ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಪೌಲೋಮ ಪರ್ವ
ಅಧ್ಯಾಯ 11
ಸಾರ
ಡುಂಡುಭನ ಕಥೆ (1-10). ಡುಂಡುಭನು ರುರುವಿಗೆ ಸರ್ಪಗಳನ್ನು ಕೊಲ್ಲಬಾರದೆಂದು ಸಲಹೆ ನೀಡುವುದು (11-15).
01011001 ಡುಂಡುಭ ಉವಾಚ।
01011001a ಸಖಾ ಬಭೂವ ಮೇ ಪೂರ್ವಂ ಖಗಮೋ ನಾಮ ವೈ ದ್ವಿಜಃ।
01011001c ಭೃಶಂ ಸಂಶಿತವಾಕ್ತಾತ ತಪೋಬಲಸಮನ್ವಿತಃ।।
ಡುಂಡುಭವು ಹೇಳಿತು: “ಹಿಂದೆ ಖಗಮ ಎಂಬ ಹೆಸರಿನ, ಸದಾ ಸತ್ಯವನ್ನೇ ನುಡಿಯುವ ತಪೋಬಲಸಮನ್ವಿತ ದ್ವಿಜನೋರ್ವನು ನನ್ನ ಸಖನಾಗಿದ್ದನು.
01011002a ಸ ಮಯಾ ಕ್ರೀಡತಾ ಬಾಲ್ಯೇ ಕೃತ್ವಾ ತಾರ್ಣಮಥೋರಗಂ।
01011002c ಅಗ್ನಿಹೋತ್ರೇ ಪ್ರಸಕ್ತಃ ಸನ್ಭೀಷಿತಃ ಪ್ರಮುಮೋಹ ವೈ।।
ಬಾಲ್ಯದಲ್ಲಿ ಆಡುತ್ತಿರುವಾಗ ನಾನು ಒಂದು ಹುಲ್ಲುಕಡ್ಡಿಯನ್ನು ಹಾವನ್ನಾಗಿ ಮಾಡಿ ಅಗ್ನಿಹೋತ್ರದಲ್ಲಿ ಪ್ರಸಕ್ತನಾಗಿದ್ದ ಅವನನ್ನು ಹೆದರಿಸಿದಾಗ ಅದನ್ನು ನೋಡಿದ ಅವನು ಮೂರ್ಛಿತನಾದನು.
01011003a ಲಬ್ಧ್ವಾ ಚ ಸ ಪುನಃ ಸಂಜ್ಞಾಂ ಮಾಮುವಾಚ ತಪೋಧನಃ।
01011003c ನಿರ್ದಹನ್ನಿವ ಕೋಪೇನ ಸತ್ಯವಾಕ್ಸಂಶಿತವ್ರತಃ।।
ಪುನಃ ಪ್ರಜ್ಞೆಬಂದ ನಂತರ ಆ ಸತ್ಯವಾದಿ ಸಂಶಿತವ್ರತ ತಪೋಧನನು ಕೋಪದಿಂದ ನಿಹೃದಯಿಯಾಗಿ ಹೇಳಿದನು:
01011004a ಯಥಾವೀರ್ಯಸ್ತ್ವಯಾ ಸರ್ಪಃ ಕೃತೋಽಯಂ ಮದ್ಬಿಭೀಷಯಾ।
01011004c ತಥಾವೀರ್ಯೋ ಭುಜಂಗಸ್ತ್ವಂ ಮಮ ಕೋಪಾದ್ಭವಿಷ್ಯಸಿ।।
“ಜೀವವಿಲ್ಲದ ಸರ್ಪದಿಂದ ನನ್ನನು ಹೇಗೆ ಹೆದರಿಸಿದೆಯೋ ಹಾಗೆ ನೀನು ನನ್ನ ಕೋಪದಿಂದಾಗಿ ಹಾನಿಕಾರಕವಲ್ಲದ ಸರ್ಪವಾಗುತ್ತೀಯೆ.”
01011005a ತಸ್ಯಾಹಂ ತಪಸೋ ವೀರ್ಯಂ ಜಾನಮಾನಸ್ತಪೋಧನ।
01011005c ಭೃಶಂ ಉದ್ವಿಗ್ನಹೃದಯಸ್ತಮವೋಚಂ ವನೌಕಸಂ।।
01011006a ಪ್ರಯತಃ ಸಂಭ್ರಮಾಚ್ಚೈವ ಪ್ರಾಂಜಲಿಃ ಪ್ರಣತಃ ಸ್ಥಿತಃ।
ಆ ತಪೋಧನನ ತಪಃಶಕ್ತಿಯನ್ನು ಅರಿತ ನಾನು ಉದ್ವಿಗ್ನ ಹೃದಯನಾಗಿ ದುಃಖದಿಂದ ತಲೆಬಾಗಿ ಪ್ರಾಂಜಲೀ ಬದ್ಧನಾಗಿ ನಮಸ್ಕರಿಸಿ ಹೇಳಿದೆನು:
01011006c ಸಖೇತಿ ಹಸತೇದಂ ತೇ ನರ್ಮಾರ್ಥಂ ವೈ ಕೃತಂ ಮಯಾ।।
01011007a ಕ್ಷಂತುಮರ್ಹಸಿ ಮೇ ಬ್ರಹ್ಮಂ ಶಾಪೋಽಯಂ ವಿನಿವರ್ತ್ಯತಾಂ।
“ಸಖನನ್ನು ಮೋಡಿಮಾಡಲೆಂದು ನಾನು ಹೀಗೆಲ್ಲ ಮಾಡಿದೆ. ಬ್ರಾಹ್ಮಣ! ಆದ್ದರಿಂದ ನನ್ನನ್ನು ಕ್ಷಮಿಸಿ ಈ ಶಾಪವನ್ನು ಹಿಂತೆಗೆದುಕೊಳ್ಳಬೇಕು.”
01011007c ಸೋಽಥ ಮಾಮಬ್ರವೀದ್ದೃಷ್ಠ್ವಾ ಭೃಶಮುದ್ವಿಗ್ನಚೇತಸಂ।।
01011008a ಮುಹುರುಷ್ಣಂ ವಿನಿಃಶ್ವಸ್ಯ ಸುಸಂಭ್ರಾಂತಸ್ತಪೋಧನಃ।
ದುಃಖಿತ ಮತ್ತು ಉದ್ವಿಗ್ನಚೇತಸ ನನ್ನನ್ನು ನೋಡಿದ ಆ ತಪೋಧನನು ಅನುಕಂಪಗೊಂಡು ಬಿಸಿಯುಸಿರು ಬಿಡುತ್ತಾ ಹೇಳಿದನು:
01011008c ನಾನೃತಂ ವೈ ಮಯಾ ಪ್ರೋಕ್ತಂ ಭವಿತೇದಂ ಕಥಂ ಚನ।।
01011009a ಯತ್ತು ವಕ್ಷ್ಯಾಮಿ ತೇ ವಾಕ್ಯಂ ಶೃಣು ತನ್ಮೇ ಧೃತವ್ರತ।
01011009c ಶ್ರುತ್ವಾ ಚ ಹೃದಿ ತೇ ವಾಕ್ಯಮಿದಮಸ್ತು ತಪೋಧನ।।
01011010a ಉತ್ಪತ್ಸ್ಯತಿ ರುರುರ್ನಾಮ ಪ್ರಮತೇರಾತ್ಮಜಃ ಶುಚಿಃ।
01011010c ತಂ ದೃಷ್ಟ್ವಾ ಶಾಪಮೋಕ್ಷಸ್ತೇ ಭವಿತಾ ನಚಿರಾದಿವ।।
“ನಾನು ಹೇಳಿದ್ದುದು ಸುಳ್ಳಾಗುವುದಿಲ್ಲ. ಹೇಗಾದರೂ ಅದು ಆಗಿಯೇ ಆಗುತ್ತದೆ. ಧೃತವ್ರತ! ತಪೋಧನ! ಈಗ ನಾನಾಡುವ ಮಾತನ್ನು ಸರಿಯಾಗಿ ಕೇಳಿ ಇದನ್ನು ನಿನ್ನ ಹೃದಯದಲ್ಲಿ ಇರಿಸಿಕೋ. ರುರು ಎಂಬ ಹೆಸರಿನ ಶುಚಿ ಪ್ರಮತಿಯ ಮಗನನ್ನು ನೀನು ನೋಡಿದಾಗ ಶಾಪವಿಮುಕ್ತನಾಗುತ್ತೀಯೆ.”
01011011a ಸ ತ್ವಂ ರುರುರಿತಿ ಖ್ಯಾತಃ ಪ್ರಮತೇರಾತ್ಮಜಃ ಶುಚಿಃ।
01011011c ಸ್ವರೂಪಂ ಪ್ರತಿಲಭ್ಯಾಹಮದ್ಯ ವಕ್ಷ್ಯಾಮಿ ತೇ ಹಿತಂ।।
ಆ ಖ್ಯಾತ ಶುಚಿ ಪ್ರಮತಿಯ ಮಗನಾದ ರುರುವೇ ನೀನು. ಈಗ ನಾನು ನನ್ನ ಮೊದಲಿನ ರೂಪವನ್ನು ಪಡೆದಿದ್ದೇನೆಯಾದ್ದರಿಂದ ನಿನ್ನ ಹಿತಕ್ಕಾಗಿ ನಾನು ಹೇಳುತ್ತಿದ್ದೇನೆ.
01011012a ಅಹಿಂಸಾ ಪರಮೋ ಧರ್ಮಃ ಸರ್ವಪ್ರಾಣಭೃತಾಂ ಸ್ಮೃತಃ।
01011012c ತಸ್ಮಾತ್ಪ್ರಾಣಭೃತಃ ಸರ್ವಾನ್ನ ಹಿಂಸ್ಯಾದ್ಬ್ರಾಹ್ಮಣಃ ಕ್ವಚಿತ್।।
ಅಹಿಂಸೆಯೇ ಪರಮ ಧರ್ಮ. ಯಾವುದೇ ಜೀವಿಯ ಪ್ರಾಣಾಪಹರಣ ಮಾಡಬಾರದು. ಆದ್ದರಿಂದ ಬ್ರಾಹ್ಮಣನಾದವನು ಎಂದೂ ಇತರರ ಪ್ರಾಣವನ್ನು ಕೊನೆಗೊಳಿಸಬಾರದು ಮತ್ತು ಹಿಂಸಿಸಬಾರದು ಎನ್ನುತ್ತಾರೆ.
01011013a ಬ್ರಾಹ್ಮಣಃ ಸೌಮ್ಯ ಏವೇಹ ಜಾಯತೇತಿ ಪರಾ ಶ್ರುತಿಃ।
01011013c ವೇದವೇದಾಂಗವಿತ್ತಾತ ಸರ್ವಭೂತಾಭಯಪ್ರದಃ।।
ಒಂದು ಶ್ರುತಿಯ ಪ್ರಕಾರ ಬ್ರಾಹ್ಮಣನು ಸದಾ ಸೌಮ್ಯನಾಗಿರಬೇಕು. ವೇದವೇದಾಂಗಗಳನ್ನು ತಿಳಿದ ಅವನು ಸರ್ವಭೂತಗಳಿಗೆ ಅಭಯವನ್ನು ನೀಡುವಂಥವನಾಗಿರಬೇಕು.
01011014a ಅಹಿಂಸಾ ಸತ್ಯವಚನಂ ಕ್ಷಮಾ ಚೇತಿ ವಿನಿಶ್ಚಿತಂ।
01011014c ಬ್ರಾಹ್ಮಣಸ್ಯ ಪರೋ ಧರ್ಮೋ ವೇದಾನಾಂ ಧರಣಾದಪಿ।।
ಅಹಿಂಸೆ, ಸತ್ಯ ವಚನ, ಕ್ಷಮೆ ಮತ್ತು ವೇದಗಳನ್ನು ಅನುಸರಿಸುವುದು ಇವೆಲ್ಲವೂ ನಿಶ್ಚಯವಾಗಿ ಬ್ರಾಹ್ಮಣನ ಪರಮ ಧರ್ಮ.
01011015a ಕ್ಷತ್ರಿಯಸ್ಯ ತು ಯೋ ಧರ್ಮಃ ಸ ನೇಹೇಷ್ಯತಿ ವೈ ತವ।
01011015c ದಂಡಧಾರಣಮುಗ್ರತ್ವಂ ಪ್ರಜಾನಾಂ ಪರಿಪಾಲನಂ।।
01011016a ತದಿದಂ ಕ್ಷತ್ರಿಯಸ್ಯಾಸೀತ್ಕರ್ಮ ವೈ ಶೃಣು ಮೇ ರುರೋ।
ನೀನು ಈಗ ಅನುಸರಿಸುತ್ತಿರುವ ಧರ್ಮವು ನಿನ್ನದಲ್ಲ. ಅದು ಕ್ಷತ್ರಿಯನ ಧರ್ಮ. ದಂಡಧಾರಣ ಮಾಡುವುದು, ಕ್ರೂರಿಯಾಗಿರುವುದು ಮತ್ತು ಪ್ರಜೆಗಳನ್ನು ಪರಿಪಾಲಿಸುವುದು ಇವೆಲ್ಲವೂ ಕ್ಷತ್ರಿಯನ ಕರ್ಮಗಳು.
01011016c ಜನಮೇಜಯಸ್ಯ ಧರ್ಮಾತ್ಮನ್ಸರ್ಪಾಣಾಂ ಹಿಂಸನಂ ಪುರಾ।।
01011017a ಪರಿತ್ರಾಣಂ ಚ ಭೀತಾನಾಂ ಸರ್ಪಾಣಾಂ ಬ್ರಾಹ್ಮಣಾದಪಿ।
01011017c ತಪೋವೀರ್ಯಬಲೋಪೇತಾದ್ವೇದವೇದಾಂಗಪಾರಗಾತ್।
01011017e ಆಸ್ತೀಕಾದ್ದ್ವಿಜಮುಖ್ಯಾದ್ವೈ ವೈ ಸರ್ಪಸತ್ರೇ ದ್ವಿಜೋತ್ತಮ।।
ಹಿಂದೆ ಧರ್ಮಾತ್ಮ ಜನಮೇಜಯನು ಸರ್ಪಗಳನ್ನು ಹಿಂಸಿಸಿದುದರ ಕುರಿತು ನನ್ನನ್ನು ಕೇಳು. ರುರು! ದ್ವಿಜೋತ್ತಮ! ಸರ್ಪಸತ್ರದಲ್ಲಿ ಭೀತಿಗೊಂಡ ಸರ್ಪಗಳನ್ನು ತಪೋವೀರ್ಯಬಲೋಪೇತ, ವೇದವೇದಾಂಗ ಪಾರಂಗತ, ದ್ವಿಜಮುಖ್ಯ ಆಸ್ತೀಕನೆಂಬ ಬ್ರಾಹ್ಮಣನು ರಕ್ಷಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಡುಂಡುಭಶಾಪಮೋಕ್ಷೋ ನಾಮ ಏಕಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಡುಂಡುಭಶಾಪಮೋಕ್ಷ ಎನ್ನುವ ಹನ್ನೊಂದನೆಯ ಅಧ್ಯಾಯವು.