005 ಪುಲೋಮಾಗ್ನಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಪೌಲೋಮ ಪರ್ವ

ಅಧ್ಯಾಯ 5

ಸಾರ

ಭೃಗುವಂಶದ ಮೂಲವನ್ನು ವರ್ಣಿಸಲು ಶೌನಕನು ಉಗ್ರಶ್ರವನನ್ನು ಕೇಳುವುದು ಮತ್ತು ಸಂಕ್ಷಿಪ್ತ ಭೃಗುವಂಶಾವಳಿ (1-9). ರಾಕ್ಷಸ ಪುಲೋಮನು ಭೃಗುಪತ್ನಿ ಪುಲೋಮಳನ್ನು ಕಾಣುವುದು, ಅಗ್ನಿಯಲ್ಲಿ ಅವನ ಪ್ರಶ್ನೆ, ಅಗ್ನಿಯ ಉತ್ತರ (10-25).

01005001 ಶೌನಕ ಉವಾಚ।
01005001a ಪುರಾಣಮಖಿಲಂ ತಾತ ಪಿತಾ ತೇಽಧೀತವಾನ್ಪುರಾ।
01005001c ಕಚ್ಚಿತ್ತ್ವಮಪಿ ತತ್ಸರ್ವಮಧೀಷೇ ಲೋಮಹರ್ಷಣೇ।।

ಶೌನಕನು ಹೇಳಿದನು: “ಹಿಂದೆ ನಿನ್ನ ತಂದೆಯು ಅಖಿಲ ಪುರಾಣಗಳನ್ನೂ ವಶಪಡಿಸಿಕೊಂಡಿದ್ದನು. ಲೋಮಹರ್ಷಣ! ನೀನೂ ಕೂಡ ಅವೆಲ್ಲವುಗಳ ಪಾಂಡಿತ್ಯವನ್ನು ಪಡೆದಿದ್ದೀಯಾ?

01005002a ಪುರಾಣೇ ಹಿ ಕಥಾ ದಿವ್ಯಾ ಆದಿವಂಶಾಶ್ಚ ಧೀಮತಾಂ।
01005002c ಕಥ್ಯಂತೇ ತಾಃ ಪುರಾಸ್ಮಾಭಿಃ ಶ್ರುತಾಃ ಪೂರ್ವಂ ಪಿತುಸ್ತವ।।

ಪುರಾಣದಲ್ಲಿ ಧೀಮಂತರ ಮೂಲ ವಂಶಾವಳಿಗಳ ವರ್ಣನೆಗಳಿವೆ. ಈ ಹಿಂದೆಯೂ ಕೂಡ ನಿನ್ನ ತಂದೆಯಿಂದ ಇವನ್ನೆಲ್ಲ ಕೇಳಿದ್ದೇವೆ.

01005003a ತತ್ರ ವಂಶಮಹಂ ಪೂರ್ವಂ ಶ್ರೋತುಮಿಚ್ಛಾಮಿ ಭಾರ್ಗವಂ।
01005003c ಕಥಯಸ್ವ ಕಥಾಮೇತಾಂ ಕಲ್ಯಾಃ ಸ್ಮ ಶ್ರವಣೇ ತವ।।

ಪುರಾತನ ಭಾರ್ಗವ ವಂಶಾವಳಿಯನ್ನು ಕೇಳಲು ಇಚ್ಛಿಸುತ್ತೇನೆ. ಆ ಕಥೆಯನ್ನು ಹೇಳು. ಆ ಕಥೆಯನ್ನು ಕೇಳಲು ನಾವೆಲ್ಲರೂ ಉತ್ಸುಕರಾಗಿದ್ದೇವೆ.”

01005004 ಸೂತ ಉವಾಚ।
01005004a ಯದಧೀತಂ ಪುರಾ ಸಂಯಗ್ದ್ವಿಜಶ್ರೇಷ್ಠ ಮಹಾತ್ಮಭಿಃ1
01005004c ವೈಶಂಪಾಯನವಿಪ್ರಾದ್ಯೈಸ್ತೈಶ್ಚಾಪಿ ಕಥಿತಂ ಪುರಾ2।।
01005005a ಯದಧೀತಂ ಚ ಪಿತ್ರಾ ಮೇ ಸಮ್ಯಕ್ಚೈವ ತತೋ ಮಯಾ।
01005005c ತತ್ತಾವಶೃಣು3 ಯೋ ದೇವೈಃ ಸೇಂದ್ರೈಃ ಸಾಗ್ನಿಮರುದ್ಗಣೈಃ।
01005005e ಪೂಜಿತಃ ಪ್ರವರೋ ವಂಶೋ ಭೃಗೂಣಾಂ4 ಭೃಗುನಂದನ।।

ಸೂತನು ಹೇಳಿದನು: “ಭೃಗುನಂದನ! ದ್ವಿಜಶ್ರೇಷ್ಠ! ವೈಶಂಪಾಯನ ಮೊದಲಾದ ಮಹಾತ್ಮಾ ವಿಪ್ರರು ಹಿಂದೆ ಚೆನ್ನಾಗಿ ಅಧ್ಯಯನಮಾಡಿದ್ದ, ನನ್ನ ತಂದೆಯಿಂದ ನಾನು ಕಲಿತುಕೊಂಡ, ಇಂದ್ರನೊಂದಿಗೆ ದೇವತೆಗಳು, ಅಗ್ನಿ, ಮತ್ತು ಮರುದ್ಗಣಗಳಿಂದ ಪೂಜಿತವಾದ ಭೃಗುವಂಶಪ್ರವರವನ್ನು ಕೇಳು.

01005006a ಇಮಂ ವಂಶಮಹಂ ಬ್ರಹ್ಮನ್ಭಾರ್ಗವಂ ತೇ ಮಹಾಮುನೇ।
01005006c ನಿಗದಾಮಿ ಕಥಾಯುಕ್ತಂ ಪುರಾಣಾಶ್ರಯಸಂಯುತಂ।।

ಬ್ರಹ್ಮನ್! ಮಹಾಮುನೇ! ನಾನು ಈ ವಂಶಾವಳಿಯನ್ನು ಪುರಾಣಗಳಲ್ಲಿರುವಂತೆ ಕಥಾರೂಪದಲ್ಲಿ ಹೇಳುತ್ತೇನೆ.

01005007a 5ಭೃಗೋಃ ಸುದಯಿತಃ ಪುತ್ರಶ್ಚ್ಯವನೋ ನಾಮ ಭಾರ್ಗವಃ।
01005007c ಚ್ಯವನಸ್ಯಾಪಿ ದಾಯಾದಃ ಪ್ರಮತಿರ್ನಾಮ ಧಾರ್ಮಿಕಃ।

ಭೃಗು6ವಿನ ಪ್ರಿಯ ಪುತ್ರನು ಚ್ಯವನ ಎಂಬ ಹೆಸರಿನ ಭಾರ್ಗವನು. ಚ್ಯವನನ ಮಗನು ಪ್ರಮತಿ ಎಂಬ ಹೆಸರಿನ ಧಾರ್ಮಿಕನು.

01005007e ಪ್ರಮತೇರಪ್ಯಭೂತ್ಪುತ್ರೋ ಘೃತಾಚ್ಯಾಂ ರುರುರಿತ್ಯುತ।।
01005008a ರುರೋರಪಿ ಸುತೋ ಜಜ್ಞೇ ಶುನಕೋ ವೇದಪಾರಗಃ।
01005008c ಪ್ರಮದ್ವರಾಯಾಂ ಧರ್ಮಾತ್ಮಾ ತವ ಪೂರ್ವಪಿತಾಮಹಾತ್7।।

ಪ್ರಮತಿಗೆ ಘೃತಾಚಿ8ಯಲ್ಲಿ ರುರು ಎಂಬ ಮಗನು ಆದನು. ನಿನ್ನ ಪೂರ್ವಪಿತಾಮಹ ರುರುವಿಗೆ ಪಮದ್ವರೆಯಲ್ಲಿ ಧರ್ಮಾತ್ಮಾ ವೇದಪಾರಗ ಶುನಕನು ಸುತನಾಗಿ ಹುಟ್ಟಿದನು.

01005009a ತಪಸ್ವೀ ಚ ಯಶಸ್ವೀ ಚ ಶ್ರುತವಾನ್ಬ್ರಹ್ಮವಿತ್ತಮಃ।
01005009c ಧರ್ಮಿಷ್ಠಃ ಸತ್ಯವಾದೀ ಚ ನಿಯತೋ ನಿಯತೇಂದ್ರಿಯಃ9।।

ಅವನು ತಪಸ್ವಿ, ಯಶಸ್ವಿ, ಶಾಸ್ತ್ರಗಳ ಜ್ಞಾನಿ, ಬ್ರಹ್ಮವಿತ್ತಮ, ಧರ್ಮಿಷ್ಠ, ಸತ್ಯವಾದಿ, ಮತ್ತು ನಿಯತ ನಿಯತೇಂದ್ರಿಯನಾಗಿದ್ದನು.”

01005010 ಶೌನಕ ಉವಾಚ।
01005010a ಸೂತಪುತ್ರ ಯಥಾ ತಸ್ಯ ಭಾರ್ಗವಸ್ಯ ಮಹಾತ್ಮನಃ।।
01005010c ಚ್ಯವನತ್ವಂ ಪರಿಖ್ಯಾತಂ ತನ್ಮಮಾಚಕ್ಷ್ವ ಪೃಚ್ಛತಃ।।

ಶೌನಕನು ಹೇಳಿದನು: “ಸೂತಪುತ್ರ! ಆ ಮಹಾತ್ಮ ಭಾರ್ಗವನು ಚ್ಯವನನೆಂದು ಹೇಗೆ ಕರೆಯಲ್ಪಟ್ಟನು ಎನ್ನುವುದನ್ನು ಕೇಳುತ್ತಿರುವ ನನಗೆ ಹೇಳು.”

01005011 ಸೂತ ಉವಾಚ।
01005011a ಭೃಗೋಃ ಸುದಯಿತಾ ಭಾರ್ಯಾ ಪುಲೋಮೇತ್ಯಭಿವಿಶ್ರುತಾ।
01005011c ತಸ್ಯಾಂ ಗರ್ಭಃ ಸಮಭವದ್ಭೃಗೋರ್ವೀರ್ಯಸಮುದ್ಭವಃ।।

ಸೂತನು ಹೇಳಿದನು: “ಭೃಗುವಿನ ಪ್ರಿಯ ಭಾರ್ಯೆ ಪುಲೋಮ ಎಂದು ವಿಶ್ರುತಳಾಗಿದ್ದಳು. ಅವಳಲ್ಲಿ ಭೃಗುವಿನ ವೀರ್ಯಸಮುದ್ಭವ ಗರ್ಭವು ಬೆಳೆಯಿತು.

01005012a ತಸ್ಮಿನ್ಗರ್ಭೇ ಸಂಭೃತೇಽಥ10 ಪುಲೋಮಾಯಾಂ ಭೃಗೂದ್ವಹ।
01005012c ಸಮಯೇ ಸಮಶೀಲಿನ್ಯಾಂ ಧರ್ಮಪತ್ನ್ಯಾಂ ಯಶಸ್ವಿನಃ।।
01005013a ಅಭಿಷೇಕಾಯ ನಿಷ್ಕ್ರಾಂತೇ ಭೃಗೌ ಧರ್ಮಭೃತಾಂ ವರೇ।
01005013c ಆಶ್ರಮಂ ತಸ್ಯ ರಕ್ಷೋಽಥ ಪುಲೋಮಾಭ್ಯಾಜಗಾಮ ಹ।।

ಭೃಗೂದ್ವಹ! ಧರ್ಮಪತ್ನಿ, ಯಶಸ್ವಿನಿ, ಸಮಶೀಲೆ, ಪುಲೋಮೆಯು ಗರ್ಭಿಣಿಯಾಗಿದ್ದಾಗ ಒಮ್ಮೆ ಧರ್ಮಭೃತರಲ್ಲಿ ಶ್ರೇಷ್ಠ ಭೃಗುವು ಸ್ನಾನಕ್ಕೆಂದು ಹೋದಾಗ ಅವನ ಆಶ್ರಮಕ್ಕೆ ರಾಕ್ಷಸ ಪುಲೋಮನು ಆಗಮಿಸಿದನು.

01005014a ತಂ ಪ್ರವಿಶ್ಯಾಶ್ರಮಂ ದೃಷ್ಟ್ವಾ ಭೃಗೋರ್ಭಾರ್ಯಾಮನಿಂದಿತಾಂ।
01005014c ಹೃಚ್ಛಯೇನ ಸಮಾವಿಷ್ಟೋ ವಿಚೇತಾಃ ಸಮಪದ್ಯತ।।

ಆಶ್ರಮವನ್ನು ಪ್ರವೇಶಿಸಿ, ಅಲ್ಲಿ ಭೃಗುವಿನ ಅನಿಂದಿತೆ ಭಾರ್ಯೆಯನ್ನು ನೋಡಿ ಪುಲೋಮನು ಇಚ್ಛೆಯಿಂದ ಸಮಾವಿಷ್ಟನಾಗಿ ವಿವೇಕವೆಲ್ಲವನ್ನೂ ಕಳೆದುಕೊಂಡನು.

01005015a ಅಭ್ಯಾಗತಂ ತು ತದ್ರಕ್ಷಃ ಪುಲೋಮಾ ಚಾರುದರ್ಶನಾ।
01005015c ನ್ಯಮಂತ್ರಯತ ವನ್ಯೇನ ಫಲಮೂಲಾದಿನಾ ತದಾ।।

ಚಾರುದರ್ಶಿಣಿ ಪುಲೋಮಳು ಅತಿಥಿಯಾದ ಆ ರಾಕ್ಷಸನಿಗೆ ವನದಿಂದ ತಂದ ಫಲಮೂಲಾದಿಗಳನ್ನಿತ್ತು ಸ್ವಾಗತಿಸಿದಳು.

01005016a ತಾಂ ತು ರಕ್ಷಸ್ತತೋ ಬ್ರಹ್ಮನ್ ಹೃಚ್ಛಯೇನಾಭಿಪೀಡಿತಂ।
01005016c ದೃಷ್ಟ್ವಾ ಹೃಷ್ಟಮಭೂತ್ತತ್ರ ಜಿಹೀರ್ಷುಸ್ತಾಮನಿಂದಿತಾಂ।।

ಬ್ರಹ್ಮನ್! ಆ ಅನಿಂದಿತೆಯನ್ನು ಅಪಹರಿಸಲು ಬಯಸಿದ್ದ ಆ ಕಾಮಪೀಡಿತ ರಾಕ್ಷಸನು ಅವಳನ್ನು ನೋಡಿ ಹರ್ಷಿತನಾದನು.

01005017a 11ಅಥಾಗ್ನಿಶರಣೇಽಪಶ್ಯಜ್ಜ್ವಲಿತಂ ಜಾತವೇದಸಂ।
01005017c ತಮಪೃಚ್ಛತ್ತತೋ ರಕ್ಷಃ ಪಾವಕಂ ಜ್ವಲಿತಂ ತದಾ।।

ರಾಕ್ಷಸನು ಅಗ್ನಿಹೋತ್ರಶಾಲೆಯಲ್ಲಿ ಪ್ರಜ್ವಲಿಸುತ್ತಿದ್ದ ಜಾತವೇದಸ12ನನ್ನು ನೋಡಿ, ಅಗ್ನಿಯನ್ನು ನಮಸ್ಕರಿಸಿ, ಉರಿಯುತ್ತಿರುವ ಪಾವಕನನ್ನು ಕೇಳಿದನು:

01005018a ಶಂಸ ಮೇ ಕಸ್ಯ ಭಾರ್ಯೇಯಮಗ್ನೇ ಪೃಷ್ಟ ಋತೇನ ವೈ।
01005018c ಸತ್ಯಸ್ತ್ವಮಸಿ ಸತ್ಯಂ ಮೇ13 ವದ ಪಾವಕ ಪೃಚ್ಛತೇ।।

“ಅಗ್ನಿ! ಸತ್ಯದ ಶಪಥವನ್ನು ಹಾಕಿ ಕೇಳುತ್ತಿದ್ದೇನೆ, ಹೇಳು, ಇವಳು ಯಾರ ಭಾರ್ಯೆ? ಪಾವಕ! ನೀನು ಸತ್ಯನು. ಕೇಳುತ್ತಿರುವ ನನಗೆ ಸತ್ಯವನ್ನೇ ಹೇಳು.

01005019a ಮಯಾ ಹೀಯಂ ಪೂರ್ವವೃತಾ ಭಾರ್ಯಾರ್ಥೇ ವರವರ್ಣಿನೀ।
01005019c ಪಶ್ಚಾತ್ತ್ವಿಮಾಂ ಪಿತಾ ಪ್ರಾದಾದ್ಭೃಗವೇಽನೃತಕಾರಿಣೇ।।

ಹಿಂದೆ ಈ ವರವರ್ಣಿನಿಯನ್ನು ಭಾರ್ಯೆಯನ್ನಾಗಿ ನಾನೇ ವರಿಸಿದ್ದೆ. ಆದರೆ ನಂತರ ಇವಳ ತಂದೆಯು ಅದನ್ನು ಅಸತ್ಯವನ್ನಾಗಿಸಿ ಇವಳನ್ನು ಭೃಗುವಿಗೆ ಕೊಟ್ಟನು.

01005020a ಸೇಯಂ ಯದಿ ವರಾರೋಹಾ ಭೃಗೋರ್ಭಾರ್ಯಾ ರಹೋಗತಾ।
01005020c ತಥಾ ಸತ್ಯಂ ಸಮಾಖ್ಯಾಹಿ ಜಿಹೀರ್ಷಾಮ್ಯಾಶ್ರಮಾದಿಮಾಂ।।

ಏಕಾಂತದಲ್ಲಿರುವ ಈ ವರಾರೋಹೆಯು ಭೃಗುವಿನ ಭಾರ್ಯೆ ಎಂದಾದರೆ ಸತ್ಯವಾಗಿ ಹೇಳು. ಏಕೆಂದರೆ ನಾನು ಇವಳನ್ನು ಆಶ್ರಮದಿಂದ ಅಪಹರಿಸಲು ಬಯಸುತ್ತೇನೆ.

01005021a ಮನ್ಯುರ್ಹಿ ಹೃದಯಂ ಮೇಽದ್ಯ ಪ್ರದಹನ್ನಿವ ತಿಷ್ಠತಿ।
01005021c ಮತ್ಪೂರ್ವಭಾರ್ಯಾಂ ಯದಿಮಾಂ ಭೃಗುಃ ಪ್ರಾಪ ಸುಮಧ್ಯಮಾಂ।।

ಮೊದಲು ನನ್ನ ಭಾರ್ಯೆಯಾಗಿದ್ದ ಈ ಸುಮಧ್ಯಮೆಯನ್ನು ಭೃಗುವು ಪಡೆದುಕೊಂಡನೆಂದು ನನ್ನ ಹೃದಯವು ಸಿಟ್ಟಿನಿಂದ ಉರಿಯುತ್ತಿದೆ.”

01005022a ತದ್ರಕ್ಷ ಏವಮಾಮಂತ್ರ್ಯ ಜ್ವಲಿತಂ ಜಾತವೇದಸಂ।
01005022c ಶಂಕಮಾನೋ ಭೃಗೋರ್ಭಾರ್ಯಾಂ ಪುನಃ ಪುನರಪೃಚ್ಛತ।।

ಅವಳು ಭೃಗುವಿನ ಭಾರ್ಯೆಯೇ ಎಂದು ಶಂಕಿತನಾದ ರಾಕ್ಷಸನು ಈ ರೀತಿ ಜ್ವಲಿಸುತ್ತಿರುವ ಜಾತವೇದಸನನ್ನು ಪುನಃ ಪುನಃ ಕೇಳಿದನು.

01005023a ತ್ವಮಗ್ನೇ ಸರ್ವಭೂತಾನಾಮಂತಶ್ಚರಸಿ ನಿತ್ಯದಾ।
01005023c ಸಾಕ್ಷಿವತ್ಪುಣ್ಯಪಾಪೇಷು ಸತ್ಯಂ ಬ್ರೂಹಿ ಕವೇ ವಚಃ।।

“ಅಗ್ನಿ! ನೀನು ಸರ್ವಭೂತಗಳಲ್ಲಿ ನಿತ್ಯವೂ ಪಾಪ ಪುಣ್ಯಗಳ ಸಾಕ್ಷಿಯಾಗಿ ಸಂಚರಿಸುತ್ತೀಯೆ. ಕವೇ! ಸತ್ಯವನ್ನು ಹೇಳು!

01005024a ಮತ್ಪೂರ್ವಭಾರ್ಯಾಪಹೃತಾ ಭೃಗುಣಾನೃತಕಾರಿಣಾ।
01005024c ಸೇಯಂ ಯದಿ ತಥಾ ಮೇ ತ್ವಂ ಸತ್ಯಮಾಖ್ಯಾತುಮರ್ಹಸಿ।।

ಮೊದಲು ನನ್ನ ಭಾರ್ಯೆಯಾಗಿದ್ದವಳನ್ನು ಸುಳ್ಳಾಗಿ ನಡೆದುಕೊಳ್ಳುವ ಭೃಗುವು ಅಪಹರಿಸಿದ್ದಾನೆ. ಇದು ಹಾಗೆಯೇ ಆಗಿದ್ದರೆ ನೀನು ನನಗೆ ಸತ್ಯವನ್ನು ಹೇಳು!

01005025a ಶ್ರುತ್ವಾ ತ್ವತ್ತೋ ಭೃಗೋರ್ಭಾರ್ಯಾಂ ಹರಿಷ್ಯಾಮ್ಯಹಮಾಶ್ರಮಾತ್।
01005025c ಜಾತವೇದಃ ಪಶ್ಯತಸ್ತೇ ವದ ಸತ್ಯಾಂ ಗಿರಂ ಮಮ।।

ನಿನ್ನನ್ನು ಕೇಳೀದ ನಂತರವೇ ಭೃಗುವಿನ ಈ ಭಾರ್ಯೆಯನ್ನು ನೀನು ನೋಡುತ್ತಿದ್ದ ಹಾಗೆ ಈ ಆಶ್ರಮದಿಂದ ಎತ್ತಿಕೊಂಡು ಹೋಗುತ್ತೇನೆ. ಆದ್ದರಿಂದ ನನಗೆ ಸತ್ಯಮಾತನ್ನೇ ಹೇಳು.”

01005026a ತಸ್ಯ ತದ್ವಚನಂ ಶ್ರುತ್ವಾ ಸಪ್ತಾರ್ಚಿರ್ದುಃಖಿತೋ ಭೃಶಂ।
01005026c ಭೀತೋಽನೃತಾಚ್ಚ ಶಾಪಾಚ್ಚ ಭೃಗೋರಿತ್ಯಬ್ರವೀತ್ ಶನೈಃ।

ಅವನ ಈ ಮಾತುಗಳನ್ನು ಕೇಳಿದ ಸಪ್ತಾರ್ಚಿಯು ದುಃಖಿತನಾದನು. ಸುಳ್ಳುಹೇಳುವ ಭಯದಷ್ಟೇ ಭೃಗುವಿನ ಶಾಪಕ್ಕೂ ಭಯಪಟ್ಟು ಮೆಲ್ಲಗೇ ಇದನ್ನು ಹೇಳಿದನು14.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಪುಲೋಮಾಗ್ನಿಸಂವಾದೋ ನಾಮ ಪಂಚಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಪುಲೋಮಾಗ್ನಿಸಂವಾದವೆಂಬ ಐದನೆಯ ಅಧ್ಯಾಯವು.


  1. ದ್ವಿಜಶ್ರೇಷ್ಠೈರ್ಮಹಾತ್ಮಭಿಃ । ↩︎

  2. ಯಥಾ । ↩︎

  3. ತಾವಚ್ಛೃಣುಷ್ವ । ↩︎

  4. ಭಾರ್ಗವೋ । ↩︎

  5. ನೀಲಕಂಠೀಯದಲ್ಲಿ ಇದರ ಮೊದಲು ಈ ಶ್ಲೋಕವಿದೆ: ಭೃಗುರ್ಮಹರ್ಷಿರ್ಭಗವಾನ್ಬ್ರಹ್ಮಣಾ ವೈ ಸ್ವಯಂಭುವಾ। ವರುಣಸ್ಯ ಕ್ರತೌ ಜಾತಃ ಪಾವಕಾದಿತಿ ನಃ ಶೃತಮ್।। ಅರ್ಥಾತ್: ಭೃಗುಮಹರ್ಷಿಗಳು ಸಾಕ್ಷಾತ್ ಬ್ರಹ್ಮನು ಮಾಡಿದ ವಾರುಣಯಜ್ಞದ ಅಗ್ನಿಕುಂಡದಿಂದ ಉತ್ಪನ್ನರಾದರೆಂದು ನಾವು ಕೇಳಿದ್ದೇವೆ. ↩︎

  6. ಮಹರ್ಷಿ ಭೃಗುವು ಸಪ್ತಮಹಾಋಷಿಗಳಲ್ಲಿ ಒಬ್ಬನು. ಬ್ರಹ್ಮನ ಮಾನಸಪುತ್ರ. ಜ್ಯೋತಿಃಶಾಸ್ತ್ರ ಭೃಗುಸಂಹಿತವನ್ನು ರಚಿಸಿದವನು. ಭೃಗುವಿನ ವಂಶಜರಿಗೆ ಭಾರ್ಗವರೆಂಬ ಉಪನಾಮವಿದೆ. ದೃಶದ್ವತೀ ನದಿಯ ಉಪನದಿ ವಧೂಸರ ಎಂಬ ನದಿಯ ತೀರದಲ್ಲಿ, ಈಗಿನ ಹರಿಯಾಣ ಮತ್ತು ರಾಜಸ್ತಾನಗಳ ನಡುವೆ ಇರುವ ದೋಶೀ ಎಂಬ ಪರ್ವತದ ಬಳಿ ಭೃಗುವಿನ ಆಶ್ರಮವಿತ್ತು. ಸ್ಕಂದಪುರಾಣದ ಪ್ರಕಾರ ಭೃಗುವು ಪುಲೋಮಳಲ್ಲಿ ಹುಟ್ಟಿದ ತನ್ನ ಮಗ ಚ್ಯವನನನ್ನು ದೋಶೀ ಪರ್ವತದಲ್ಲಿ ಬಿಟ್ಟು ತಾನು ಈಗಿನ ಗುಜರಾತಿನ ನರ್ಮದಾ ನದೀ ತೀರದ ಬರೂಚಿನಲ್ಲಿರುವ ಭೃಗುಕೂಟಕ್ಕೆ ವಲಸೆಹೋದನು. ಅವನು ದಕ್ಷನ ಮಗಳು ಖ್ಯಾತಿಯನ್ನು ಮದುವೆಯಾಗಿ ಅವಳಿಂದ ಧಾತಾ ಮತ್ತು ವಿಧಾತರೆಂಬ ಎರಡು ಪುತ್ರರನ್ನು ಪಡೆದನು. ಅವನ ಮಗಳು ಭಾರ್ಗವಿಯು ನಾರಾಯಣ ವಿಷ್ಣುವನ್ನು ವಿವಾಹವಾದಳು. ಕಾವ್ಯ (ಉಶಾನ) ಳಲ್ಲಿ ಅವನಿಗೆ ಇನ್ನೊಬ್ಬ ಮಗ – ಅಸುರರ ಗುರು ಶುಕ್ರ ಅಥವಾ ಉಶಸನ – ಎನ್ನುವ, ಮಗನೂ ಇದ್ದನು. ವಿಷ್ಣುವಿನ ಅವತಾರವಾದ ಪರಶುರಾಮನ ತಂದೆ ಜಮದಗ್ನಿಯೂ ಭೃಗುವಿನ ವಂಶಜನೇ. ಒಮ್ಮೆ ಭೃಗುವು ತ್ರಿಮೂರ್ತಿಗಳಲ್ಲಿ ಯಾರು ಅತಿ ಶ್ರೇಷ್ಠರು ಎನ್ನುವುದನ್ನು ಪರೀಕ್ಷಿಸಲು ಪ್ರಯತ್ನಿಸಿದನು. ಪದ್ಮಪುರಾಣದ ಭೂಮಿಖಂಡದ 121ನೇ ಅಧ್ಯಾಯದ ಪ್ರಕಾರ ಒಮ್ಮೆ ವಿಷ್ಣುವು ಭೃಗುವಿನ ಯಜ್ಞವನ್ನು ರಕ್ಷಿಸುತ್ತೇನೆ ಎಂದು ಮಾತುಕೊಟ್ಟು, ಇಂದ್ರನ ಪ್ರಾರ್ಥನೆಯಂತೆ ದೈತ್ಯರೊಡನೆ ಯುದ್ಧಮಾಡಲು ಹೋದನು. ಆಗ ಕೊಟ್ಟ ಮಾತನ್ನು ಪಾಲಿಸದ ವಿಷ್ಣುವಿಗೆ ಭೃಗುವು – ಹತ್ತು ಜನ್ಮಗಳನ್ನು ಅನುಭವಿಸು – ಎಂಬ ಶಾಪವನ್ನಿತ್ತನೆಂದಿದೆ. ↩︎

  7. ತವ ಪೂರ್ವಪಿತಾಮಹಃ । ↩︎

  8. ಘೃತಾಚಿಯು ಓರ್ವ ಅಪ್ಸರೆ. ಋಷಿಭಾರದ್ವಾಜನು ಘೃತಾಚಿಯಲ್ಲಿ ಅನುರಕ್ತನಾದಾಗ ಕೌರವ-ಪಾಂಡವರ ಗುರು ಮತ್ತು ಅಶ್ವತ್ಥಾಮನ ತಂದೆ ದ್ರೋಣನು ಹುಟ್ಟಿದನು. ↩︎

  9. ನಿಯತಾಶನಃ । ↩︎

  10. ತಸ್ಮಿನ್ ಗರ್ಭೇಽಥ ಸಂಭೂತೇ ↩︎

  11. ಜಾತಮಿತ್ಯಬ್ರವೀತ್ಕಾರ್ಯಂ ಜಿಹೀಷುರ್ಮುದಿತಃ ಶುಭಾಂ। ಸಾ ಹಿ ಪೂರ್ವಂ ವೃತಾ ತೇನ ಪುಲೋಮ್ನಾ ತು ಶುಚಿಸ್ಮಿತಾ।। ತಾಂ ತು ಪ್ರಾದಾತ್ಪಿತಾ ಪಶ್ಚಾದ್ಭೃಗವೇ ಶಾಸ್ತ್ರವತ್ತದಾ। ತಸ್ಯ ತತ್ಕಿಲ್ಬಿಷಂ ನಿತ್ಯಂ ಹೃದಿ ವರ್ತತಿ ಭಾರ್ಗವ।। ಇದಮಂತರಮಿತ್ಯೇವಂ ಹರ್ತುಂ ಚಕ್ರೇ ಮನಸ್ತದಾ।। ಅರ್ಥಾತ್: ಆ ಶುಭೆಯನ್ನು ಕಂಡು ಆನಂದತುಂದಿಲನಾಗಿ ಅವಳನ್ನು ಅಪಹರಿಸಲು ನಿಶ್ಚಯಿಸಿದನು. ಏಕೆಂದರೆ ಹಿಂದೆ ಶುಚಿಸ್ಮಿತೆ ಪುಲೋಮೆಯನ್ನು ಅವನೇ ವರಿಸಿದ್ದನು. ಅದರ ನಂತರ ಅವಳ ತಂದೆಯು ಅವಳನ್ನು ಭೃಗುವಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದನು. ಭಾರ್ಗವ! ಅದು ಅವನ ಹೃದಯದಲ್ಲಿ ಯಾವಾಗಲೂ ನೆಟ್ಟಿತ್ತು. ಅವಳನ್ನು ಅಪಹರಿಸಲು ಇದೇ ಅವಕಾಶವೆಂದು ಅವನು ಮನಸ್ಸು ಮಾಡಿದನು. ↩︎

  12. ಅಗ್ನಿಗೆ ಎರಡು ಸ್ವರೂಪಗಳಿವೆ: ಜಾತವೇದ ಮತ್ತು ಕ್ರವ್ಯಾದ. ಜಾತವೇದ ಅರ್ಥಾತ್ ಎಲ್ಲ ಜೀವಿಗಳನ್ನು ಅರಿತವನು ಎನ್ನುವ ಶಬ್ಧವನ್ನು ಋಗ್ವೇದದಲ್ಲಿ ಅಗ್ನಿಯ ಇನ್ನೊಂದು ಹೆಸರಾಗಿ ಬಳಸಿದ್ದಾರೆ. ಆಯಾಯಾ ದೇವತೆಗಳಿಗೆ ನೀಡಿದ ಆಹುತಿಗಳನ್ನು (ಮಾಂಸವನ್ನು ಬಿಟ್ಟು) ದೇವತೆಗಳಿಗೆ ತಲುಪಿಸಬೇಕೆಂದು ಪ್ರಾರ್ಥಿಸಿ, ಆವಾಹಿಸಿದ ಅಗ್ನಿಗೆ ಜಾತವೇದಸ ಎನ್ನುತ್ತಾರೆ. ಋಗ್ವೇದದ ಪ್ರಕಾರ ಜಾತವೇದ ರೂಪದಲ್ಲಿ ಅಗ್ನಿಯು ಯಾಗದ ಪುರೋಹಿತನಾಗಿದ್ದು, ಪ್ರಾರ್ಥನೆಗಳೊಂದಿಗೆ ಆಹುತಿಗಳನ್ನು ದೇವತೆಗಳಿಗೆ ತಲುಪಿಸುವ ಮತ್ತು ದೇವತೆಗಳನ್ನು ಯಜ್ಞಕ್ಕೆ ಆಹ್ವಾನಿಸುವ ಕಾರ್ಯವನ್ನು ಮಾಡಿ ಮಾನವ ಮತ್ತು ದೇವತೆಗಳ ನಡುವಿನ ಮಧ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಾನೆ. ಸತ್ತ ಶರೀರಗಳ ಹೆಣಗಳನ್ನು ತಿನ್ನುವ ಅಗ್ನಿಯ ರೂಪ ಕ್ರವ್ಯಾದವೆನಿಸುತ್ತದೆ. ಶವಸಂಸ್ಕಾರದ ಸಮಯದಲ್ಲಿ ಶರೀರವನ್ನು ಸುಡುವ ಅಗ್ನಿಯೇ ಕ್ರವ್ಯಾದ. ಹೆಣಗಳನ್ನು ತಿನ್ನುವ ಅಗ್ನಿಯು ಎಲ್ಲವನ್ನೂ ತಿನ್ನಬಲ್ಲದು. ಅಗ್ನಿಗೆ ಪಾವಕ, ಸಪ್ತಾರ್ಚಿ, ವಹ್ನಿ, ಹುತಭುಕ್, ದೇವಮುಖ ಎನ್ನುವ ಇತರ ನಾಮಗಳೂ ಇವೆ. ವೇದಗಳಲ್ಲಿ ಇಂದ್ರನನ್ನು ಬಿಟ್ಟರೆ ಅಗ್ನಿಗೇ ಎರಡನೆಯ ಪ್ರಾಶಸ್ತ್ಯವನ್ನು ನೀಡಲಾಗಿದೆ. ಋಗ್ವೇದದ ಮೊದಲನೆಯ ಶ್ಲೋಕದ ಮೊದಲನೆಯ ಶಬ್ದವೇ ಅಗ್ನಿ. ↩︎

  13. ಮುಖಂ ತ್ವಮಸಿ ದೇವಾನಾಂ ↩︎

  14. ಅಗ್ನಿಯು ರಾಕ್ಷಸ ಪುಲೋಮನಿಗೆ ಏನು ಹೇಳಿದನೆನ್ನುವುದು ಗೋರಖಪುರ ಸಂಪುಟದ ಈ ಶ್ಲೋಕಗಳಲ್ಲಿದೆ: ಅಗ್ನಿರುವಾಚ। ತ್ವಯಾ ವೃತಾ ಪುಲೋಮೇಯಂ ಪೂರ್ವಂ ದಾನವನಂದನ। ಕಿಂತ್ವಿಯಂ ವಿಧಿನಾ ಪೂರ್ವಂ ಮಂತ್ರವನ್ನ ವೃತಾ ತ್ವಯಾ।। ಪಿತ್ರಾ ತು ಭೃಗವೇ ದತ್ತಾ ಪುಲೋಮೇಯಂ ಯಶಸ್ವಿನೀ। ದದಾತಿ ನ ಪಿತಾ ತುಭ್ಯಂ ವರಲೋಭಾನ್ಮಹಾಯಶಾಃ।। ಅಥೇಮಾಂ ವೇದದೃಷ್ಟೇನ ಕರ್ಮಣಾ ವಿಧಿಪೂರ್ವಕಂ। ಭಾರ್ಯಾಮೃಷಿರ್ಭೃಗುಃ ಪ್ರಾಪ ಮಾಂ ಪುರಸ್ಕೃತ್ಯ ದಾನವ।। ಸೇಯಮಿತ್ಯವಗಚ್ಛಾಮಿ ನಾನೃತಂ ವಕ್ತುಮುತ್ಸಹೇ। ನಾನೃತಂ ಹಿ ಸದಾ ಲೋಕೇ ಪೂಜ್ಯತೇ ದಾನವೋತ್ತಮ।। ಅರ್ಥಾತ್: ಅಗ್ನಿಯು ಹೇಳಿದನು – “ದಾನವನಂದನ! ಹಿಂದೆ ಪುಲೋಮೆಯನ್ನು ನೀನೇ ವರಿಸಿದ್ದೆ. ಆದರೆ ನೀನು ಅವಳನ್ನು ಮಂತ್ರಪೂರ್ವಕವಾಗಿ ವರಿಸಿರಲಿಲ್ಲ. ಇವಳ ತಂದೆಯು ವರಲೋಭದಿಂದ ಈ ಯಶಸ್ವಿನೀ ಮಹಾಯಶಸ್ವಿ ಪುಲೋಮೆಯನ್ನು ನಿನಗೆ ಕೊಡದೇ ಭೃಗುವಿಗೆ ಕೊಟ್ಟನು. ದಾನವ! ಆಗ ಭೃಗು ಮಹರ್ಷಿಯು ವೇದದಲ್ಲಿ ತೋರಿಸಿಕೊಟ್ಟ ಕರ್ಮಗಳ ಮೂಲಕ ವಿಧಿಪೂರ್ವಕವಾಗಿ ನನ್ನ ಸಮಕ್ಷಮದಲ್ಲಿ ಇವಳನ್ನು ಪಡೆದನು. ಇಷ್ಟೊಂದು ವಿಷಯಗಳು ನನಗೆ ತಿಳಿದಿವೆ. ಸುಳ್ಳನ್ನು ಹೇಳಲು ಬಯಸುವುದಿಲ್ಲ. ದಾನವೋತ್ತಮ! ಲೋಕದಲ್ಲಿ ಸುಳ್ಳಿಗೆ ಎಂದೂ ಗೌರವವಿಲ್ಲ!” ↩︎