ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ ಶ್ರೀ ಮಹಾಭಾರತ ಆದಿ ಪರ್ವ ಪೌಲೋಮ ಪರ್ವ
8
ಸಾರ
ರುರುವಿನ ಕಥೆ ಮತ್ತು ಪ್ರಮದ್ವತಿಯ ಜನನ ವೃತ್ತಾಂತ (1-10). ರುರುವು ಪ್ರಮದ್ವರೆಯನ್ನು ಪ್ರೀತಿಸಿ ವಿವಾಹಕ್ಕೆ ಸಿದ್ಧತೆಗಳನ್ನು ಮಾಡುತ್ತಿರಲು ಪ್ರಮದ್ವರೆಯ ಮರಣ (11-20).
01008001 ಸೂತ ಉವಾಚ।
01008001a ಸ ಚಾಪಿ ಚ್ಯವನೋ ಬ್ರಹ್ಮನ್ಭಾರ್ಗವೋಽಜನಯತ್ಸುತಂ।
01008001c ಸುಕನ್ಯಾಯಾಂ ಮಹಾತ್ಮಾನಂ ಪ್ರಮತಿಂ ದೀಪ್ತತೇಜಸಂ।।
ಸೂತನು ಹೇಳಿದನು: “ಬ್ರಾಹ್ಮಣ! ಭಾರ್ಗವ ಚ್ಯವನನು ಸುಕನ್ಯೆಯಿಂದ ಮಹಾತ್ಮ ದೀಪ್ತತೇಜಸ ಪ್ರಮತಿ ಎನ್ನುವ ಸುತನನ್ನು ಪಡೆದನು.
01008002a ಪ್ರಮತಿಸ್ತು ರುರುಂ ನಾಮ ಘೃತಾಚ್ಯಾಂ ಸಮಜೀಜನತ್।
01008002c ರುರುಃ ಪ್ರಮದ್ವರಾಯಾಂ ತು ಶುನಕಂ ಸಮಜೀಜನತ್।।
ಪ್ರಮತಿಯು ಘೃತಾಚಿಯಲ್ಲಿ ರುರು ಎಂಬ ಹೆಸರಿನ ಮಗನನ್ನು ಪಡೆದನು. ರುರುವು ಪ್ರಮದ್ವರೆಯಲ್ಲಿ ಶುನಕನನ್ನು ಪಡೆದನು.
01008003a 1ತಸ್ಯ ಬ್ರಹ್ಮನ್ರುರೋಃ ಸರ್ವಂ ಚರಿತಂ ಭೂರಿತೇಜಸಃ।
01008003c ವಿಸ್ತರೇಣ ಪ್ರವಕ್ಷ್ಯಾಮಿ ತತ್ಶ್ರುಣು ತ್ವಮಶೇಷತಃ।।
ಬ್ರಾಹ್ಮಣ! ಈಗ ನಾನು ಆ ಭೂರಿತೇಜಸ ರುರುವಿನ ಸರ್ವ ಚರಿತವನ್ನು ವಿಸ್ತಾರವಾಗಿ ಹೇಳುತ್ತೇನೆ. ಏನನ್ನೂ ಬಿಡದೇ ಕೇಳು.
01008004a ಋಷಿರಾಸೀನ್ಮಹಾನ್ಪೂರ್ವಂ ತಪೋವಿದ್ಯಾಸಮನ್ವಿತಃ।
01008004c ಸ್ಥೂಲಕೇಶ ಇತಿ ಖ್ಯಾತಃ ಸರ್ವಭೂತಹಿತೇ ರತಃ।।
ಹಿಂದೆ ಮಹಾ ತಪೋವಿದ್ಯಾಸಮನ್ವಿತ, ಸರ್ವ ಭೂತಹಿತರತ ಸ್ಥೂಲಕೇಶ ಎಂಬ ಖ್ಯಾತ ಋಷಿಯೋರ್ವನಿದ್ದನು.
01008005a ಏತಸ್ಮಿನ್ನೇವ ಕಾಲೇ ತು ಮೇನಕಾಯಾಂ ಪ್ರಜಜ್ಞಿವಾನ್।
01008005c ಗಂಧರ್ವರಾಜೋ ವಿಪ್ರರ್ಷೇ ವಿಶ್ವಾವಸುರಿತಿ ಶ್ರುತಃ।।
ವಿಪ್ರರ್ಷಿ! ಅದೇ ಸಮಯದಲ್ಲಿ ಮೇನಕೆಯು ಗಂಧರ್ವರಾಜ ವಿಶ್ವಾವಸುವಿನಿಂದ ಗರ್ಭವತಿಯಾಗಿದ್ದಳು ಎಂದು ಕೇಳಿದ್ದೇವೆ.
01008006a ಅಥಾಪ್ಸರಾ ಮೇನಕಾ ಸಾ ತಂ ಗರ್ಭಂ ಭೃಗುನಂದನ।
01008006c ಉತ್ಸಸರ್ಜ ಯಥಾಕಾಲಂ ಸ್ಥೂಲಕೇಶಾಶ್ರಮಂ ಪ್ರತಿ।।
ಭೃಗುನಂದನ! ಸಮಯಬಂದಾಗ ಅಪ್ಸರೆ ಮೇನಕೆಯು ಆ ಗರ್ಭವನ್ನು ಸ್ಥೂಲಕೇಶನ ಆಶ್ರಮದ ಬಳಿ ಬಿಟ್ಟಳು.
01008007a ಉತ್ಸೃಜ್ಯ ಚೈವ ತಂ ಗರ್ಭಂ ನದ್ಯಾಸ್ತೀರೇ ಜಗಾಮ ಹ।
01008007c ಕನ್ಯಾಮಮರಗರ್ಭಾಭಾಂ ಜ್ವಲಂತೀಮಿವ ಚ ಶ್ರಿಯಾ।।
ರೂಪದಲ್ಲಿ ಅಮರರ ಮಗುವಿನಂತೆ ಪ್ರಜ್ವಲಿಸುತ್ತಿದ್ದ ಆ ಕನ್ಯೆಯನ್ನು ನದೀತೀರದಲ್ಲಿ ಬಿಟ್ಟು ಅವಳು ಹೊರಟು ಹೋದಳು.
01008008a ತಾಂ ದದರ್ಶ ಸಮುತ್ಸೃಷ್ಟಾಂ ನದೀತೀರೇ ಮಹಾನೃಷಿಃ।
01008008c ಸ್ಥೂಲಕೇಶಃ ಸ ತೇಜಸ್ವೀ ವಿಜನೇ ಬಂಧುವರ್ಜಿತಾಂ।।
ಮಹಾನ್ ಋಷಿ ಸ್ಥೂಲಕೇಶನು ವಿಜನ ನದೀತೀರದಲ್ಲಿ ಬಂಧುವರ್ಜಿತಳಾದ ಆ ತೇಜಸ್ವಿನಿಯನ್ನು ನೋಡಿದನು.
01008009a ಸ ತಾಂ ದೃಷ್ಟ್ವಾ ತದಾ ಕನ್ಯಾಂ ಸ್ಥೂಲಕೇಶೋ ದ್ವಿಜೋತ್ತಮಃ।
01008009c ಜಗ್ರಾಹಾಥ ಮುನಿಶ್ರೇಷ್ಠಃ ಕೃಪಾವಿಷ್ಟಃ ಪುಪೋಷ ಚ।
01008009e ವವೃಧೇ ಸಾ ವರಾರೋಹಾ ತಸ್ಯಾಶ್ರಮಪದೇ ಶುಭಾ।।
ದ್ವಿಜೋತ್ತಮ! ಮುನಿಶ್ರೇಷ್ಠ ಸ್ಥೂಲಕೇಶನು ಆ ಕನ್ಯೆಯನ್ನು ನೋಡಿ ಕೃಪಾವಿಷ್ಟನಾಗಿ ಅವಳನ್ನು ಕರೆದುಕೊಂಡು ಹೋಗಿ ಪೋಷಿಸಿದನು. ಅವನ ಆಶ್ರಮದಲ್ಲಿ ಆ ಶುಭೆ ವರಾರೋಹೆಯು ಬೆಳೆದಳು.
01008010a 2ಪ್ರಮದಾಭ್ಯೋ ವರಾ ಸಾ ತು ಸರ್ವರೂಪಗುಣಾನ್ವಿತಾ।
01008010c ತತಃ ಪ್ರಮದ್ವರೇತ್ಯಸ್ಯಾ ನಾಮ ಚಕ್ರೇ ಮಹಾನೃಷಿಃ।।
ಸರ್ವ ರೂಪಗುಣಗಳಲ್ಲಿ ಇತರರೆಲ್ಲರಿಗಿಂಥ ಶ್ರೇಷ್ಠಳಾಗಿದ್ದುದರಿಂದ ಆ ಮಹಾನ್ ಋಷಿಯು ಅವಳಿಗೆ ಪ್ರಮದ್ವರಾ ಎನ್ನುವ ಹೆಸರನ್ನಿತ್ತನು.
01008011a ತಾಮಾಶ್ರಮಪದೇ ತಸ್ಯ ರುರುರ್ದೃಷ್ಟ್ವಾ ಪ್ರಮದ್ವರಾಂ।
01008011c ಬಭೂವ ಕಿಲ ಧರ್ಮಾತ್ಮಾ ಮದನಾನುಗತಾತ್ಮವಾನ್।।
ಆ ಆಶ್ರಮದ ಬಳಿಯಲ್ಲಿ ಪ್ರಮದ್ವರೆಯನ್ನು ನೋಡಿ ಧರ್ಮಾತ್ಮ ರುರುವು ಅವಳಲ್ಲಿ ಮದನಾನುಗತನಾದನು.
01008012a ಪಿತರಂ ಸಖಿಭಿಃ ಸೋಽಥ ವಾಚಯಾಮಾಸ ಭಾರ್ಗವಃ।
01008012c ಪ್ರಮತಿಶ್ಚಾಭ್ಯಯಾಃ ಶ್ರುತ್ವಾ ಸ್ಥೂಲಕೇಶಂ ಯಶಸ್ವಿನಂ।।
ಮಿತ್ರರ ಮೂಲಕ ಈ ವಿಷಯವನ್ನು ತನ್ನ ತಂದೆ ಭಾರ್ಗವ ಪ್ರಮತಿಗೆ ತಿಳಿಸಿದನು ಮತ್ತು ಪ್ರಮತಿಯು ಸ್ಥೂಲಕೇಶನಲ್ಲಿ ಯಶಸ್ವಿನಿಯನ್ನು ಕೊಡುವಂತೆ ಕೇಳಿಕೊಂಡನು.
01008013a ತತಃ ಪ್ರಾದಾತ್ಪಿತಾ ಕನ್ಯಾಂ ರುರವೇ ತಾಂ ಪ್ರಮದ್ವರಾಂ।
01008013c ವಿವಾಹಂ ಸ್ಥಾಪಯಿತ್ವಾಗ್ರೇ ನಕ್ಷತ್ರೇ ಭಗದೈವತೇ।।
ಕನ್ಯೆಯ ತಂದೆಯು ಪ್ರಮದ್ವರೆಯನ್ನು ರುರುವಿಗೆ ಕೊಡುವುದೆಂದು ನಿರ್ಧರಿಸಿದನು ಮತ್ತು ಭಗದೇವತ (ಪೂರ್ವ ಪಾಲ್ಗುಣೀ) ನಕ್ಷತ್ರದಲ್ಲಿ ವಿವಾಹ ನಿಶ್ಚಯವಾಯಿತು.
01008014a ತತಃ ಕತಿಪಯಾಹಸ್ಯ ವಿವಾಹೇ ಸಮುಪಸ್ಥಿತೇ।
01008014c ಸಖೀಭಿಃ ಕ್ರೀಡತೀ ಸಾರ್ಧಂ ಸಾ ಕನ್ಯಾ ವರವರ್ಣಿನೀ।।
ವಿವಾಹಕ್ಕೆ ಇನ್ನೂ ಕೆಲವು ದಿನಗಳಿರುವಾಗ ಆ ಕನ್ಯೆ ವರವರ್ಣಿನಿಯು ತನ್ನ ಸಖಿಗಳೊಂದಿಗೆ ಆಡುತ್ತಿದ್ದಳು.
01008015a ನಾಪಶ್ಯತ ಪ್ರಸುಪ್ತಂ ವೈ ಭುಜಗಂ ತಿರ್ಯಗಾಯತಂ।
01008015c ಪದಾ ಚೈನಂ ಸಮಾಕ್ರಾಮನ್ಮುಮೂರ್ಷುಃ ಕಾಲಚೋದಿತಾ।।
ಕಾಲಚೋದಿತಳಾದ ಅವಳು ಕಾಣದಹಾಗೆ ಸುರುಳಿಸುತ್ತಿ ಮಲಗಿದ್ದ ಹಾವೊಂದನ್ನು ಮೆಟ್ಟಿದಳು.
01008016a ಸ ತಸ್ಯಾಃ ಸಂಪ್ರಮತ್ತಾಯಾಶ್ಚೋದಿತಃ ಕಾಲಧರ್ಮಣಾ।
01008016c ವಿಷೋಪಲಿಪ್ತಾನ್ದಶನಾನ್ ಭೃಶಮಂಗೇ ನ್ಯಪಾತಯತ್।।
ಕಾಲಧರ್ಮಕ್ಕೆ ತಕ್ಕಂತೆ ಅದು ತನ್ನ ವಿಷಭರಿತ ಹಲ್ಲುಗಳಿಂದ ಅವಳ ಕಾಲನ್ನು ಕಚ್ಚಿ ಕೆಳಗುರಿಳಿಸಿತು.
01008017a ಸಾ ದಷ್ಟಾ ಸಹಸಾ ಭೂಮೌ ಪತಿತಾ ಗತಚೇತನಾ।
01008017c 3ವ್ಯಸುರಪ್ರೇಕ್ಷಣೀಯಾಪಿ ಪ್ರೇಕ್ಷಣೀಯತಮಾಕೃತಿಃ।।
ಅದರಿಂದ ಕಚ್ಚಲ್ಪಟ್ಟ ಅವಳು ತಕ್ಷಣವೇ ಮೂರ್ಛಿತಳಾಗಿ ಭೂಮಿಯಮೇಲೆ ಬಿದ್ದಳು, ಪರಿಸ್ಥಿತಿಯು ಅಪ್ರೇಕ್ಷಣೀಯವಾಗಿದ್ದರೂ ಅವಳ ಸೌಂದರ್ಯವು ಪ್ರೇಕ್ಷಣೀಯವಾಗಿಯೇ ಇತ್ತು.
01008018a ಪ್ರಸುಪ್ತೇವಾಭವಶ್ಚಾಪಿ ಭುವಿ ಸರ್ಪವಿಷಾರ್ದಿತಾ।
01008018c ಭೂಯೋ ಮನೋಹರತರಾ ಬಭೂವ ತನುಮಧ್ಯಮಾ।।
ಸರ್ಪವಿಷದಿಂದ ನೆಲದಮೇಲೆ ಮಲಗಿಕೊಂಡಿದ್ದ ಆ ತನುಮಧ್ಯಮೆಯು ಇನ್ನೂ ಹೆಚ್ಚು ಮನೋಹರೆಯಾಗಿ ಕಾಣುತ್ತಿದ್ದಳು.
01008019a ದದರ್ಶ ತಾಂ ಪಿತಾ ಚೈವ ತೇ ಚೈವಾನ್ಯೇ ತಪಸ್ವಿನಃ।
01008019c ವಿಚೇಷ್ಟಮಾನಾಂ ಪತಿತಾಂ ಭೂತಲೇ ಪದ್ಮವರ್ಚಸಂ।।
ಪದ್ಮವರ್ಚಸಳಾದ ಅವಳು ಮೂರ್ಛಿತಳಾಗಿ ಭೂಮಿಯ ಮೇಲೆ ಬಿದ್ದುದನ್ನು ಅವಳ ತಂದೆ ಮತ್ತು ಅನ್ಯ ತಪಸ್ವಿಗಳು ನೋಡಿದರು.
01008020a ತತಃ ಸರ್ವೇ ದ್ವಿಜವರಾಃ ಸಮಾಜಗ್ಮುಃ ಕೃಪಾನ್ವಿತಾಃ।
01008020c ಸ್ವಸ್ತ್ಯಾತ್ರೇಯೋ ಮಹಾಜಾನುಃ ಕುಶಿಕಃ ಶಂಖಮೇಖಲಃ।।
01008021a ಭಾರದ್ವಾಜಃ ಕೌಣಕುತ್ಸ ಆರ್ಷ್ಟಿಷೇಣೋಽಥ ಗೌತಮಃ।
01008021c ಪ್ರಮತಿಃ ಸಹ ಪುತ್ರೇಣ ತಥಾನ್ಯೇ ವನವಾಸಿನಃ।।
ಅಲ್ಲಿಗೆ ಸ್ವಸ್ತ್ಯಾತ್ರೇಯ, ಮಹಾಜಾನು, ಕುಶಿಕ, ಶಂಖಮೇಖಲ, ಭಾರದ್ವಾಜ, ಕೌಣಕುತ್ಸ, ಆರ್ಷ್ಟಿಷೇಣ, ಗೌತಮ, ಪುತ್ರ ಸಮೇತ ಪ್ರಮತಿ ಮತ್ತು ಅನ್ಯ ವನವಾಸಿ ಕೃಪಾನ್ವಿತ ದ್ವಿಜವರರೆಲ್ಲರೂ ಬಂದರು.
01008022a ತಾಂ ತೇ ಕನ್ಯಾಂ ವ್ಯಸುಂ ದೃಷ್ಟ್ವಾ ಭುಜಗಸ್ಯ ವಿಷಾರ್ದಿತಾಂ।
01008022c ರುರುದುಃ ಕೃಪಯಾವಿಷ್ಟಾ ರುರುಸ್ತ್ವಾರ್ತೋ ಬಹಿರ್ಯಯೌ।।
ಹಾವಿನ ವಿಷದಿಂದ ನೆಲದಮೇಲೆ ಮಲಗಿದ್ದ ಕನ್ಯೆಯನ್ನು ನೋಡಿ, ಕೃಪಾವಿಷ್ಟರಾಗಿ ಎಲ್ಲರೂ ರೋದಿಸಿದರು. ಬಹು ಆರ್ತನಾದ ರುರುವು ಅಲ್ಲಿಂದ ಹೊರಟು ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಪ್ರಮದ್ವರಾಸರ್ಪದಂಶೋ ನಾಮ ಅಷ್ಟಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಪ್ರಮದ್ವರಾಸರ್ಪದಂಶ ಎನ್ನುವ ಎಂಟನೆಯ ಅಧ್ಯಾಯವು.
-
ನೀಲಕಂಠೀಯದಲ್ಲಿ ಇದರ ಮೊದಲು ಈ ಶ್ಲೋಕಗಳಿವೆ: ಶೌನಕಸ್ತು ಮಹಾಭಾಗ ಶುನಕಸ್ಯ ಸುತೋ ಭವಾನ್। ಶುನಕಸ್ತು ಮಹಾಸತ್ವಃ ಸರ್ವಭಾರ್ಗವನಂದನಃ। ಜಾತಸ್ತಪಸಿ ತೀವ್ರೇ ಚ ಸ್ಥಿತಃ ಸ್ಥಿರಯಶಾಸ್ತತಃ।। ಅರ್ಥಾತ್: ಮಹಾಭಾಗ ಶುನಕನ ಪುತ್ರನಾದ ನೀನು ಶೌನಕ. ಶುನಕನು ಮಹಾ ಸತ್ವಶಾಲಿಯಾಗಿದ್ದು ಸರ್ವ ಭಾರ್ಗವರಿಗೂ ಆನಂದದಾಯಕನಾಗಿದ್ದನು. ಹುಟ್ಟಿದೊಡನೆಯೇ ಅವನು ತೀವ್ರ ತಪಸ್ಸಿನಲ್ಲಿ ನಿರತನಾಗಿ, ಶಾಶ್ವತ ಕೀರ್ತಿಯನ್ನು ಪಡೆದನು. ↩︎
-
ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಜಾತಕಾದ್ಯಾಃ ಕ್ರಿಯಾಶ್ಚಾಸ್ಯಾ ವಿಧಿಪೂರ್ವಂ ಯಥಾಕ್ರಮಂ। ಸ್ಥೂಲಕೇಶೋ ಮಹಾಭಾಗಶ್ಚಕಾರ ಸುಮಹಾನೃಷಿಃ।। ಅರ್ಥಾತ್: ಮಹಾಭಾಗ ಮಹಾನೃಷಿ ಸ್ಥೂಲಕೇಶನು ಅವಳಿಗೆ ಜಾತಕಾದಿ ಕ್ರಿಯೆಗಳನ್ನು ವಿಧಿಪೂರ್ವಕವಾಗಿ ಮತ್ತು ಯಥಾಕ್ರಮವಾಗಿ ನೆರವೇರಿಸಿದನು. ↩︎
-
ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿವೆ: ವಿವರ್ಣಾ ವಿಗತಶ್ರೀಕಾ ಭ್ರಷ್ಟಾಭರಣಚೇತನಾ। ನಿರಾನಂದಕರೀ ತೇಷಾಂ ಬಂಧೂನಾಂ ಮುಕ್ತಮೂರ್ಧಜಾ।। ಅರ್ಥಾತ್: ಬಣ್ಣವನ್ನು ಕಳೆದುಕೊಂಡ ಅವಳ ಕಾಂತಿಯು ಕುಂದಿಹೋಗಿತ್ತು. ಅವಳು ಚೇತನವನ್ನು ಕಳೆದುಕೊಂಡು ಬಿದ್ದಾಗ ಆಭರಣಗಳು ಚದುರಿ ಬಿದ್ದವು. ತಲೆಗೂದಲು ಬಿಚ್ಚಿಹೋಗಿದ್ದ ಅವಳು ಬಂಧುಗಳಿಗೆ ದುಃಖವನ್ನು ತಂದಳು. ↩︎