013 ಜರತ್ಕಾರುತತ್ಪಿತೃಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಆಸ್ತೀಕ ಪರ್ವ

ಅಧ್ಯಾಯ 13

ಸಾರ

ಆಸ್ತೀಕನ ಕಥೆಯನ್ನು ಹೇಳಲು ಶೌನಕನು ಉಗ್ರಶ್ರವನನ್ನು ಕೇಳುವುದು (1-5). ಆಸ್ತೀಕನ ಕಥೆಯ ಸಾರಾಂಶ (6-45).

01013001 ಶೌನಕ ಉವಾಚ।
01013001a ಕಿಮರ್ಥಂ ರಾಜಶಾರ್ದೂಲಃ ಸ ರಾಜಾ ಜನಮೇಜಯಃ।
01013001c ಸರ್ಪಸತ್ರೇಣ ಸರ್ಪಾಣಾಂ ಗತೋಽಂತಂ ತದ್ವದಸ್ವ ಮೇ।।

ಶೌನಕನು ಹೇಳಿದನು: “ರಾಜಶಾರ್ದೂಲ ರಾಜ ಜನಮೇಜಯನು ಯಾವ ಕಾರಣಕ್ಕಾಗಿ ಸರ್ಪಸತ್ರದಲ್ಲಿ ಸರ್ಪಗಳನ್ನು ನಾಶಗೊಳಿಸಲು ನಿರ್ಧರಿಸಿದನು ಎನ್ನುವುದನ್ನು ನನಗೆ ಹೇಳು.

01013002a ಆಸ್ತೀಕಶ್ಚ ದ್ವಿಜಶ್ರೇಷ್ಠಃ ಕಿಮರ್ಥಂ ಜಪತಾಂ ವರಃ।
01013002c ಮೋಕ್ಷಯಾಮಾಸ ಭುಜಗಾನ್ದೀಪ್ತಾತ್ತಸ್ಮಾದ್ ಹುತಾಶನಾತ್।।

ಜಪಿಸುವರಲ್ಲಿ ಶ್ರೇಷ್ಠ ದ್ವಿಜಶ್ರೇಷ್ಠ ಆಸ್ತೀಕನಾದರೋ ಯಾವ ಕಾರಣಕ್ಕಾಗಿ ಉರಿಯುತ್ತಿರುವ ಬೆಂಕಿಯಿಂದ ಆ ಭುಜಗಗಳನ್ನು ರಕ್ಷಿಸಿದನು?

01013003a ಕಸ್ಯ ಪುತ್ರಃ ಸ ರಾಜಾಸೀತ್ಸರ್ಪಸತ್ರಂ ಯ ಆಹರತ್।
01013003c ಸ ಚ ದ್ವಿಜಾತಿಪ್ರವರಃ ಕಸ್ಯ ಪುತ್ರೋ ವದಸ್ವ ಮೇ।।

ಆ ಸರ್ಪಸತ್ರವನ್ನು ಕೈಗೊಂಡ ರಾಜನು ಯಾರ ಪುತ್ರ? ಮತ್ತು ಆ ದ್ವಿಜಾತಿಪ್ರವರನು ಯಾರ ಪುತ್ರ? ನನಗೆ ಹೇಳು.”

01013004 ಸೂತ ಉವಾಚ।
01013004a ಮಹದಾಖ್ಯಾನಮಾಸ್ತೀಕಂ ಯತ್ರೈತತ್ಪ್ರೋಚ್ಯತೇ ದ್ವಿಜ।
01013004c ಸರ್ವಮೇತದಶೇಷೇಣ ಶೃಣು ಮೇ ವದತಾಂ ವರ।।

ಸೂತನು ಹೇಳಿದನು: “ಉತ್ತಮ ವಾಗ್ಮಿ ದ್ವಿಜನೇ! ಹಿಂದಿನಿಂದ ಹೇಳಿಕೊಂಡು ಬಂದಿರುವ ಆಸ್ತೀಕ ಎನ್ನುವ ಈ ಮಹದಾಖ್ಯಾನವನ್ನು ಸಂಪೂರ್ಣವಾಗಿ ಕೇಳು.”

01013005 ಶೌನಕ ಉವಾಚ।
01013005a ಶ್ರೋತುಮಿಚ್ಛಾಮ್ಯಶೇಷೇಣ ಕಥಾಮೇತಾಂ ಮನೋರಮಾಂ।
01013005c ಆಸ್ತೀಕಸ್ಯ ಪುರಾಣಸ್ಯ ಬ್ರಾಹ್ಮಣಸ್ಯ ಯಶಸ್ವಿನಃ।।

ಶೌನಕನು ಹೇಳಿದನು: “ಆ ಯಶಸ್ವಿ ಬ್ರಾಹ್ಮಣ ಆಸ್ತೀಕನ ಮನೋಹರ ಪುರಾಣ ಕಥೆಯನ್ನು ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ.”

01013006 ಸೂತ ಉವಾಚ।
01013006a ಇತಿಹಾಸಮಿಮಂ ವೃದ್ಧಾಃ ಪುರಾಣಂ ಪರಿಚಕ್ಷತೇ।
01013006c ಕೃಷ್ಣದ್ವೈಪಾಯನಪ್ರೋಕ್ತಂ ನೈಮಿಷಾರಣ್ಯವಾಸಿನಃ।।

ಸೂತನು ಹೇಳಿದನು: “ಹಿರಿಯರು ಈ ಇತಿಹಾಸವನ್ನು ನೈಮಿಷಾರಣ್ಯವಾಸಿಗಳಿಗೆ ಕೃಷ್ಣದ್ವೈಪಾಯನನು ಹೇಳಿದ ಪುರಾಣವೆಂದು ಪರಿಗಣಿಸುತ್ತಾರೆ.

01013007a 1ಪೂರ್ವಂ ಪ್ರಚೋದಿತಃ ಸೂತಃ ಪಿತಾ ಮೇ ಲೋಮಹರ್ಷಣಃ।
01013007c ಶಿಷ್ಯೋ ವ್ಯಾಸಸ್ಯ ಮೇಧಾವೀ ಬ್ರಾಹ್ಮಣೈರಿದಮುಕ್ತವಾನ್।।

ಹಿಂದೆ ನನ್ನ ತಂದೆ ವ್ಯಾಸಶಿಷ್ಯ, ಮೇಧಾವಿ, ಸೂತ ಲೋಮಹರ್ಷಣನು ಬ್ರಾಹ್ಮಣರ ಕೇಳಿಕೆಯಂತೆ ಇದನ್ನು ಹೇಳಿದನು.

01013008a ತಸ್ಮಾದಹಮುಪಶ್ರುತ್ಯ ಪ್ರವಕ್ಷ್ಯಾಮಿ ಯಥಾತಥಂ।
01013008c ಇದಮಾಸ್ತೀಕಮಾಖ್ಯಾನಂ ತುಭ್ಯಂ ಶೌನಕ ಪೃಚ್ಛತೇ।।

ಶೌನಕ! ನಿನ್ನ ಕೇಳಿಕೆಯಂತೆ ನಾನು ನಿನಗೆ ಅಲ್ಲಿ ಕೇಳಿದ ಈ ಆಸ್ತೀಕ ಆಖ್ಯಾನವನ್ನು ಯಥಾವತ್ತಾಗಿ ಹೇಳುತ್ತೇನೆ.

01013009a ಆಸ್ತೀಕಸ್ಯ ಪಿತಾ ಹ್ಯಾಸೀತ್ಪ್ರಜಾಪತಿಸಮಃ ಪ್ರಭುಃ।
01013009c ಬ್ರಹ್ಮಚಾರೀ ಯತಾಹಾರಸ್ತಪಸ್ಯುಗ್ರೇ ರತಃ ಸದಾ।।
01013010a ಜರತ್ಕಾರುರಿತಿ ಖ್ಯಾತ ಊರ್ಧ್ವರೇತಾ ಮಹಾನೃಷಿಃ।
01013010c ಯಾಯಾವರಾಣಾಂ ಧರ್ಮಜ್ಞಃ ಪ್ರವರಃ ಸಂಶಿತವ್ರತಃ।।

ಪ್ರಭು ಪ್ರಜಾಪತಿಯ ಸರಿಸಮ, ಸದಾ ಉಗ್ರತಪಸ್ಸಿನಲ್ಲಿ ನಿರತ ಬ್ರಹ್ಮಚಾರಿಯು ಆಸ್ತೀಕನ ತಂದೆ. ಯಾಯಾವರರ ಕುಲದಲ್ಲಿ2 ಹುಟ್ಟಿದ, ಆ ಧರ್ಮಜ್ಞ, ಸಂಶಿತವ್ರತ ಮಹಾನ್ ಋಷಿಯು ಜರತ್ಕಾರು ಎಂದು ಖ್ಯಾತನಾಗಿದ್ದನು.

01013011a 3ಅಟಮಾನಃ ಕದಾ ಚಿತ್ಸ ಸ್ವಾನ್ದದರ್ಶ ಪಿತಾಮಹಾನ್।
01013011c ಲಂಬಮಾನಾನ್ಮಹಾಗರ್ತೇ ಪಾದೈರೂರ್ಧ್ವೈರಧೋಮುಖಾನ್।।

ಒಮ್ಮೆ ತಿರುಗಾಡುತ್ತಿರುವಾಗ ಅವನು ಒಂದು ಆಳವಾದ ಬಾವಿಯಲ್ಲಿ ತಲೆ ಕೆಳಗೆ ಮತ್ತು ಕಾಲುಗಳನ್ನು ಮೇಲೆ ಮಾಡಿಕೊಂಡು ನೇಲುತ್ತಿರುವ ತನ್ನ ಪಿತಾಮಹರನ್ನು ಕಂಡನು.

01013012a ತಾನಬ್ರವೀತ್ಸ ದೃಷ್ಟೈವ ಜರತ್ಕಾರುಃ ಪಿತಾಮಹಾನ್।
01013012c ಕೇ ಭವಂತೋಽವಲಂಬಂತೇ ಗರ್ತೇಽಸ್ಮಿನ್ವಾ ಅಧೋಮುಖಾಃ।।
01013013a ವೀರಣಸ್ತಂಬಕೇ ಲಗ್ನಾಃ ಸರ್ವತಃ ಪರಿಭಕ್ಷಿತೇ।
01013013c ಮೂಷಕೇನ ನಿಗೂಢೇನ ಗರ್ತೇಽಸ್ಮಿನ್ನಿತ್ಯವಾಸಿನಾ।।

ತನ್ನ ಪಿತಾಮಹರನ್ನು ಕಂಡ ಜರತ್ಕಾರುವು ಅವರನ್ನುದ್ದೇಶಿಸಿ ಹೇಳಿದನು: “ಹತ್ತಿರದಲ್ಲಿಯೇ ನಿಗೂಢವಾಗಿ ವಾಸಿಸುತ್ತಿರುವ ಇಲಿಗಳು ಸಂಪೂರ್ಣವಾಗಿ ತಿನ್ನುತ್ತಿರುವ ಈ ವೀರಣ ದಾರವನ್ನು ಹಿಡಿದು ಅಧೋಮುಖರಾಗಿ ನೇಲುತ್ತಿರುವ ನೀವು ಯಾರು?”

01013014 ಪಿತರ ಊಚುಃ।
01013014a ಯಾಯಾವರಾ ನಾಮ ವಯಂ ಋಷಯಃ ಸಂಶಿತವ್ರತಾಃ।
01013014c ಸಂತಾನಪ್ರಕ್ಷಯಾದ್ಬ್ರಹ್ಮನ್ನಧೋ ಗಚ್ಛಾಮ ಮೇದಿನೀಂ।।

ಪಿತೃಗಳು ಹೇಳಿದರು: “ಸಂಶಿತವ್ರತ ಯಾಯಾವರ ಎಂಬ ಹೆಸರಿನ ಋಷಿಗಳು ನಾವು. ಸಂತಾನದ ಕೊರತೆಯಿಂದಾಗಿ ನಾವು ಈ ಮೇದಿನಿಯ ಕೆಳಗೆ ಬೀಳುತ್ತಿದ್ದೇವೆ.

01013015a ಅಸ್ಮಾಕಂ ಸಂತತಿಸ್ತ್ವೇಕೋ ಜರತ್ಕಾರುರಿತಿ ಶ್ರುತಃ।
01013015c ಮಂದಭಾಗ್ಯೋಽಲ್ಪಭಾಗ್ಯಾನಾಂ ತಪ ಏವ ಸಮಾಸ್ಥಿತಃ।।

ಅಲ್ಪಭಾಗ್ಯರಾದ ನಮ್ಮ ಒಬ್ಬನೇ ಸಂತತಿ ಪ್ರಸಿದ್ಧ ಜರತ್ಕಾರು. ಆ ಮಂದಭಾಗ್ಯನು ನಿರಂತರವಾಗಿ ತಪಸ್ಸಿನಲ್ಲಿಯೇ ತೊಡಗಿದ್ದಾನೆ.

01013016a ನ ಸ ಪುತ್ರಾನ್ಜನಯಿತುಂ ದಾರಾನ್ಮೂಢಶ್ಚಿಕೀರ್ಷತಿ।
01013016c ತೇನ ಲಂಬಾಮಹೇ ಗರ್ತೇ ಸಂತಾನಪ್ರಕ್ಷಯಾದಿಹ।।

ಆ ಮೂಢನು ಪತ್ನಿಯಿಂದ ಪುತ್ರರನ್ನು ಪಡೆಯಲು ಪ್ರಯತ್ನಿಸುತ್ತಿಲ್ಲ. ಹಾಗಾಗಿ ಸಂತಾನಾಪೇಕ್ಷೆಯಿಂದ ನಾವು ಈ ಬಾವಿಯಲ್ಲಿ ಈ ರೀತಿ ನೇಲಿಕೊಂಡಿದ್ದೇವೆ.

01013017a ಅನಾಥಾಸ್ತೇನ ನಾಥೇನ ಯಥಾ ದುಷ್ಕೃತಿನಸ್ತಥಾ।
01013017c ಕಸ್ತ್ವಂ ಬಂಧುರಿವಾಸ್ಮಾಕಮನುಶೋಚಸಿ ಸತ್ತಮ।।

ಸಾಧನಗಳಿದ್ದರೂ ಈ ಅನಾಥ ದುಷ್ಕೃತಿಗೆ ಇಳಿದಿದ್ದೇವೆ. ಸತ್ತಮ! ನಮ್ಮ ಬಂಧುವೋ ಎಂಬಂತೆ ನಮ್ಮ ಮೇಲೆ ಅನುಕಂಪ ತೋರುತ್ತಿರುವ ನೀನು ಯಾರು?

01013018a ಜ್ಞಾತುಮಿಚ್ಛಾಮಹೇ ಬ್ರಹ್ಮನ್ಕೋ ಭವಾನಿಹ ದಿಷ್ಟಿತಃ।
01013018c ಕಿಮರ್ಥಂ ಚೈವ ನಃ ಶೋಚ್ಯಾನನುಕಂಪಿತುಮರ್ಹಸಿ।।

ಬ್ರಾಹ್ಮಣ! ಇಲ್ಲಿ ನಿಂತಿರುವ ನೀನು ಯಾರು ಮತ್ತು ನಮ್ಮ ಮೇಲೆ ಅನುಕಂಪನಾಗಿ ಏಕೆ ಶೋಚಿಸುತ್ತಿದ್ದೀಯೆ ಎಂದು ತಿಳಿಯಲು ಬಯಸುತ್ತೇವೆ.”

01013019 ಜರತ್ಕಾರುರುವಾಚ।
01013019a ಮಮ ಪೂರ್ವೇ ಭವಂತೋ ವೈ ಪಿತರಃ ಸಪಿತಾಮಹಾಃ।
01013019c ಬ್ರೂತ ಕಿಂ ಕರವಾಣ್ಯದ್ಯ ಜರತ್ಕಾರುರಹಂ ಸ್ವಯಂ।।

ಜರತ್ಕಾರುವು ಹೇಳಿದನು: “ನೀವು ನನ್ನ ಪೂರ್ವಜರು, ಪಿತೃ-ಪಿತಾಮಹರು. ಆ ಜರತ್ಕಾರುವು ನಾನೇ. ನಿಮಗಾಗಿ ಏನು ಮಾಡಬೇಕು ಹೇಳಿ.”

01013020 ಪಿತರ ಊಚುಃ।
01013020a ಯತಸ್ವ ಯತ್ನವಾಂಸ್ತಾತ ಸಂತಾನಾಯ ಕುಲಸ್ಯ ನಃ।
01013020c ಆತ್ಮನೋಽರ್ಥೇಽಸ್ಮದರ್ಥೇ ಚ ಧರ್ಮ ಇತ್ಯೇವ ಚಾಭಿಭೋ।।
01013021a ನ ಹಿ ಧರ್ಮಫಲೈಸ್ತಾತ ನ ತಪೋಭಿಃ ಸುಸಂಚಿತೈಃ।

ಪಿತೃಗಳು ಹೇಳಿದರು: “ಮಗು! ನಿನ್ನ ಸ್ವಂತಕ್ಕಾಗಿ ಮತ್ತು ನಮಗಾಗಿ ಕುಲ ಸಂತಾನಕ್ಕೆ ಪ್ರಯತ್ನಿಸು. ಇದೇ ಧರ್ಮ. ಮಗು! ಪುತ್ರರಿಂದ ದೊರೆಯುವ ಗತಿಯು ಧರ್ಮ-ತಪೋಫಲಗಳನ್ನು ಕೂಡಿಡುವುದರಿಂದ ದೊರೆಯುವುದಿಲ್ಲ.

01013021c ತಾಂ ಗತಿಂ ಪ್ರಾಪ್ನುವಂತೀಹ ಪುತ್ರಿಣೋ ಯಾಂ ವ್ರಜಂತಿ ಹ।।
01013022a ತದ್ದಾರಗ್ರಹಣೇ ಯತ್ನಂ ಸಂತತ್ಯಾಂ ಚ ಮನಃ ಕುರು।
01013022c ಪುತ್ರಕಾಸ್ಮನ್ನಿಯೋಗಾತ್ತ್ವಮೇತನ್ನಃ ಪರಮಂ ಹಿತಂ।।

ಆದುದರಿಂದ ಪುತ್ರ! ಪತ್ನಿ ಮತ್ತು ಸಂತತಿಗೋಸ್ಕರ ಮನಸ್ಸಿಟ್ಟು ಪ್ರಯತ್ನ ಮಾಡು. ಕೇವಲ ಇದರಿಂದ ನಮಗೆ ಪರಮ ಹಿತವಾಗುತ್ತದೆ.”

01013023 ಜರತ್ಕಾರುರುವಾಚ।
01013023a ನ ದಾರಾನ್ವೈ ಕರಿಷ್ಯಾಮಿ ಸದಾ ಮೇ ಭಾವಿತಂ ಮನಃ।
01013023c ಭವತಾಂ ತು ಹಿತಾರ್ಥಾಯ ಕರಿಷ್ಯೇ ದಾರಸಂಗ್ರಹಂ।।

ಜರತ್ಕಾರುವು ಹೇಳಿದನು: “ಪತ್ನಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಸದಾ ನನ್ನ ಮನಸ್ಸಿನಲ್ಲಿತ್ತು. ಆದರೆ ನಿಮ್ಮ ಹಿತಕ್ಕಾಗಿ ಪತ್ನಿಯನ್ನು ಪಡೆಯುವ ಕಾರ್ಯವನ್ನು ಮಾಡುತ್ತೇನೆ.

01013024a ಸಮಯೇನ ಚ ಕರ್ತಾಹಮನೇನ ವಿಧಿಪೂರ್ವಕಂ।
01013024c ತಥಾ ಯದ್ಯುಪಲಪ್ಸ್ಯಾಮಿ ಕರಿಷ್ಯೇ ನಾನ್ಯಥಾ ತ್ವಹಂ।।

ಸಮಯ ಬಂದಾಗ ವಿಧಿಪೂರ್ವಕವಾಗಿ ಅದನ್ನೂ ಮಾಡುತ್ತೇನೆ. ಆದರೆ ನನ್ನದೇ ನಿಯಮಗಳ ಮೇಲೆ. ಅನ್ಯಥಾ ಇಲ್ಲ.

01013025a ಸನಾಮ್ನೀ ಯಾ ಭವಿತ್ರೀ ಮೇ ದಿತ್ಸಿತಾ ಚೈವ ಬಂಧುಭಿಃ।
01013025c ಭೈಕ್ಷವತ್ತಾಮಹಂ ಕನ್ಯಾಮುಪಯಂಸ್ಯೇ ವಿಧಾನತಃ।।

ಆ ಕನ್ಯೆಯು ನನ್ನ ಹೆಸರನ್ನೇ ಹೊಂದಿರಬೇಕು ಮತ್ತು ಅವಳನ್ನು ಅವಳ ಬಂಧುಗಳು ಸ್ವ-ಇಚ್ಛೆಯಿಂದ ನನಗೆ ಭಿಕ್ಷವಾಗಿ ಕೊಟ್ಟಿರಬೇಕು.

01013026a ದರಿದ್ರಾಯ ಹಿ ಮೇ ಭಾರ್ಯಾಂ ಕೋ ದಾಸ್ಯತಿ ವಿಶೇಷತಃ।
01013026c ಪ್ರತಿಗ್ರಹೀಷ್ಯೇ ಭಿಕ್ಷಾಂ ತು ಯದಿ ಕಶ್ಚಿತ್ಪ್ರದಾಸ್ಯತಿ।।

ವಿಶೇಷವಾಗಿ ದರಿದ್ರನಾಗಿರುವ ನನಗೆ ಹೆಂಡತಿಯನ್ನು ಯಾರು ತಾನೆ ನೀಡುವರು? ಆದರೆ ಯಾರಾದರೂ ನನಗೆ ಭಿಕ್ಷೆಯಾಗಿ ಕೊಟ್ಟರೆ ಅವಳನ್ನು ಸ್ವೀಕರಿಸುತ್ತೇನೆ.

01013027a ಏವಂ ದಾರಕ್ರಿಯಾಹೇತೋಃ ಪ್ರಯತಿಷ್ಯೇ ಪಿತಾಮಹಾಃ।
01013027c ಅನೇನ ವಿಧಿನಾ ಶಶ್ವನ್ನ ಕರಿಷ್ಯೇಽಹಮನ್ಯಥಾ।।

ಪಿತಾಮಹರೆ! ಈ ರೀತಿ ದೊರಕಿದ ಪತ್ನಿಯನ್ನು ಮದುವೆಯಾಗುತ್ತೇನೆ. ಬೇರೆ ಯಾವರೀತಿಯಲ್ಲಿ ದೊರೆತರೂ ನಾನು ಮದುವೆಯಾಗುವುದಿಲ್ಲ.

01013028a ತತ್ರ ಚೋತ್ಪತ್ಸ್ಯತೇ ಜಂತುರ್ಭವತಾಂ ತಾರಣಾಯ ವೈ।
01013028c ಶಾಶ್ವತಂ ಸ್ಥಾನಮಾಸಾದ್ಯ ಮೋದಂತಾಂ ಪಿತರೋ ಮಮ।।

ನನ್ನ ಪಿತೃಗಳಾದ ನಿಮ್ಮ ಉದ್ಧಾರಕ್ಕಾಗಿ ಮತ್ತು ನೀವು ಶಾಶ್ವತ ಸ್ಥಾನವನ್ನು ಪಡೆದು ಸುಖದಿಂದಿರಬೇಕೆಂದು ನಾನು ಅವಳಲ್ಲಿ ಮಗನನ್ನು ಪಡೆಯುತ್ತೇನೆ.””

01013029 ಸೂತ ಉವಾಚ।
01013029a ತತೋ ನಿವೇಶಾಯ ತದಾ ಸ ವಿಪ್ರಃ ಸಂಶಿತವ್ರತಃ।
01013029c ಮಹೀಂ ಚಚಾರ ದಾರಾರ್ಥೀ ನ ಚ ದಾರಾನವಿಂದತ।।

ಸೂತನು ಹೇಳಿದನು: “ನಂತರ ಸಂಶಿತವ್ರತ ವಿಪ್ರನು ಹೊರಟು ಪತ್ನಿಗೋಸ್ಕರ ಮಹಿಯನ್ನೆಲ್ಲಾ ತಿರುಗಾಡಿದನು. ಆದರೂ ಅವನಿಗೆ ಪತ್ನಿಯು ದೊರೆಯಲಿಲ್ಲ.

01013030a ಸ ಕದಾಚಿದ್ವನಂ ಗತ್ವಾ ವಿಪ್ರಃ ಪಿತೃವಚಃ ಸ್ಮರನ್।
01013030c ಚುಕ್ರೋಶ ಕನ್ಯಾಭಿಕ್ಷಾರ್ಥೀ ತಿಸ್ರೋ ವಾಚಃ ಶನೈರಿವ।।

ಒಮ್ಮೆ ಆ ವಿಪ್ರನು ವನಕ್ಕೆ ಹೋಗಿ ತನ್ನ ಪಿತೃಗಳ ಮಾತನ್ನು ಸ್ಮರಿಸುತ್ತಾ, ಕನ್ಯಾಭಿಕ್ಷಾರ್ಥಿಯಾಗಿ ಮೂರು ಬಾರಿ ಸಣ್ಣ ಧ್ವನಿಯಲ್ಲಿ ಕೂಗಿದನು.

01013031a ತಂ ವಾಸುಕಿಃ ಪ್ರತ್ಯಗೃಹ್ಣಾದುದ್ಯಮ್ಯ ಭಗಿನೀಂ ತದಾ।
01013031c ನ ಸ ತಾಂ ಪ್ರತಿಜಗ್ರಾಹ ನ ಸನಾಮ್ನೀತಿ ಚಿಂತಯನ್।।

ಆಗ ವಾಸುಕಿ4ಯು ತನ್ನ ತಂಗಿ5ಯನ್ನು ಕರೆತಂದು ಒಪ್ಪಿಸಿದನು. ಆದರೆ ಅವಳ ಹೆಸರು ಮತ್ತು ತನ್ನ ಹೆಸರು ಒಂದೇ ಇರಲಿಕ್ಕಿಲ್ಲ ಎಂದು ಯೋಚಿಸಿ ಅವನು ಅವಳನ್ನು ಸ್ವೀಕರಿಸಲಿಲ್ಲ.

01013032a ಸನಾಮ್ನೀಮುದ್ಯತಾಂ ಭಾರ್ಯಾಂ ಗೃಹ್ಣೀಯಾಮಿತಿ ತಸ್ಯ ಹಿ।
01013032c ಮನೋ ನಿವಿಷ್ಟಮಭವಜ್ಜರತ್ಕಾರೋರ್ಮಹಾತ್ಮನಃ।।

ಮಹಾತ್ಮ ಜರತ್ಕಾರುವು ತನ್ನ ಮನಸ್ಸಿನಲ್ಲಿಯೇ ಯೋಚಿಸಿದನು: “ನನ್ನ ಹೆಸರನ್ನೇ ಹೊಂದಿರದಿದ್ದ ಯಾರನ್ನೂ ನಾನು ಭಾರ್ಯೆಯನ್ನಾಗಿ ಸ್ವೀಕರಿಸುವುದಿಲ್ಲ.”

01013033a ತಮುವಾಚ ಮಹಾಪ್ರಾಜ್ಞೋ ಜರತ್ಕಾರುರ್ಮಹಾತಪಾಃ।
01013033c ಕಿಮ್ನಾಮ್ನೀ ಭಗಿನೀಯಂ ತೇ ಬ್ರೂಹಿ ಸತ್ಯಂ ಭುಜಂಗಮ।।

ಆಗ ಮಹಾಪ್ರಾಜ್ಞ ಮಹಾತಪಸ್ವಿ ಜರತ್ಕಾರುವು ಅವನಿಗೆ ಕೇಳಿದನು: “ಭುಜಂಗಮ! ನಿನ್ನ ಈ ತಂಗಿಯ ಹೆಸರೇನು? ಸತ್ಯವನ್ನು ನುಡಿ.”

01013034 ವಾಸುಕಿರುವಾಚ।
01013034a ಜರತ್ಕಾರೋ ಜರತ್ಕಾರುಃ ಸ್ವಸೇಯಮನುಜಾ ಮಮ।
01013034c ತ್ವದರ್ಥಂ ರಕ್ಷಿತಾ ಪೂರ್ವಂ ಪ್ರತೀಚ್ಛೇಮಾಂ ದ್ವಿಜೋತ್ತಮ।।

ವಾಸುಕಿಯು ಹೇಳಿದನು: “ಜರತ್ಕಾರು! ನನ್ನ ಅನುಜೆಯ ಹೆಸರೂ ಜರತ್ಕಾರು. ಬಹುಕಾಲದಿಂದ ನಿನಗಾಗಿ ಇವಳನ್ನು ರಕ್ಷಿಸಿಟ್ಟಿದ್ದೇನೆ. ದ್ವಿಜೋತ್ತಮ! ಸಂತೋಷದಿಂದ ಇವಳನ್ನು ಸ್ವೀಕರಿಸು.””

01013035 ಸೂತ ಉವಾಚ।
01013035a ಮಾತ್ರಾ ಹಿ ಭುಜಗಾಃ ಶಪ್ತಾಃ ಪೂರ್ವಂ ಬ್ರಹ್ಮವಿದಾಂ ವರ।
01013035c ಜನಮೇಜಯಸ್ಯ ವೋ ಯಜ್ಞೇ ಧಕ್ಷ್ಯತ್ಯನಿಲಸಾರಥಿಃ।।

ಸೂತನು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ! ಪೂರ್ವದಲ್ಲಿ ಸರ್ಪಗಳು “ಜನಮೇಜಯನ ಯಜ್ಞದಲ್ಲಿ ಅನಿಲಸಾರಥಿ ಅಗ್ನಿಯಿಂದ ಸುಟ್ಟುಹೋಗಿ” ಎಂದು ಅವರ ಮಾತೆಯಿಂದಲೇ ಶಪಿಸಲ್ಪಟ್ಟಿದ್ದರು.

01013036a ತಸ್ಯ ಶಾಪಸ್ಯ ಶಾಂತ್ಯರ್ಥಂ ಪ್ರದದೌ ಪನ್ನಗೋತ್ತಮಃ।
01013036c ಸ್ವಸಾರಂ ಋಷಯೇ ತಸ್ಮೈ ಸುವ್ರತಾಯ ತಪಸ್ವಿನೇ।।

ಆ ಶಾಪವನ್ನು ಶಾಂತಗೊಳಿಸಲು ಪನ್ನಗೋತ್ತಮ ವಾಸುಕಿಯು ತನ್ನ ತಂಗಿಯನ್ನು ಆ ಸುವ್ರತ ತಪಸ್ವಿ ಋಷಿಗೆ ಕೊಟ್ಟನು.

01013037a ಸ ಚ ತಾಂ ಪ್ರತಿಜಗ್ರಾಹ ವಿಧಿದೃಷ್ಟೇನ ಕರ್ಮಣಾ।
01013037c ಆಸ್ತೀಕೋ ನಾಮ ಪುತ್ರಶ್ಚ ತಸ್ಯಾಂ ಜಜ್ಞೇ ಮಹಾತ್ಮನಃ।।

ವಿಧಿವತ್ತಾದ ಕರ್ಮಗಳಿಂದ ಆ ಮಹಾತ್ಮನು ಅವಳನ್ನು ಸ್ವೀಕರಿಸಿದನು ಮತ್ತು ಅವಳಲ್ಲಿ ಆಸ್ತೀಕ ಎಂಬ ಹೆಸರಿನ ಪುತ್ರನನ್ನು ಪಡೆದನು.

01013038a ತಪಸ್ವೀ ಚ ಮಹಾತ್ಮಾ ಚ ವೇದವೇದಾಂಗಪಾರಗಃ।
01013038c ಸಮಃ ಸರ್ವಸ್ಯ ಲೋಕಸ್ಯ ಪಿತೃಮಾತೃಭಯಾಪಹಃ।।

ಅವನು ತಪಸ್ವಿಯೂ, ಮಹಾತ್ಮನೂ, ವೇದವೇದಾಂಗ ಪಾರಂಗತನೂ, ಲೋಕದ ಸರ್ವವನ್ನೂ ಸಮವಾಗಿ ಕಾಣುವವನೂ, ತಂದೆತಾಯಿಗಳ ಭಯವನ್ನು ದೂರಪಡಿಸುವವನೂ ಆಗಿದ್ದನು.

01013039a ಅಥ ಕಾಲಸ್ಯ ಮಹತಃ ಪಾಂಡವೇಯೋ ನರಾಧಿಪಃ।
01013039c ಆಜಹಾರ ಮಹಾಯಜ್ಞಂ ಸರ್ಪಸತ್ರಮಿತಿ ಶ್ರುತಿಃ।।

ಬಹಳ ಕಾಲದ ನಂತರ ಪಾಂಡವರ ವಂಶದಲ್ಲಿ ಜನಿಸಿದ ನರಾಧಿಪನು ಸರ್ಪಸತ್ರವೆಂದು ಖ್ಯಾತಿಯಾದ ಮಹಾಯಜ್ಞವನ್ನು ಕೈಗೊಂಡನು.

01013040a ತಸ್ಮಿನ್ಪ್ರವೃತ್ತೇ ಸತ್ರೇ ತು ಸರ್ಪಾಣಾಮಂತಕಾಯ ವೈ।
01013040c ಮೋಚಯಾಮಾಸ ತಂ ಶಾಪಮಾಸ್ತೀಕಃ ಸುಮಹಾಯಶಾಃ।।

ಆ ಸತ್ರದಲ್ಲಿ ಸರ್ಪಗಳ ವಿನಾಶವು ನಡೆಯುತ್ತಿರುವಾಗ ಸುಮಹಾಯಶ ಆಸ್ತೀಕನು ಅವುಗಳನ್ನು ಶಾಪದಿಂದ ಮುಕ್ತಗೊಳಿಸಿದನು.

01013041a ನಾಗಾಂಶ್ಚ ಮಾತುಲಾಂಶ್ಚೈವ ತಥಾ ಚಾನ್ಯಾನ್ಸ ಬಾಂಧವಾನ್।
01013041c ಪಿತೄಂಶ್ಚ ತಾರಯಾಮಾಸ ಸಂತತ್ಯಾ ತಪಸಾ ತಥಾ।
01013041e ವ್ರತೈಶ್ಚ ವಿವಿಧೈರ್ಬ್ರಹ್ಮನ್ಸ್ವಾಧ್ಯಾಯೈಶ್ಚಾನೃಣೋಽಭವತ್।।

ತನ್ನ ಸ್ವಾಧ್ಯಾಯ, ವಿವಿಧ ವ್ರತ-ತಪಸ್ಸುಗಳ ಮೂಲಕ ಆ ಬ್ರಾಹ್ಮಣನು ನಾಗಗಳನ್ನು, ಸೋದರ ಮಾವನನ್ನು, ಇತರ ಬಾಂಧವರನ್ನು, ಪಿತೃಗಳನ್ನು ಮತ್ತು ಮುಂದಿನ ಸಂತತಿಯನ್ನು ಉದ್ಧಾರಮಾಡಿ ಅವರಿಂದ ಋಣ6ಮುಕ್ತನಾದನು.

01013042a ದೇವಾಂಶ್ಚ ತರ್ಪಯಾಮಾಸ ಯಜ್ಞೈರ್ವಿವಿಧದಕ್ಷಿಣೈಃ।
01013042c ಋಷೀಂಶ್ಚ ಬ್ರಹ್ಮಚರ್ಯೇಣ ಸಂತತ್ಯಾ ಚ ಪಿತಾಮಹಾನ್।।

ದಕ್ಷಿಣೆಗಳಿಂದೊಡಗೂಡಿದ ವಿವಿಧ ಯಜ್ಞಗಳಿಂದ ದೇವತೆಗಳನ್ನು, ಬ್ರಹ್ಮಚರ್ಯದಿಂದ ಋಷಿಗಳನ್ನು ಮತ್ತು ಸಂತತಿಯಿಂದ ಪಿತಾಮಹರನ್ನು ತೃಪ್ತಿಪಡಿಸಿದನು.

01013043a ಅಪಹೃತ್ಯ ಗುರುಂ ಭಾರಂ ಪಿತೄಣಾಂ ಸಂಶಿತವ್ರತಃ।
01013043c ಜರತ್ಕಾರುರ್ಗತಃ ಸ್ವರ್ಗಂ ಸಹಿತಃ ಸ್ವೈಃ ಪಿತಾಮಹೈಃ।।

ಈ ರೀತಿ ಪಿತೃಗಳ ದೊಡ್ಡ ಋಣವನ್ನು ತೀರಿಸಿ ಜರತ್ಕಾರುವು ತನ್ನ ಪಿತಾಮಹರ ಸಹಿತ ಸ್ವರ್ಗವನ್ನು ಸೇರಿದನು.

01013044a ಆಸ್ತೀಕಂ ಚ ಸುತಂ ಪ್ರಾಪ್ಯ ಧರ್ಮಂ ಚಾನುತ್ತಮಂ ಮುನಿಃ।
01013044c ಜರತ್ಕಾರುಃ ಸುಮಹತಾ ಕಾಲೇನ ಸ್ವರ್ಗಮೀಯಿವಾನ್।।

ಆಸ್ತೀಕನನ್ನು ಮಗನನ್ನಾಗಿ ಪಡೆದ ಧಾರ್ಮಿಕ ಮುನಿಗಳಲ್ಲಿ ಉತ್ತಮ ಜರತ್ಕಾರುವು ಬಹಳ ಸಮಯದ ನಂತರ ಸ್ವರ್ಗವನ್ನು ಸೇರಿದನು.

01013045a ಏತದಾಖ್ಯಾನಮಾಸ್ತೀಕಂ ಯಥಾವತ್ಕೀರ್ತಿತಂ ಮಯಾ।
01013045c ಪ್ರಬ್ರೂಹಿ ಭೃಗುಶಾರ್ದೂಲ ಕಿಂ ಭೂಯಃ ಕಥ್ಯತಾಮಿತಿ।।

ನಾನು ಈಗ ಹೇಳಿದುದು ಆಸ್ತೀಕನ ಆಖ್ಯಾನ. ಭೃಗುಶಾರ್ದೂಲ! ಇನ್ನು ಯಾವ ಕಥೆಯನ್ನು ಹೇಳಲಿ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಜರತ್ಕಾರುತತ್ಪಿತೃಸಂವಾದೋ ನಾಮ ತ್ರಯೋದಶೋಽಧ್ಯಾಯಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಜರತ್ಕಾರುತತ್ಪಿತೃಸಂವಾದವೆಂಬ ಹದಿಮೂರನೆಯ ಅಧ್ಯಾಯವು.


  1. ಗೋರಖಪುರ ಸಂಪುಟದಲ್ಲಿ ಇದಕ್ಕೆ ಮೊದಲಿರುವ ಈ ಶ್ಲೋಕವು ಆಸ್ತೀಕನ ಕಥೆಯನ್ನು ಮೊದಲು ವ್ಯಾಸನು ನೈಮಿಷಾರಣ್ಯದಲ್ಲಿ ಹೇಳಿದನು ಎಂದು ಸೂಚಿಸುತ್ತದೆ: ಇತಿಹಾಸಮಿಮಂ ವಿಪ್ರಾಃ ಪುರಾಣಂ ಪರಿಚಕ್ಷತೇ। ಕೃಷ್ಣದ್ವೈಪಾನಯಪ್ರೋಕ್ತಂ ನೈಮಿಷಾರಣ್ಯವಾಸಿಷು।। ↩︎

  2. ಯಾಯಾವರಾ ನಾಮ ಬ್ರಾಹ್ಮಣಾ ಅಸಂಸ್ತೇ ಅರ್ಧಮಾಸಾದಗ್ನಿಹೋತ್ರಮಜುಹ್ವನ್ (ಭರದ್ವಾಜಃ) ಅರ್ಥಾತ್: ಒಂದೊಂದು ಹಳ್ಳಿಯಲ್ಲಿ ಒಂದೊಂದು ರಾತ್ರಿ ಕಳೆಯುತ್ತಾ ಪ್ರತಿಪಕ್ಷದಲ್ಲಿಯೂ ಅಗ್ನಿಹೋತ್ರಮಾಡಿಕೊಂಡು ಸಂಚರಿಸುವ ಬ್ರಾಹ್ಮಣರಿಗೆ ಯಾಯಾವರರೆಂದು ಹೆಸರು. ↩︎

  3. ಇದಕ್ಕೆ ಮೊದಲು ಗೋರಖಪುರ ಸಂಪುಟದಲ್ಲಿ ಯಾಯಾವರ ಕುಲದ ಲಕ್ಷಣವನ್ನು ವರ್ಣಿಸುವ ಈ ಶ್ಲೋಕಗಳಿವೆ: ಸ ಕದಾಚಿನ್ಮಹಾಭಾಗಸ್ತಪೋಬಲಸಮನ್ವಿತಃ। ಚಚಾರ ಪೃಥಿವೀಂ ಸರ್ವಾಂ ಯತ್ರಸಾಯಂಗೃಹೋ ಮುನಿಃ।। ತೀರ್ಥೇಷು ಚ ಸಮಾಪ್ಲಾನಂ ಕುರ್ವನ್ನಟತಿ ಸರ್ವಶಃ। ಚರನ್ದೀಕ್ಷಾಂ ಮಹಾತೇಜಾ ದುಶ್ಚರಾಮಕೃತಾತ್ಮಭಿಃ।। ವಾಯುಭಕ್ಷೋ ನಿರಾಹಾರಃ ಶುಷ್ಯನ್ನನಿಮಿಷೋ ಮುನಿಃ। ಇತಸ್ತತಃ ಪರಿಚರನ್ದೀಪ್ತಪಾವಕಸಪ್ರಭಃ। ಅರ್ಥಾತ್: ಆ ತಪೋಬಲಸಮನ್ವಿತನು ಒಮ್ಮೆ ಪ್ರಪಂಚಪರ್ಯಟನ ಮಾಡಲು ಹೊರಟನು. ಪುಣ್ಯಪ್ರದ ತೀರ್ಥಗಳಿಗೆ ಹೋಗಿ ಯಥಾವಿಧಿ ಸ್ನಾನ-ಪಿತೃಪೂಜೆಗಳನ್ನು ಮಾಡಿ ಮುಂದುವರೆಯುವುದು, ಸಾಯಂಕಾಲವಾಗುತ್ತಲೇ ಒಂದೆಡೆ ತಂಗುವುದು, ಇದು ಅವನ ದಿನಚರಿಯಾಗಿತ್ತು. ಆಹಾರದ ಬಯಕೆಯಿರದ ಅವನು ನಿರಾಹಾರನಾಗಿ ಗಾಳಿಯನ್ನೇ ಸೇವಿಸುತ್ತಿರುತ್ತಿದ್ದನು. ಧಗಧಗಿಸುವ ಬೆಂಕಿಯ ತೇಜಸ್ಸಿದ್ದ ಅವನು ಅಲ್ಲಲ್ಲಿ ಸಂಚರಿಸುತ್ತಿದ್ದನು. ↩︎

  4. ಶಿವನ ಕಂಠದಲ್ಲಿರುವ ನಾಗರಾಜನೇ ವಾಸುಕಿ. ಇವನೂ ಕೂಡ ಅನಂತ ಶೇಷನಾಗನಂತೆ ಕದ್ರು ಮತ್ತು ಕಶ್ಯಪರ ಮಗ ನಾಗ. ಅವನ ಹೆಡೆಯ ಮೇಲೆ ನಾಗಮಣಿಯಿದೆ. ↩︎

  5. ದೇವೀ ಪುರಾಣದ ಪ್ರಕಾರ ವಾಸುಕಿಯ ತಂಗಿ, ಆಸ್ತೀಕನ ತಾಯಿಯ ಹೆಸರು ಮಾನಸಾ. ↩︎

  6. ಮನುಷ್ಯನಿಗೆ ಮೂರು ಋಣಗಳಿವೆಯೆಂದು ಹೇಳುತ್ತಾರೆ: ದೇವ ಋಣ, ಋಷಿ ಋಣ ಮತ್ತು ಪಿತೃ ಋಣ. ದೇವಋಣವನ್ನು ಪೂಜೆ-ವ್ರತ-ಯಾಗಗಳಿಂದಲೂ, ಋಷಿ ಋಣವನ್ನು ಬ್ರಹ್ಮಚರ್ಯ-ಸ್ವಾಧ್ಯಾಯ-ತಪಸ್ಸುಗಳ ಮೂಲಕವೂ, ಪಿತೃ ಋಣವನ್ನು ಸಂತತಿಯಿಂದಲೂ ಪೂರೈಸಬಹುದೆಂದು ಹೇಳುತ್ತಾರೆ. ↩︎