ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ ಶ್ರೀ ಮಹಾಭಾರತ ಆದಿ ಪರ್ವ ಪೌಲೋಮ ಪರ್ವ
7
ಸಾರ
ಕೋಪಗೊಂಡ ಅಗ್ನಿಯು ಎಲ್ಲ ಕರ್ಮಗಳಿಂದ ತನ್ನನ್ನು ಹಿಂತೆಗೆದುಕೊಂಡಿದುದು (1-14). ದೇವತೆಗಳ ಒತ್ತಾಯದ ಮೇರೆಗೆ ಬ್ರಹ್ಮನು ಅಗ್ನಿಗೆ ಶಾಪವನ್ನು ಸ್ವೀಕರಿಸಲು ಹೇಳುವುದು (15-25).
01007001 ಸೂತ ಉವಾಚ।
01007001a ಶಪ್ತಸ್ತು ಭೃಗುಣಾ ವಹ್ನಿಃ ಕ್ರುದ್ಧೋ ವಾಕ್ಯಮಥಾಬ್ರವೀತ್।
01007001c ಕಿಮಿದಂ ಸಾಹಸಂ ಬ್ರಹ್ಮನ್ಕೃತವಾನಸಿ ಸಾಂಪ್ರತಂ।।
ಸೂತನು ಹೇಳಿದನು: “ಭೃಗುವಿನಿಂದ ಶಪಿತನಾದ ವಹ್ನಿಯು ಕೋಪದಿಂದ ಹೇಳಿದನು: “ಬ್ರಾಹ್ಮಣ! ನನ್ನ ವಿರುದ್ಧ ಏಕೆ ಈ ಸಾಹಸ ಕಾರ್ಯವನ್ನೆಸಗಿದೆ?
01007002a ಧರ್ಮೇ ಪ್ರಯತಮಾನಸ್ಯ ಸತ್ಯಂ ಚ ವದತಃ ಸಮಂ।
01007002c ಪೃಷ್ಟೋ ಯದಬ್ರುವಂ ಸತ್ಯಂ ವ್ಯಭಿಚಾರೋಽತ್ರ ಕೋ ಮಮ।।
ಸತ್ಯವನ್ನು ಹೇಳು ಎಂದು ಕೇಳಿಕೊಂಡಾಗ ಧರ್ಮದಲ್ಲಿ ನಡೆದು ಸತ್ಯವನ್ನು ನುಡಿದ ನಾನು ಯಾವ ವ್ಯಭಿಚಾರ್ಯವನ್ನು ಮಾಡಿದ್ದೇನೆ?
01007003a ಪೃಷ್ಟೋ ಹಿ ಸಾಕ್ಷೀ ಯಃ ಸಾಕ್ಷ್ಯಂ ಜಾನಮಾನೋಽನ್ಯಥಾ ವದೇತ್।
01007003c ಸ ಪೂರ್ವಾನಾತ್ಮನಃ ಸಪ್ತ ಕುಲೇ ಹನ್ಯಾತ್ತಥಾ ಪರಾನ್।।
ಎದಿರು ಸಾಕ್ಷಿಯಾಗಿದ್ದವನು ಸಾಕ್ಷಿಯನ್ನು ಕೇಳಿದಾಗ ತಿಳಿದಿದ್ದುದನ್ನು ಬಿಟ್ಟು ಅನ್ಯಥಾ ಹೇಳಿದರೆ ಅವನು ತನ್ನ ಪೂರ್ವಜರನ್ನು ಮತ್ತು ತನ್ನ ಮುಂದಿನ ಕುಲವನ್ನು - ಎರಡನ್ನೂ ಏಳು ಪೀಳಿಗೆಗಳವರೆಗೆ - ನಾಶಮಾಡುತ್ತಾನೆ.
01007004a ಯಶ್ಚ ಕಾರ್ಯಾರ್ಥತತ್ತ್ವಜ್ಞೋ ಜಾನಮಾನೋ ನ ಭಾಷತೇ।
01007004c ಸೋಽಪಿ ತೇನೈವ ಪಾಪೇನ ಲಿಪ್ಯತೇ ನಾತ್ರ ಸಂಶಯಃ।।
ಕೇಳಿದಾಗ ತಿಳಿದುದ್ದದನ್ನು ಹೇಳದೇ ಇದ್ದ ತತ್ವಜ್ಞನೂ ಕೂಡ ಇದೇ ರೀತಿಯ ಪಾಪವನ್ನು ಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
01007005a ಶಕ್ತೋಽಹಮಪಿ ಶಪ್ತುಂ ತ್ವಾಂ ಮಾನ್ಯಾಸ್ತು ಬ್ರಾಹ್ಮಣಾ ಮಮ।
01007005c ಜಾನತೋಽಪಿ ಚ ತೇ ವ್ಯಕ್ತಂ ಕಥಯಿಷ್ಯೇ ನಿಬೋಧ ತತ್।।
ನಾನೂ ಕೂಡ ನಿನ್ನನ್ನು ಶಪಿಸಬಹುದು. ಆದರೆ ನಾನು ಬ್ರಾಹ್ಮಣರನ್ನು ಆದರಿಸುತ್ತೇನೆ. ಇವೆಲ್ಲವೂ ನಿನಗೆ ಮೊದಲೇ ತಿಳಿದಿದ್ದರೂ ನಿನಗೆ ವ್ಯಕ್ತಪಡಿಸಲು ಹೇಳುತ್ತಿದ್ದೇನೆ.
01007006a ಯೋಗೇನ ಬಹುಧಾತ್ಮಾನಂ ಕೃತ್ವಾ ತಿಷ್ಟಾಮಿ ಮೂರ್ತಿಷು।
01007006c ಅಗ್ನಿಹೋತ್ರೇಷು ಸತ್ರೇಷು ಕ್ರಿಯಾಸ್ವಥ ಮಖೇಷು ಚ।।
ಯೋಗದಿಂದ ನನ್ನನ್ನು ನಾನೇ ಬಹುದಾತ್ಮನನ್ನಾಗಿ ಮಾಡಿಕೊಂಡು ಅಗ್ನಿಹೋತ್ರ, ಸತ್ರ, ಕ್ರಿಯ ಮತ್ತು ಮಖಗಳಾಗಿದ್ದೇನೆ.
01007007a ವೇದೋಕ್ತೇನ ವಿಧಾನೇನ ಮಯಿ ಯದ್ಧೂಯತೇ ಹವಿಃ।
01007007c ದೇವತಾಃ ಪಿತರಶ್ಚೈವ ತೇನ ತೃಪ್ತಾ ಭವಂತಿ ವೈ।।
ವೇದೋಕ್ತ ವಿಧಾನಗಳಿಂದ ನನ್ನಲ್ಲಿ ಹವಿಸ್ಸನ್ನು ಸುರಿದಾಗ ದೇವತೆಗಳು ಮತ್ತು ಪಿತೃಗಳು ತೃಪ್ತರಾಗುತ್ತಾರೆ.
01007008a ಆಪೋ ದೇವಗಣಾಃ ಸರ್ವೇ ಆಪಃ ಪಿತೃಗಣಾಸ್ತಥಾ।
01007008c ದರ್ಶಶ್ಚ ಪೌರ್ಣಮಾಸಶ್ಚ ದೇವಾನಾಂ ಪಿತೃಭಿಃ ಸಹ।।
ಸರ್ವ ದೇವಗಣಗಳು ನೀರು ಮತ್ತು ಪಿತೃಗಣಗಳೂ ಕೂಡ ನೀರು. ದೇವ ಮತ್ತು ಪಿತೃಗಳು ಕ್ರಮವಾಗಿ ಪೂರ್ಣಿಮ ಮತ್ತು ಅಮವಾಸ್ಯೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
01007009a ದೇವತಾಃ ಪಿತರಸ್ತಸ್ಮಾತ್ಪಿತರಶ್ಚಾಪಿ ದೇವತಾಃ।
01007009c ಏಕೀಭೂತಾಶ್ಚ ಪೂಜ್ಯಂತೇ ಪೃಥಕ್ತ್ವೇನ ಚ ಪರ್ವಸು।।
ದೇವತೆಗಳೇ ಪಿತೃಗಳು ಮತ್ತು ಪಿತೃಗಳೇ ದೇವತೆಗಳು. ಒಂದಾದ ಅವರೀರ್ವರನ್ನೂ ಚಂದ್ರಮಾನ ಮಾಸದ ಪರ್ವಗಳೆರಡಲ್ಲಿ ಪೂಜಿಸುತ್ತಾರೆ.
01007010a ದೇವತಾಃ ಪಿತರಶ್ಚೈವ ಜುಹ್ವತೇ ಮಯಿ ಯತ್ಸದಾ।
01007010c ತ್ರಿದಶಾನಾಂ ಪಿತೄಣಾಂ ಚ ಮುಖಮೇವಮಹಂ ಸ್ಮೃತಃ।।
ದೇವತೆ-ಪಿತೃಗಳೀರ್ವರೂ ನನ್ನ ಮೂಲಕವೇ ತಿನ್ನುತ್ತಾರೆ. ಆದುದರಿಂದ ಮೂರೂ ಲೋಕಗಳಲ್ಲಿ ನನ್ನನ್ನು ದೇವ-ಪಿತೃಗಳ ಬಾಯಿಯೆಂದು ಕರೆಯುತ್ತಾರೆ.
01007011a ಅಮಾವಾಸ್ಯಾಂ ಚ ಪಿತರಃ ಪೌರ್ಣಮಾಸ್ಯಾಂ ಚ ದೇವತಾಃ।
01007011c ಮನ್ಮುಖೇನೈವ ಹೂಯಂತೇ ಭುಂಜತೇ ಚ ಹುತಂ ಹವಿಃ।
01007011e ಸರ್ವಭಕ್ಷಃ ಕಥಂ ತೇಷಾಂ ಭವಿಷ್ಯಾಮಿ ಮುಖಂ ತ್ವಹಂ।।
ನನ್ನ ಬಾಯಿಯಲ್ಲಿ ಹವಿಸ್ಸನ್ನು ಹಾಕುವುದರ ಮೂಲಕ ಅಮವಾಸ್ಯೆಗಳಲ್ಲಿ ಪಿತೃಗಳು ಮತ್ತು ಪೂರ್ಣಿಮೆಗಳಲ್ಲಿ ದೇವತೆಗಳು ಊಟ ಮಾಡುತ್ತಾರೆ. ಕೇವಲ ಅವರ ಬಾಯಿಯಾಗಿರುವ ನಾನು ಹೇಗೆ ಸರ್ವಭಕ್ಷಕನಾಗಲಿ?”
01007012a ಚಿಂತಯಿತ್ವಾ ತತೋ ವಹ್ನಿಶ್ಚಕ್ರೇ ಸಂಹಾರಮಾತ್ಮನಃ।
01007012c ದ್ವಿಜಾನಾಮಗ್ನಿಹೋತ್ರೇಷು ಯಜ್ಮಸತ್ರಕ್ರಿಯಾಸು ಚ।।
ಸ್ವಲ್ಪ ಸಮಯ ಯೋಚಿಸಿ, ವಹ್ನಿಯು ದ್ವಿಜರ ಅಗ್ನಿಹೋತ್ರ, ಯಜ್ಞ, ಸತ್ರ ಮತ್ತು ಕ್ರಿಯೆಗಳೆಲ್ಲವುಗಳಿಂದ ತನ್ನನ್ನು ಹಿಂತೆಗೆದುಕೊಂಡನು.
01007013a ನಿರೋಂಕಾರವಷಟ್ಕಾರಾಃ ಸ್ವಧಾಸ್ವಾಹಾವಿವರ್ಜಿತಾಃ।
01007013c ವಿನಾಗ್ನಿನಾ ಪ್ರಜಾಃ ಸರ್ವಾಸ್ತತ ಆಸನ್ಸುದುಃಖಿತಾಃ।।
ಓಂಕಾರ, ವಷಟ್ಕಾರ, ಸ್ವಧಾ, ಸ್ವಾಹಗಳಿಲ್ಲದೇ ಕಾರ್ಯಗಳೆಲ್ಲವೂ ನಿಂತು ಹೋಗಿ ಸರ್ವ ಪ್ರಜೆಗಳೂ ದುಃಖಿತರಾದರು.
01007014a ಅಥರ್ಷಯಃ ಸಮುದ್ವಿಗ್ನಾ ದೇವಾನ್ಗತ್ವಾಬ್ರುವನ್ವಚಃ।
01007014c ಅಗ್ನಿನಾಶಾತ್ಕ್ರಿಯಾಭ್ರಂಶಾದ್ಭ್ರಾಂತಾ ಲೋಕಾಸ್ತ್ರಯೋಽನಘಾಃ।
01007014e ವಿಧಧ್ವಮತ್ರ ಯತ್ಕಾರ್ಯಂ ನ ಸ್ಯಾತ್ಕಾಲಾತ್ಯಯೋ ಯಥಾ।।
ಆಗ ಉದ್ವಿಗ್ನರಾದ ಎಲ್ಲ ಋಷಿಗಳು ದೇವತೆಗಳ ಬಳಿ ಹೋಗಿ ಹೇಳಿದರು: “ಅನಘರೇ! ಅಗ್ನಿನಾಶದಿಂದ ಕ್ರಿಯಾಭ್ರಂಶವಾಗಿ ಮೂರೂ ಲೋಕಗಳೂ ಭ್ರಾಂತವಾಗಿವೆ. ಆದುದರಿಂದ ತಡೆಮಾಡದೇ ಉಚಿತ ಕಾರ್ಯವನ್ನು ಕೈಗೊಳ್ಳಿ.”
01007015a ಅಥರ್ಷಯಶ್ಚ ದೇವಾಶ್ಚ ಬ್ರಹ್ಮಾಣಮುಪಗಮ್ಯ ತು।
01007015c ಅಗ್ನೇರಾವೇದಯಂ ಶಾಪಂ ಕ್ರಿಯಾಸಂಹಾರಮೇವ ಚ।।
ಆಗ ಋಷಿಗಳು ಮತ್ತು ದೇವತೆಗಳು ಬ್ರಹ್ಮನಲ್ಲಿಗೆ ಹೋಗಿ ಅಗ್ನಿಗೆ ಬಂದ ಶಾಪ ಮತ್ತು ಅವನು ತನ್ನ ಕ್ರಿಯೆಗಳನ್ನು ನಿಲ್ಲಿಸಿದ್ದುದನ್ನು ನಿವೇದಿಸಿದರು.
01007016a ಭೃಗುಣಾ ವೈ ಮಹಾಭಾಗ ಶಪ್ತೋಽಗ್ನಿಃ ಕಾರಣಾಂತರೇ।
01007016c ಕಥಂ ದೇವಮುಖೋ ಭೂತ್ವಾ ಯಜ್ಞಭಾಗಾಗ್ರಭುಕ್ತಥಾ।
01007016e ಹುತಭುಕ್ಸರ್ವಲೋಕೇಷು ಸರ್ವಭಕ್ಷತ್ವಮೇಷ್ಯತಿ।।
“ಮಹಾಭಾಗ! ಕಾರಣಾಂತರದಿಂದ ಭೃಗುವು ಅಗ್ನಿಯನ್ನು ಶಪಿಸಿದನು. ದೇವಮುಖನಾದ, ಯಜ್ಞಗಳಲ್ಲಿ ಅಗ್ರಭುಕ್ತನಾದ ಅಗ್ನಿಯು ಹೇಗೆ ಸರ್ವಲೋಕದಲ್ಲಿ ಸರ್ವಭಕ್ಷಕನಾಗಲು ಸಾಧ್ಯ?”
01007017a ಶ್ರುತ್ವಾ ತು ತದ್ವಚಸ್ತೇಷಾಮಗ್ನಿಮಾಹೂಯ ಲೋಕಕೃತ್।
01007017c ಉವಾಚ ವಚನಂ ಶ್ಲಕ್ಷ್ಣಂ ಭೂತಭಾವನಮವ್ಯಯಂ।।
ಅವರ ಆ ಮಾತುಗಳನ್ನು ಕೇಳಿದ ಲೋಕಕೃತನು ಅಗ್ನಿಯನ್ನು ಕರೆಯಿಸಿ ಆ ಭೂತಭಾವನ ಅವ್ಯಯನಿಗೆ ಈ ಮೃದು ಮಾತುಗಳನ್ನು ಹೇಳಿದನು:
01007018a ಲೋಕಾನಾಮಿಹ ಸರ್ವೇಷಾಂ ತ್ವಂ ಕರ್ತಾ ಚಾಂತ ಏವ ಚ।
01007018c ತ್ವಂ ಧಾರಯಸಿ ಲೋಕಾಂಸ್ತ್ರೀನ್ಕ್ರಿಯಾಣಾಂ ಚ ಪ್ರವರ್ತಕಃ।।
“ಈ ಸರ್ವ ಲೋಕಗಳ ಕರ್ತನೂ ನೀನು. ಅಂತನೂ ನೀನು. ನೀನು ಮೂರೂ ಲೋಕಗಳನ್ನೂ, ಕ್ರಿಯೆಗಳನ್ನೂ ನಡೆಸುತ್ತೀಯೆ.
01007019a ಕಸ್ಮಾದೇವಂ ವಿಮೂಢಸ್ತ್ವಮೀಶ್ವರಃ ಸನ್ ಹುತಾಶನಃ।
01007019c ತ್ವಂ ಪವಿತ್ರಂ ಯದಾ ಲೋಕೇ ಸರ್ವಭೂತಗತಶ್ಚ ಹ।।
ಸರ್ವೇಶ್ವರ ಹುತಾಶನ! ನೀನು ಹೇಗೆ ಈ ರೀತಿ ಮೂಢನಾಗಲು ಸಾಧ್ಯ? ಲೋಕದ ಸರ್ವಭೂತಗಳಲ್ಲಿ ನೆಲಸಿರುವ ನೀನು ಪವಿತ್ರ.
01007020a ನ ತ್ವಂ ಸರ್ವಶರೀರೇಣ ಸರ್ವಭಕ್ಷತ್ವಮೇಷ್ಯಸಿ।
01007020c ಉಪಾದಾನೇಽರ್ಚಿಷೋ ಯಾಸ್ತೇ ಸರ್ವಂ ಧಕ್ಷ್ಯಂತಿ ತಾಃ ಶಿಖಿನ್।।
ನಿನ್ನ ಸರ್ವ ಶರೀರವು ಸರ್ವಭಕ್ಷಕವಾಗುವುದಿಲ್ಲ. ನಿನ್ನ ಅಧೋಮುಖ ಜ್ವಾಲೆಗಳು ಮಾತ್ರ ಸರ್ವವನ್ನೂ ಭಕ್ಷಿಸುತ್ತವೆ.
01007021a 1ಯಥಾ ಸೂರ್ಯಾಂಶುಭಿಃ ಸ್ಪೃಷ್ಟಂ ಸರ್ವಂ ಶುಚಿ ವಿಭಾವ್ಯತೇ।
01007021c ತಥಾ ತ್ವದರ್ಚಿರ್ನಿರ್ದಗ್ಧಂ ಸರ್ವಂ ಶುಚಿ ಭವಿಷ್ಯತಿ।।
ಸೂರ್ಯನ ಕಿರಣಗಳ ಸಂಪರ್ಕದಲ್ಲಿ ಬಂದ ಸರ್ವವೂ ಹೇಗೆ ಶುಚಿಯಾಗುತ್ತವೆಯೋ ಹಾಗೆ ನಿನ್ನಲ್ಲಿ ದಗ್ಧವಾದ ಎಲ್ಲವೂ ಶುಚಿಯಾಗುತ್ತವೆ.
01007022a ತದಗ್ನೇ ತ್ವಂ ಮಹತ್ತೇಜಃ ಸ್ವಪ್ರಭಾವಾದ್ವಿನಿರ್ಗತಂ।
01007022c ಸ್ವತೇಜಸೈವ ತಂ ಶಾಪಂ ಕುರು ಸತ್ಯಂ ಋಷೇರ್ವಿಭೋ।
01007022e ದೇವಾನಾಂ ಚಾತ್ಮನೋ ಭಾಗಂ ಗೃಹಾಣ ತ್ವಂ ಮುಖೇ ಹುತಂ।।
ಅಗ್ನಿ! ನೀನು ನಿನ್ನದೇ ಪ್ರಭಾವದಿಂದ ಹುಟ್ಟಿದ ಮಹಾತೇಜಸ್ಸುಳ್ಳವನು. ನಿನ್ನ ಈ ತೇಜಸ್ಸಿನಿಂದ ಈ ಶಾಪವು ಸತ್ಯವಾಗುವಹಾಗೆ ಮಾಡು. ನಿನ್ನ ಮುಖದಿಂದ ನಿನ್ನ ಮತ್ತು ದೇವತೆಗಳ ಆಹುತಿಗಳನ್ನು ಸ್ವೀಕರಿಸು.”
01007023a ಏವಮಸ್ತ್ವಿತಿ ತಂ ವಹ್ನಿಃ ಪ್ರತ್ಯುವಾಚ ಪಿತಾಮಹಂ।
01007023c ಜಗಾಮ ಶಾಸನಂ ಕರ್ತುಂ ದೇವಸ್ಯ ಪರಮೇಷ್ಠಿನಃ।।
“ಹೀಗೆಯೇ ಆಗಲಿ” ಎಂದು ಪಿತಾಮಹನಿಗೆ ಉತ್ತರಿಸಿ ವಹ್ನಿಯು ದೇವ ಪರಮೇಷ್ಠಿಯ ಆಜ್ಞೆಯನ್ನು ಪರಿಪಾಲಿಸಲು ಮುಂದಾದನು.
01007024a ದೇವರ್ಷಯಶ್ಚ ಮುದಿತಾಸ್ತತೋ ಜಗ್ಮುರ್ಯಥಾಗತಂ।
01007024c ಋಷಯಶ್ಚ ಯಥಾಪೂರ್ವಂ ಕ್ರಿಯಾಃ ಸರ್ವಾಃ ಪ್ರಚಕ್ರಿರೇ।।
ದೇವ ಋಷಿಗಳು ಕೂಡ ಮುದಿತರಾಗಿ ಹಿಂದಿರುಗಿದರು. ಋಷಿಗಳು ಮತ್ತು ಸರ್ವರೂ ಹಿಂದಿನಂತೆ ಕ್ರಿಯೆಗಳಲ್ಲಿ ಮಗ್ನರಾದರು.
01007025a ದಿವಿ ದೇವಾ ಮುಮುದಿರೇ ಭೂತಸಂಘಾಶ್ಚ ಲೌಕಿಕಾಃ।
01007025c ಅಗ್ನಿಶ್ಚ ಪರಮಾಂ ಪ್ರೀತಿಮಾವಾಪ ಹತಕಲ್ಮಷಃ।।
ಸ್ವರ್ಗದಲ್ಲಿ ದೇವತೆಗಳು ಮತ್ತು ಭೂಮಿಯಲ್ಲಿ ಸರ್ವ ಭೂತಗಳು ಹರ್ಷಿತರಾದರು ಮತ್ತು ಅಗ್ನಿಯೂ ಹತಕಲ್ಮಶನಾಗಿ ಪರಮ ಸಂತಸವನ್ನು ಹೊಂದಿದನು.
01007026a ಏವಮೇಷ ಪುರಾವೃತ್ತ ಇತಿಹಾಸೋಽಗ್ನಿಶಾಪಜಃ।
01007026c ಪುಲೋಮಸ್ಯ ವಿನಾಶಶ್ಚ ಚ್ಯವನಸ್ಯ ಚ ಸಂಭವಃ।।
ಅಗ್ನಿಗೆ ಶಾಪ ಬಂದಿದುದರ, ಪುಲೋಮನ ವಿನಾಶದ ಮತ್ತು ಚ್ಯವನನ ಜನ್ಮದ ಕುರಿತಾದ ಹಿಂದೆ ನಡೆದ ಇತಿಹಾಸವಿದು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಅಗ್ನಿಶಾಪಮೋಚನೋ ನಾಮ ಸಪ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಅಗ್ನಿಶಾಪಮೋಚನವೆಂಬ ಏಳನೆಯ ಅಧ್ಯಾಯವು.
-
ಇದರ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಕ್ರವ್ಯಾದಾ ಚ ತನುರ್ಯಾ ತೇ ಸಾ ಸರ್ವಂ ಭಕ್ಷಯಿಷ್ಯತಿ। ಅರ್ಥಾತ್: ಕ್ರವ್ಯಾದಾ (ಚಿತಾಗ್ನಿ) ಎನ್ನುವ ನಿನ್ನ ರೂಪವೇನಿದೆಯೋ ಅದು ಸರ್ವವನ್ನು ಭಕ್ಷಿಸುವಂತಾಗುತ್ತದೆ. ↩︎