ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ ಶ್ರೀ ಮಹಾಭಾರತ ಆದಿ ಪರ್ವ ಪೌಲೋಮ ಪರ್ವ
6
ಸಾರ
ಪುಲೋಮನು ಪುಲೋಮಳನ್ನು ಎತ್ತಿಕೊಂಡು ಹೋಗುವುದು; ಭೃಗುವಿನ ಮಗ ಚ್ಯವನನು ಪುಲೋಮನನ್ನು ನಾಶಪಡಿಸುವುದು, ಪುಲೋಮಳ ಕಣ್ಣೀರು ನದಿಯಾಗಿ ಹರಿಯುವುದು (1-5). ಅಗ್ನಿಯು ಪುಲೋಮನಿಗಿತ್ತ ಉತ್ತರವನ್ನು ತಿಳಿದು ಭೃಗುವು ಕೋಪದಿಂದ ಅಗ್ನಿಯನ್ನು ಶಪಿಸುವುದು (5-10).
01006001 ಸೂತ ಉವಾಚ।
01006001a ಅಗ್ನೇರಥ ವಚಃ ಶ್ರುತ್ವಾ ತದ್ರಕ್ಷಃ ಪ್ರಜಹಾರ ತಾಂ।
01006001c ಬ್ರಹ್ಮನ್ವರಾಹರೂಪೇಣ ಮನೋಮಾರುತರಂಹಸಾ।।
ಸೂತನು ಹೇಳಿದನು: “ಬ್ರಾಹ್ಮಣ! ಅಗ್ನಿಯ ಆ ಮಾತುಗಳನ್ನು ಕೇಳಿ ರಾಕ್ಷಸನು ಮುಗುಳ್ನಕ್ಕು, ವರಾಹ ರೂಪವನ್ನು ತಳೆದು ಒಂದೇ ಕ್ಷಣದಲ್ಲಿ ಮನೋವೇಗದಿಂದ ಅವಳನ್ನು ಕೊಂಡೊಯ್ದನು.
01006002a ತತಃ ಸ ಗರ್ಭೋ ನಿವಸನ್ಕುಕ್ಷೌ ಭೃಗುಕುಲೋದ್ವಹ।
01006002c ರೋಷಾನ್ಮಾತುಶ್ಚ್ಯುತಃ ಕುಕ್ಷೇಶ್ಚ್ಯವನಸ್ತೇನ ಸೋಽಭವತ್।।
ಆಗ ಅವಳ ಗರ್ಭದಲ್ಲಿ ಬೆಳೆಯುತ್ತಿದ್ದ ಭೃಗುಕುಲೋದ್ಭವ ಭ್ರೂಣವು ರೋಷಗೊಂಡು ತಾಯಿಯಿಂದ ಹೊರಬಿದ್ದಿತು. ಆ ಗರ್ಭವೇ ಮುಂದೆ ಚ್ಯವನನೆಂದು ಕರೆಯಲ್ಪಟ್ಟನು.
01006003a ತಂ ದೃಷ್ಟ್ವಾ ಮಾತುರುದರಾಚ್ಚ್ಯುತಮಾದಿತ್ಯವರ್ಚಸಂ।
01006003c ತದ್ರಕ್ಷೋ ಭಸ್ಮಸಾದ್ಭೂತಂ ಪಪಾತ ಪರಿಮುಚ್ಯ ತಾಂ।।
ತಾಯಿಯ ಉದರದಿಂದ ಕೆಳಗೆ ಬೀಳುತ್ತಿದ್ದ ಆ ಆದಿತ್ಯವರ್ಚಸನನ್ನು ನೋಡಿದ ರಾಕ್ಷಸನು ಭಸ್ಮವಾಗಿ ಅವಳನ್ನು ಬಿಟ್ಟು ಕೆಳಗೆ ಬಿದ್ದನು.
01006004a ಸಾ ತಮಾದಾಯ ಸುಶ್ರೋಣೀ ಸಸಾರ ಭೃಗುನಂದನಂ।
01006004c ಚ್ಯವನಂ ಭಾರ್ಗವಂ ಬ್ರಹ್ಮನ್ಪುಲೋಮಾ ದುಃಖಮೂರ್ಚ್ಛಿತಾ।।
ಆಗ ಆ ಸುಶ್ರೋಣಿ ಪುಲೋಮೆಯು ಭೃಗುನಂದನ ಭಾರ್ಗವ ಚ್ಯವನನನ್ನು ಹಿಡಿದು ದುಃಖಮೂರ್ಛಿತಳಾದಳು.
01006005a ತಾಂ ದದರ್ಶ ಸ್ವಯಂ ಬ್ರಹ್ಮಾ ಸರ್ವಲೋಕಪಿತಾಮಹಃ।
01006005c ರುದತೀಂ ಬಾಷ್ಪಪೂರ್ಣಾಕ್ಷೀಂ ಭೃಗೋರ್ಭಾರ್ಯಾಮನಿಂದಿತಾಂ।
01006005e ಸಾಂತ್ವಯಾಮಾಸ ಭಗವಾನ್ವಧೂಂ ಬ್ರಹ್ಮಾ ಪಿತಾಮಹಃ।।
ರೋದಿಸುತ್ತಿರುವ ಆ ಅನಿಂದಿತೆ, ಭೃಗುಭಾರ್ಯೆ, ಬಾಷ್ಪ ಪೂರ್ಣಾಕ್ಷಿಯನ್ನು ನೋಡಿ ಸರ್ವಲೋಕ ಪಿತಾಮಹ ಸ್ವಯಂ ಭಗವಾನ್ ಬ್ರಹ್ಮ ಪಿತಾಮಹನೇ ಬಂದು ಆ ವಧುವನ್ನು ಸಂತವಿಸಿದನು.
01006006a ಅಶ್ರುಬಿಂದೂದ್ಭವಾ ತಸ್ಯಾಃ ಪ್ರಾವರ್ತತ ಮಹಾನದೀ।
01006006c ಅನುವರ್ತತೀ ಸೃತಿಂ ತಸ್ಯಾ ಭೃಗೋಃ ಪತ್ನ್ಯಾ ಯಶಸ್ವಿನಃ।।
ಅವಳ ಕಣ್ಣೀರಿನಿಂದ ಒಂದು ಮಹಾನದಿಯೇ ಹುಟ್ಟಿಕೊಂಡು ಆ ಯಶಸ್ವಿನೀ ಭೃಗುಪತ್ನಿಯನ್ನು ಹಿಂಬಾಲಿಸುತ್ತಾ ಹೊರಟಿತು.
01006007a ತಸ್ಯಾ ಮಾರ್ಗಂ ಸೃತವತೀಂ ದೃಷ್ಟ್ವಾತು ಸರಿತಂ ತದಾ।
01006007c ನಾಮ ತಸ್ಯಾಸ್ತದಾ ನದ್ಯಾಶ್ಚಕ್ರೇ ಲೋಕಪಿತಾಮಹಃ।
01006007e ವಧೂಸರೇತಿ ಭಗವಾಂಶ್ಚ್ಯವನಸ್ಯಾಶ್ರಮಂ ಪ್ರತಿ।।
ತನ್ನ ಸೊಸೆಯ ದಾರಿಯಲ್ಲಿಯೇ ಹರಿಯುತ್ತಿರುವ ಆ ನದಿಯನ್ನು ನೋಡಿ ಭಗವಾನ್ ಲೋಕಪಿತಾಮಹನು ಆ ನದಿಗೆ ವಧೂಸರ ಎಂಬ ಹೆಸರನ್ನಿತ್ತನು. ಅದರ ಬಳಿಯೇ ಚ್ಯವನನ ಆಶ್ರಮವಿದೆ.
01006008a ಸ ಏವಂ ಚ್ಯವನೋ ಜಜ್ಮೇ ಭೃಗೋಃ ಪುತ್ರಃ ಪ್ರತಾಪವಾನ್।
01006008c ತಂ ದದರ್ಶ ಪಿತಾ ತತ್ರ ಚ್ಯವನಂ ತಾಂ ಚ ಭಾಮಿನೀಂ।।
ಈ ರೀತಿ ಭೃಗು ಪುತ್ರ ಪ್ರತಾಪಿ ಚ್ಯವನನು ಹುಟ್ಟಿದನು. ಅಲ್ಲಿ ಅವನ ತಂದೆಯು ಚ್ಯವನ ಮತ್ತು ತನ್ನ ಪತ್ನಿಯನ್ನು ಕಂಡನು.
01006009a ಸ ಪುಲೋಮಾಂ ತತೋ ಭಾರ್ಯಾಂ ಪಪ್ರಚ್ಛ ಕುಪಿತೋ ಭೃಗುಃ।
01006009c ಕೇನಾಸಿ ರಕ್ಷಸೇ ತಸ್ಮೈ ಕಥಿತೇಹ ಜಿಹೀರ್ಷವೇ।
01006009e ನ ಹಿ ತ್ವಾಂ ವೇದ ತದ್ರಕ್ಷೋ ಮದ್ಭಾರ್ಯಾಂ ಚಾರುಹಾಸಿನೀಂ।।
ಕುಪಿತ ಭೃಗುವು ತನ್ನ ಭಾರ್ಯೆ ಪುಲೋಮೆಯನ್ನು ಪ್ರಶ್ನಿಸಿದನು: “ಯಾರಿಂದ ಆ ರಾಕ್ಷಸನಿಗೆ ನಿನ್ನ ಕುರಿತು ತಿಳಿಯಿತು ಮತ್ತು ಹೇಗೆ ನಿನ್ನನ್ನು ಅಪಹರಿಸಿದನು? ಚಾರುಹಾಸಿನಿ! ನೀನು ನನ್ನ ಭಾರ್ಯೆಯೆಂದು ಅವನಿಗೆ ಹೇಳಿದವನು ಯಾರು?
01006010a ತತ್ತ್ವಮಾಖ್ಯಾಹಿ ತಂ ಹ್ಯದ್ಯ ಶಪ್ತುಮಿಚ್ಛಾಮ್ಯಹಂ ರುಷಾ।
01006010c ಬಿಭೇತಿ ಕೋ ನ ಶಾಪಾನ್ಮೇ ಕಸ್ಯ ಚಾಯಂ ವ್ಯತಿಕ್ರಮಃ।।
ರೋಷದಿಂದ ಇಂದು ಅವನನ್ನು ಶಪಿಸಲು ಇಚ್ಚಿಸುತ್ತೇನೆ. ನನ್ನ ಕೋಪದಿಂದ ಹುಟ್ಟಿದ ಶಾಪದಿಂದ ಯಾರೂ ಉಳಿಯಲು ಸಾಧ್ಯವಿಲ್ಲ.”
01006011 ಪುಲೋಮೋವಾಚ।
01006011a ಅಗ್ನಿನಾ ಭಗವಂಸ್ತಸ್ಮೈ ರಕ್ಷಸೇಽಹಂ ನಿವೇದಿತಾ।
01006011c ತತೋ ಮಾಮನಯದ್ರಕ್ಷಃ ಕ್ರೋಶಂತೀಂ ಕುರರೀಮಿವ।।
ಪುಲೋಮೆಯು ಹೇಳಿದಳು: “ಭಗವನ್! ನಿನ್ನ ಕುರಿತು ರಾಕ್ಷಸನಿಗೆ ಅಗ್ನಿಯ ಮೂಲಕ ತಿಳಿಯಿತು1. ನಂತರದಲ್ಲಿ ಆ ರಾಕ್ಷಸನು ಕುರಿಯಂತೆ ಕೂಗುತ್ತಿರುವ ನನ್ನನ್ನು ಎತ್ತಿಕೊಂಡು ಹೋದನು.
01006012a ಸಾಹಂ ತವ ಸುತಸ್ಯಾಸ್ಯ ತೇಜಸಾ ಪರಿಮೋಕ್ಷಿತಾ।
01006012c ಭಸ್ಮೀಭೂತಂ ಚ ತದ್ರಕ್ಷೋ ಮಾಮುತ್ಸೃಜ್ಯ ಪಪಾತ ವೈ।।
ನಿನ್ನ ಸುತನ ಪರಮ ತೇಜಸ್ಸಿನಿಂದ ನಾನು ರಕ್ಷಿತಳಾದೆ ಮತ್ತು ಆ ರಾಕ್ಷಸನು ಭಸ್ಮೀಭೂತನಾಗಿ ನನ್ನ ಕೈಬಿಟ್ಟು ಬಿದ್ದನು.””
01006013 ಸೂತ ಉವಾಚ।
01006013a ಇತಿ ಶ್ರುತ್ವಾ ಪುಲೋಮಾಯಾ ಭೃಗುಃ ಪರಮಮನ್ಯುಮಾನ್।
01006013c ಶಶಾಪಾಗ್ನಿಮಭಿಕ್ರುದ್ಧಃ ಸರ್ವಭಕ್ಷೋ ಭವಿಷ್ಯಸಿ।।
ಸೂತನು ಹೇಳಿದನು: “ಪುಲೋಮಳಿಂದ ಇದನ್ನು ಕೇಳಿದ ಭೃಗುವು ಕೃದ್ಧನಾಗಿ ಪರಮ ಕೋಪದಿಂದ ಅಗ್ನಿಯನ್ನು “ಸರ್ವಭಕ್ಷೋ ಭವ!” ಎಂದು ಶಪಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಅಗ್ನಿಶಾಪೋ ನಾಮ ಷಷ್ಠೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಅಗ್ನಿಶಾಪವೆಂಬ ಆರನೆಯ ಅಧ್ಯಾಯವು.
-
ಪದ್ಮಪುರಾಣದ ಪ್ರಕಾರ ಮಹರ್ಷಿ ಭೃಗುವು ಸಮಿತ್ತುಗಳನ್ನು ಹುಡುಕಿಕೊಂಡು ಹೋದಾಗ ದಮನ ಎಂಬ ರಾಕ್ಷಸನು ಋಷಿಯ ಪತ್ನಿಯನ್ನು ಹುಡುಕಿಕೊಂಡು ಅವನ ಆಶ್ರಮಕ್ಕೆ ಹೋದನು. ರಾಕ್ಷಸನಿಗೆ ಹೆದರಿದ ಅಗ್ನಿಯು ಆಶ್ರಮದಲ್ಲಿ ಪುಲೋಮಳು ಅಡಗಿಕೊಂಡಿದ್ದ ಸ್ಥಾನವನ್ನು ಹೇಳಿದನು. ಭೃಗುವು ಆಶ್ರಮಕ್ಕೆ ಹಿಂದಿರುಗಿ, ಅಗ್ನಿಯ ಕೃತ್ಯವನ್ನು ತಿಳಿದು ಅವನಿಗೆ ಶಾಪವನ್ನಿತ್ತನು. ↩︎