004 ಕಥಾಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆದಿ ಪರ್ವ

ಪೌಲೋಮ ಪರ್ವ

ಅಧ್ಯಾಯ 4

ಸಾರ

ನೈಮಿಷಾರಣ್ಯಕ್ಕೆ ಉಗ್ರಶ್ರವನ ಆಗಮನ, ಋಷಿಗಳು ಕಥೆಗಳನ್ನು ಪ್ರಾರಂಭಿಸುವ ಮೊದಲು ಶೌನಕನ ಬರವನ್ನು ಕಾಯಲು ಕೇಳಿಕೊಳ್ಳುವುದು (1-7). ಆಹ್ನೀಕಗಳನ್ನು ಮುಗಿಸಿ ಶೌನಕನು ಸಭೆಗೆ ಬರುವುದು (8-11).

01004001A ಲೋಮಹರ್ಷಣಪುತ್ರ ಉಗ್ರಶ್ರವಾಃ ಸೂತಃ ಪೌರಾಣಿಕೋ ನೈಮಿಷಾರಣ್ಯೇ ಶೌನಕಸ್ಯ ಕುಲಪತೇರ್ದ್ವಾದಶವಾರ್ಷಿಕೇ ಸತ್ರೇ1 ಋಷೀನಭ್ಯಾಗತಾನುಪತಸ್ಥೇ।।

ಲೋಮಹರ್ಷಣ ಪುತ್ರ ಉಗ್ರಶ್ರವ ಸೂತ ಪೌರಾಣಿಕನು ನೈಮಿಷಾರಣ್ಯದಲ್ಲಿ ಕುಲಪತಿ ಶೌನಕನ ಹನ್ನೆರಡು ವರ್ಷಗಳ ಸತ್ರದಲ್ಲಿ ಸೇರಿದ್ದ ಋಷಿಗಳ ಮಧ್ಯೆ ಆಗಮಿಸಿದನು.

01004002A ಪೌರಾಣಿಕಃ ಪುರಾಣೇ ಕೃತಶ್ರಮಃ ಸ ತಾನ್ಕೃತಾಂಜಲಿರುವಾಚ।
01004002B ಕಿಂ ಭವಂತಃ ಶ್ರೋತುಮಿಚ್ಚಂತಿ।
01004002C ಕಿಮಹಂ ಬ್ರುವಾಣೀತಿ।।

ಶ್ರಮಪಟ್ಟು ಪುರಾಣಗಳಲ್ಲಿ ಪಾಂಡಿತ್ಯವನ್ನು ಪಡೆದಿದ್ದ ಪೌರಾಣಿಕನು ಅಂಜಲೀಬದ್ಧನಾಗಿ ಅವರನ್ನು ಕೇಳಿದನು: “ನೀವು ಏನನ್ನು ಕೇಳಲು ಬಯಸುತ್ತೀರಿ? ನಿಮಗೆ ಏನನ್ನು ಹೇಳಲಿ?”

01004003A ತಂ ಋಷಯ ಊಚುಃ।
01004003B ಪರಮಂ ಲೋಮಹರ್ಷಣೇ ಪ್ರಕ್ಷ್ಯಾಮಸ್ತ್ವಾಂ ವಕ್ಷ್ಯಸಿ ಚ ನಃ ಶುಶ್ರೂಷತಾಂ ಕಥಾಯೋಗಂ2
01004003C ತದ್ಭಗವಾಂಸ್ತು ತಾವಚ್ಛೌನಕೋಽಗ್ನಿಶರಣಮಧ್ಯಾಸ್ತೇ3।।

ಋಷಿಗಳು ಹೇಳಿದರು: “ಲೋಮಹರ್ಷಣ! ನೀನು ನಮಗೆ ಹೇಳುವ ಉತ್ತಮ ಕಥೆಗಳನ್ನು ಕೇಳಲು ಕಾತುರರಾಗಿದ್ದೇವೆ. ಆದರೆ ಸದ್ಯ ಶೌನಕನು ಅಗ್ನಿಪೂಜೆಯಲ್ಲಿ ನಿರತನಾಗಿದ್ದಾನೆ.

01004004a ಯೋಽಸೌ ದಿವ್ಯಾಃ ಕಥಾ ವೇದ ದೇವತಾಸುರಸಂಕಥಾಃ4
01004004c ಮನುಷ್ಯೋರಗಗಂಧರ್ವಕಥಾ ವೇದ ಚ ಸರ್ವಶಃ।।

ದೇವತೆ, ಅಸುರ, ಮನುಷ್ಯ, ಉರಗ, ಮತ್ತು ಗಂಧರ್ವರ ಸರ್ವ ದಿವ್ಯ ಕಥೆಗಳನ್ನೂ ಅವನು ತಿಳಿದಿದ್ದಾನೆ.

01004005a ಸ ಚಾಪ್ಯಸ್ಮಿನ್ಮಖೇ ಸೌತೇ ವಿದ್ವಾನ್ಕುಲಪತಿರ್ದ್ವಿಜಃ।
01004005c ದಕ್ಷೋ ಧೃತವ್ರತೋ ಧೀಮಾನ್ ಶಾಸ್ತ್ರೇ ಚಾರಣ್ಯಕೇ ಗುರುಃ।।
01004006a ಸತ್ಯವಾದೀ ಶಮಪರಸ್ತಪಸ್ವೀ ನಿಯತವ್ರತಃ।

ಸೌತಿ! ಆ ವಿದ್ವಾನ್ ದ್ವಿಜನು ಈ ಯಜ್ಞದ ಕುಲಪತಿ. ದಕ್ಷನೂ, ಧೃತವ್ರತನೂ, ಧೀಮಂತನೂ ಮತ್ತು ಶಾಸ್ತ್ರ ಅರಣ್ಯಕಗಳ ಗುರುವೂ ಆದ ಅವನು ಸತ್ಯವಾದಿ, ತಾಳ್ಮಿ, ತಪಸ್ವಿ, ಮತ್ತು ನಿಯತವ್ರತನು.

01004006c ಸರ್ವೇಷಾಮೇವ ನೋ ಮಾನ್ಯಃ ಸ ತಾವತ್ಪ್ರತಿಪಾಲ್ಯತಾಂ।।
01004007a ತಸ್ಮಿನ್ನಧ್ಯಾಸತಿ ಗುರಾವಾಸನಂ ಪರಮಾರ್ಚಿತಂ।
01004007c ತತೋ ವಕ್ಷ್ಯಸಿ ಯತ್ತ್ವಾಂ ಸ ಪ್ರಕ್ಷ್ಯತಿ ದ್ವಿಜಸತ್ತಮಃ।।

ನಮಗೆಲ್ಲರಿಗೂ ಮಾನ್ಯನಾದ ಅವನ ಬರವನ್ನು ಕಾಯಬೇಕು. ಅವನು ಈ ಪರಮಾರ್ಚಿತ ಗುರುವಿನ ಆಸನದಲ್ಲಿ ಕುಳಿತುಕೊಂಡಾಗ ಆ ದ್ವಿಜಸತ್ತಮನು ಏನನ್ನು ಕೇಳುತ್ತಾನೋ ಅದನ್ನೇ ಹೇಳು.”

01004008 ಸೂತ ಉವಾಚ।
01004008a ಏವಮಸ್ತು ಗುರೌ ತಸ್ಮಿನ್ನುಪವಿಷ್ಟೇ ಮಹಾತ್ಮನಿ।
01004008c ತೇನ ಪೃಷ್ಟಃ ಕಥಾಃ ಪುಣ್ಯಾ ವಕ್ಷ್ಯಾಮಿ ವಿವಿಧಾಶ್ರಯಾಃ।।

ಸೂತನು ಹೇಳಿದನು: “ಹಾಗೆಯೇ ಆಗಲಿ. ಈ ಗುರುಪೀಠದಲ್ಲಿ ಆ ಮಹಾತ್ಮನು ಕುಳಿತುಕೊಂಡ ನಂತರ ಅವನು ವಿವಿಧ ವಿಷಯಗಳ ಯಾವ ಪುಣ್ಯ ಕಥೆಯನ್ನು ಕೇಳಲು ಬಯಸುತ್ತಾನೋ ಅದನ್ನೇ ಹೇಳುತ್ತೇನೆ.”

01004009a ಸೋಽಥ ವಿಪ್ರರ್ಷಭಃ ಕಾರ್ಯಂ ಕೃತ್ವಾ ಸರ್ವಂ ಯಥಾಕ್ರಮಂ5
01004009c ದೇವಾನ್ವಾಗ್ಭಿಃ ಪಿತೄನದ್ಭಿಸ್ತರ್ಪಯಿತ್ವಾಜಗಾಮ ಹ।।
01004010a ಯತ್ರ ಬ್ರಹ್ಮರ್ಷಯಃ ಸಿದ್ಧಾಸ್ತ ಆಸೀನಾ ಯತವ್ರತಾಃ6
01004010c ಯಜ್ಮಾಯತನಮಾಶ್ರಿತ್ಯ ಸೂತಪುತ್ರಪುರಃಸ್ಸರಾಃ।।
01004011a ಋತ್ವಿಕ್ಷ್ವಥ ಸದಸ್ಯೇಷು ಸ ವೈ ಗೃಹಪತಿಸ್ತತಃ।
01004011c ಉಪವಿಷ್ಟೇಷೂಪವಿಷ್ಟಃ ಶೌನಕೋಽಥಾಬ್ರವೀದಿದಂ।।

ಅದೇ ಸಮಯಕ್ಕೆ ವಿಪ್ರರ್ಷಭನು ಯಥಾಕ್ರಮವಾಗಿ ಸರ್ವ ಕಾರ್ಯಗಳನ್ನು ಪೂರೈಸಿ, ದೇವತೆಗಳನ್ನು ಸ್ತುತಿಸಿ, ಪಿತೃಗಳಿಗೆ ತರ್ಪಣವನ್ನಿತ್ತು, ಸೂತಪುತ್ರನೊಂದಿಗೆ ಬ್ರಹ್ಮರ್ಷಿ ಸಿದ್ಧರು ಕುಳಿತಿದ್ದ ಯಜ್ಞ ಶಾಲೆಗೆ ಬಂದನು. ಋತ್ವಿಕರು ಮತ್ತು ಸದಸ್ಯರ ಮಧ್ಯದಲ್ಲಿ ಕುಳಿತುಕೊಂಡ ಗೃಹಪತಿ ಶೌನಕನು ಇದನ್ನು ಹೇಳಿದನು.

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಕಥಾಪ್ರವೇಶೋ ನಾಮ ಚತುರ್ಥೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಕಥಾಪ್ರವೇಶ ಎನ್ನುವ ನಾಲ್ಕನೆಯ ಅಧ್ಯಾಯವು.

  1. ಮಹಾಭಾರತದ ಮೊದಲನೇ ಅಧ್ಯಾಯದ ಮೊದಲನೇ ಶ್ಲೋಕ ಮತ್ತು ನಾಲ್ಕನೆಯ ಅಧ್ಯಾಯದ ಮೊದಲನೇ ಶ್ಲೋಕ ಇವೆರಡೂ ಒಂದೇ ಆಗಿವೆ ಮತ್ತು ಇವೆರಡೂ ಮಹಾಭಾರತ ಕಥೆಯ ಎರಡು ಪ್ರಾರಂಭಗಳನ್ನು ಸೂಚಿಸುತ್ತವೆ ಎನ್ನುವುದನ್ನು ಗಮನಿಸಬೇಕು. ಈ ರೀತಿಯ ಎರಡು ಪ್ರಾರಂಭಗಳು ಆಕಸ್ಮಿಕವಾಗಿಲ್ಲ ಮತ್ತು ಇದು ಮಹಾಭಾರತದ ಆಕಾರ, ವಸ್ತು ಮತ್ತು ಕಾರ್ಯದ ಒಂದು ಅವಿಭಾಜ್ಯ ಅಂಗ ಎಂದು ಮಹಾಭಾರತದ ಪಂಡಿತರಲ್ಲೊಬ್ಬರಾದ ವಿಶ್ವ ಪಿ. ಅಡ್ಲೂರಿ ಅವರು ವಾದಿಸಿದ್ದಾರೆ (Vishwa P. Adluri, Frame Narratives and Forked Beginnings: Or, How to Read the Adiparvan, Journal of Vaishnava Studies) ↩︎

  2. ಪರಮಂ ಲೋಮಹರ್ಷಣೇ ವಕ್ಷ್ಯಮಾಸ್ತ್ವಾಂ ನ ಪ್ರತಿವಕ್ಷ್ಯಸಿ ವಚಃಶುಶ್ರೂಷತಾಂ ಕಥಾಯೋಗಂ ನಃ ಕಥಾಯೋಗೇ। ಅರ್ಥಾತ್: “ಲೋಮಹರ್ಷಣೇ! ನಾವು ಯೋಗ್ಯ ಕಥೆಯನ್ನು ಹೇಳುವುದಕ್ಕೇ ಕೇಳಿಕೊಳ್ಳುತ್ತೇವೆ. ಯೋಗ್ಯ ಕಥೆಗಳನ್ನು ಕೇಳಲು ಉತ್ಸುಕರಾಗಿರುವ ನಮಗೆ ಅವುಗಳನ್ನು ಹೇಳುವೆಯಂತೆ.” ↩︎

  3. ತತ್ರ ಭವಾನ್ ಕುಲಪತಿಸ್ತು ಶೌನಕೋಽಗ್ನಿಶರಣಮಧ್ಯಾಸ್ತೇ। ↩︎

  4. ದೇವತಾಸುರಸಂಶ್ರಿತಾಃ । ↩︎

  5. ಸೋಽಥ ವಿಪ್ರರ್ಷಭಃ ಸರ್ವಂ ಕೃತ್ವಾ ಕಾರ್ಯಂ ಯಥಾವಿಧಿ। ↩︎

  6. ಯತ್ರ ಬ್ರಹ್ಮರ್ಷಯಃ ಸಿದ್ಧಾಃ ಸುಖಾಸೀನಾ ಧೃತವ್ರತಾಃ। ↩︎