೈಶ್ಚಿತ್ರೈರ್ವಿಭೂಷಿತಂ।
01023003c ದಿವ್ಯಗಂಧವಹೈಃ ಪುಣ್ಯೈರ್ಮಾರುತೈರುಪವೀಜಿತಂ।।
ಅದು ಪ್ರಸನ್ನ ಜಲದಿಂದೊಡಗೂಡಿದ ಸುಂದರ ಸರೋವರಗಳಿಂದ ಅಲಂಕರಿಸಲ್ಪಟ್ಟಿತ್ತು ಮತ್ತು ದಿವ್ಯಗಂಧವನ್ನು ಸೂಸುವ ಪುಣ್ಯ ಮಾರುತದಿಂದ ಪುನರ್ಜೀವನಗೊಂಡಿತ್ತು.
01023004a ಉಪಜಿಘ್ರದ್ಭಿರಾಕಾಶಂ ವೃಕ್ಷೈರ್ಮಲಯಜೈರಪಿ।
01023004c ಶೋಭಿತಂ ಪುಷ್ಪವರ್ಷಾಣಿ ಮುಂಚದ್ಭಿರ್ಮಾರುತೋದ್ಧುತೈಃ।।
ಮಲಯದಲ್ಲಿ ಹುಟ್ಟಿ ಬೀಸುವ ಗಾಳಿಯು ಆಕಾಶವನ್ನು ಮುತ್ತಿಡುವಂತಿರುವ ಸುಂದರ ವೃಕ್ಷಗಳಿಂದ ಪುಷ್ಪವೃಷ್ಟಿಯನ್ನು ಸುರಿಸುತ್ತಿತ್ತು.
01023005a ಕಿರದ್ಭಿರಿವ ತತ್ರಸ್ಥಾನ್ನಾಗಾನ್ಪುಷ್ಪಾಂಬುವೃಷ್ಟಿಭಿಃ।
01023005c ಮನಃಸಂಹರ್ಷಣಂ ಪುಣ್ಯಂ ಗಂಧರ್ವಾಪ್ಸರಸಾಂ ಪ್ರಿಯಂ।
01023005e ನಾನಾಪಕ್ಷಿರುತಂ ರಮ್ಯಂ ಕದ್ರೂಪುತ್ರಪ್ರಹರ್ಷಣಂ।।
ಅಲ್ಲಿರುವ ವೃಕ್ಷಗಳು ಪುಷ್ಪಗಳನ್ನೇ ನೀರಿನಂತೆ ಸುರಿಸಿ ಸ್ನಾನಮಾಡಿಸುತ್ತಿರುವಂತೆ ತೋರುತ್ತಿದ್ದವು. ಮನಸ್ಸಿಗೆ ಆನಂದವನ್ನು ನೀಡುವ, ಪುಣ್ಯಪ್ರದ, ಗಂಧರ್ವ ಅಪ್ಸರೆಯರಿಗೆ ಪ್ರಿಯಕರ, ನಾನಾ ಪಕ್ಷಿಗಳ ಕಲರವಗಳಿಂದ ಪ್ರತಿಧ್ವನಿಸುತ್ತಿದ್ದ ಆ ಪ್ರದೇಶವು ಕದ್ರು ಪುತ್ರರನ್ನು ಹರ್ಷಗೊಳಿಸಿತು.
01023006a ತತ್ತೇ ವನಂ ಸಮಾಸಾದ್ಯ ವಿಜಹ್ರುಃ ಪನ್ನಗಾ ಮುದಾ।
01023006c ಅಬ್ರುವಂಶ್ಚ ಮಹಾವೀರ್ಯಂ ಸುಪರ್ಣಂ ಪತಗೋತ್ತಮಂ।।
ಆ ವನವನ್ನು ಸೇರಿದ ನಾಗಗಳು ಸಾಕಷ್ಟು ಮುದಿತರಾದರು ಮತ್ತು ಪತಗೋತ್ತಮ ಮಹಾವೀರ ಸುಪರ್ಣನಿಗೆ ಹೇಳಿದರು:
01023007a ವಹಾಸ್ಮಾನಪರಂ ದ್ವೀಪಂ ಸುರಮ್ಯಂ ವಿಪುಲೋದಕಂ।
01023007c ತ್ವಂ ಹಿ ದೇಶಾನ್ಬಹೂನ್ರಮ್ಯಾನ್ಪತನ್ಪಶ್ಯಸಿ ಖೇಚರ।।
“ಇದಕ್ಕಿಂತಲೂ ವಿಪುಲವಾಗಿ ನೀರಿರುವ ಸುರಮ್ಯ ದ್ವೀಪಕ್ಕೆ ನಮ್ಮನ್ನು ಕರೆದೊಯ್ಯಿ. ನೀನು ಆಕಾಶದಲ್ಲಿ ಹಾರಿ ಬರುವಾಗ ಬಹಳಷ್ಟು ರಮ್ಯ ಪ್ರದೇಶಗಳನ್ನು ನೋಡಿರಬಹುದು.”
01023008a ಸ ವಿಚಿಂತ್ಯಾಬ್ರವೀತ್ಪಕ್ಷೀ ಮಾತರಂ ವಿನತಾಂ ತದಾ।
01023008c ಕಿಂ ಕಾರಣಂ ಮಯಾ ಮಾತಃ ಕರ್ತವ್ಯಂ ಸರ್ಪಭಾಷಿತಂ।।
ಸ್ವಲ್ಪಹೊತ್ತು ಯೋಚಿಸಿ ಆ ಪಕ್ಷಿಯು ಮಾತೆ ವಿನತೆಯನ್ನು ಕೇಳಿದನು: “ಮಾತೆ! ಈ ಸರ್ಪಗಳು ಹೇಳಿದ ಕೆಲಸಗಳನ್ನೆಲ್ಲ ನಾನು ಏಕೆ ಮಾಡಬೇಕು?”
01023009 ವಿನತೋವಾಚ।
01023009a ದಾಸೀಭೂತಾಸ್ಮ್ಯನಾರ್ಯಾಯಾ ಭಗಿನ್ಯಾಃ ಪತಗೋತ್ತಮ।
01023009c ಪಣಂ ವಿತಥಮಾಸ್ಥಾಯ ಸರ್ಪೈರುಪಧಿನಾ ಕೃತಂ।।
ವಿನತೆಯು ಹೇಳಿದಳು: “ಪತಗೋತ್ತಮ! ಸರ್ಪಗಳ ಮೋಸದಿಂದ ನಾನು ಪಣವನ್ನು ಸೋತು ನನ್ನ ಪತಿಯ ಎರಡನೇ ಪತ್ನಿ ನನ್ನ ಸಹೋದರಿಯ ದಾಸಿಯಾಗಿದ್ದೇನೆ.””
01023010 ಸೂತ ಉವಾಚ।
01023010a ತಸ್ಮಿಂಸ್ತು ಕಥಿತೇ ಮಾತ್ರಾ ಕಾರಣೇ ಗಗನೇಚರಃ।
01023010c ಉವಾಚ ವಚನಂ ಸರ್ಪಾಂಸ್ತೇನ ದುಃಖೇನ ದುಃಖಿತಃ।।
ಸೂತನು ಹೇಳಿದನು: “ತಾಯಿಯಿಂದ ಕಾರಣವನ್ನು ತಿಳಿದ ಗಗನೇಚರನು ದುಃಖಿತನಾಗಿ ಸರ್ಪಗಳಿಗೆ ಹೇಳಿದನು:
01023011a ಕಿಮಾಹೃತ್ಯ ವಿದಿತ್ವಾ ವಾ ಕಿಂ ವಾ ಕೃತ್ವೇಹ ಪೌರುಷಂ।
01023011c ದಾಸ್ಯಾದ್ವೋ ವಿಪ್ರಮುಚ್ಯೇಯಂ ಸತ್ಯಂ ಶಂಸತ ಲೇಲಿಹಾಃ।।
“ಸರ್ಪಗಳೇ! ಏನನ್ನು ತಂದುಕೊಡುವುದರಿಂದ, ಅಥವಾ ಏನನ್ನು ಹೇಳಿಕೊಡುವುದರಿಂದ, ಅಥವಾ ಎಂಥಹ ಪೌರುಷ ಕೆಲಸವನ್ನು ಮಾಡುವುದರಿಂದ ನಾವು ಈ ದಾಸತ್ವದಿಂದ ಬಿಡುಗಡೆ ಹೊಂದಬಹುದು ಹೇಳಿ.”
01023012a ಶ್ರುತ್ವಾ ತಮಬ್ರುವನ್ಸರ್ಪಾ ಆಹರಾಮೃತಮೋಜಸಾ।
01023012c ತತೋ ದಾಸ್ಯಾದ್ವಿಪ್ರಮೋಕ್ಷೋ ಭವಿತಾ ತವ ಖೇಚರ।।
ಅವನು ಹೇಳಿದ್ದುದನ್ನು ಕೇಳಿದ ಸರ್ಪಗಳು “ಖೇಚರ! ಬಲವನ್ನುಪಯೋಗಿಸಿ ಅಮೃತವನ್ನು ತೆಗೆದುಕೊಂಡು ಬಾ. ಆಗ ನೀವು ದಾಸತ್ವದಿಂದ ಮುಕ್ತರಾಗುವಿರಿ” ಎಂದವು.”