009 ಪ್ರಮದ್ವರಾಜೀವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ ಶ್ರೀ ಮಹಾಭಾರತ ಆದಿ ಪರ್ವ ಪೌಲೋಮ ಪರ್ವ

9

ಸಾರ

ರುರುವಿನ ಅರ್ಧ ಆಯುಷ್ಯದಿಂದ ಪ್ರಮದ್ವತಿಗೆ ಪುನರ್ಜೀವನ, ರುರುವು ಕಂಡಲ್ಲಿ ಹಾವುಗಳನ್ನು ಕೊಲ್ಲುವ ಪ್ರತಿಜ್ಞೆ ಕೈಗೊಳ್ಳುವುದು (1-15). ಒಮ್ಮೆ ಹಾವೆಂದು ಹೊಡೆದಾಗ ಡುಂಡುಭವು ವಿರೋಧಿಸುವುದು (16-20).

01009001 ಸೂತ ಉವಾಚ।
01009001a ತೇಷು ತತ್ರೋಪವಿಷ್ಟೇಷು ಬ್ರಾಹ್ಮಣೇಷು ಸಮಂತತಃ।
01009001c ರುರುಶ್ಚುಕ್ರೋಶ ಗಹನಂ ವನಂ ಗತ್ವಾ ಸುದುಃಖಿತಃ।।

ಸೂತನು ಹೇಳಿದನು: “ಅಲ್ಲಿ ಎಲ್ಲ ಬ್ರಾಹ್ಮಣರೂ ಸೇರಿರುವಾಗ ದುಃಖಿತ ರುರುವು ದಟ್ಟ ವನವನ್ನು ಸೇರಿ ಜೋರಾಗಿ ರೋದಿಸಿದನು.

01009002a ಶೋಕೇನಾಭಿಹತಃ ಸೋಽಥ ವಿಲಪನ್ಕರುಣಂ ಬಹು।
01009002c ಅಬ್ರವೀದ್ವಚನಂ ಶೋಚನ್ಪ್ರಿಯಾಂ ಚಿಂತ್ಯ ಪ್ರಮದ್ವರಾಂ।।

ಶೋಕಪೀಡಿತನಾದ ಅವನು ಅತ್ಯಂತ ಕರುಣೆಯಿಂದ ಬಹಳಷ್ಟು ವಿಲಪಿಸಿದನು. ಪ್ರಿಯೆ ಪ್ರಮದ್ವರೆಯ ಕುರಿತು ಚಿಂತಿಸುತ್ತಾ ಶೋಕಭರಿತನಾಗಿ ಹೇಳಿದನು:

01009003a ಶೇತೇ ಸಾ ಭುವಿ ತನ್ವಂಗೀ ಮಮ ಶೋಕವಿವರ್ಧಿನೀ।
01009003c ಬಾಂಧವಾನಾಂ ಚ ಸರ್ವೇಷಾಂ ಕಿಂ ನು ದುಃಖಮತಃ ಪರಂ।।

“ಭೂಮಿಯ ಮೇಲೆ ಮಲಗಿರುವ ಆ ತನ್ವಂಗಿಯು ನನ್ನ ಶೋಕವನ್ನು ಹೆಚ್ಚಿಸುತ್ತಿದ್ದಾಳೆ. ಸರ್ವ ಬಾಂಧವರಿಗೆ ಇದಕ್ಕಿಂತ ಹೆಚ್ಚಿನ ದುಃಖವು ಯಾವುದಿರಬಹುದು?

01009004a ಯದಿ ದತ್ತಂ ತಪಸ್ತಪ್ತಂ ಗುರವೋ ವಾ ಮಯಾ ಯದಿ।
01009004c ಸಮ್ಯಗಾರಾಧಿತಾಸ್ತೇನ ಸಂಜೀವತು ಮಮ ಪ್ರಿಯಾ।।

ನಾನು ಎಂದಾದರೂ ದಾನವನ್ನಿತ್ತಿದ್ದರೆ, ತಪಸ್ಸನ್ನು ತಪಿಸಿದ್ದರೆ, ಗುರುಗಳನ್ನು ಆರಾಧಿಸಿದ್ದರೆ, ಇವೆಲ್ಲವುಗಳ ಪುಣ್ಯವು ನನ್ನ ಪ್ರಿಯೆಯನ್ನು ಪುನಃ ಬದುಕಿಸಲಿ.

01009005a ಯಥಾ ಜನ್ಮಪ್ರಭೃತಿ ವೈ ಯತಾತ್ಮಾಹಂ ಧೃತವ್ರತಃ।
01009005c ಪ್ರಮದ್ವರಾ ತಥಾದ್ಯೈವ ಸಮುತ್ತಿಷ್ಟತು ಭಾಮಿನೀ।।

ಜನ್ಮ ಪ್ರಭೃತಿ ನಾನು ನನ್ನನ್ನು ಧೃಢವ್ರತನನ್ನಾಗಿರಿಸಿ ಕೊಂಡಿದ್ದರೆ ಭಾಮಿನಿ ಪ್ರಮದ್ವರೆಯು ಈಗಲೇ ಎದ್ದು ನಿಲ್ಲಲಿ.”

01009006 ದೇವದೂತ ಉವಾಚ।
01009006a 1ಅಭಿಧತ್ಸೇ ಹ ಯದ್ವಾಚಾ ರುರೋ ದುಃಖೇನ ತನ್ಮೃಷಾ।
01009006c ನ ತು ಮರ್ತ್ಯಸ್ಯ ಧರ್ಮಾತ್ಮನ್ನಾಯುರಸ್ತಿ ಗತಾಯುಷಃ।।

ದೇವದೂತನು ಹೇಳಿದನು: “ರುರು! ದುಃಖದಿಂದ ಹೇಳುತ್ತಿರುವ ನಿನ್ನ ಈ ಮಾತುಗಳು ಎಂದೂ ಸತ್ಯವಾಗಲಾರವು. ಧರ್ಮಾತ್ಮ! ಆಯುಷ್ಯ ಕಳೆದ ಮರ್ತ್ಯರ್ಯಾರೂ ಪುನಃ ಜೀವಿತರಾಗುವುದಿಲ್ಲ.

01009007a ಗತಾಯುರೇಷಾ ಕೃಪಣಾ ಗಂಧರ್ವಾಪ್ಸರಸೋಃ ಸುತಾ।
01009007c ತಸ್ಮಾತ್ ಶೋಕೇ ಮನಸ್ತಾತ ಮಾ ಕೃಥಾಸ್ತ್ವಂ ಕಥಂ ಚನ।।

ಗಂಧರ್ವ-ಅಪ್ಸರೆಯರ ಈ ಮಗಳ ಆಯುಷ್ಯರೇಖೆಯು ಮುಗಿದುಹೋಗಿದೆ. ಆದುದರಿಂದ ಮಗು! ನಿನ್ನ ಮನಸ್ಸನ್ನು ಶೋಕಸಾಗರದಲ್ಲಿ ಮುಳುಗಿಸಬೇಡ.

01009008a ಉಪಾಯಶ್ಚಾತ್ರ ವಿಹಿತಃ ಪೂರ್ವಂ ದೇವೈರ್ಮಹಾತ್ಮಭಿಃ।
01009008c ತಂ ಯದೀಚ್ಛಸಿ ಕರ್ತುಂ ತ್ವಂ ಪ್ರಾಪ್ಸ್ಯಸೀಮಾಂ ಪ್ರಮದ್ವರಾಂ।।

ಆದರೆ ಹಿಂದೆ ಮಹಾತ್ಮ ದೇವತೆಗಳು ವಿಹಿಸಿದ್ದ ಉಪಾಯವೊಂದಿದೆ. ಅದನ್ನು ಮಾಡಲು ನಿನಗೆ ಇಷ್ಟವಿದ್ದರೆ ನೀನು ಪ್ರಮದ್ವರೆಯನ್ನು ಮರಳಿ ಪಡೆಯಬಹುದು.”

01009009 ರುರುರುವಾಚ।
01009009a ಕ ಉಪಾಯಃ ಕೃತೋ ದೇವೈರ್ಬ್ರೂಹಿ ತತ್ತ್ವೇನ ಖೇಚರ।
01009009c ಕರಿಷ್ಯೇ ತಂ ತಥಾ ಶ್ರುತ್ವಾ ತ್ರಾತುಮರ್ಹತಿ ಮಾಂ ಭವಾನ್।।

ರುರುವು ಹೇಳಿದನು: “ಖೇಚರ! ದೇವರು ಮಾಡಿಟ್ಟಿರುವ ಉಪಾಯವು ಯಾವುದು ಹೇಳು. ನಿನ್ನಿಂದ ಕೇಳಿ ಅದನ್ನೇ ಮಾಡುತ್ತೇನೆ.”

01009010 ದೇವದೂತ ಉವಾಚ।
01009010a ಆಯುಷೋಽರ್ಧಂ ಪ್ರಯಚ್ಛಸ್ವ ಕನ್ಯಾಯೈ ಭೃಗುನಂದನ।
01009010c ಏವಮುತ್ಥಾಸ್ಯತಿ ರುರೋ ತವ ಭಾರ್ಯಾ ಪ್ರಮದ್ವರಾ।।

ದೇವದೂತನು ಹೇಳಿದನು: “ಭೃಗುನಂದನ ರುರು! ನಿನ್ನ ಆಯುಷ್ಯದ ಅರ್ಧವನ್ನು ಈ ಕನ್ಯೆಗೆ ನೀಡಿದರೆ ನಿನ್ನ ಭಾರ್ಯೆ ಪ್ರಮದ್ವರೆಯು ಎದ್ದು ನಿಲ್ಲುವಳು.”

01009011 ರುರುರುವಾಚ।
01009011a ಆಯುಷೋಽರ್ಧಂ ಪ್ರಯಚ್ಛಾಮಿ ಕನ್ಯಾಯೈ ಖೇಚರೋತ್ತಮ।
01009011c ಶೃಂಗಾರರೂಪಾಭರಣಾ ಉತ್ತಿಷ್ಟತು ಮಮ ಪ್ರಿಯಾ।।

ರುರುವು ಹೇಳಿದನು: “ಖೇಚರೋತ್ತಮ! ನನ್ನ ಆಯಸ್ಸಿನಲ್ಲಿ ಅರ್ಧವನ್ನು ಈ ಕನ್ಯೆಗೆ ಕೊಡುತ್ತೇನೆ. ಶೃಂಗಾರರೂಪಾಭರಣೆ ನನ್ನ ಪ್ರಿಯೆಯು ಏಳಲಿ.””

01009012 ಸೂತ ಉವಾಚ।
01009012a ತತೋ ಗಂಧರ್ವರಾಜಶ್ಚ ದೇವದೂತಶ್ಚ ಸತ್ತಮೌ।
01009012c ಧರ್ಮರಾಜಮುಪೇತ್ಯೇದಂ ವಚನಂ ಪ್ರತ್ಯಭಾಷತಾಂ।।

ಸೂತನು ಹೇಳಿದನು: “ನಂತರ ಗಂಧರ್ವ ರಾಜ ಮತ್ತು ದೇವದೂತ ಸತ್ತಮರೀರ್ವರೂ ಧರ್ಮರಾಜನ ಬಳಿ ಹೋಗಿ ಹೇಳಿದರು:

01009013a ಧರ್ಮರಾಜಾಯುಷೋಽರ್ಧೇನ ರುರೋರ್ಭಾರ್ಯಾ ಪ್ರಮದ್ವರಾ।
01009013c ಸಮುತ್ತಿಷ್ಟತು ಕಲ್ಯಾಣೀ ಮೃತೈವ ಯದಿ ಮನ್ಯಸೇ।।

“ಧರ್ಮರಾಜ! ನೀನು ಬಯಸಿದರೆ ಮೃತಳಾದ ರುರುವಿನ ಭಾರ್ಯೆ ಕಲ್ಯಾಣಿ ಪ್ರಮದ್ವರೆಯು ಅವನ ಅರ್ಧ ಆಯುಸ್ಸನ್ನು ಪಡೆದು ಎದ್ದು ನಿಲ್ಲಲಿ.”

01009014 ಧರ್ಮರಾಜ ಉವಾಚ 01009014a ಪ್ರಮದ್ವರಾ ರುರೋರ್ಭಾರ್ಯಾ ದೇವದೂತ ಯದೀಚ್ಛಸಿ।
01009014c ಉತ್ತಿಷ್ಟತ್ವಾಯುಷೋಽರ್ಧೇನ ರುರೋರೇವ ಸಮನ್ವಿತಾ।।

ಧರ್ಮರಾಜನು ಹೇಳಿದನು: “ದೇವದೂತ! ನಿನ್ನ ಇಚ್ಛೆಯಂತೆ ರುರುವಿನ ಅರ್ಧ ಆಯುಸ್ಸನ್ನು ಪಡೆದು ರುರು ಭಾರ್ಯೆ ಪ್ರಮದ್ವರೆಯು ಎದ್ದು ನಿಲ್ಲಲಿ.””

01009015 ಸೂತ ಉವಾಚ।
01009015a ಏವಮುಕ್ತೇ ತತಃ ಕನ್ಯಾ ಸೋದತಿಷ್ಠತ್ಪ್ರಮದ್ವರಾ।
01009015c ರುರೋಸ್ತಸ್ಯಾಯುಷೋಽರ್ಧೇನ ಸುಪ್ತೇವ ವರವರ್ಣಿನೀ।।

ಸೂತನು ಹೇಳಿದನು: “ಹೀಗೆ ಹೇಳಿದ ನಂತರ ವರವರ್ಣಿನಿ ಕನ್ಯೆ ಪ್ರಮದ್ವರೆಯು ರುರುವಿನ ಅರ್ಧ ಆಯುಸ್ಸನ್ನು ಪಡೆದು ನಿದ್ದೆಯಿಂದ ಎದ್ದವಳಂತೆ ಎಚ್ಚೆತ್ತಳು.

01009016a ಏತದ್ದೃಷ್ಟಂ ಭವಿಷ್ಯೇ ಹಿ ರುರೋರುತ್ತಮತೇಜಸಃ।
01009016c ಆಯುಷೋಽತಿಪ್ರವೃದ್ಧಸ್ಯ ಭಾರ್ಯಾರ್ಥೇಽರ್ಧಂ ಹ್ರಸತ್ವಿತಿ।।

ಉತ್ತಮತೇಜಸ್ವೀ ರುರುವು ಅರ್ಧವನ್ನು ಭಾರ್ಯೆಗೆ ಕೊಟ್ಟು ತನ್ನ ದೀರ್ಘ ಆಯುಸ್ಸನ್ನು ಕಡಿಮೆಮಾಡಿಕೊಂಡಿದ್ದುದು ಮುಂದೆ ಕಾಣಿಸಿಕೊಂಡಿತು.

01009017a ತತ ಇಷ್ಟೇಽಹನಿ ತಯೋಃ ಪಿತರೌ ಚಕ್ರತುರ್ಮುದಾ।
01009017c ವಿವಾಹಂ ತೌ ಚ ರೇಮಾತೇ ಪರಸ್ಪರಹಿತೈಷಿಣೌ।।

ನಂತರ ಒಳ್ಳೆಯ ದಿನದಲ್ಲಿ ಅವರೀರ್ವರ ತಂದೆಯಂದಿರು ಸಂತೋಷದಿಂದ ಅವರ ವಿವಾಹವನ್ನು ನೆರವೇರಿಸಿದರು. ಅವರೀರ್ವರೂ ಪರಸ್ಪರರ ಹಿತೈಷಿಗಳಾಗಿ ರಮಿಸಿದರು.

01009018a ಸ ಲಬ್ಧ್ವಾ ದುರ್ಲಭಾಂ ಭಾರ್ಯಾಂ ಪದ್ಮಕಿಂಜಲ್ಕಸಪ್ರಭಾಂ।
01009018c ವ್ರತಂ ಚಕ್ರೇ ವಿನಾಶಾಯ ಜಿಹ್ಮಗಾನಾಂ ಧೃತವ್ರತಃ।।

ಪದ್ಮದ ಎಸಳುಗಳಂತೆ ಹೊಳೆಯುತ್ತಿದ್ದ ಭಾರ್ಯೆಯನ್ನು ಬಹಳ ಕಷ್ಟದಿಂದ ಪಡೆದ ಧೃತವ್ರತ ರುರುವು ಸರ್ಪಗಳ ವಿನಾಶದ ವ್ರತವನ್ನು ಕೈಗೊಂಡನು.

01009019a ಸ ದೃಷ್ಟ್ವಾ ಜಿಹ್ಮಗಾನ್ಸರ್ವಾಂಸ್ತೀವ್ರಕೋಪಸಮನ್ವಿತಃ।
01009019c ಅಭಿಹಂತಿ ಯಥಾಸನ್ನಂ ಗೃಹ್ಯ ಪ್ರಹರಣಂ ಸದಾ।।

ಎಲ್ಲಿ ಯಾವಾಗ ಸರ್ಪಗಳನ್ನು ನೋಡಿದರೂ ಅತೀವ ಕೋಪಸಮನ್ವಿತನಾಗಿ ಅವನು ಕೈಗೆ ದೊರಕಿದ ಆಯುಧವನ್ನು ಹಿಡಿದು ಕೊಲ್ಲ ತೊಡಗಿದನು.

01009020a ಸ ಕದಾ ಚಿದ್ವನಂ ವಿಪ್ರೋ ರುರುರಭ್ಯಾಗಮನ್ಮಹತ್।
01009020c ಶಯಾನಂ ತತ್ರ ಚಾಪಶ್ಯನ್ಡುಂಡುಭಂ ವಯಸಾನ್ವಿತಂ।।

ಒಮ್ಮೆ ವಿಪ್ರ ರುರುವು ಒಂದು ಮಹಾರಣ್ಯಕ್ಕೆ ಬಂದಾಗ ಅಲ್ಲಿ ಮಲಗಿರುವ ವೃದ್ಧ ಡುಂಡುಭವೊಂದನ್ನು ನೋಡಿದನು.

01009021a ತತ ಉದ್ಯಮ್ಯ ದಂಡಂ ಸ ಕಾಲದಂಡೋಪಮಂ ತದಾ।
01009021c ಅಭ್ಯಘ್ನದೃಷಿತೋ ವಿಪ್ರಸ್ತಮುವಾಚಾಥಡುಂಡುಭಃ।।

ರೋಷಗೊಂಡ ವಿಪ್ರನು ಅದನ್ನು ಕೊಲ್ಲಲು ಕಾಲದಂಡದಂತಿರುವ ತನ್ನ ದಂಡವನ್ನು ಮೇಲೆತ್ತಿದಾಗ, ಡುಂಡುಭವು ಹೇಳಿತು:

01009022a ನಾಪರಾಧ್ಯಾಮಿ ತೇ ಕಿಂ ಚಿದಹಮದ್ಯ ತಪೋಧನ।
01009022c ಸಂರಂಭಾತ್ತತ್ಕಿಮರ್ಥಂ ಮಾಮಭಿಹಂಸಿ ರುಷಾನ್ವಿತಃ।।

“ತಪೋಧನ! ನಾನು ನಿನಗೆ ಯಾವ ಅಪರಾಧವನ್ನೂ ಎಸಗಿಲ್ಲ. ಸಿಟ್ಟಿನಿಂದ ಏಕೆ ನನ್ನನ್ನು ಕೊಲ್ಲಲು ತೊಡಗಿರುವೆ?”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಪ್ರಮದ್ವರಾಜೀವೋ ನಾಮ ನವವೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಪ್ರಮದ್ವರಾಜೀವ ಎನ್ನುವ ಒಂಭತ್ತನೆಯ ಅಧ್ಯಾಯವು.


  1. ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಗಳಿವೆ: ಕೃಷ್ಣೇ ವಿಷ್ಣೌ ಹೃಷೀಕೇಶೇ ಲೋಕೇಶೇಽಸುರವಿದ್ಧಿಷಿ। ಯದಿ ಮೇ ನಿಶ್ಚಲಾ ಭಕ್ತಿರ್ಮಮ ಜೀವತು ಸಾ ಪ್ರಿಯಾ।। ಅರ್ಥಾತ್: ಒಂದು ವೇಳೆ ಲೋಕೇಶ ಅಸುರವಿನಾಶಿ ವಿಷ್ಣು ಹೃಷೀಕೇಶ ಕೃಷ್ಣನಲ್ಲಿ ನನ್ನ ಭಕ್ತಿಯು ನಿಶ್ಚಲವಾಗಿದೆಯೆಂದಾದರೆ ನನ್ನ ಪ್ರಿಯೆಯು ಜೀವಿಸಲಿ! ಏವಂ ಲಾಲಪ್ಯತಸ್ತಸ್ಯ ಭಾರ್ಯಾರ್ಥೇ ದುಃಖಿತಸ್ಯ ಚ। ದೇವದೂತಸ್ತದಾಭ್ಯೇತ್ಯ ವಾಕ್ಯಮಾಹ ರುರುಂ ವನೇ।। ಅರ್ಥಾತ್: ಹೀಗೆ ಅವನು ಭಾರ್ಯೆಯ ಸಲುವಾಗಿ ದುಃಖಿಸುತ್ತಿರಲು ದೇವತೆಗಳಿಂದ ಕಳುಹಿಸಲ್ಪಟ್ಟ ದೇವದೂತನು ವನದಲ್ಲಿದ್ದ ರುರುವಿನ ಬಳಿಬಂದು ಹೇಳಿದನು. ↩︎