018 ಸರ್ಪ ಶಾಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 18

ಸಾರ

ವಿನತೆ ಮತ್ತು ಕದ್ರುವಿನ ನಡುವೆ ಉಚ್ಛೈಶ್ರವದ ಬಾಲದಬಣ್ಣದ ಕುರಿತು ಪಣ (1-5). ಕದ್ರುವು ತನ್ನ ಮಕ್ಕಳಾದ ಸರ್ಪಗಳಿಗೆ ನೀಡಿದ ಶಾಪ (6-10).

01018001 ಸೂತ ಉವಾಚ।
01018001a ಏತತ್ತೇ ಸರ್ವಮಾಖ್ಯಾತಮಮೃತಂ ಮಥಿತಂ ಯಥಾ।
01018001c ಯತ್ರ ಸೋಽಶ್ವಃ ಸಮುತ್ಪನ್ನಃ ಶ್ರೀಮಾನತುಲವಿಕ್ರಮಃ।।

ಸೂತನು ಹೇಳಿದನು: “ಅಮೃತಮಥನದ ಕುರಿತು ಎಲ್ಲವನ್ನೂ ನಾನು ನಿನಗೆ ಹೇಳಿದ್ದೇನೆ. ಅದೇ ಸಮಯದಲ್ಲಿ ಅತುಲ ವಿಕ್ರಮಿ ಸುಂದರ ಅಶ್ವವು ಹುಟ್ಟಿತು.

01018002a ಯಂ ನಿಶಾಮ್ಯ ತದಾ ಕದ್ರೂರ್ವಿನತಾಮಿದಮಬ್ರವೀತ್।
01018002c ಉಚ್ಚೈಶ್ರವಾ ನು ಕಿಂವರ್ಣೋ ಭದ್ರೇ ಜಾನೀಹಿ ಮಾಚಿರಂ।।

ಅದನ್ನು ವೀಕ್ಷಿಸುತ್ತಾ ಕದ್ರುವು ವಿನತಳನ್ನು ಕೇಳಿದಳು: “ಭದ್ರೇ! ಆ ಉಚ್ಛೈಶ್ರವವು ಯಾವ ವರ್ಣದ್ದು? ಬೇಗ ಹೇಳು.”

01018003 ವಿನತೋವಾಚ।
01018003a ಶ್ವೇತ ಏವಾಶ್ವರಾಜೋಽಯಂ ಕಿಂ ವಾ ತ್ವಂ ಮನ್ಯಸೇ ಶುಭೇ।
01018003c ಬ್ರೂಹಿ ವರ್ಣಂ ತ್ವಮಪ್ಯಸ್ಯ ತತೋಽತ್ರ ವಿಪಣಾವಹೇ।।

ವಿನತೆಯು ಹೇಳಿದಳು: “ಈ ಅಶ್ವರಾಜನು ಬಿಳಿಯಾಗಿದ್ದಾನೆ. ಶುಭೇ! ನಿನ್ನ ಅಭಿಪ್ರಾಯವೇನು? ಅದರ ಬಣ್ಣವು ಯಾವುದು ಎಂದು ನೀನು ಹೇಳು. ಅದರ ಮೇಲೆ ಪಣವಿಡೋಣ.”

01018004 ಕದ್ರೂರುವಾಚ।
01018004a ಕೃಷ್ಣವಾಲಮಹಂ ಮನ್ಯೇ ಹಯಮೇನಂ ಶುಚಿಸ್ಮಿತೇ।
01018004c ಏಹಿ ಸಾರ್ಧಂ ಮಯಾ ದೀವ್ಯ ದಾಸೀಭಾವಾಯ ಭಾಮಿನಿ।।

ಕದ್ರುವು ಹೇಳಿದಳು: “ಶುಚಿಸ್ಮಿತೇ! ಈ ಕುದುರೆಯ ಬಾಲವು ಕಪ್ಪು ಬಣ್ಣದ್ದು ಎಂದು ನನ್ನ ಅನಿಸಿಕೆ. ಭಾಮಿನಿ! ಇದರಲ್ಲಿ ಸೋತವರು ಇನ್ನೊಬ್ಬರ ದಾಸಿಯಾಗಬೇಕು.””

01018005 ಸೂತ ಉವಾಚ।
01018005a ಏವಂ ತೇ ಸಮಯಂ ಕೃತ್ವಾ ದಾಸೀಭಾವಾಯ ವೈ ಮಿಥಃ।
01018005c ಜಗ್ಮತುಃ ಸ್ವಗೃಹಾನೇವ ಶ್ವೋ ದ್ರಕ್ಷ್ಯಾವ ಇತಿ ಸ್ಮ ಹ।।

ಸೂತನು ಹೇಳಿದನು: “ಈ ರೀತಿ ಒಬ್ಬರಿಗೊಬ್ಬರು ದಾಸಿಯಾಗುವ ಪಣವನ್ನು ತೊಟ್ಟು “ನಾಳೆ ಬಂದು ಕುದುರೆಯನ್ನು ನೋಡೋಣ” ಎಂದು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

01018006a ತತಃ ಪುತ್ರಸಹಸ್ರಂ ತು ಕದ್ರೂರ್ಜಿಹ್ಮಂ ಚಿಕೀರ್ಷತೀ।
01018006c ಆಜ್ಞಾಪಯಾಮಾಸ ತದಾ ವಾಲಾ ಭೂತ್ವಾಂಜನಪ್ರಭಾಃ।।

ಮೋಸಮಾಡುವ ಉದ್ದೇಶದಿಂದ ಕದ್ರುವು ತನ್ನ ಸಹಸ್ರ ಪುತ್ರರಿಗೆ “ನಾನು ದಾಸಿಯಾಗಬಾರದೆಂದಾದರೆ ತಕ್ಷಣವೇ ಹೋಗಿ ಆ ಅಶ್ವದ ಬಾಲಕ್ಕೆ ಸುತ್ತಿಕೊಂಡು, ಅದು ಕಪ್ಪಾಗಿ ಕಾಣುವಂತೆ ಮಾಡಿ” ಎಂದು ಅಜ್ಞಾಪಿಸಿದಳು.

01018007a ಆವಿಶಧ್ವಂ ಹಯಂ ಕ್ಷಿಪ್ರಂ ದಾಸೀ ನ ಸ್ಯಾಮಹಂ ಯಥಾ।
01018007c ತದ್ವಾಕ್ಯಂ ನಾನ್ವಪದ್ಯಂತ ತಾನ್ ಶಶಾಪ ಭುಜಂಗಮಾನ್।।
01018008a ಸರ್ಪಸತ್ರೇ ವರ್ತಮಾನೇ ಪಾವಕೋ ವಃ ಪ್ರಧಕ್ಷ್ಯತಿ।
01018008c ಜನಮೇಜಯಸ್ಯ ರಾಜರ್ಷೇಃ ಪಾಂಡವೇಯಸ್ಯ ಧೀಮತಃ।।

ಅವಳ ಮಾತನ್ನು ಪರಿಪಾಲಿಸಲು ಇಚ್ಛೆ ತೋರದ ಆ ಭುಜಂಗಗಳಿಗೆ ಅವಳು “ಧೀಮಂತ ಪಾಂಡವೇಯ ರಾಜರ್ಷಿ ಜನಮೇಜಯನು ನಡೆಸುವ ಸರ್ಪಸತ್ರದಲ್ಲಿ ನಿಮ್ಮೆಲ್ಲರನ್ನೂ ಪಾವಕನು ಸುಟ್ಟು ಭಸ್ಮಮಾಡುವನು” ಎಂದು ಶಾಪವನ್ನಿತ್ತಳು.

01018009a ಶಾಪಮೇನಂ ತು ಶುಶ್ರಾವ ಸ್ವಯಮೇವ ಪಿತಾಮಹಃ।
01018009c ಅತಿಕ್ರೂರಂ ಸಮುದ್ದಿಷ್ಟಂ ಕದ್ರ್ವಾ ದೈವಾದತೀವ ಹಿ।।
01018010a ಸಾರ್ಧಂ ದೇವಗಣೈಃ ಸರ್ವೈರ್ವಾಚಂ ತಾಮನ್ವಮೋದತ।
01018010c ಬಹುತ್ವಂ ಪ್ರೇಕ್ಷ್ಯ ಸರ್ಪಾಣಾಂ ಪ್ರಜಾನಾಂ ಹಿತಕಾಮ್ಯಯಾ।।

ದೈವಾಧೀನ ಕದ್ರುವಿನಿಂದ ಹೊರಬಂದ ಈ ಅತಿ ಕ್ರೂರ ಶಾಪವನ್ನು ಸ್ವಯಂ ಪಿತಾಮಹನೂ ಕೇಳಿದನು. ಆದರೆ ಸರ್ಪಗಳು ವೃದ್ಧಿಯಾಗುತ್ತಿರುವುದನ್ನು ನೋಡಿ ಪ್ರಜೆಗಳ ಹಿತಕ್ಕಾಗಿ ಅವನು ಎಲ್ಲ ದೇವಗಣಗಳ ಸಹಿತ ಆ ಶಾಪವನ್ನು ಅನುಮೋದಿಸಿದನು.

01018011a ತಿಗ್ಮವೀರ್ಯವಿಷಾ ಹ್ಯೇತೇ ದಂದಶೂಕಾ ಮಹಾಬಲಾಃ।
01018011c ತೇಷಾಂ ತೀಕ್ಷ್ಣವಿಷತ್ವಾದ್ಧಿ ಪ್ರಜಾನಾಂ ಚ ಹಿತಾಯ ವೈ।
01018011e 1ಪ್ರಾದಾದ್ವಿಷಹರೀಂ ವಿದ್ಯಾಂ ಕಾಶ್ಯಪಾಯ ಮಹಾತ್ಮನೇ।।

“ಅತ್ಯಂತ ಪರಿಣಾಮಕಾರಿಯಾದ ಅವರ ವಿಷ, ಅವರ ಮಹಾ ಶಕ್ತಿ, ತೀಕ್ಷ್ಣ ವಿಷ, ಮತ್ತು ಕಚ್ಚುವ ಸ್ವಭಾವವನ್ನು ಪರಿಗಣಿಸಿದರೆ ಪ್ರಜೆಗಳ ಹಿತಕ್ಕೆ ಇದು ಒಳ್ಳೆಯದೇ ಆಯಿತು!” ಎಂದು ಅವನು ಮಹಾತ್ಮ ಕಾಶ್ಯಪನಿಗೆ ವಿಷಹರಣೀ ವಿಧ್ಯೆಯನ್ನು ಪ್ರದಾನಿಸಿದನು.”2

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಅಷ್ಟಾದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸುಪರ್ಣದಲ್ಲಿ ಹದಿನೆಂಟನೆಯ ಅಧ್ಯಾಯವು.


  1. ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಯುಕ್ತಂ ಮಾತ್ರಾ ಕೃತಂ ತೇಷಾಂ ಪರಪೀಡೋಪಸರ್ಪಿಣಾಂ। ಅನ್ಯೇಷಾಮಪಿ ಸತ್ವಾನಾಂ ನಿತ್ಯಂ ದೋಷಪರಾಸ್ತು ಯೇ।। ತೇಷಾಂ ಪ್ರಾಣಾಂತಕೋ ದಂಡೋ ದೈವೇನ ವಿನಿಪಾತ್ಯತೇ। ಏವಂ ಸಂಭಾಷ್ಯ ದೇವಸ್ತು ಪೂಜ್ಯ ಕದ್ರೂಂ ಚ ತಾಂ ತದಾ।। ಆಯೂಯ ಕಶ್ಯಪಂ ದೇವ ಇದಂ ವಚನಮಬ್ರವೀತ್। ಯದೇತೇ ದಂತಶೂಕಾಶ್ಚ ಸರ್ಪಾ ಜಾತಾಸ್ತವಾನಘ।। ವಿಷೋಲ್ಬಣಾ ಮಹಾಭೋಗಾ ಮಾತ್ರಾ ಶಪ್ತಾಃ ಪರಂತಪ। ತತ್ರ ಮನ್ಯುಸ್ತ್ವಯಾ ತಾತ ನ ಕರ್ತವ್ಯಃ ಕಥಂಚನ।। ದೃಷ್ಟಂ ಪುರಾತನಂ ಏತದ್ಯಜ್ಞೇ ಸರ್ಪವಿನಾಶನಂ। ಇತ್ಯುಕ್ತ್ವಾ ಸೃಷ್ಟಿಕೃದ್ದೇವಸ್ತಂ ಪ್ರಸಾದ್ಯ ಪ್ರಜಾಪತಿಂ।। ಅರ್ಥಾತ್: “ಪರರಿಗೆ ಪೀಡೆಗಳನ್ನು ನೀಡುವ ಸರ್ಪಗಳಿಗೆ ಅವರ ತಾಯಿಯು ಮಾಡಿರುವುದು ಯುಕ್ತವೇ ಆಗಿದೆ. ಬೇರೆಯವರಿಗೆ ಯಾವಾಗಲೂ ತೊಂದರೆಯನ್ನೇ ಉಂಟುಮಾಡುವವರಿಗೆ ಪ್ರಾಣಾಂತಕರ ಶಿಕ್ಷೆಯು ದೈವದಿಂದಲೇ ಸಿದ್ಧವಾಗುತ್ತದೆ.” ಬ್ರಹ್ಮನು ಹೀಗೆ ಹೇಳಿ ಕದ್ರುವನ್ನು ಪ್ರಶಂಸಿಸಿದನು. ಅನಂತರ ದೇವನು ಕಶ್ಯಪನನ್ನು ಕರೆದು ಹೀಗೆಂದನು: “ಅನಘ! ಇವಳಲ್ಲಿ ನಿನಗೆ ಹುಟ್ಟಿದ ಸರ್ಪಗಳಲ್ಲಿ ವಿಷಭರಿತ ಹಲ್ಲುಗಳಿವೆ. ಅತ್ಯಂತ ವಿಷಭರಿತವಾಗಿರುವ, ಮಹಾಕಾಯದ ಈ ಸರ್ಪಗಳಿಗೆ ತಾಯಿಯೇ ಶಪಿಸಿದ್ದಾಳೆ. ಪರಂತಪ! ಮಗನೇ! ಈ ವಿಷಯದಲ್ಲಿ ನೀನು ಯಾವಕಾರಣಕ್ಕೂ ಕುಪಿತನಾಗಬಾರದು. ಯಜ್ಞದಲ್ಲಿ ಸರ್ಪಗಳ ವಿನಾಶವು ಹಿಂದೆಯೇ ನಿಶ್ಚಿತವಾಗಿತ್ತು.” ಹೀಗೆ ಹೇಳಿ ಸೃಷ್ಟಿಕರ್ತ ದೇವನು ಪ್ರಜಾಪತಿಯನ್ನು ಸಮಾಧಾನಗೊಳಿಸಿದನು. ↩︎

  2. ದಕ್ಷಿಣಾತ್ಯ ಪಾಠದ ಕುಂಭಕೋಣ ಪ್ರತಿಯಲ್ಲಿ ಈ ಅಧ್ಯಾಯದ ಕೊನೆಯಲ್ಲಿ ಈ ಶ್ಲೋಕಗಳಿವೆ: ಏವಂ ಶಪ್ತೇಷು ನಾಗೇಷು ಕದ್ರ್ವಾ ಚ ದ್ವಿಜಸತ್ತಮ। ಉದ್ವಿಗ್ನಃ ಶಾಪತಸ್ತಸ್ಯಾಃ ಕದ್ರೂಂ ಕರ್ಕೋಟಕೋಽಬ್ರವೀತ್।। ಮಾತರಂ ಪರಮಪ್ರೀತಸ್ತದಾ ಭುಜಗಸತ್ತಮಃ। ಆವಿಷ್ಯ ವಾಜಿನಂ ಮುಖ್ಯಂ ವಾಲೋ ಭೂತ್ವಾಂಜನಪ್ರಭಃ।। ದರ್ಶಯಿಷ್ಯಾಮಿ ತತ್ರಾಹಮಾತ್ಮಾನಂ ಕಾಮಮಾಷ್ವಸ। ಏವಮಸ್ತ್ವಿತಿ ತಂ ಪುತ್ರಂ ಪ್ರತ್ಯುವಾಚ ಯಶಸ್ವಿನೀ।। ಅರ್ಥಾತ್: ದ್ವಿಜಸತ್ತಮ! ಹೀಗೆ ಕದ್ರುವು ನಾಗಗಳಿಗೆ ಶಪಿಸಲು, ಅವಳ ಶಾಪದಿಂದ ಉದ್ವಿಗ್ನನಾದ ಭುಜಗಸತ್ತಮ ಕರ್ಕೋಟಕನು ತಾಯಿ ಕದ್ರುವಿಗೆ ಪರಮ ಸಂತೋಷವನ್ನು ನೀಡಲು ಈ ಮಾತನ್ನಾಡಿದನು: “ಮಾತೆ! ಕಪ್ಪಾಗಿ ಹೊಳೆಯುವ ಬಾಲವಾಗಿ ನಾನು ಆ ಉಚ್ಛೈಶ್ರವವನ್ನು ಪ್ರವೇಶಿಸಿ ನಿನಗೆ ನಾನು ಅಲ್ಲಿ ಕಾಣಿಸಿಕೊಳ್ಳುತ್ತೇನೆ!” ಅದಕ್ಕೆ ಯುಶಸ್ವಿನೀ ಕದ್ರುವು “ಹಾಗೆಯೇ ಆಗಲಿ!” ಎಂದಳು. ↩︎