ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ
ಪೌಷ್ಯ ಪರ್ವ
ಅಧ್ಯಾಯ 3
ಸಾರ
ಮಗನನ್ನು ಹೊಡೆದುದಕ್ಕಾಗಿ ಸುರಮೆಯು ಜನಮೇಜಯನಿಗೆ ಶಾಪವನ್ನಿತ್ತುದುದು (1-10). ಜನಮೇಜಯನು ಈ ಶಾಪದಿಂದ ಮುಕ್ತನಾಗಲು ಪುರೋಹಿತನನ್ನು ಪಡೆಯುವುದು (11-18). ಧೌಮ್ಯನ ಶಿಷ್ಯ ಆರುಣಿಯ ಕಥೆ (19-31). ಧೌಮ್ಯನ ಶಿಷ್ಯ ಉಪಮನ್ಯುವಿನ ಕಥೆ ಮತ್ತು ಅಶ್ವಿನೀ ದೇವತೆಗಳ ಸ್ತುತಿ (32-78). ಧೌಮ್ಯನ ಶಿಷ್ಯ ವೇದನ ಕಥೆ (79-87). ವೇದನ ಶಿಷ್ಯ ಉತ್ತಂಕನು ಗುರುಪತ್ನಿಗೆ ಪೌಷ್ಯರಾಜಪತ್ನಿಯಲ್ಲಿರುವ ಕುಂಡಲಗಳನ್ನು ತರಲು ಹೋದುದು (88-137). ತಕ್ಷಕನು ಕುಂಡಲಗಳನ್ನು ಅಪಹರಿಸಿದುದು ಮತ್ತು ಅವುಗಳನ್ನು ಇಂದ್ರನ ಸಹಾಯದಿಂದ ಹಿಂದೆ ಪಡೆದು ಗುರುಪತ್ನಿಗೆ ನೀಡಿದುದು (138-184). ಉತ್ತಂಕನು ಜನಮೇಜಯನಿಗೆ ಸರ್ಪಸತ್ರವನ್ನು ಕೈಗೊಳ್ಳಲು ಪ್ರಚೋದಿಸಿದುದು (185-195).
01003001 ಸೂತ ಉವಾಚ।
01003001A ಜನಮೇಜಯಃ ಪಾರಿಕ್ಷಿತಃ ಸಹ ಭ್ರಾತೃಭಿಃ ಕುರುಕ್ಷೇತ್ರೇ ದೀರ್ಘಸತ್ರಮುಪಾಸ್ತೇ।
01003001B ತಸ್ಯ ಭ್ರಾತರಸ್ತ್ರಯಃ ಶ್ರುತಸೇನ ಉಗ್ರಸೇನೋ ಭೀಮಸೇನ ಇತಿ।।
ಸೂತನು ಹೇಳಿದನು: “ಪರಿಕ್ಷಿತನ ಮಗ ಜನಮೇಜಯನು ಕುರುಕ್ಷೇತ್ರದಲ್ಲಿ ಸಹೋದರರೊಡನೆ ಒಂದು ದೀರ್ಘಯಾಗ1ದಲ್ಲಿ ತೊಡಗಿದ್ದನು. ಶ್ರುತಸೇನ, ಉಗ್ರಸೇನ ಮತ್ತು ಭೀಮಸೇನ ಎನ್ನುವವರು ಅವನ ಮೂವರು ಸಹೋದರರು.
01003002A ತೇಷು ತತ್ಸತ್ರಂ ಉಪಾಸೀನೇಷು ತತ್ರ ಶ್ವಾಭ್ಯಾಗಚ್ಛತ್ಸಾರಮೇಯಃ।
01003002B ಸ ಜನಮೇಜಯಸ್ಯ ಭ್ರಾತೃಭಿರಭಿಹತೋ ರೋರೂಯಮಾಣೋ ಮಾತುಃ ಸಮೀಪಮುಪಾಗಚ್ಛತ್।।
ಅವರು ಆ ಸತ್ರದಲ್ಲಿ ಉಪಸ್ಥಿತರಿರಲು ಅಲ್ಲಿಗೆ ಶ್ವಾನ2 ಸಾರಮೇಯ3ನು ಆಗಮಿಸಿದನು. ಜನಮೇಜಯನ ತಮ್ಮಂದಿರಿಂದ ಪೆಟ್ಟುತಿಂದ ಅವನು ರೋದಿಸುತ್ತಾ ತನ್ನ ತಾಯಿಯ ಬಳಿ ಹೋದನು.
01003003A ತಂ ಮಾತಾ ರೋರೂಯಮಾಣಮುವಾಚ।
01003003B ಕಿಂ ರೋದಿಷಿ।
01003003C ಕೇನಾಸ್ಯಭಿಹತ ಇತಿ।।
ರೋದಿಸುತ್ತಿರುವ ಮಗನನ್ನುದ್ದೇಶಿಸಿ ತಾಯಿಯು ಕೇಳಿದಳು: “ಏಕೆ ರೋದಿಸುತ್ತಿರುವೆ? ನಿನಗೆ ಯಾರು ಹೊಡೆದರು?”
01003004A ಸ ಏವಮುಕ್ತೋ ಮಾತರಂ ಪ್ರತ್ಯುವಾಚ।
01003004B ಜನಮೇಜಯಸ್ಯ ಭ್ರಾತೃಭಿರಭಿಹತೋಽಸ್ಮೀತಿ।।
ತಾಯಿಯಿಂದ ಈ ರೀತಿ ಪ್ರಶ್ನೆಗೊಳಗಾದ ಅವನು ಉತ್ತರಿಸಿದನು: “ಜನಮೇಜಯನ ತಮ್ಮಂದಿರು ನನ್ನನ್ನು ಹೊಡೆದರು.”
01003005A ತಂ ಮಾತಾ ಪ್ರತ್ಯುವಾಚ।
01003005B ವ್ಯಕ್ತಂ ತ್ವಯಾ ತತ್ರಾಪರಾದ್ಧಂ ಯೇನಾಸ್ಯಭಿಹತ ಇತಿ।।
ತಾಯಿಯು ಅವನಿಗೆ ಪುನಃ ಹೇಳಿದಳು: “ನೀನು ಅಪರಾಧವನ್ನೆಸಗಿರುವುದರಿಂದ ಅವರು ನಿನಗೆ ಹೊಡೆದರೆನ್ನುವುದು ವ್ಯಕ್ತವಾಗುತ್ತಿದೆ.”
01003006A ಸ ತಾಂ ಪುನರುವಾಚ।
01003006B ನಾಪರಾಧ್ಯಾಮಿ ಕಿಂಚಿತ್।
01003006C ನಾವೇಕ್ಷೇ ಹವೀಂಷಿ ನಾವಲಿಹ ಇತಿ।।
ಅವನು ಅವಳಿಗೆ ಪುನಃ ಹೇಳಿದನು: “ನಾನೇನೂ ಅಪರಾಧವನ್ನು ಮಾಡಿಲ್ಲ. ಹವಿಸ್ಸಿನ ಕಡೆ ನೋಡಲೂ ಇಲ್ಲ; ಅದನ್ನು ನೆಕ್ಕಲೂ ಇಲ್ಲ.”
01003007A ತಚ್ಛ್ರುತ್ವಾ ತಸ್ಯ ಮಾತಾ ಸರಮಾ ಪುತ್ರಶೋಕಾರ್ತಾ ತತ್ಸತ್ರಮುಪಾಗಚ್ಛದ್ಯತ್ರ ಸ ಜನಮೇಜಯಃ ಸಹ ಭ್ರಾತೃಭಿರ್ದೀರ್ಘಸತ್ರಮುಪಾಸ್ತೇ।।
ಅದನ್ನು ಕೇಳಿದ ಅವನ ಮಾತೆ ಸರಮೆಯು ಪುತ್ರಶೋಕಾರ್ತಳಾಗಿ ತಮ್ಮಂದಿರೊಂದಿಗೆ ಜನಮೇಜಯನು ಉಪಸ್ಥಿತನಿದ್ದ ದೀರ್ಘಸತ್ರಕ್ಕೆ ಆಗಮಿಸಿದಳು.
01003008A ಸ ತಯಾ ಕ್ರುದ್ಧಯಾ ತತ್ರೋಕ್ತಃ।
01003008B ಅಯಂ ಮೇ ಪುತ್ರೋ ನ ಕಿಂಚಿದಪರಾಧ್ಯತಿ।
01003008C ಕಿಮರ್ಥಮಭಿಹತ ಇತಿ।
01003008D 4ಯಸ್ಮಾಚ್ಚಾಯಮಭಿಹತೋಽನಪಕಾರೀ ತಸ್ಮಾದದೃಷ್ಟಂ ತ್ವಾಂ ಭಯಮಾಗಮಿಷ್ಯತೀತಿ।।
ಕ್ರುದ್ಧಳಾದ ಅವಳು ಅವನಿಗೆ ಹೇಳಿದಳು: “ಈ ನನ್ನ ಪುತ್ರನು ಯಾವ ಅಪರಾಧವನ್ನೂ ಮಾಡಿಲ್ಲ. ಏಕೆ ಹೊಡೆದಿರಿ? ಅನಪರಾಧಿಯಾದ ಇವನನ್ನು ಹೇಗೆ ಹೊಡೆದಿರೋ ಹಾಗೆ ನಿಮಗೂ ಕೂಡ ಅದೃಷ್ಟ ಭಯ5ವು ಉಂಟಾಗುತ್ತದೆ!”
01003009A ಸ ಜನಮೇಜಯ ಏವಮುಕ್ತೋ ದೇವಶುನ್ಯಾ ಸರಮಯಾ ದೃಢಂ ಸಂಭ್ರಾಂತೋ ವಿಷಣ್ಣಶ್ಚಾಸೀತ್।।
ದೇವನಾಯಿ ಸರಮೆಯು ದೃಢವಾದ ಈ ಮಾತನ್ನಾಡಲು ಜನಮೇಜಯನು ಸಂಭ್ರಾಂತನಾಗಿ ವಿಷಣ್ಣನಾದನು.
01003010A ಸ ತಸ್ಮಿನ್ಸತ್ರೇ ಸಮಾಪ್ತೇ ಹಾಸ್ತಿನಪುರಂ ಪ್ರತ್ಯೇತ್ಯ ಪುರೋಹಿತಮನುರೂಪಮನ್ವಿಚ್ಛಮಾನಃ ಪರಂ ಯತ್ನಮಕರೋದ್ಯೋ ಮೇ ಪಾಪಕೃತ್ಯಾಂ ಶಮಯೇದಿತಿ।।
ಆ ಸತ್ರವನ್ನು ಸಮಾಪ್ತಿಗೊಳಿಸಿ ಅವನು ಹಸ್ತಿನಾಪುರಕ್ಕೆ ಮರಳಿ, ತನ್ನ ಪಾಪಕೃತ್ಯಗಳನ್ನು ಶಾಂತಗೊಳಿಸುವ ಅನುರೂಪ ಪುರೋಹಿತನನ್ನು ಪಡೆಯುವ ಪರಮ ಯತ್ನವನ್ನು ನಡೆಸಿದನು.
01003011A ಸ ಕದಾ ಚಿನ್ಮೃಗಯಾಂ ಯಾತಃ6 ಪಾರಿಕ್ಷಿತೋ ಜನಮೇಜಯಃ ಕಸ್ಮಿಂಶ್ಚಿತ್ಸ್ವವಿಷಯೋದ್ದೇಶೇ7 ಆಶ್ರಮಮಪಶ್ಯತ್।।
ಒಮ್ಮೆ ಬೇಟೆಗೆಂದು ಹೋಗಿದ್ದ ಪರಿಕ್ಷಿತನ ಮಗ ಜನಮೇಜಯನು ತನ್ನ ರಾಜ್ಯದ ಗಡಿಯ ಒಳಗೇ ಇದ್ದ ಒಂದು ಆಶ್ರಮವನ್ನು ಕಂಡನು.
01003012A ತತ್ರ ಕಶ್ಚಿದೃಷಿರಾಸಾಂ ಚಕ್ರೇ ಶ್ರುತಶ್ರವಾ ನಾಮ।
01003012B ತಸ್ಯಾಭಿಮತಃ8 ಪುತ್ರ ಆಸ್ತೇ ಸೋಮಶ್ರವಾ ನಾಮ।।
ಅಲ್ಲಿ ಶ್ರುತಶ್ರವ9 ಎಂಬ ಹೆಸರಿನ ಓರ್ವ ಋಷಿಯೊಬ್ಬನು ಸೋಮಶ್ರವ ಎಂಬ ಹೆಸರಿನ ತನ್ನ ಮಾತನ್ನೇ ಕೇಳುವ ಪುತ್ರನೊಂದಿಗೆ ವಾಸಿಸುತ್ತಿದ್ದನು.
01003013A ತಸ್ಯ ತಂ ಪುತ್ರಮಭಿಗಮ್ಯ ಜನಮೇಜಯಃ ಪಾರಿಕ್ಷಿತಃ ಪೌರೋಹಿತ್ಯಾಯ ವವ್ರೇ।।
ಅವನ ಬಳಿಸಾರಿ ಪಾರಿಕ್ಷಿತ ಜನಮೇಜಯನು ಅವನ ಮಗನಗನ್ನು ಪೌರೋಹಿತ್ಯಕ್ಕಾಗಿ ಕೇಳಿದನು.
01003014A ಸ ನಮಸ್ಕೃತ್ಯ ತಂ ಋಷಿಮುವಾಚ।
01003014B ಭಗವನ್ನಯಂ ತವ ಪುತ್ರೋ ಮಮ ಪುರೋಹಿತೋಽಸ್ತ್ವಿತಿ।।
ಆ ಋಷಿಯನ್ನು ನಮಸ್ಕರಿಸಿ ಹೇಳಿದನು: “ಭಗವನ್! ನಿನ್ನ ಪುತ್ರನು ನನ್ನ ಪುರೋಹಿತನಾಗಲಿ.”
01003015A ಸ ಏವಮುಕ್ತಃ ಪ್ರತ್ಯುವಾಚ10।
01003015B ಭೋ ಜನಮೇಜಯ ಪುತ್ರೋಽಯಂ ಮಮ ಸರ್ಪ್ಯಾಂ ಜಾತಃ।
01003015C ಮಹಾತಪಸ್ವೀ ಸ್ವಾಧ್ಯಾಯಸಂಪನ್ನೋ ಮತ್ತಪೋವೀರ್ಯಸಂಭೃತೋ ಮಚ್ಛುಕ್ರಂ ಪೀತವತ್ಯಾಸ್ತಸ್ಯಾಃ ಕುಕ್ಷೌ ಸಂವೃದ್ಧಃ11।
ಹೀಗೆ ಹೇಳಲು ಅವನು ಉತ್ತರಿಸಿದನು: “ಭೋ! ಜನಮೇಜಯ! ನನ್ನ ಈ ಮಗನು ಸರ್ಪದಲ್ಲಿ ಹುಟ್ಟಿದವನು. ನನ್ನ ವೀರ್ಯವನ್ನು ಕುಡಿದ ಸರ್ಪವೊಂದರ ಗರ್ಭದಲ್ಲಿ ನನ್ನ ತಪೋವೀರ್ಯದಿಂದ ಜನಿಸಿದ ಇವನು12 ಮಹಾತಪಸ್ವಿ ಮತ್ತು ಸ್ವಾಧ್ಯಾಯಸಂಪನ್ನನು.
01003015D ಸಮರ್ಥೋಽಯಂ ಭವತಃ ಸರ್ವಾಃ ಪಾಪಕೃತ್ಯಾಃ ಶಮಯಿತುಮಂತರೇಣ ಮಹಾದೇವಕೃತ್ಯಾಂ।
ಮಹಾದೇವನ ವಿರುದ್ಧ ಕರ್ಮಗಳನ್ನು ಬಿಟ್ಟು ನಿನ್ನ ಉಳಿದೆಲ್ಲ ಪಾಪಕೃತ್ಯಗಳನ್ನೂ ಶಾಂತಗೊಳಿಸಲು ಇವನು ಸಮರ್ಥನು.
01003015E ಅಸ್ಯ ತ್ವೇಕಮುಪಾಂಶುವ್ರತಂ।
01003015F ಯದೇನಂ ಕಶ್ಚಿದ್ಬ್ರಾಹ್ಮಣಃ ಕಂಚಿದರ್ಥಮಭಿಯಾಚೇತ್ತಂ ತಸ್ಮೈ ದದ್ಯಾದಯಂ।
01003015G ಯದ್ಯೇತದುತ್ಸಹಸೇ ತತೋ ನಯಸ್ವೈನಮಿತಿ।।
ಆದರೆ ಅವನು ಒಂದು ವ್ರತವನ್ನು ಪರಿಪಾಲಿಸುತ್ತಾನೆ. ಬ್ರಾಹ್ಮಣ ಯಾರೇ ಆಗಿರಲಿ, ಏನು ಕೇಳಿದರೂ ಅದನ್ನು ಇವನು ಕೊಟ್ಟುಬಿಡುತ್ತಾನೆ13. ಒಂದುವೇಳೆ ಇದನ್ನು ಸಹಿಸಿಕೊಳ್ಳುವೆಯಾದರೆ ಇವನನ್ನು ಕರೆದುಕೊಂಡು ಹೋಗು.”
01003016A ತೇನೈವಮುಕ್ತೋ ಜನಮೇಜಯಸ್ತಂ ಪ್ರತ್ಯುವಾಚ।
01003016B ಭಗವಂಸ್ತಥಾ ಭವಿಷ್ಯತೀತಿ।।
01003017A ಸ ತಂ ಪುರೋಹಿತಮುಪಾದಾಯೋಪಾವೃತ್ತೋ ಭ್ರಾತೄನುವಾಚ।
01003017B ಮಯಾಯಂ ವೃತ ಉಪಾಧ್ಯಾಯಃ।
01003017C ಯದಯಂ ಬ್ರೂಯಾತ್ತತ್ಕಾರ್ಯಮವಿಚಾರಯದ್ಭಿರಿತಿ।।
ಅವನು ಹೀಗೆ ಹೇಳಲು ಜನಮೇಜಯನು ಉತ್ತರಿಸಿದನು: “ಭಗವನ್! ಹಾಗೆಯೇ ಆಗಲಿ!” ಅವನು ಆ ಪುರೋಹಿತನನ್ನು ಕರೆದುಕೊಂಡು ಹಿಂದಿರುಗಿ ತನ್ನ ತಮ್ಮಂದಿರಿಗೆ ಹೇಳಿದನು: “ಇವನನ್ನು ಉಪಾಧ್ಯಾಯನನ್ನಾಗಿ ಆರಿಸಿದ್ದೇನೆ. ಇವನು ಹೇಳಿದುದನ್ನೆಲ್ಲಾ ವಿಚಾರಮಾಡದೇ ಮಾಡಬೇಕು.”
01003018A ತೇನೈವಮುಕ್ತಾ ಭ್ರಾತರಸ್ತಸ್ಯ ತಥಾ ಚಕ್ರುಃ।
01003018B ಸ ತಥಾ ಭ್ರಾತೄನ್ಸಂದಿಶ್ಯ ತಕ್ಷಶಿಲಾಂ ಪ್ರತ್ಯಭಿಪ್ರತಸ್ಥೇ।
01003018C ತಂ ಚ ದೇಶಂ ವಶೇ ಸ್ಥಾಪಯಾಮಾಸ।।
ಅವನು ಹೇಳಿದಹಾಗೆಯೇ ಅವನ ಸಹೋದರರು ಮಾಡಿದರು. ಈ ರೀತಿ ತಮ್ಮಂದಿರಿಗೆ ಆದೇಶವನ್ನು ನೀಡಿ ಅವನು ತಕ್ಷಶಿಲೆಗೆ ಹೋದನು. ಆ ದೇಶದಲ್ಲಿ ತನ್ನ ಆಡಳಿತವನ್ನು ಸ್ಥಾಪಿಸಿದನು.
01003019A ಏತಸ್ಮಿನ್ನಂತರೇ ಕಶ್ಚಿದೃಷಿರ್ಧೌಮ್ಯೋ ನಾಮಾಯೋದಃ।
01003019B ತಸ್ಯ ಶಿಷ್ಯಾಸ್ತ್ರಯೋ ಬಭೂವುರುಪಮನ್ಯುರಾರುಣಿರ್ವೇದಶ್ಚೇತಿ।।
ಈ ಮದ್ಯದಲ್ಲಿ ಆಯೋದ ಧೌಮ್ಯ14 ಎಂಬ ಹೆಸರಿನ ಋಷಿಯೋರ್ವನಿದ್ದನು. ಅವನಿಗೆ ಮೂವರು ಶಿಷ್ಯರು: ಉಪಮನ್ಯು, ಆರುಣಿ ಮತ್ತು ವೇದ ಎಂದು.
01003020A ಸ ಏಕಂ ಶಿಷ್ಯಮಾರುಣಿಂ ಪಾಂಚಾಲ್ಯಂ ಪ್ರೇಷಯಾಮಾಸ।
01003020B ಗಚ್ಛ ಕೇದಾರಖಂಡಂ ಬಧಾನೇತಿ।।
ಒಂದು ದಿನ ಅವನು ಶಿಷ್ಯ ಆರುಣಿ ಪಾಂಚಾಲ್ಯನನ್ನು “ಹೋಗು. ಭತ್ತದ ಗದ್ದೆಗೆ ಒಡ್ಡನ್ನು ಕಟ್ಟು!” ಎಂದು ಕಳುಹಿಸಿದನು.
01003021A ಸ ಉಪಾಧ್ಯಾಯೇನ ಸಂದಿಷ್ಟ ಆರುಣಿಃ ಪಾಂಚಾಲ್ಯಸ್ತತ್ರ ಗತ್ವಾ ತತ್ಕೇದಾರಖಂಡಂ ಬದ್ಧುಂ ನಾಶಕ್ನೋತ್15।।
01003022A ಸ ಕ್ಲಿಶ್ಯಮಾನೋಽಪಶ್ಯದುಪಾಯಂ।
01003022B ಭವತ್ವೇವಂ ಕರಿಷ್ಯಾಮೀತಿ।।
01003023A ಸ ತತ್ರ ಸಂವಿವೇಶ ಕೇದಾರಖಂಡೇ।
01003023B ಶಯಾನೇ16 ತಸ್ಮಿಂಸ್ತದುದಕಂ ತಸ್ಥೌ।।
ಉಪಾಧ್ಯಾಯನಿಂದ ಈ ರೀತಿ ಆದೇಶಪಡೆದ ಪಾಂಚಾಲ ಆರುಣಿಯು ಅಲ್ಲಿಗೆ ಹೋದನು. ಆದರೆ ಭತ್ತದ ಗದ್ದೆಗೆ ಒಡ್ಡನ್ನು ಹಾಕಲು ಅವನಿಗೆ ಸಾದ್ಯವಾಗಲಿಲ್ಲ. “ಕಷ್ಟವಾಯಿತಲ್ಲ!” ಎಂದು ಯೋಚಿಸುತ್ತಿರುವಾಗ ಒಂದು ಉಪಾಯವನ್ನು ಕಂಡನು. “ಈ ರೀತಿ ಮಾಡುತ್ತೇನೆ” ಎಂದು ಅವನು ಭತ್ತದ ಗದ್ದೆಯಲ್ಲಿ ನೀರು ಹರಿಯುವಲ್ಲಿ ಅಡ್ಡಾಗಿ ಮಲಗಿಕೊಂಡನು.
01003024A ತತಃ ಕದಾಚಿದುಪಾಧ್ಯಾಯ ಆಯೋದೋ ಧೌಮ್ಯಃ ಶಿಷ್ಯಾನಪೃಚ್ಛತ್।
01003024B ಕ್ವ ಆರುಣಿಃ ಪಾಂಚಾಲ್ಯೋ ಗತ ಇತಿ।।
ಸ್ವಲ್ಪ ಸಮಯದ ನಂತರ ಆಯೋದ ಧೌಮ್ಯನು ಶಿಷ್ಯರನ್ನು ಕೇಳಿದನು: “ಪಾಂಚಾಲ ಆರುಣಿಯು ಎಲ್ಲಿ ಹೋಗಿದ್ದಾನೆ?”
01003025A ತೇ17 ಪ್ರತ್ಯೂಚುಃ।
01003025B ಭಗವತೈವ18 ಪ್ರೇಷಿತೋ ಗಚ್ಛ ಕೇದಾರಖಂಡಂ ಬಧಾನೇತಿ।।
ಅವರು ಉತ್ತರಿಸಿದರು: “ನೀವೇ ಕಳುಹಿಸಿದಂತೆ ಅವನು ಭತ್ತದ ಗದ್ದೆಗೆ ಒಡ್ಡನ್ನು ಕಟ್ಟಲು ಹೋಗಿದ್ದಾನೆ.”
01003026A ಸ ಏವಮುಕ್ತಸ್ತಾಂ ಶಿಷ್ಯಾನ್ ಪ್ರತ್ಯುವಾಚ।
01003026B ತಸ್ಮಾತ್ಸರ್ವೇ ತತ್ರ ಗಚ್ಛಾಮೋ ಯತ್ರ ಸ ಇತಿ19।।
01003027A ಸ ತತ್ರ ಗತ್ವಾ ತಸ್ಯಾಹ್ವಾನಾಯ ಶಬ್ದಂ ಚಕಾರ।
01003027B ಭೋ ಆರುಣೇ ಪಾಂಚಾಲ್ಯ ಕ್ವಾಸಿ।
01003027C ವತ್ಸೈಹೀತಿ।।
ಶಿಷ್ಯರು ಹೀಗೆ ಹೇಳಲು ಅವನು ಉತ್ತರಿಸಿದನು: “ಆದುದರಿಂದ ಎಲ್ಲರೂ ಅವನಿರುವಲ್ಲಿಗೆ ಹೋಗೋಣ!” ಅವನು ಅಲ್ಲಿಗೆ ಹೋಗಿ ಗಟ್ಟಿ ಧ್ವನಿಯಲ್ಲಿ ಕೂಗಿ ಕರೆದನು: “ಭೋ! ಪಾಂಚಾಲ್ಯ ಆರುಣೀ! ಎಲ್ಲಿದ್ದೀಯೆ? ವತ್ಸ! ಬಾ!” ಎಂದು.
01003028A ಸ ತಚ್ಛ್ರುತ್ವಾ ಆರುಣಿರುಪಾಧ್ಯಾಯವಾಕ್ಯಂ ತಸ್ಮಾತ್ಕೇದಾರಖಂಡಾತ್ಸಹಸೋತ್ಥಾಯ ತಮುಪಾಧ್ಯಾಯಮುಪತಸ್ಥೇ।
01003028B ಪ್ರೋವಾಚ ಚೈನಂ।
01003028C ಅಯಮಸ್ಮ್ಯತ್ರ ಕೇದಾರಖಂಡೇ ನಿಃಸರಮಾಣಮುದಕಮವಾರಣೀಯಂ ಸಂರೋದ್ಧುಂ ಸಂವಿಷ್ಟೋ ಭಗವಚ್ಛಬ್ದಂ ಶ್ರುತ್ವೈವ ಸಹಸಾ ವಿದಾರ್ಯ ಕೇದಾರಖಂಡಂ ಭವಂತಮುಪಸ್ಥಿತಃ।
01003028D ತದಭಿವಾದಯೇ ಭಗವಂತಂ।
01003028E ಆಜ್ಞಾಪಯತು ಭವಾನ್।
01003028F ಕಿಂ ಕರವಾಣೀತಿ।।
ಉಪಾಧ್ಯಾಯನ ಮಾತುಗಳನ್ನು ಕೇಳಿ ಆರುಣಿಯು ಭತ್ತದ ಗದ್ದೆಯಿಂದ ಮೇಲೆ ಬಂದು ಉಪಾಧ್ಯಾಯನ ಎದುರು ನಿಂತು ಹೇಳಿದನು: “ನಾನು ನೀರು ಹರಿಯುವ ಕಾಲುವೆಯಲ್ಲಿದ್ದೆನು. ಬೇರೆ ಯಾವರೀತಿಯಿಂದಲೂ ನೀರನ್ನು ತಡೆಗಟ್ಟಲು ಅಸಮರ್ಥನಾಗಿ ನಾನೇ ಸ್ವತಃ ಕಾಲುವೆಯ ಅಡ್ಡ ಮಲಗಿಕೊಂಡು ನೀರು ಹರಿಯದಂತೆ ತಡೆಗಟ್ಟಿದೆ. ನಿಮ್ಮ ಧ್ವನಿಯನ್ನು ಕೇಳಿ ಎದ್ದು ನೀರುಹರಿಯಲು ಬಿಟ್ಟೆ. ಭಗವನ್! ನಿಮಗೆ ಅಭಿವಾದಿಸುತ್ತೇನೆ. ಆಜ್ಞೆಯನ್ನು ನೀಡಿ. ನಾನೀಗ ಏನು ಮಾಡಲಿ?”
01003029A ತಮುಪಾಧ್ಯಾಯೋಽಬ್ರವೀತ್20।
01003029B ಯಸ್ಮಾದ್ಭವಾನ್ಕೇದಾರಖಂಡಮವದಾರ್ಯೋತ್ಥಿತಸ್ತಸ್ಮಾದ್ ಭವಾನುದ್ದಾಲಕ ಏವ ನಾಮ್ನಾ ಭವಿಷ್ಯತೀತಿ।।
ಉಪಾಧ್ಯಾಯನು ಅವನಿಗೆ ಹೇಳಿದನು: “ನೀನು ಭತ್ತದ ಗದ್ದೆಯ ಕಾಲುವೆಯಲ್ಲಿ ಅಡ್ಡ ಮಲಗಿ ನೀರು ಹರಿಯುವುದನ್ನು ನಿಲ್ಲಿಸಿದ್ದೀಯೆ. ಆದುದರಿಂದ ನಿನ್ನ ಹೆಸರು ಇನ್ನು ಮುಂದೆ ಉದ್ದಾಲಕ21 ಎಂದಾಗುತ್ತದೆ.”
01003030A ಸ ಉಪಾಧ್ಯಾಯೇನಾನುಗೃಹೀತಃ।
01003030B ಯಸ್ಮಾತ್ತ್ವಯಾ ಮದ್ವಚೋಽನುಷ್ಠಿತಂ ತಸ್ಮಾಚ್ಛ್ರೇಯೋಽವಾಪ್ಸ್ಯಸೀತಿ। 01003030C ಸರ್ವೇ ಚ ತೇ ವೇದಾಃ ಪ್ರತಿಭಾಸ್ಯಂತಿ ಸರ್ವಾಣಿ ಚ ಧರ್ಮಶಾಸ್ತ್ರಾಣೀತಿ।।
ಉಪಾದ್ಯಾಯನು ಅವನಿಗೆ ಅನುಗ್ರಹಿಸಿದನು: “ನನ್ನ ವಚನದಂತೆ ನಡೆದುಕೊಂಡಿದುದಕ್ಕಾಗಿ ನಿನಗೆ ಶ್ರೇಯಸ್ಸು ದೊರೆಯುತ್ತದೆ. ಸರ್ವ ವೇದಗಳು ಮತ್ತು ಸರ್ವ ಧರ್ಮಶಾಸ್ತ್ರಗಳು ನಿನಗೆ ಹೊಳೆಯುತ್ತವೆ.”
01003031A ಸ ಏವಮುಕ್ತ ಉಪಾಧ್ಯಾಯೇನೇಷ್ಟಂ ದೇಶಂ ಜಗಾಮ।।
ಉಪಾಧ್ಯಾಯನ ಈ ಮಾತನ್ನು ಕೇಳಿ ಅವನು ತನಗೆ ಇಷ್ಟಬಂದ ದೇಶಕ್ಕೆ ಹೋದನು.
01003032A ಅಥಾಪರಃ ಶಿಷ್ಯಸ್ತಸ್ಯೈವಾಯೋದಸ್ಯ ಧೌಮ್ಯಸ್ಯೋಪಮನ್ಯುರ್ನಾಮ।।
01003033A ತಮುಪಾಧ್ಯಾಯಃ22 ಪ್ರೇಷಯಾಮಾಸ।
01003033B ವತ್ಸೋಪಮನ್ಯೋ ಗಾ ರಕ್ಷಸ್ವೇತಿ।।
ಆಯೋದ ಧೌಮ್ಯನ ಇನ್ನೊಬ್ಬ ಶಿಷ್ಯನ ಹೆಸರು ಉಪಮನ್ಯು. ಉಪಾಧ್ಯಾಯನು ಅವನನ್ನು “ವತ್ಸ ಉಪಮನ್ಯು! ಗೋವುಗಳನ್ನು ರಕ್ಷಿಸು” ಎಂದು ಕಳುಹಿಸಿದನು.
01003034A ಸ ಉಪಾಧ್ಯಾಯವಚನಾದರಕ್ಷದ್ಗಾಃ।
01003034B ಸ ಚಾಹನಿ ಗಾ ರಕ್ಷಿತ್ವಾ ದಿವಸಕ್ಷಯೇಽಭ್ಯಾಗಮ್ಯೋಪಾಧ್ಯಾಯಸ್ಯಾಗ್ರತಃ23 ಸ್ಥಿತ್ವಾ ನಮಶ್ಚಕ್ರೇ।।
ಉಪಾಧ್ಯಾಯನ ವಚನದಂತೆ ಅವನು ಗೋವುಗಳನ್ನು ಕಾಯ್ದನು. ಇಡೀ ದಿನ ಗೋವುಗಳನ್ನು ಕಾಯ್ದು ದಿವಸಕ್ಷಯದಲ್ಲಿ ಅವನು ಉಪಾಧ್ಯಾಯನ ಬಳಿಸಾರಿ ಎದಿರು ನಿಂತು ನಮಸ್ಕರಿಸಿದನು.
01003035A ತಮುಪಾಧ್ಯಾಯಃ ಪೀವಾನಮಪಶ್ಯತ್।
01003035B ಉವಾಚ ಚೈನಂ।
01003035C ವತ್ಸೋಪಮನ್ಯೋ ಕೇನ ವೃತ್ತಿಂ ಕಲ್ಪಯಸಿ।
01003035D ಪೀವಾನಸಿ ದೃಢಮಿತಿ।।
ಅವನು ದಷ್ಟಪುಷ್ಟನಾಗಿರುವುದನ್ನು ನೋಡಿ ಉಪಾಧ್ಯಾಯನು ಹೇಳಿದನು: “ವತ್ಸ ಉಪಮನ್ಯು! ಇಷ್ಟು ದೃಢನೂ ದಷ್ಟಪುಷ್ಟನೂ ಆಗಿರಲು ಯಾವ ವೃತ್ತಿಯನ್ನು ಕಲ್ಪಿಸಿಕೊಂಡಿರುವೆ?”
01003036A ಸ ಉಪಾಧ್ಯಾಯಂ ಪ್ರತ್ಯುವಾಚ।
01003036B ಭೈಕ್ಷೇಣ24 ವೃತ್ತಿಂ ಕಲ್ಪಯಾಮೀತಿ।।
ಅವನು ಉಪಾಧ್ಯಾಯನಿಗೆ ಉತ್ತರಿಸಿದನು: “ಭಿಕ್ಷಾವೃತ್ತಿಯನ್ನು ಕಲ್ಪಿಸಿಕೊಂಡಿದ್ದೇನೆ.”
01003037A ತಮುಪಾಧ್ಯಾಯಃ ಪ್ರತ್ಯುವಾಚ।
01003037B ಮಮಾನಿವೇದ್ಯ25 ಭೈಕ್ಷಂ ನೋಪಯೋಕ್ತವ್ಯಮಿತಿ।।
ಉಪಾಧ್ಯಾಯನು ಅವನಿಗೆ ತಿರುಗಿ ಹೇಳಿದನು: “ನನಗೆ ನೈವೇದ್ಯಮಾಡದೇ ಭಿಕ್ಷವನ್ನು ಉಪಯೋಗಿಸಕೂಡದು.”
01003038A 26ಸ ತಥೇತ್ಯುಕ್ತ್ವಾ ಪುನರರಕ್ಷದ್ಗಾಃ।
01003038B ರಕ್ಷಿತ್ವಾ ಚಾಗಮ್ಯ ತಥೈವೋಪಾಧ್ಯಾಯಸ್ಯಾಗ್ರತಃ ಸ್ಥಿತ್ವಾ ನಮಶ್ಚಕ್ರೇ27।।
“ಹಾಗೆಯೇ ಆಗಲಿ!” ಎಂದು ಹೇಳಿ ಪುನಃ ಅವನು ಗೋವುಗಳನ್ನು ಕಾಯಲು ಹೋದನು. ಕಾಯ್ದು ಬಂದು ಹಿಂದಿನಂತೆಯೇ ಉಪಾಧ್ಯಾಯನ ಎದಿರು ನಿಂತು ನಮಸ್ಕರಿಸಿದನು.
01003039A ತಮುಪಾಧ್ಯಾಯಸ್ತಥಾಪಿ ಪೀವಾನಮೇವ ದೃಷ್ಟ್ವೋವಾಚ।
01003039B ವತ್ಸೋಪಮನ್ಯೋ ಸರ್ವಮಶೇಷತಸ್ತೇ ಭೈಕ್ಷಂ ಗೃಹ್ಣಾಮಿ।
01003039C ಕೇನೇದಾನೀಂ ವೃತ್ತಿಂ ಕಲ್ಪಯಸೀತಿ।।
ಈಗಲೂ ಕೂಡ ಅವನು ದಷ್ಟಪುಷ್ಟನಾಗಿದ್ದುದನ್ನು ನೋಡಿ ಉಪಾಧ್ಯಾಯನು ಕೇಳಿದನು: “ವತ್ಸ ಉಪಮನ್ಯು! ಏನನ್ನೂ ಇಟ್ಟುಕೊಳ್ಳದೇ ನಿನ್ನ ಸರ್ವ ಭಿಕ್ಷವನ್ನೂ ನನಗೆ ಕೊಡುತ್ತೀಯೆ. ಈಗ ನೀನು ಯಾವ ವೃತ್ತಿಯನ್ನು ಕಲ್ಪಿಸಿಕೊಂಡಿದ್ದೀಯೆ?"
01003040A ಸ ಏವಮುಕ್ತ ಉಪಾಧ್ಯಾಯೇನ28 ಪ್ರತ್ಯುವಾಚ।
01003040B ಭಗವತೇ ನಿವೇದ್ಯ ಪೂರ್ವಮಪರಂ ಚರಾಮಿ।
01003040C ತೇನ ವೃತ್ತಿಂ ಕಲ್ಪಯಾಮೀತಿ।।
ಹೀಗೆ ಕೇಳಿದ ಉಪಾಧ್ಯಾಯನಿಗೆ ಅವನು ಉತ್ತರಿಸಿದನು: “ಮೊದಲು ನಿಮಗೆ ಒಪ್ಪಿಸಿ ಪುನಃ ಇನ್ನೊಮ್ಮೆ ಭಿಕ್ಷೆಗೆ ಹೋಗುತ್ತೇನೆ. ಆ ವೃತ್ತಿಯನ್ನು ಕಲ್ಪಿಸಿಕೊಂಡಿದ್ದೇನೆ.”
01003041A ತಮುಪಾಧ್ಯಾಯಃ ಪ್ರತ್ಯುವಾಚ।
01003041B ನೈಷಾ ನ್ಯಾಯ್ಯಾ ಗುರುವೃತ್ತಿಃ।
01003041C ಅನ್ಯೇಷಾಮಪಿ ವೃತ್ತ್ಯುಪರೋಧಂ ಕರೋಷ್ಯೇವಂ ವರ್ತಮಾನಃ29।
01003041D ಲುಬ್ಧೋಽಸೀತಿ।।
ಅವನಿಗೆ ಉಪಾಧ್ಯಾಯನು ಉತ್ತರಿಸಿದನು: “ಇದು ಗುರುವಿಗೆ ನಡೆದುಕೊಳ್ಳುವ ನ್ಯಾಯ ಮಾರ್ಗವಲ್ಲ. ಈ ರೀತಿ ನಡೆದುಕೊಳ್ಳುವುದರಿಂದ ಅನ್ಯರ ವೃತ್ತಿಗೆ ಅಡ್ದಿಯುಂಟುಮಾಡುತ್ತಿದ್ದೀಯೆ. ನೀನು ಲುಬ್ಧನಾಗಿರುವೆ.”
01003042A ಸ ತಥೇತ್ಯುಕ್ತ್ವಾ ಗಾ ಅರಕ್ಷತ್।
01003042B ರಕ್ಷಿತ್ವಾ ಚ ಪುನರುಪಾಧ್ಯಾಯಗೃಹಮಾಗಮ್ಯೋಪಾಧ್ಯಾಯಸ್ಯಾಗ್ರತಃ ಸ್ಥಿತ್ವಾ ನಮಶ್ಚಕ್ರೇ।।
“ಹಾಗೆಯೇ ಆಗಲಿ!” ಎಂದು ಹೇಳಿ ಅವನು ಗೋವುಗಳನ್ನು ಕಾಯ್ದನು. ಕಾಯ್ದು ಪುನಃ ಉಪಾಧ್ಯಾಯನ ಮನೆಗೆ ಬಂದು ಉಪಾಧ್ಯಾಯನ ಎದಿರು ನಿಂತು ನಮಸ್ಕರಿಸಿದನು.
01003043A ತಮುಪಾಧ್ಯಾಯಸ್ತಥಾಪಿ ಪೀವಾನಮೇವ ದೃಷ್ಟ್ವಾ ಪುನರುವಾಚ।
01003043B ಅಹಂ30 ತೇ ಸರ್ವಂ ಭೈಕ್ಷಂ ಗೃಹ್ಣಾಮಿ ನ ಚಾನ್ಯಚ್ಚರಸಿ।
01003043C ಪೀವಾನಸಿ।
01003043D ಕೇನ31 ವೃತ್ತಿಂ ಕಲ್ಪಯಸೀತಿ।।
ಈಗಲೂ ಅವನು ದಷ್ಟಪುಷ್ಟನಾಗಿರುವುದನ್ನು ನೋಡಿ ಉಪಾಧ್ಯಾಯನು ಪುನಃ ಕೇಳಿದನು: “ನಿನ್ನ ಸರ್ವ ಭಿಕ್ಷವನ್ನೂ ನಾನು ತೆಗೆದುಕೊಳ್ಳುತ್ತೇನೆ, ಮತ್ತು ನೀನು ಇನ್ನೊಮ್ಮೆ ಭಿಕ್ಷೆಗೆಂದು ಹೋಗುವುದಿಲ್ಲ. ದಷ್ಟಪುಷ್ಟನಾಗಿದ್ದೀಯೆ. ಯಾವ ವೃತ್ತಿಯನ್ನು ಕಲ್ಪಿಸಿಕೊಂಡಿದ್ದೀಯೆ?”
01003044A ಸ ಉಪಾಧ್ಯಾಯಂ ಪ್ರತ್ಯುವಾಚ32।
01003044B ಭೋ ಏತಾಸಾಂ ಗವಾಂ ಪಯಸಾ ವೃತ್ತಿಂ ಕಲ್ಪಯಾಮೀತಿ।।
ಆಗ ಅವನು ಉಪಾಧ್ಯಾಯನಿಗೆ ಉತ್ತರಿಸಿದನು: “ಈ ಹಸುಗಳ ಹಾಲನ್ನು ಕುಡಿದು ನನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದೇನೆ.”
01003045A ತಮುಪಾಧ್ಯಾಯಃ ಪ್ರತ್ಯುವಾಚ33।
01003045B ನೈತನ್ನ್ಯಾಯ್ಯಂ ಪಯ ಉಪಯೋಕ್ತುಂ ಭವತೋ ಮಯಾನನುಜ್ಞಾತಮಿತಿ34।।
ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ನನ್ನ ಅನುಮತಿಯಿಲ್ಲದೇ ನೀನು ಹಾಲನ್ನು ಕುಡಿಯುವುದು ಸರಿಯಲ್ಲ.”
01003046A ಸ ತಥೇತಿ ಪ್ರತಿಜ್ಞಾಯ ಗಾ ರಕ್ಷಿತ್ವಾ ಪುನರುಪಾಧ್ಯಾಯಗೃಹಾನೇತ್ಯ ಗುರೋರಗ್ರತಃ ಸ್ಥಿತ್ವಾ ನಮಶ್ಚಕ್ರೇ।।
“ಹಾಗೆಯೇ ಮಾಡುತ್ತೇನೆ” ಎಂದು ವಚನವನ್ನಿತ್ತ ಅವನು ಗೋವುಗಳನ್ನು ರಕ್ಷಿಸಿ ಪುನಃ ಉಪಾಧ್ಯಾಯನ ಮನೆಗೆ ಬಂದು ಗುರುವಿನ ಎದಿರು ನಿಂತು ಸಮಸ್ಕರಿಸಿದನು.
01003047A ತಮುಪಾಧ್ಯಾಯಃ ಪೀವಾನಮೇವಾಪಶ್ಯತ್35।
01003047B ಉವಾಚ ಚೈನಂ।
01003047C 36ಭೈಕ್ಷಂ ನಾಶ್ನಾಸಿ ನ ಚಾನ್ಯಚ್ಚರಸಿ।
01003047D ಪಯೋ ನ ಪಿಬಸಿ।
01003047E ಪೀವಾನಸಿ।
01003047F ಕೇನ37 ವೃತ್ತಿಂ ಕಲ್ಪಯಸೀತಿ।।
ಇನ್ನೂ ದಷ್ಟಪುಷ್ಟನಾಗಿರುವ ಅವನನ್ನು ನೋಡಿ ಉಪಾಧ್ಯಾಯನು ಹೇಳಿದನು: “ಭಿಕ್ಷೆಯನ್ನೂ ಬೇಡುತ್ತಿಲ್ಲ. ಹಾಲನ್ನೂ ಕುಡಿಯುವುದಿಲ್ಲ. ಆದರೂ ದಷ್ಟಪುಷ್ಠನಾಗಿರುವೆ. ನಿನ್ನ ಉದರ ಪೋಷಣೆಗೆ ಏನು ಮಾಡುತ್ತಿರುವೆ?”
01003048A ಸ ಏವಮುಕ್ತ ಉಪಾಧ್ಯಾಯಂ ಪ್ರತ್ಯುವಾಚ।
01003048B ಭೋಃ ಫೇನಂ ಪಿಬಾಮಿ ಯಮಿಮೇ ವತ್ಸಾ ಮಾತೄಣಾಂ ಸ್ತನಂ ಪಿಬಂತ ಉದ್ಗಿರಂತೀತಿ38।।
ಉಪಾಧ್ಯಾಯನ ಈ ಪ್ರಶ್ನೆಗೆ ಅವನು ಉತ್ತರಿಸಿದನು: “ಭೋ! ಕರುಗಳು ತಾಯಂದಿರ ಮೊಲೆ ಕುಡಿಯುವಾಗ ಹೊರಗೆ ಬೀಳುವ ಹಾಲಿನ ನೊರೆಯನ್ನು ಕುಡಿಯುತ್ತೇನೆ.”
01003049A ತಮುಪಾಧ್ಯಾಯಃ ಪ್ರತ್ಯುವಾಚ।
01003049B ಏತೇ ತ್ವದನುಕಂಪಯಾ ಗುಣವಂತೋ ವತ್ಸಾಃ ಪ್ರಭೂತತರಂ ಫೇನಮುದ್ಗಿರಂತಿ।
01003049C ತದೇವಮಪಿ ವತ್ಸಾನಾಂ ವೃತ್ತ್ಯುಪರೋಧಂ ಕರೋಷ್ಯೇವಂ ವರ್ತಮಾನಃ।
01003049D ಫೇನಮಪಿ ಭವಾನ್ನ ಪಾತುಮರ್ಹತೀತಿ।।
ಅದಕ್ಕೆ ಉಪಾಧ್ಯಾಯನು ಉತ್ತರಿಸಿದನು: “ನಿನ್ನ ಮೇಲಿನ ಅನುಕಂಪದಿಂದ ಗುಣವಂತ ಕರುಗಳು ಹೆಚ್ಚು ನೊರೆಯನ್ನು ಚೆಲ್ಲುತ್ತವೆ. ಹೀಗೆ ಆ ಕರುಗಳ ಉದರ ಪೋಷಣೆಗೆ ನಿನ್ನ ಈ ನಡತೆಯು ಅಡ್ಡಿಯನ್ನುಂಟುಮಾಡುತ್ತದೆ. ನೀನು ನೊರೆಯನ್ನೂ ಕುಡಿಯಬಾರದು.”
01003050A ಸ ತಥೇತಿ ಪ್ರತಿಜ್ಞಾಯ ನಿರಾಹಾರಸ್ತಾ ಗಾ ಅರಕ್ಷತ್39।
01003050B ತಥಾ ಪ್ರತಿಷಿದ್ಧೋ ಭೈಕ್ಷಂ ನಾಶ್ನಾತಿ ನ ಚಾನ್ಯಚ್ಚರತಿ।
01003050C ಪಯೋ ನ ಪಿಬತಿ।
01003050D ಫೇನಂ ನೋಪಯುಂಕ್ತೇ।।
“ಹಾಗೆಯೇ ಆಗಲಿ!” ಎಂದು ಪ್ರತಿಜ್ಞೆಮಾಡಿ ಅವನು ನಿರಾಹಾರನಾಗಿ ಗೋವುಗಳನ್ನು ಕಾಯ್ದನು. ನಿಷೇಧಗೊಳಿಸಿದಂತೆ ಭಿಕ್ಷೆಯನ್ನು ಊಟಮಾಡಲಿಲ್ಲ, ಇನ್ನೊಮ್ಮೆ ಭಿಕ್ಷೆ ಬೇಡಲಿಲ್ಲ, ಹಾಲನ್ನು ಕುಡಿಯಲಿಲ್ಲ, ಕೆನೆಯನ್ನೂ ನೆಕ್ಕಲಿಲ್ಲ.
01003051A ಸ ಕದಾಚಿದರಣ್ಯೇ ಕ್ಷುಧಾರ್ತೋಽರ್ಕಪತ್ರಾಣ್ಯಭಕ್ಷಯತ್।।
01003052A ಸ ತೈರರ್ಕಪತ್ರೈರ್ಭಕ್ಷಿತೈಃ ಕ್ಷಾರಕಟೂಷ್ಣವಿಪಾಕಿಭಿಶ್ಚಕ್ಷುಷ್ಯುಪಹತೋಽನ್ಧೋಽಭವತ್40।
01003052B ಸೋಽನ್ಧೋಽಪಿ ಚಂಕ್ರಮ್ಯಮಾಣಃ ಕೂಪೇಽಪತತ್41।।
ಒಮ್ಮೆ ಅರಣ್ಯದಲ್ಲಿ ಹಸಿವೆಯಿಂದ ಬಳಲಿದ ಅವನು ಅರ್ಕಪತ್ರಗಳನ್ನು ತಿಂದನು. ಅರ್ಕಪತ್ರಗಳನ್ನು ಸೇವಿಸಿದುದರಿಂದ ಅದರ ಕ್ಷಾರ, ಕಟು ಮತ್ತು ಉಷ್ಣದ ಗುಣಗಳಿಂದಾಗಿ ಅವನ ಕಣ್ಣುಗಳು ಕುರುಡಾದವು. ಅಂಧನಾಗಿ ತಿರುಗಾಡುತ್ತಿರುವಾಗ ಬಾವಿಯಲ್ಲಿ ಬಿದ್ದನು.
01003053A ಅಥ ತಸ್ಮಿನ್ನನಾಗಚ್ಛತ್ಯುಪಾಧ್ಯಾಯಃ ಶಿಷ್ಯಾನವೋಚತ್42।
01003053B 43ಮಯೋಪಮನ್ಯುಃ ಸರ್ವತಃ ಪ್ರತಿಷಿದ್ಧಃ।
01003053C ಸ ನಿಯತಂ ಕುಪಿತಃ।
01003053D ತತೋ ನಾಗಚ್ಛತಿ ಚಿರಗತಶ್ಚೇತಿ।।
01003054A ಸ ಏವಮುಕ್ತ್ವಾ ಗತ್ವಾರಣ್ಯಮುಪಮನ್ಯೋರಾಹ್ವಾನಂ ಚಕ್ರೇ।
01003054B ಭೋ ಉಪಮನ್ಯೋ ಕ್ವಾಸಿ।
01003054C ವತ್ಸೈಹೀತಿ।।
ಅವನು ಬಾರದೇ ಇದ್ದುದನ್ನು ನೋಡಿ ಉಪಾಧ್ಯಾಯನು ತನ್ನ ಶಿಷ್ಯರಿಗೆ ಹೇಳಿದನು: “ಉಪಮನ್ಯುವು ನನ್ನ ಎಲ್ಲ ರೀತಿಯ ಪ್ರತಿಬಂಧದಿಂದ ಸಿಟ್ಟಾಗಿರಬಹುದು. ಅದಕ್ಕಾಗಿಯೇ ಅವನು ಬರುವುದಕ್ಕೆ ತಡಮಾಡುತ್ತಿದ್ದಾನೆ.” ಹೀಗೆ ಹೇಳಿ ಅವನು ಅರಣ್ಯಕ್ಕೆ ಹೋಗಿ ಉಪಮನ್ಯುವನ್ನು ಕರೆಯ ತೊಡಗಿದನು: “ಭೋ! ಉಪಮನ್ಯು! ಎಲ್ಲಿದ್ದೀಯೆ? ವತ್ಸ! ಬಾ!”
01003055A ಸ ತದಾಹ್ವಾನಮುಪಾಧ್ಯಾಯಾಚ್ಛ್ರುತ್ವಾ ಪ್ರತ್ಯುವಾಚೋಚ್ಚೈಃ।
01003055B ಅಯಮಸ್ಮಿ ಭೋ ಉಪಾಧ್ಯಾಯ ಕೂಪೇ ಪತಿತ ಇತಿ।।
ಉಪಾಧ್ಯಾಯನ ಆ ಕರೆಯನ್ನು ಕೇಳಿ ಉಪಮನ್ಯುವು ಉಚ್ಛ ಸ್ವರದಲ್ಲಿ ಕೂಗಿ ಹೇಳಿದನು: “ಭೋ! ಉಪಾಧ್ಯಾಯರೇ! ನಾನು ಇಲ್ಲಿ ಬಾವಿಯಲ್ಲಿ ಬಿದ್ದಿದ್ದೇನೆ.”
01003056A ತಮುಪಾಧ್ಯಾಯಃ ಪ್ರತ್ಯುವಾಚ।
01003056B ಕಥಮಸಿ ಕೂಪೇ ಪತಿತ ಇತಿ।।
01003057A ಸ ತಂ ಪ್ರತ್ಯುವಾಚ।
01003057B ಅರ್ಕಪತ್ರಾಣಿ ಭಕ್ಷಯಿತ್ವಾಂಧೀಭೂತೋಽಸ್ಮಿ।
01003057C ಅತಃ ಕೂಪೇ ಪತಿತ ಇತಿ।।
01003058A ತಮುಪಾಧ್ಯಾಯಃ ಪ್ರತ್ಯುವಾಚ।
01003058B ಅಶ್ವಿನೌ ಸ್ತುಹಿ।
01003058C ತೌ ತ್ವಾಂ ಚಕ್ಷುಷ್ಮಂತಂ ಕರಿಷ್ಯತೋ ದೇವಭಿಷಜಾವಿತಿ।।
ಉಪಾಧ್ಯಾಯನು ಅವನಿಗೆ ತಿರುಗಿ ಕೇಳಿದನು: “ಬಾವಿಯಲ್ಲಿ ಹೇಗೆ ಬಿದ್ದೆ?” ಅದಕ್ಕೆ ಅವನು ಉತ್ತರಿಸಿದನು: “ಅರ್ಕಪತ್ರಗಳನ್ನು ತಿಂದು ಅಂಧನಾಗಿದ್ದೇನೆ. ಆದ್ದರಿಂದ ಬಾವಿಯಲ್ಲಿ ಬಿದ್ದಿದ್ದೇನೆ.” ಆಗ ಉಪಾಧ್ಯಾಯನು ಹೇಳಿದನು: “ಅಶ್ವಿನಿ44ಯರನ್ನು ಸ್ತುತಿಸು. ಆ ದೇವವೈದ್ಯರು ನಿನ್ನನ್ನು ದೃಷ್ಟಿವಂತನನ್ನಾಗಿ ಮಾಡುವರು.”
01003059A ಸ ಏವಮುಕ್ತ ಉಪಾಧ್ಯಾಯೇನ ಸ್ತೋತುಂ ಪ್ರಚಕ್ರಮೇ ದೇವಾವಶ್ವಿನೌ ವಾಗ್ಭಿರೃಗ್ಭಿಃ।।
ಉಪಾಧ್ಯಾಯನ ಹೀಗೆ ಹೇಳಲು ಅವನು ಋಗ್ವೇದದಲ್ಲಿರುವ ಋಕ್ಕುಗಳಿಂದ ಅಶ್ವಿನೀ ದೇವತೆಗಳನ್ನು ಸ್ತುತಿಸ ತೊಡಗಿದನು.
01003060a ಪ್ರ ಪೂರ್ವಗೌ ಪೂರ್ವಜೌ ಚಿತ್ರಭಾನೂ ಗಿರಾ ವಾ ಶಂಸಾಮಿ ತಪನಾವನಂತೌ45।
01003060c ದಿವ್ಯೌ ಸುಪರ್ಣೌ ವಿರಜೌ ವಿಮಾನಾವಧಿಕ್ಷಿಯಂತೌ46 ಭುವನಾನಿ ವಿಶ್ವಾ।।
“ಅಶ್ವಿನೀ ದೇವತೆಗಳೇ! ನೀವು ಎಲ್ಲರಿಗಿಂತಲೂ ಮೊದಲು ಯಜ್ಞಕ್ಕೆ ಹೋಗುವವರು. ಅಶ್ವಜಾತಿಯ ಸ್ವಭಾವವನ್ನು ಅನುಸರಿಸಿ ಹುಟ್ಟಿದವರು47. ನಿಮ್ಮ ಪ್ರಕಾಶವು ಅಗ್ನಿ ಸಮಾನ. ನೀವು ಸ್ವಸಾಮರ್ಥ್ಯದಿಂದ ಅನೇಕ ರೂಪಗಳನ್ನು ಧರಿಸುತ್ತೀರಿ. ನಿಮ್ಮ ಗಮನವು ಮನೋಹರವಾದುದು. ನೀವು ರಜೋಗುಣ ರಹಿತರಾಗಿದ್ದು ಎಲ್ಲ ಲೋಕಗಳಲ್ಲಿಯೂ ನಿಮ್ಮ ವಿಮಾನವನ್ನು ನಡೆಸುತ್ತೀರಿ. ನಿಮ್ಮನ್ನು ನಾನು ಈ ವಾಕ್ಕುಗಳಿಂದ ಸ್ತುತಿಸುತ್ತೇನೆ48.
01003061a ಹಿರಣ್ಮಯೌ ಶಕುನೀ ಸಾಂಪರಾಯೌ ನಾಸತ್ಯದಸ್ರೌ ಸುನಸೌ ವೈಜಯಂತೌ।
01003061c ಶುಕ್ರಂ ವಯಂತೌ ತರಸಾ ಸುವೇಮಾವಭಿ ವ್ಯಯಂತಾವಸಿತಂ ವಿವಸ್ವತ್49।।
ಪಕ್ಷಿಗಳಂತೆ ವೇಗವಾಗಿ ಹೋಗುವ ಸುವರ್ಣಮಯ ವಿಮಾನಗಳಲ್ಲಿ ಕುಳಿತು ನೀವು ಹೋಗುತ್ತೀರಿ. ನಿಮ್ಮ ಮೈ ಚಿನ್ನದ ಬಣ್ಣದ್ದು. ನೀವು ಆರೋಗ್ಯ ಶಕ್ತಿಯನ್ನು ಕೊಡುತ್ತೀರಿ. ನೀವು ಪರಲೋಕ ಬಂಧುಗಳನ್ನೂ ಭಕ್ತರನ್ನೂ ಆಪತ್ತುಗಳಿಂದ ಉದ್ಧರಿಸುತ್ತೀರಿ. ನೀವು ಸುಳ್ಳಾಡುವುದಿಲ್ಲ. ನೀವು ಅಶ್ವರೂಪದಲ್ಲಿದ್ದ ಸೂರ್ಯದೇವನ ಮೂಗಿನ ಹೊಳ್ಳೆಗಳಿಂದ ಹುಟ್ಟಿದಿರಿ. ನಿಮ್ಮ ಮೂಗುಗಳು ಸುಂದರ. ಸೂರ್ಯನ ಮಕ್ಕಳಾಗಿದ್ದು ತಂದೆಯ ಸಾಮರ್ಥ್ಯದಿಂದ ಕೃಷ್ಣ ಕುಷ್ಠ ರೋಗವನ್ನು ಯಶಸ್ವಿಯಾಗಿ ಹೋಗಲಾಡಿಸುವ ವೈದ್ಯರು ನೀವು. ನೀವು ಒಳ್ಳೆಯ ಮೈಬಣ್ಣವನ್ನೂ ನೇತ್ರಶಕ್ತಿಯನ್ನೂ ನೀಡುತ್ತೀರಿ. ಹೇಗೆ ನೇಕಾರರು ದಾರದ ಜೊತೆ ಸೇರಿದ ಕಪ್ಪು ಕೂದಲು ಮುಂತಾದವುಗಳನ್ನು ತೆಗೆದು ಹಾಕಿ ಶುದ್ಧ ದಾರದಿಂದ ನೇಯುತ್ತಾರೆಯೋ ಹಾಗೆ ನೀವು ಶ್ಯಾಮ ಕುಷ್ಠವನ್ನು ತೊಡೆದುಹಾಕಿ ಒಳ್ಳೆಯ ಶುಕ್ರಕಾಂತಿಯನ್ನು ನೀಡುತ್ತೀರಿ50.
01003062a ಗ್ರಸ್ತಾಂ ಸುಪರ್ಣಸ್ಯ ಬಲೇನ ವರ್ತಿಕಾಮಮುಂಚತಾಮಶ್ವಿನೌ ಸೌಭಗಾಯ।
01003062c ತಾವತ್ಸುವೃತ್ತಾವನಮಂತ ಮಾಯಯಾ ಸತ್ತಮಾ51 ಗಾ ಅರುಣಾ ಉದಾವಹನ್52।।
ಅಶ್ವಿನೀ ದೇವತೆಗಳೇ! ಗರುಡನಷ್ಟೇ ಪರಾಕ್ರಮಿ ಮತ್ತು ವೇಗಶಾಲಿಯಾದ ಒಂದು ನಾಯಿಯು ಗುಬ್ಬಚ್ಚಿಯ ಜಾತಿಯ ಒಂದು ಹೆಣ್ಣು ಪಕ್ಷಿಯನ್ನು ಬಾಯಲ್ಲಿ ಕಚ್ಚಿ ಕೊಂಡಿದ್ದಾಗ ನೀವು ಅದನ್ನು ಬಿಡಿಸಿ ಅದಕ್ಕೆ ಪುನಃ ಜೀವನ ಸೌಖ್ಯವನ್ನು ದೊರಕಿಸಿಕೊಟ್ಟಿರಿ. ಸೋಮಯಾಗದಲ್ಲಿ ಇಂದ್ರನೇ ಮೊದಲಾದ ದೇವತೆಗಳಿದ್ದರೂ ಯಜಮಾನನನ್ನು ಕಾಡಿಸುವ ತುಂಟ ಹಸುಗಳ ಮೇಲ್ವಿಚಾರಣೆಯು ನಿಮ್ಮಿಬ್ಬರ ಹೊರತು ಬೇರೆ ಯಾರಿಗೂ ಸಾದ್ಯವಿಲ್ಲ ಎಂದು ತಿಳಿದು ಅವುಗಳನ್ನು ಕಾಪಾಡುವುದಕ್ಕೆ ನಿಮ್ಮನ್ನೇ ಪ್ರಾರ್ಥಿಸಿದ್ದನು53.
01003063a ಷಷ್ಟಿಶ್ಚ ಗಾವಸ್ತ್ರಿಶತಾಶ್ಚ ಧೇನವ ಏಕಂ ವತ್ಸಂ ಸುವತೇ ತಂ ದುಹಂತಿ।
01003063c ನಾನಾಗೋಷ್ಠಾ ವಿಹಿತಾ ಏಕದೋಹನಾಸ್ತಾವಶ್ವಿನೌ ದುಹತೋ ಘರ್ಮಮುಕ್ಥ್ಯಂ।।
360 ಹಸುಗಳು ಒಂದು ವರ್ಷ ಪರ್ಯಂತವೂ ತಮ್ಮ ಸರದಿಯ ಪ್ರಕಾರ ಹಾಲು ಕರೆದು ಘರ್ಮವನ್ನು ಸಿದ್ಧಪಡಿಸಿ ಕೊಡುತ್ತವೆ. ಘರ್ಮವನ್ನು ತಯಾರಿಸಲು ಒಂದೊಂದು ದಿನಕ್ಕೆ ಒಂದೊಂದು ಹಸುವು ಹಾಲನ್ನು ನೀಡುವುದರಿಂದ, ಅವುಗಳೆಲ್ಲವೂ ಪ್ರತ್ಯೇಕ ಕೊಟ್ಟಿಗೆಗಳಲ್ಲಿ ಇರುವಂತೆ ತೋರುತ್ತವೆ. ಅವುಗಳನ್ನು ಅಧ್ವರ್ಯ ಎಂಬ ಒಬ್ಬನೇ ಋತ್ವಿಕನು ಕರೆಯುತ್ತಾನೆ. ಹೀಗೆ ಸಿದ್ಧಪಡಿಸಿದ ಉತ್ತಮ ಘರ್ಮವನ್ನು ಯಾಜ್ಞಿಕರು ಅಶ್ವಿನೀದೇವತೆಗಳಿಗೆ ಸಮರ್ಪಿಸುತ್ತಾರೆ54.
01003064a ಏಕಾಂ ನಾಭಿಂ ಸಪ್ತಶತಾ ಅರಾಃ ಶ್ರಿತಾಃ ಪ್ರಧಿಷ್ವನ್ಯಾ ವಿಂಶತಿರರ್ಪಿತಾ ಅರಾಃ।
01003064c ಅನೇಮಿ ಚಕ್ರಂ ಪರಿವರ್ತತೇಽಜರಂ ಮಾಯಾಶ್ವಿನೌ ಸಮನಕ್ತಿ ಚರ್ಷಣೀ।।
ಜಗತ್ಪಾಲಕ ಸೂರ್ಯನ ರಥಕ್ಕೆ ಕಾಲವೇ ಚಕ್ರ. ಆ ಕಾಲಚಕ್ರಕ್ಕೆ ಸಂವತ್ಸರವೇ ಒಂದು ಸ್ಥೂಲ ನಾಭಿ. ಕಾಲಚಕ್ರಕ್ಕೆ ಒಟ್ಟು 700 ಅರಗಳಿವೆ: 350 ಹಗಲುಗಳು ಮತ್ತು 350 ರಾತ್ರಿಗಳು. ಈ ಚಕ್ರದ ಹಳಿಗೆ ಸಾವನ ಸಂವತ್ಸರದ 360 ದಿವಸಗಳಲ್ಲಿ ಉಳಿದ ಹತ್ತು ಹಗಲುಗಳು ಮತ್ತು ಹತ್ತು ರಾತ್ರಿಗಳು ಉದ್ದ ಅರಗಳಂತೆ55 ಸೇರಿಕೊಂಡಿವೆ.
01003065a ಏಕಂ ಚಕ್ರಂ ವರ್ತತೇ ದ್ವಾದಶಾರಂ ಪ್ರಧಿ ಷಣ್ಣಾಭಿಮೇಕಾಕ್ಷಮಮೃತಸ್ಯ ಧಾರಣಂ।
01003065c ಯಸ್ಮಿನ್ದೇವಾ ಅಧಿ ವಿಶ್ವೇ ವಿಷಕ್ತಾಸ್ತಾವಶ್ವಿನೌ ಮುಂಚತೋ ಮಾ ವಿಷೀದತಂ।।
ಒಂದು ಚಕ್ರದಿಂದ ರಥವು ಚಲಿಸುವುದಿಲ್ಲ. ಆದುದರಿಂದ ಇನ್ನೊಂದು ಚಕ್ರದ ಕಲ್ಪನೆಯನ್ನು ಮಾಡಿದ್ದಾರೆ. ಕಾಲಚಕ್ರದ ಸಂವತ್ಸರವೆಂಬ ಸ್ಥೂಲ ನಾಭಿಯಲ್ಲಿ ಹನ್ನೆರಡು ಮಾಸಗಳು ಹನ್ನೆರಡು ಅರಗಳಂತಿವೆ. ಆರು ಋತುಗಳು ಆ ಚಕ್ರದ ಆರು ನಾಭಿಗಳು56. ಆ ಚಕ್ರಕ್ಕೆ ಒಂದೇ ಒಂದು ದೃಢ ಅಚ್ಚು ಮರವಿದೆ. ಸ್ವರ್ಗ ರಕ್ಷಕ ಮತ್ತು ಎಲ್ಲ ದೇವತೆಗಳ ಆಧಾರವಾಗಿರುವ ಇಂತಹ ಚಕ್ರವನ್ನು ಅಶ್ವಿನೀ ದೇವತೆಗಳು ನಡೆಸುತ್ತಾರೆ. ಹೀಗೆ ಜಗತ್ತಿಗೆ ಆಧಾರ ಸೂರ್ಯದೇವನ ರಥ ಚಕ್ರವನ್ನು ನಡೆಸುವ ಅಶ್ವಿನೀ ದೇವತೆಗಳೇ! ಸಂಕಟದಲ್ಲಿ ಸಿಕ್ಕಿಬಿದ್ದಿರುವ ನನ್ನನ್ನು ಪಾರುಮಾಡಿ57.
01003066a ಅಶ್ವಿನಾವಿಂದ್ರಮಮೃತಂ ವೃತ್ತಭೂಯೌ ತಿರೋಧತ್ತಾಮಶ್ವಿನೌ ದಾಸಪತ್ನೀ।
01003066c ಭಿತ್ತ್ವಾ ಗಿರಿಮಶ್ವಿನೌ ಗಾಮುದಾಚರಂತೌ ತದ್ವೃಷ್ಟಮಹ್ನಾ ಪ್ರಥಿತಾ ವಲಸ್58।।
ಅಶ್ವಿನೀ ದೇವತೆಗಳೇ! ಮನುಷ್ಯರಿಗೆ ಉಪಕಾರಿಯಾದ ನೀರಿನಲ್ಲಿ ಚಂದ್ರನ ಶಕ್ತಿಯು ಇರುವುದರಿಂದ ನೀವು ನೀರಿನಿಂದ ಚಿಕಿತ್ಸೆ ನೀಡುತ್ತೀರಿ. ಮೇರು ಪರ್ವತದಿಂದ ಹೊರಟು ಬರುವ ಅನ್ನವನ್ನು ಕೊಡಬಲ್ಲ ಮಳೆಯನ್ನೂ ನೀವು ಬೇಗ ಉಂಟುಮಾಡುತ್ತೀರಿ59.
01003067a ಯುವಾಂ ದಿಶೋ ಜನಯಥೋ ದಶಾಗ್ರೇ ಸಮಾನಂ ಮೂರ್ಧ್ನಿ ರಥಯಾ ವಿಯಂತಿ।
01003067c ತಾಸಾಂ ಯಾತಮೃಷಯೋಽನುಪ್ರಯಾಂತಿ ದೇವಾ ಮನುಷ್ಯಾಃ ಕ್ಷಿತಿಮಾಚರಂತಿ।।
ಅಶ್ವಿನೀ ದೇವತೆಗಳು ಇತರ ದೇವತೆಗಳಿಗಿಂತ ಮೊದಲೇ ಸೋಮಯಾಗಕ್ಕೆ ಹೋಗುತ್ತಾರೆ. ಆದುದರಿಂದ ಇವರು ಇತರ ದೇವತೆಗಳ ಪ್ರಾದುರ್ಭಾವ ಸೂಚಕರು. ಋಷಿಗಳು ಮತ್ತು ಮನುಷ್ಯರು ಈ ದೇವತೆಗಳನ್ನು ಕ್ರಮವರಿದು ಪೂಜಿಸುತ್ತಾರೆ. ದೇವತೆಗಳು ಮತ್ತು ಮನುಷ್ಯರು ನಿಮ್ಮ ಐಶ್ವರ್ಯ ಪ್ರತಿಪಾದಕವಾದ ಸ್ತೋತ್ರಮಾಡುತ್ತಾರೆ.
01003068a ಯುವಾಂ ವರ್ಣಾನ್ವಿಕುರುಥೋ ವಿಶ್ವರೂಪಾನ್ ತೇಽಧಿಕ್ಷಿಯಂತಿ ಭುವನಾನಿ ವಿಶ್ವಾ।
01003068c ತೇ ಭಾನವೋಽಪ್ಯನುಸೃತಾಶ್ಚರಂತಿ ದೇವಾ ಮನುಷ್ಯಾಃ ಕ್ಷಿತಿಮಾಚರಂತಿ।।
ಅಶ್ವಿನೀ ದೇವತೆಗಳು ಸೂರ್ಯಕಿರಣಗಳ ಏಳು ಬಣ್ಣಗಳನ್ನೂ ಆಯಾ ಸಮಯಗಳಲ್ಲಿ ಪ್ರಕಟಪಡಿಸಿ ಅವು ಭೂಮಂಡಲವನ್ನು ಆವರಿಸುವಂತೆ ಮಾಡುತ್ತಾರೆ. ಅವರ ಇಚ್ಛೆಯಂತೆ ಈ ಕಿರಣಗಳು ಜನರಿಗೆ ರೋಗಪರಿಹಾರಕ ಮತ್ತು ಆರೋಗ್ಯಪ್ರದ. ಈ ರೀತಿಯ ಮಹಿಮೆಯ ಅವರನ್ನು ದೇವತೆಗಳೂ ಮನುಷ್ಯರೂ ಸ್ತುತಿಸುತ್ತಾರೆ.
01003069a ತೌ ನಾಸತ್ಯಾವಶ್ವಿನಾವಾಮಹೇ ವಾಂ60 ಸ್ರಜಂ ಚ ಯಾಂ ಬಿಭೃಥಃ ಪುಷ್ಕರಸ್ಯ।
01003069c ತೌ ನಾಸತ್ಯಾವಮೃತಾವೃತಾವೃಧಾವೃತೇ ದೇವಾಸ್ತತ್ ಪ್ರಪದೇನ ಸೂತೇ।।
ಕಮಲದ ಮಾಲೆಗಳನ್ನು ಧರಿಸಿ ಅಶ್ವಿನೀ ದೇವತೆಗಳು ಅತೀವ ಸುಂದರರಾಗಿ ಕಾಣುತ್ತಾರೆ. ಅಶ್ವಿನೀ ದೇವತೆಗಳೇ ಸೋಮಯಾಗಕ್ಕೆ ಮೊದಲು ಹೋಗುವವರಾದುದರಿಂದ ಇವರನ್ನು ಬಿಟ್ಟು ಇತರ ದೇವತೆಗಳು ತಮ್ಮ ಅಂಶವನ್ನು ಸ್ವೀಕರಿಸುವುದಿಲ್ಲ. ಅಂಥಹ ಮರಣರಹಿತರೂ, ಯಜ್ಞವರ್ಧಕರೂ ಆದ ಅಶ್ವಿನೀ ದೇವತೆಗಳನ್ನು ಕಣ್ಣುಗಳಿಲ್ಲದೆ ಸಾಧನ ಹೀನನಾಗಿರುವ ನಾನು ಮನಸ್ಸಿನಲ್ಲಿಯೇ ಪೂಜಿಸುತ್ತೇನೆ.
01003070a ಮುಖೇನ ಗರ್ಭಂ ಲಭತಾಂ ಯುವಾನೌ ಗತಾಸುರೇತತ್ಪ್ರಪದೇನ ಸೂತೇ।
01003070c ಸದ್ಯೋ ಜಾತೋ ಮಾತರಮತ್ತಿ ಗರ್ಭಃ ತಾವಶ್ವಿನೌ ಮುಂಚಥೋ ಜೀವಸೇ ಗಾಃ।।
ಅಶ್ವಿನೀ ದೇವತೆಗಳು ನವಮಾಸಕಾಲ ಗರ್ಭದಲ್ಲಿದ್ದು ನಂತರ ಹುಟ್ಟಿದವರಲ್ಲ. ಅಶ್ವರೂಪ ಸೂರ್ಯನಿಂದ ವಡವಾ ರೂಪಿಣಿ ಸಂಜ್ಞಾದೇವಿಯಲ್ಲಿ ಮುಖಸಂಬಂಧಮಾತ್ರದಿಂದ ತರುಣರಾಗಿಯೇ ಹುಟ್ಟಿದವರು61. ಅಲ್ಪವಾದ ಪ್ರಾಣಶಕ್ತಿ ಮತ್ತು ಆಯುಸ್ಸನ್ನುಳ್ಳ ಮನುಷ್ಯ ಶಿಶುಗಳಿಗೆ ಮಾತ್ರವೇ ಒಂಭತ್ತು ತಿಂಗಳು ತಾಯಿಯ ಗರ್ಭವಾಸವೂ, ಹುಟ್ಟಿದ ನಂತರ ತಮ್ಮ ಜೀವನಕ್ಕೆ ತಾಯಿಯ ಹಾಲಿನ ಅಪೇಕ್ಷೆಯೂ ಇರುತ್ತದೆ. ದೇವತೆಗಳಿಗೆ ಹೀಗಿಲ್ಲ. ಆದುದರಿಂದ ನಿತ್ಯ ತರುಣ ಅಶ್ವಿನೀ ದೇವತೆಗಳೇ! ಸಾಮರ್ಥ್ಯಶಾಲಿಗಳಾದ ನೀವು ಸುಖಜೀವನವನ್ನು ಮಾಡುವುದಕ್ಕೆ ನನಗೆ ನೇತ್ರಶಕ್ತಿಯನ್ನು ದಾನ ಮಾಡಿ62.”
01003071A 63ಏವಂ ತೇನಾಭಿಷ್ಟುತಾವಶ್ವಿನಾವಾಜಗ್ಮತುಃ।
01003071B ಆಹತುಶ್ಚೈನಂ।
01003071C ಪ್ರೀತೌ ಸ್ವಃ।
01003071D ಏಷ ತೇಽಪೂಪಃ।
01003071E ಅಶಾನೈನಮಿತಿ।।
ಹೀಗೆ ಅವರನ್ನು ಸ್ತುತಿಸಿದಾಗ ಅಶ್ವಿನಿಗಳು ಅಲ್ಲಿಗೆ ಆಗಮಿಸಿ ಇದನ್ನು ಹೇಳಿದರು: “ಪ್ರೀತರಾಗಿದ್ದೇವೆ. ಇದೋ ಈ ಪೂಪವನ್ನು ತಿನ್ನು!”
01003072A ಸ ಏವಮುಕ್ತಃ ಪ್ರತ್ಯುವಾಚ।
01003072B ನಾನೃತಮೂಚತುರ್ಭವಂತೌ।
01003072C ನ ತ್ವಹಮೇತಮಪೂಪಮುಪಯೋಕ್ತುಮುತ್ಸಹೇ ಅನಿವೇದ್ಯ ಗುರವ ಇತಿ64।।
ಇದನ್ನು ಕೇಳಿದ ಅವನು ಉತ್ತರಿಸಿದನು: “ನಿಮ್ಮ ವಚನಗಳು ಎಂದೂ ಸುಳ್ಳಾಗಲಾರವು. ಆದರೆ ನೀವು ಕೊಟ್ಟಿರುವ ಈ ಪೂಪವನ್ನು ನನ್ನ ಗುರುವಿಗೆ ನಿವೇದಿಸದೇ ತಿನ್ನಲು ಬಯಸುವುದಿಲ್ಲ.”
01003073A ತತಸ್ತಮಶ್ವಿನಾವೂಚತುಃ।
01003073B ಆವಾಭ್ಯಾಂ ಪುರಸ್ತಾದ್ಭವತ ಉಪಾಧ್ಯಾಯೇನೈವಮೇವಾಭಿಷ್ಟುತಾಭ್ಯಾಮಪೂಪಃ ಪ್ರೀತಾಭ್ಯಾಂ ದತ್ತಃ।
01003073C ಉಪಯುಕ್ತಶ್ಚ ಸ ತೇನಾನಿವೇದ್ಯ ಗುರವೇ।
01003073D ತ್ವಮಪಿ ತಥೈವ ಕುರುಷ್ವ ಯಥಾ ಕೃತಮುಪಾಧ್ಯಾಯೇನೇತಿ।।
ಅದಕ್ಕೆ ಅಶ್ವಿನಿ ದೇವತೆಗಳು ಉತ್ತರಿಸಿದರು: “ಹಿಂದೆ ನಿನ್ನ ಉಪಾಧ್ಯಾಯನೂ ಕೂಡ ನಮ್ಮನ್ನು ಸ್ತುತಿಸಿದಾಗ ಅವನಿಗೆ ಪ್ರೀತಿಯಿಂದ ಪೂಪವನ್ನಿತ್ತಾಗ ತನ್ನ ಗುರುವಿಗೆ ನೀಡದೇ ಸೇವಿಸಿದ್ದನು. ನೀನೂ ಕೂಡ ನಿನ್ನ ಉಪಾಧ್ಯಾಯನು ಮಾಡಿದಹಾಗೆ ಮಾಡು.”
01003074A ಸ ಏವಮುಕ್ತಃ ಪುನರೇವ ಪ್ರತ್ಯುವಾಚೈತೌ65।
01003074B ಪ್ರತ್ಯನುನಯೇ ಭವಂತಾವಶ್ವಿನೌ।
01003074C ನೋತ್ಸಹೇಽಹಮನಿವೇದ್ಯೋಪಾಧ್ಯಾಯಾಯೋಪಯೋಕ್ತುಮಿತಿ66।।
ಅವರ ಈ ಮಾತುಗಳನ್ನು ಕೇಳಿ ಪುನಃ ಅವನು ಹೇಳಿದನು: “ಅಶ್ವಿನಿಗಳೇ! ನಿಮ್ಮ ಕ್ಷಮೆಯನ್ನು ಕೇಳುತ್ತೇನೆ. ಮೊದಲು ನನ್ನ ಉಪಾಧ್ಯಾಯನಿಗೆ ಇದನ್ನು ನೀಡದೇ ನಾನು ತಿನ್ನ ಬಯಸುವುದಿಲ್ಲ.”
01003075A ತಮಶ್ವಿನಾವಾಹತುಃ।
01003075B ಪ್ರೀತೌ ಸ್ವಸ್ತವಾನಯಾ ಗುರುವೃತ್ತ್ಯಾ67।
01003075C ಉಪಾಧ್ಯಾಯಸ್ಯ ತೇ ಕಾರ್ಷ್ಣಾಯಸಾ ದಂತಾಃ।
01003075D ಭವತೋ ಹಿರಣ್ಮಯಾ ಭವಿಷ್ಯಂತಿ।
01003075E ಚಕ್ಷುಷ್ಮಾಂಶ್ಚ ಭವಿಷ್ಯಸಿ।
01003075F ಶ್ರೇಯಶ್ಚಾವಾಪ್ಸ್ಯಸೀತಿ।।
ಆಗ ಅಶ್ವಿನಿಯರು ಹೇಳಿದರು: “ನಿನ್ನ ಗುರುಭಕ್ತಿಯಿಂದ ಪ್ರೀತರಾಗಿದ್ದೇವೆ. ನಿನ್ನ ಉಪಾಧ್ಯಾಯನ ಹಲ್ಲುಗಳು ಕಪ್ಪು ಕಬ್ಬಿಣದಂತಿವೆ. ನಿನ್ನವು ಚಿನ್ನದವುಗಳಾಗುತ್ತವೆ. ನಿನ್ನ ದೃಷ್ಟಿಯೂ ಮರಳಿ ಬರುತ್ತದೆ. ಮತ್ತು ನಿನಗೆ ಒಳ್ಳೆಯ ಶ್ರೇಯಸ್ಸಾಗುತ್ತದೆ.”
01003076A ಸ ಏವಮುಕ್ತೋಽಶ್ವಿಭ್ಯಾಂ ಲಬ್ಧಚಕ್ಷುರುಪಾಧ್ಯಾಯಸಕಾಶಮಾಗಮ್ಯೋಪಾಧ್ಯಾಯಮಭಿವಾದ್ಯಾಚಚಕ್ಷೇ।
01003076B ಸ ಚಾಸ್ಯ ಪ್ರೀತಿಮಾನಭೂತ್।।
01003077A ಆಹ ಚೈನಂ।
01003077B ಯಥಾಶ್ವಿನಾವಾಹತುಸ್ತಥಾ ತ್ವಂ ಶ್ರೇಯೋಽವಾಪ್ಸ್ಯಸೀತಿ।
01003077C ಸರ್ವೇ ಚ ತೇ ವೇದಾಃ ಪ್ರತಿಭಾಸ್ಯಂತೀತಿ68।।
01003078A ಏಷಾ ತಸ್ಯಾಪಿ ಪರೀಕ್ಷೋಪಮನ್ಯೋಃ।।
ಅಶ್ವಿನಿಯರು ಈ ರೀತಿ ಹೇಳಿದ ನಂತರ, ಅವನು ಪುನಃ ದೃಷ್ಟಿಯನ್ನು ಪಡೆದು ಉಪಾಧ್ಯಾಯನ ಬಳಿ ಬಂದು ಉಪಾಧ್ಯಾಯನನ್ನು ನಮಸ್ಕರಿಸಿ, ನಡೆದುದೆಲ್ಲವನ್ನೂ ಹೇಳಿದನು. ಅವನೂ ಸಹ ಅತ್ಯಂತ ಪ್ರೀತನಾಗಿ ಹೇಳಿದನು: “ಅಶ್ವಿನಿಯರು ಹೇಳಿದಂತೆ ನೀನು ಬಹಳ ಶ್ರೇಯಸ್ಸನ್ನು ಹೊಂದುವೆ. ಎಲ್ಲ ವೇದಗಳೂ ನಿನಗೆ ಹೊಳೆಯುತ್ತವೆ.” ಇದು ಉಪಮನ್ಯುವಿನ ಪರೀಕ್ಷೆಯಾಗಿತ್ತು69.
01003079A ಅಥಾಪರಃ ಶಿಷ್ಯಸ್ತಸ್ಯೈವಾಯೋದಸ್ಯ ಧೌಮ್ಯಸ್ಯ ವೇದೋ ನಾಮ।।
01003080A ತಮುಪಾಧ್ಯಾಯಃ ಸಂದಿದೇಶ।
01003080B ವತ್ಸ ವೇದ ಇಹಾಸ್ಯತಾಂ।
01003080C ಭವತಾ ಮದ್ಗೃಹೇ ಕಂಚಿತ್ಕಾಲಂ ಶುಶ್ರೂಷಮಾಣೇನ ಭವಿತವ್ಯಂ70।
01003080D ಶ್ರೇಯಸ್ತೇ ಭವಿಷ್ಯತೀತಿ।।
ಅಯೋದ ಧೌಮ್ಯನ ಇನ್ನೊಬ್ಬ ಶಿಷ್ಯನ ಹೆಸರು ವೇದ. ಅವನಿಗೆ ಉಪಾಧ್ಯಾಯನು ಆದೇಶಿಸಿದನು: “ವತ್ಸ! ವೇದ! ಇಲ್ಲಿ ಬಾ. ನೀನು ನನ್ನ ಮನೆಯಲ್ಲಿ ಕೆಲವು ಕಾಲ ಶುಶ್ರೂಷೆ ಮಾಡಬೇಕಾಗುತ್ತದೆ. ನಿನಗೆ ಶ್ರೇಯಸ್ಸಾಗುತ್ತದೆ.”
01003081A ಸ ತಥೇತ್ಯುಕ್ತ್ವಾ ಗುರುಕುಲೇ ದೀರ್ಘಕಾಲಂ ಗುರುಶುಶ್ರೂಷಣಪರೋಽವಸತ್।
01003081B ಗೌರಿವ ನಿತ್ಯಂ ಗುರುಷು ಧೂರ್ಷು ನಿಯುಜ್ಯಮಾನಃ ಶೀತೋಷ್ಣಕ್ಷುತ್ತೃಷ್ಣಾದುಃಖಸಹಃ ಸರ್ವತ್ರಾಪ್ರತಿಕೂಲಃ।।
ಇದನ್ನು ಕೇಳಿದ ಅವನು ದೀರ್ಘಕಾಲ ಗುರುಕುಲದಲ್ಲಿ ಗುರು ಶುಶ್ರೂಷಣೆಯಲ್ಲಿ ನಿರತನಾದನು. ನಿತ್ಯವೂ, ಏನೂ ದೂರಿಲ್ಲದೇ, ಭಾರದ ಹೊರೆಯನ್ನು ಹೊರಲು ಕಟ್ಟಿದ್ದ ಎತ್ತಿನ ಹಾಗೆ ಶೀತ-ಉಷ್ಣ, ಹಸಿವು-ಬಾಯಾರಿಕೆಗಳ ದುಃಖವನ್ನು ಸಹಿಸಿಕೊಂಡು ಅವನಿಗೆ ಎಲ್ಲದರಲ್ಲಿಯೂ ಅನುಕೂಲನಾಗಿದ್ದನು.
01003082A ತಸ್ಯ ಮಹತಾ ಕಾಲೇನ ಗುರುಃ ಪರಿತೋಷಂ ಜಗಾಮ।
01003082B ತತ್ಪರಿತೋಷಾಚ್ಚ ಶ್ರೇಯಃ ಸರ್ವಜ್ಞತಾಂ ಚಾವಾಪ।
01003082C ಏಷಾ ತಸ್ಯಾಪಿ ಪರೀಕ್ಷಾ ವೇದಸ್ಯ।।
ಬಹಳ ಕಾಲವು ಕಳೆದನಂತರ ಅವನ ಗುರುವು ಸಂತೃಪ್ತನಾದನು. ಅವನ ತೃಪ್ತಿಯಿಂದಾಗಿ ಶ್ರೇಯಸ್ಸು ಮತ್ತು ಸರ್ವ ಜ್ಞಾನವನ್ನು ಹೊಂದಿದನು. ಇದು ವೇದನ ಪರೀಕ್ಷೆಯಾಗಿತ್ತು.
01003083A ಸ ಉಪಾಧ್ಯಾಯೇನಾನುಜ್ಞಾತಃ ಸಮಾವೃತ್ತಸ್ತಸ್ಮಾದ್ಗುರುಕುಲವಾಸಾದ್ಗೃಹಾಶ್ರಮಂ ಪ್ರತ್ಯಪದ್ಯತ।
01003083B ತಸ್ಯಾಪಿ ಸ್ವಗೃಹೇ ವಸತಸ್ತ್ರಯಃ ಶಿಷ್ಯಾ ಬಭೂವುಃ।।
ಗುರುಕುಲವಾಸವನ್ನು ಪೂರೈಸಿ ಉಪಾಧ್ಯಾಯನಿಂದ ಅನುಮತಿಯನ್ನು ಪಡೆದು ಅವನು ಗೃಹಸ್ಥಾಶ್ರಮವನ್ನು ಪ್ರವೇಶಿಸಿದನು. ಅವನ ಮನೆಯಲ್ಲಿಯೂ ಕೂಡ ಮೂವರು ಶಿಷ್ಯರು ವಾಸಿಸುತ್ತಿದ್ದರು.
01003084A ಸ ಶಿಷ್ಯಾನ್ನ ಕಿಂಚಿದುವಾಚ।
01003084B ಕರ್ಮ ವಾ ಕ್ರಿಯತಾಂ ಗುರುಶುಶ್ರೂಷಾ ವೇತಿ।
01003084C ದುಃಖಾಭಿಜ್ಞೋ ಹಿ ಗುರುಕುಲವಾಸಸ್ಯ ಶಿಷ್ಯಾನ್ ಪರಿಕ್ಲೇಶೇನ ಯೋಜಯಿತುಂ ನೇಯೇಷ।।
ಅವನು ಒಮ್ಮೆಯೂ ತನ್ನ ಶಿಷ್ಯರಿಗೆ ಕೆಲಸವನ್ನು ಮಾಡು ಅಥವಾ ಗುರುಶುಶ್ರೂಷೆಯನ್ನು ಮಾಡು ಎಂದು ಹೇಳಲಿಲ್ಲ. ಗುರುಕುಲವಾಸದ ದುಃಖಗಳನ್ನು ತಿಳಿದಿದ್ದ ಅವನು ತನ್ನ ಶಿಷ್ಯರಿಗೆ ಕಷ್ಟ ಕೊಡಲು ಬಯಸುತ್ತಿರಲಿಲ್ಲ.
01003085A ಅಥ ಕಸ್ಯ ಚಿತ್ಕಾಲಸ್ಯ71 ವೇದಂ ಬ್ರಾಹ್ಮಣಂ ಜನಮೇಜಯಃ ಪೌಷ್ಯಶ್ಚ ಕ್ಷತ್ರಿಯಾವುಪೇತ್ಯೋಪಾಧ್ಯಾಯಂ ವರಯಾಂ ಚಕ್ರತುಃ।।
ಒಮ್ಮೆ ಕ್ಷತ್ರಿಯ ಜನಮೇಜಯ ಮತ್ತು ಪೌಷ್ಯರು ವೇದನನ್ನು ಪೌರೋಹಿತ್ಯಕ್ಕಾಗಿ ವರಣ ಮಾಡಿದರು.
01003086A ಸ ಕದಾಚಿದ್ಯಾಜ್ಯಕಾರ್ಯೇಣಾಭಿಪ್ರಸ್ಥಿತ ಉತ್ತಂಕಂ ನಾಮ ಶಿಷ್ಯಂ ನಿಯೋಜಯಾಮಾಸ।
01003086B ಭೋ ಉತ್ತಂಕ ಯತ್ಕಿಂಚಿದಸ್ಮದ್ಗೃಹೇ ಪರಿಹೀಯತೇ ತದಿಚ್ಛಾಮ್ಯಹಮಪರಿಹೀಣಂ ಭವತಾ ಕ್ರಿಯಮಾಣಮಿತಿ।।
ಒಂದು ದಿನ ಯಜ್ಞಕಾರ್ಯಕ್ಕೆಂದು ಹೊರಡುವಾಗ ಅವನು ಉತ್ತಂಕ ಎಂಬ ಹೆಸರಿನ ಶಿಷ್ಯನನ್ನು ಕರೆದು “ಭೋ! ಉತ್ತಂಕ! ನನ್ನ ಮನೆಯಲ್ಲಿ ಏನೆಲ್ಲ ಮಾಡಬೇಕಾದ್ದುದು ಇವೆಯೋ ಅವೆಲ್ಲವನ್ನೂ ನೀನು ಕಡೆಗಣಿಸದೇ ಮಾಡು” ಎಂದು ನಿಯೋಜಿಸಿದನು.
01003087A ಸ ಏವಂ ಪ್ರತಿಸಮಾದಿಶ್ಯೋತ್ತಂಕಂ ವೇದಃ ಪ್ರವಾಸಂ ಜಗಾಮ।।
ಹೀಗೆ ಉತ್ತಂಕನಿಗೆ ಆದೇಶವನ್ನಿತ್ತು ವೇದನು ಪ್ರವಾಸಕ್ಕೆ ಹೋದನು.
01003088A ಅಥೋತ್ತಂಕೋ ಗುರುಶುಶ್ರೂಷುರ್ಗುರುನಿಯೋಗಮನುತಿಷ್ಠಮಾನಸ್ತತ್ರ ಗುರುಕುಲೇ ವಸತಿ ಸ್ಮ।।
ಗುರುಶುಶ್ರೂಷೆ ಮತ್ತು ಗುರುನಿಯೋಗದಲ್ಲಿ ನಿರತನಗಿ ಉತ್ತಂಕನು ಗುರುಕುಲದಲ್ಲಿ ವಾಸಿಸಿಕೊಂಡಿದ್ದನು.
01003089A ಸ ವಸಂಸ್ತತ್ರೋಪಾಧ್ಯಾಯಸ್ತ್ರೀಭಿಃ ಸಹಿತಾಭಿರಾಹೂಯೋಕ್ತಃ।
01003089B ಉಪಾಧ್ಯಾಯಿನೀ ತೇ ಋತುಮತೀ।
01003089C ಉಪಾಧ್ಯಾಯಶ್ಚ ಪ್ರೋಷಿತಃ।
01003089D ಅಸ್ಯಾ ಯಥಾಯಮೃತುರ್ವನ್ಧ್ಯೋ ನ ಭವತಿ ತಥಾ ಕ್ರಿಯತಾಂ।
01003089E ಏತದ್ವಿಷೀದತೀತಿ।।
ಅವನು ಅಲ್ಲಿ ವಾಸಿಸುತ್ತಿರುವಾಗ ಒಂದು ದಿನ ಉಪಾಧ್ಯಾಯನ ಮನೆಯ ಸ್ತ್ರೀಯರು ಬಂದು ಹೇಳಿದರು: “ನಿನ್ನ ಉಪಾಧ್ಯಾಯನಿಯು ಋತುಮತಿಯಾಗಿದ್ದಾಳೆ. ಉಪಾಧ್ಯಾಯನು ಇಲ್ಲ. ಅವಳ ಋತುಕಾಲವು ನಿಷ್ಪ್ರಯೋಜಕವಾಗದ ಹಾಗೆ ಮಾಡು. ಇದು ಸಾಧುವಾಗಿದೆ.”
01003090A ಸ ಏವಮುಕ್ತಸ್ತಾಃ ಸ್ತ್ರಿಯಃ ಪ್ರತ್ಯುವಾಚ।
01003090B ನ ಮಯಾ ಸ್ತ್ರೀಣಾಂ ವಚನಾದಿದಮಕಾರ್ಯಂ ಕಾರ್ಯಂ72।
01003090C ನ ಹ್ಯಹಮುಪಾಧ್ಯಾಯೇನ ಸಂದಿಷ್ಟಃ।
01003090D ಅಕಾರ್ಯಮಪಿ ತ್ವಯಾ ಕಾರ್ಯಮಿತಿ।।
ಹೀಗೆ ಹೇಳಿದ ಸ್ತ್ರೀಯರಿಗೆ ಅವನು ಉತ್ತರಿಸಿದನು: “ಸ್ತ್ರೀಯರ ಮಾತನ್ನು ಕೇಳಿ ಕಾರ್ಯಗೈಯುವುದು ನನಗೆ ಸೂಕ್ತವಲ್ಲ. ಯಾವ ಅಕಾರ್ಯವೂ ನಿನ್ನಿಂದ ನಡೆಯಬಾರದು ಎಂದು ಉಪಾಧ್ಯಾಯನು ನನಗೆ ಸಂದೇಶವನ್ನಿತ್ತಿದ್ದಾನೆ.”
01003091A ತಸ್ಯ ಪುನರುಪಾಧ್ಯಾಯಃ ಕಾಲಾಂತರೇಣ ಗೃಹಾನುಪಜಗಾಮ ತಸ್ಮಾತ್ಪ್ರವಾಸಾತ್।
01003091B ಸ ತದ್ವೃತ್ತಂ ತಸ್ಯಾಶೇಷಮುಪಲಭ್ಯ ಪ್ರೀತಿಮಾನಭೂತ್।।
ಕಾಲಾನಂತರದಲ್ಲಿ ತನ್ನ ಪ್ರವಾಸದಿಂದ ಅವನ ಉಪಾಧ್ಯಾಯನು ಮನೆಗೆ ಹಿಂದಿರುಗಿದನು. ನಡೆದುದೆಲ್ಲವನ್ನೂ ಕೇಳಿ ಸಂತೋಷಪಟ್ಟನು.
01003092A ಉವಾಚ ಚೈನಂ।
01003092B ವತ್ಸೋತ್ತಂಕ ಕಿಂ ತೇ ಪ್ರಿಯಂ ಕರವಾಣೀತಿ।
01003092C ಧರ್ಮತೋ ಹಿ ಶುಶ್ರೂಷಿತೋಽಸ್ಮಿ ಭವತಾ।
01003092D ತೇನ ಪ್ರೀತಿಃ ಪರಸ್ಪರೇಣ ನೌ ಸಂವೃದ್ಧಾ।
01003092E ತದನುಜಾನೇ ಭವಂತಂ।
01003092F ಸರ್ವಾಮೇವ ಸಿದ್ಧಿಂ ಪ್ರಾಪ್ಸ್ಯಸಿ73।
01003092G ಗಮ್ಯತಾಮಿತಿ।।
ಅವನು ಹೇಳಿದನು: “ವತ್ಸ ಉತ್ತಂಕ! ನಿನಗೆ ಇಷ್ಟವಾದ ಏನನ್ನು ಮಾಡಲಿ? ನೀನು ನನ್ನನ್ನು ಧರ್ಮತಃ ಶುಶ್ರೂಷೆ ಮಾಡುತ್ತಿರುವೆ. ಇದರಿಂದ ಪರಸ್ಪರರ ಪ್ರೀತಿಯು ಹೆಚ್ಚಾಗಿದೆ. ನಿನಗೆ ಹೋಗಲು ಅನುಮತಿಯಿದೆ. ನಿನಗೆ ಎಲ್ಲವೂ ಸಿದ್ಧಿಯಾಗುತ್ತದೆ. ಹೋಗು.”
01003093A ಸ ಏವಮುಕ್ತಃ ಪ್ರತ್ಯುವಾಚ।
01003093B ಕಿಂ ತೇ ಪ್ರಿಯಂ ಕರವಾಣೀತಿ।
01003093C ಏವಂ ಹ್ಯಾಹುಃ74।।
01003094A ಯಶ್ಚಾಧರ್ಮೇಣ ವಿಬ್ರೂಯಾದ್ಯಶ್ಚಾಧರ್ಮೇಣ ಪೃಚ್ಛತಿ।।
01003095A ತಯೋರನ್ಯತರಃ ಪ್ರೈತಿ ವಿದ್ವೇಷಂ ಚಾಧಿಗಚ್ಛತಿ।
01003095B ಸೋಽಹಂ ಅನುಜ್ಞಾತೋ ಭವತಾ ಇಚ್ಛಾಮೀಷ್ಟಂ ತೇ ಗುರ್ವರ್ಥಮುಪಹರ್ತುಮಿತಿ।।
ಇದನ್ನು ಕೇಳಿದ ಅವನು ಉತ್ತರಿಸಿದನು: “ನಿನಗೆ ಪ್ರಿಯವಾದ ಏನನ್ನು ಮಾಡಲಿ ಎಂದು ಹೇಳಬೇಕು. ಧರ್ಮದಿಂದ ಏನನ್ನು ಕೊಟ್ಟರೂ ಅಥವಾ ಅಧರ್ಮದಿಂದ ಏನನ್ನು ತೆಗೆದುಕೊಂಡರೂ ಅವರೀರ್ವರ ನಡುವೆ ದ್ವೇಷ ಉಂಟಾಗುತ್ತದೆ ಅಥವಾ ಅವರಲ್ಲಿ ಒಬ್ಬನು ಸಾಯುತ್ತಾನೆ ಎಂಬ ಮಾತಿದೆ. ಆದುದರಿಂದ ನಿನ್ನ ಅನುಜ್ಞೆಯನ್ನು ಪಡೆದು ನಿನಗೆ ಇಷ್ಟವಾದ ಗುರುದಕ್ಷಿಣೆಯನ್ನು ಕೊಡಲು ಬಯಸುತ್ತೇನೆ.”
01003096A ತೇನೈವಮುಕ್ತ ಉಪಾಧ್ಯಾಯಃ ಪ್ರತ್ಯುವಾಚ।
01003096B ವತ್ಸೋತ್ತಂಕ ಉಷ್ಯತಾಂ ತಾವದಿತಿ।।
ಅದನ್ನು ಕೇಳಿ ಉಪಾಧ್ಯಾಯನು ಹೇಳಿದನು: “ವತ್ಸ ಉತ್ತಂಕ! ಹಾಗಾದರೆ ಇನ್ನೂ ಸ್ವಲ್ಪ ಸಮಯ ನಿಲ್ಲು.”
01003097A ಸ ಕದಾಚಿತ್ತಮುಪಾಧ್ಯಾಯಮಾಹೋತ್ತಂಕಃ।
01003097B ಆಜ್ಞಾಪಯತು ಭವಾನ್।
01003097C ಕಿಂ ತೇ ಪ್ರಿಯಮುಪಹರಾಮಿ ಗುರ್ವರ್ಥಮಿತಿ।।
ಕೆಲವು ಸಮಯದ ನಂತರ ಉತ್ತಂಕನು ಪುನಃ ಕೇಳಿದನು: “ನಿಮ್ಮ ದಕ್ಷಿಣೆಗಾಗಿ ನಿಮಗೆ ಪ್ರಿಯವಾದ ಏನನ್ನು ಮಾಡಲಿ? ನೀವು ಅಜ್ಞಾಪಿಸಬೇಕು.”
01003098A ತಮುಪಾಧ್ಯಾಯಃ ಪ್ರತ್ಯುವಾಚ।
01003098B ವತ್ಸೋತ್ತಂಕ ಬಹುಶೋ ಮಾಂ ಚೋದಯಸಿ ಗುರ್ವರ್ಥಮುಪಹರೇಯಮಿತಿ।
01003098C ತದ್ಗಚ್ಛ।
01003098D ಏನಾಂ ಪ್ರವಿಶ್ಯೋಪಾಧ್ಯಾಯಿನೀಂ ಪೃಚ್ಛ ಕಿಮುಪಹರಾಮೀತಿ। 01003098E ಏಷಾ ಯದ್ ಬ್ರವೀತಿ ತದುಪಹರಸ್ವೇತಿ।।
ಉಪಾಧ್ಯಾಯನು ಅವನಿಗೆ ಉತ್ತರಿಸಿದನು: “ವತ್ಸ ಉತ್ತಂಕ! ಗುರುದಕ್ಷಿಣೆಯ ಕುರಿತು ನೀನು ಬಹಳಷ್ಟು ಬಾರಿ ನನ್ನಲ್ಲಿ ಕೇಳಿದ್ದೀಯೆ. ಹಾಗಾದರೆ ಹೋಗು. ನಿನ್ನ ಉಪಾಧ್ಯಾಯನಿಯಲ್ಲಿ ಗುರುದಕ್ಷಿಣೆಯಾಗಿ ಏನನ್ನು ಅವಳು ಬಯಸುತ್ತಾಳೆ ಎಂದು ಕೇಳಿ, ಅವಳು ಹೇಳಿದುದನ್ನು ತೆಗೆದುಕೊಂಡು ಬಾ.”
01003099A ಸ ಏವಮುಕ್ತ ಉಪಾಧ್ಯಾಯೇನೋಪಾಧ್ಯಾಯಿನೀಮಪೃಚ್ಛತ್।
01003099B ಭವತ್ಯುಪಾಧ್ಯಾಯೇನಾಸ್ಮ್ಯನುಜ್ಞಾತೋ ಗೃಹಂ ಗಂತುಂ।
01003099C ತದಿಚ್ಛಾಮೀಷ್ಟಂ ತೇ ಗುರ್ವರ್ಥಮುಪಹೃತ್ಯಾನೃಣೋ ಗಂತುಂ।
01003099D ತದಾಜ್ಞಾಪಯತು ಭವತೀ।
01003099E ಕಿಮುಪಾಹರಾಮಿ ಗುರ್ವರ್ಥಮಿತಿ।।
ಉಪಾಧ್ಯಾಯನ ಈ ಮಾತುಗಳನ್ನು ಕೇಳಿ ಅವನು ಉಪಾಧ್ಯಾನಿಯಲ್ಲಿಗೆ ಹೋಗಿ ಕೇಳಿದನು: “ನನ್ನ ಉಪಾಧ್ಯಾಯರು ಮನೆಗೆ ಹೋಗಿ ನಿಮ್ಮಲ್ಲಿ ಗುರುದಕ್ಷಿಣೆಯಾಗಿ ಏನನ್ನು ಬಯಸುತ್ತೀರೆಂದು ಕೇಳಲು ಕಳುಹಿಸಿದ್ದಾರೆ. ಗುರುದಕ್ಷಿಣೆಯಾಗಿ ಏನನ್ನು ಬಯಸುತ್ತೀರಿ ಹೇಳಿ.”
01003100A ಸೈವಮುಕ್ತೋಪಾಧ್ಯಾಯಿನ್ಯುತ್ತಂಕಂ ಪ್ರತ್ಯುವಾಚ।
01003100B ಗಚ್ಛ ಪೌಷ್ಯಂ ರಾಜಾನಂ।
01003100C ಭಿಕ್ಷಸ್ವ ತಸ್ಯ ಕ್ಷತ್ರಿಯಯಾ ಪಿನದ್ಧೇ ಕುಂಡಲೇ।75
01003100D ತೇ ಆನಯಸ್ವ।
01003100E ಇತಶ್ಚತುರ್ಥೇಽಹನಿ ಪುಣ್ಯಕಂ ಭವಿತಾ।
01003100F ತಾಭ್ಯಾಮಾಬದ್ಧಾಭ್ಯಾಂ ಬ್ರಾಹ್ಮಣಾನ್ಪರಿವೇಷ್ಟುಮಿಚ್ಛಾಮಿ।
01003100G ಶೋಭಮಾನಾ ಯಥಾ ತಾಭ್ಯಾಂ ಕುಂಡಲಾಭ್ಯಾಂ ತಸ್ಮಿನ್ನಹನಿ ಸಂಪಾದಯಸ್ವ76।
01003100H ಶ್ರೇಯೋ ಹಿ ತೇ ಸ್ಯಾತ್ ಕ್ಷಣಂ ಕುರ್ವತ ಇತಿ।।
ಇದನ್ನು ಕೇಳಿದ ಉಪಾಧ್ಯಾಯಿನಿಯು ಉತ್ತಂಕನಿಗೆ ಉತ್ತರಿಸಿದಳು: “ಹೋಗು! ಪೌಷ್ಯ77ರಾಜನಲ್ಲಿ ಅವನ ಕ್ಷಾತ್ರಿಣಿಯ ಕರ್ಣಕುಂಡಲ78ಗಳನ್ನು ಯಾಚಿಸಿ ತೆಗೆದುಕೊಂಡು ಬಾ. ಇಂದಿನಿಂದ ನಾಲ್ಕನೆಯ ದಿನ ಪುಣ್ಯಕ ವ್ರತದ ದಿನ. ಆದಿನ ನಾನು ಆ ಕುಂಡಲಗಳನ್ನು ಧರಿಸಿ ಬ್ರಾಹ್ಮಣರಿಗೆ ಭೋಜನವನ್ನು ನೀಡಲು ಬಯಸುತ್ತೇನೆ. ನಿನಗೆ ಶ್ರೇಯಸ್ಸಾಗಲಿ. ತ್ವರೆ ಮಾಡು.”
01003101A ಸ ಏವಮುಕ್ತ ಉಪಾಧ್ಯಾಯಿನ್ಯಾ ಪ್ರಾತಿಷ್ಠತೋತ್ತಂಕಃ।
01003101B ಸ ಪಥಿ ಗಚ್ಛನ್ನಪಶ್ಯದೃಷಭಮತಿಪ್ರಮಾಣಂ ತಮಧಿರೂಢಂ ಚ ಪುರುಷಮತಿಪ್ರಮಾಣಮೇವ।।
ಉಪಾಧ್ಯಾಯಿನಿಯು ಈ ರೀತಿ ಹೇಳಲು ಉತ್ತಂಕನು ಹೊರಟನು. ದಾರಿಯಲ್ಲಿ ಅವನು ಬೃಹದಾಕರದ ಪುರುಷನೊಬ್ಬನು ಬೃಹದಾಕಾರದ ಹೋರಿಯನ್ನೇರಿ ಹೋಗುತ್ತಿರುವುದನ್ನು ಕಂಡನು.
01003102A ಸ ಪುರುಷ ಉತ್ತಂಕಮಭ್ಯಭಾಷತ।
01003102B ಉತ್ತಂಕೈತತ್ಪುರೀಷಮಸ್ಯ ಋಷಭಸ್ಯ ಭಕ್ಷಯಸ್ವೇತಿ।।
ಆ ಪುರುಷನು ಉತ್ತಂಕನಿಗೆ ಹೇಳಿದನು: “ಉತ್ತಂಕ! ಈ ಹೋರಿಯ ಸಗಣಿಯನ್ನು ತಿನ್ನು.”
01003103A ಸ ಏವಮುಕ್ತೋ ನೈಚ್ಛತ್।।
01003104A ತಮಾಹ ಪುರುಷೋ ಭೂಯಃ।
01003104B ಭಕ್ಷಯಸ್ವೋತ್ತಂಕ।
01003104C ಮಾ ವಿಚಾರಯ।
01003104D ಉಪಾಧ್ಯಾಯೇನಾಪಿ ತೇ ಭಕ್ಷಿತಂ ಪೂರ್ವಮಿತಿ।।
ಅವನು ನಿರಾಕರಿಸಿದಾಗ, ಆ ಪುರುಷನು ಪುನಃ ಹೇಳಿದನು: “ಉತ್ತಂಕ! ಇದನ್ನು ತಿನ್ನು. ವಿಚಾರ ಮಾಡಬೇಡ. ಹಿಂದೆ ನಿನ್ನ ಉಪಾಧ್ಯಾಯನೂ ಇದನ್ನು ತಿಂದಿದ್ದಾನೆ.”
01003105A ಸ ಏವಮುಕ್ತೋ ಬಾಢಮಿತ್ಯುಕ್ತ್ವಾ ತದಾ ತದೃಷಭಸ್ಯ ಪುರೀಷಂ ಮೂತ್ರಂ ಚ ಭಕ್ಷಯಿತ್ವೋತ್ತಂಕಃ ಪ್ರತಸ್ಥೇ ಯತ್ರ ಸ ಕ್ಷತ್ರಿಯಃ ಪೌಷ್ಯಃ79।।
ಇದನ್ನು ಕೇಳಿದ ಉತ್ತಂಕನು “ಆಯಿತು” ಎಂದು ಹೇಳಿ ಆ ಹೋರಿಯ ಸಗಣಿ ಮತ್ತು ಮೂತ್ರವನ್ನು ಸೇವಿಸಿ ಕ್ಷತ್ರಿಯ ಪೌಷ್ಯನಲ್ಲಿಗೆ ಮುಂದುವರೆದನು.
01003106A ತಮುಪೇತ್ಯಾಪಶ್ಯದುತ್ತಂಕ ಆಸೀನಂ।
01003106B ಸ ತಮುಪೇತ್ಯಾಶೀರ್ಭಿರಭಿನಂದ್ಯೋವಾಚ।
01003106C ಅರ್ಥೀ ಭವಂತಮುಪಗತೋಽಸ್ಮೀತಿ।।
01003107A ಸ ಏನಮಭಿವಾದ್ಯೋವಾಚ।
01003107B ಭಗವನ್ ಪೌಷ್ಯಃ ಖಲ್ವಹಂ।
01003107C ಕಿಂ ಕರವಾಣೀತಿ।।
ಅವನು ಕುಳಿತಿರುವುದನ್ನು ನೋಡಿದ ಉತ್ತಂಕನು ಅವನಿಗೆ ಆಶೀರ್ವಚನಗಳಿಂದ ಅಭಿನಂದಿಸಿ ಹೇಳಿದನು: “ಅರ್ಥಿಯಾಗಿ ನಿನ್ನಲ್ಲಿ ಬಂದಿದ್ದೇನೆ.” ಅವನನ್ನು ಅಭಿನಂದಿಸಿ ಪೌಷ್ಯನು “ಭಗವನ್! ನಾನು ಪೌಷ್ಯ. ಏನನ್ನು ಮಾಡಲಿ?” ಎಂದು ಕೇಳಿದನು.
01003108A ತಮುವಾಚೋತ್ತಂಕಃ।
01003108B ಗುರ್ವರ್ಥೇ ಕುಂಡಲಾಭ್ಯಾಮರ್ಥ್ಯಾಗತೋಽಸ್ಮೀತಿ ಯೇ ತೇ ಕ್ಷತ್ರಿಯಯಾ ಪಿನದ್ಧೇ ಕುಂಡಲೇ ತೇ ಭವಾನ್ದಾತುಮರ್ಹತೀತಿ।।
01003109A ತಂ ಪೌಷ್ಯಃ ಪ್ರತ್ಯುವಾಚ।
01003109B ಪ್ರವಿಶ್ಯಾಂತಃಪುರಂ ಕ್ಷತ್ರಿಯಾ ಯಾಚ್ಯತಾಮಿತಿ।।
ಉತ್ತಂಕನು ಹೇಳಿದನು: “ಗುರುದಕ್ಷಿಣೆಯಾಗಿ ಕುಂಡಲಗಳನ್ನು ತೆಗೆದುಕೊಂಡು ಹೋಗಲು ಇಲ್ಲಿಗೆ ಬಂದಿದ್ದೇನೆ. ನೀನು ನಿನ್ನ ಕ್ಷತ್ರಿಣಿಯ ಕರ್ಣಕುಂಡಲಗಳನ್ನು ಕೊಡಬೇಕು.” ಪೌಷ್ಯನು ಅವನಿಗೆ ಉತ್ತರಿಸಿದನು: “ಅಂತಃಪುರವನ್ನು ಪ್ರವೇಶಿಸಿ ಕ್ಷತ್ರಿಣಿಯನ್ನು ಕೇಳಬೇಕು.”
01003110A ಸ ತೇನೈವಮುಕ್ತಃ ಪ್ರವಿಶ್ಯಾಂತಃಪುರಂ ಕ್ಷತ್ರಿಯಾಂ ನಾಪಶ್ಯತ್।।
ಇದನ್ನು ಕೇಳಿದ ಉತ್ತಂಕನು ಅಂತಃಪುರವನ್ನು ಪ್ರವೇಶಿಸಿದನು. ಆದರೆ ಅಲ್ಲಿ ಅವನಿಗೆ ಕ್ಷತ್ರಿಣಿಯು ಕಾಣಲಿಲ್ಲ.
01003111A ಸ ಪೌಷ್ಯಂ ಪುನರುವಾಚ।
01003111B ನ ಯುಕ್ತಂ ಭವತಾ ವಯಮನೃತೇನೋಪಚರಿತುಂ।
01003111C ನ ಹಿ ತೇ ಕ್ಷತ್ರಿಯಾಂತಃಪುರೇ ಸನ್ನಿಹಿತಾ।
01003111D ನೈನಾಂ ಪಶ್ಯಾಮೀತಿ।।
ಅವನು ಪೌಷ್ಯನಿಗೆ ಪುನಃ ಹೇಳಿದನು: “ನೀನು ಈ ರೀತಿ ನನ್ನಲ್ಲಿ ಸುಳ್ಳಾಗಿ ನಡೆದುಕೊಳ್ಳುವುದು ಸರಿಯಲ್ಲ. ಅಂತಃಪುರಕ್ಕೆ ಹೋದರೂ ಅಲ್ಲಿ ನಿನ್ನ ಕ್ಷತ್ರಿಣಿಯು ಕಾಣಲಿಲ್ಲ.”
01003112A ಸ ಏವಮುಕ್ತಃ ಪೌಷ್ಯಸ್ತಂ ಪ್ರತ್ಯುವಾಚ80।
01003112B ಸಂಪ್ರತಿ ಭವಾನುಚ್ಛಿಷ್ಟಃ81।
01003112C ಸ್ಮರ ತಾವತ್।
01003112D ನ ಹಿ ಸಾ ಕ್ಷತ್ರಿಯಾ ಉಚ್ಛಿಷ್ಠೇನಾಶುಚಿನಾ ವಾ ಶಕ್ಯಾ ದ್ರಷ್ಟುಂ।
01003112E ಪತಿವ್ರತಾತ್ವಾದೇಷಾ ನಾಶುಚೇರ್ದರ್ಶನಮುಪೈತೀತಿ।।
ಅದನ್ನು ಕೇಳಿ ಪೌಷ್ಯನು ಉತ್ತರಿಸಿದನು: “ನಿನಗೆ ಮೈಲಿಗೆಯಾಗಿರಬಹುದು. ನೆನಪುಮಾಡಿಕೋ. ಉಚ್ಛಿಷ್ಟರಾದವರು ಅಥವಾ ಅಶುಚಿಯಾದವರು ಆ ಕ್ಷತ್ರಿಣಿಯನ್ನು ನೋಡಲು ಸಾಧ್ಯವಿಲ್ಲ. ಪಾತಿವ್ರತ್ಯದಿಂದ ಅವಳು ಅಶುಚಿಯಾದವರಿಗೆ ಕಂಡು ಬರುವುದಿಲ್ಲ.”
01003113A ಅಥೈವಮುಕ್ತ ಉತ್ತಂಕಃ ಸ್ಮೃತ್ವೋವಾಚ।
01003113B ಅಸ್ತಿ ಖಲು ಮಯೋಚ್ಛಿಷ್ಟೇನೋಪಸ್ಪೃಷ್ಟಂ ಶೀಘ್ರಂ ಗಚ್ಛತಾ ಚೇತಿ82।।
01003114A ತಂ ಪೌಷ್ಯಃ ಪ್ರತ್ಯುವಾಚ।
01003114B ಏತತ್ತದೇವಂ ಹಿ।
01003114C ನ ಗಚ್ಛತೋಪಸ್ಪೃಷ್ಟಂ ಭವತಿ ನ ಸ್ಥಿತೇನೇತಿ83।।
ಇದನ್ನು ಕೇಳಿ ನೆನಪಿಸಿಕೊಂಡು ಉತ್ತಂಕನು ಹೇಳಿದನು: “ಬರುವ ಅವಸರದಲ್ಲಿ ಆಚಮನ ಮಾಡಿರುವುದರಿಂದ ಉಚ್ಛಿಷ್ಟನಾಗಿರಬಹುದು.” ಅದಕ್ಕೆ ಪೌಷ್ಯನು ಉತ್ತರಿಸಿದನು: “ನಡೆಯುವಾಗ ಅಥವಾ ನಿಂತು ಆಚಮನ ಮಾಡುವುದು ಸರಿಯಲ್ಲ.”
01003115A ಅಥೋತ್ತಂಕಸ್ತಥೇತ್ಯುಕ್ತ್ವಾ ಪ್ರಾಙ್ಮುಖ ಉಪವಿಶ್ಯ ಸುಪ್ರಕ್ಷಾಲಿತಪಾಣಿಪಾದವದನೋಽಶಬ್ದಾಭಿರ್ಹೃದಯಂಗಮಾಭಿರದ್ಭಿರುಪಸ್ಪೃಶ್ಯ ತ್ರಿಃ ಪೀತ್ವಾ ದ್ವಿಃ ಪರಿಮೃಜ್ಯ ಖಾನ್ಯದ್ಭಿರುಪಸ್ಪೃಶ್ಯಾಂತಃಪುರಂ ಪ್ರವಿಶ್ಯ ತಾಂ ಕ್ಷತ್ರಿಯಾಮಪಶ್ಯತ್।।
ಆಗ ಉತ್ತಂಕನು ಪೂರ್ವಾಭಿಮುಖವಾಗಿ ಕುಳಿತು, ಕೈಕಾಲು ಮುಖಗಳನ್ನು ಸರಿಯಾಗಿ ತೊಳೆದು ಶಬ್ದಮಾಡದೇ ಹೃದಯವನ್ನು ತಲುಪುವಷ್ಟು ಮಾತ್ರ ನೀರನ್ನು ಮೂರು ಸಾರಿ ಕುಡಿದು, ಎರಡು ಸಾರಿ ಮುಖ, ಕಣ್ಣು, ಕಿವಿ ಮತ್ತು ಮೂಗುಗಳನ್ನು ನೀರಿನಿಂದ ಮುಟ್ಟಿ, ಅಂತಃಪುರವನ್ನು ಪ್ರವೇಶಿಸಿ ಕ್ಷತ್ರಿಣಿಯನ್ನು ಕಂಡನು.
01003116A ಸಾ ಚ ದೃಷ್ಟ್ವೈವೋತ್ತಂಕಮಭ್ಯುತ್ಥಾಯಾಭಿವಾದ್ಯೋವಾಚ।
01003116B ಸ್ವಾಗತಂ ತೇ ಭಗವನ್।
01003116C ಆಜ್ಞಾಪಯ ಕಿಂಕರವಾಣೀತಿ।।
ಉತ್ತಂಕನನ್ನು ನೋಡಿ ಅವಳು ಎದ್ದುನಿಂತು ನಮಸ್ಕರಿಸಿ “ಭಗವನ್! ನಿನಗೆ ಸ್ವಾಗತ. ನನ್ನಿಂದ ಏನಾಗಬೇಕು ಆಜ್ಞಾಪಿಸು” ಎಂದಳು.
01003117A ಸ ತಾಮುವಾಚ।
01003117B ಏತೇ ಕುಂಡಲೇ ಗುರ್ವರ್ಥಂ ಮೇ ಭಿಕ್ಷಿತೇ ದಾತುಮರ್ಹಸೀತಿ।।
01003118A ಸಾ ಪ್ರೀತಾ ತೇನ ತಸ್ಯ ಸದ್ಭಾವೇನ ಪಾತ್ರಮಯಮನತಿಕ್ರಮಣೀಯಶ್ಚೇತಿ ಮತ್ವಾ ತೇ ಕುಂಡಲೇ ಅವಮುಚ್ಯಾಸ್ಮೈ ಪ್ರಾಯಚ್ಛತ್।।
01003119A ಆಹ ಚೈನಂ।
01003119B ಏತೇ ಕುಂಡಲೇ ತಕ್ಷಕೋ ನಾಗರಾಜಃ ಪ್ರಾರ್ಥಯತಿ84।
01003119C ಅಪ್ರಮತ್ತೋ ನೇತುಮರ್ಹಸೀತಿ।।
ಆಗ ಅವನು ಹೇಳಿದನು: “ನಿನ್ನ ಈ ಕುಂಡಲಗಳನ್ನು ಗುರುದಕ್ಷಿಣೆಗಾಗಿ ಬೇಡುತ್ತಿದ್ದೇನೆ. ಕೊಡಬೇಕು.” ಅವನ ಸದ್ಭಾವದಿಂದ ಪ್ರೀತಳಾಗಿ, ಇವನು ಪಾತ್ರನಾಗಿರುವುದರಿಂದ ನಿರಾಕರಿಸಲು ಸಾಧ್ಯವಿಲ್ಲ ಎಂದು ತಿಳಿದು ಕುಂಡಲಗಳನ್ನು ಬಿಚ್ಚಿ ಅವನಿಗೆ ಕೊಟ್ಟ ಅವಳು ಹೇಳಿದಳು: “ಈ ಕುಂಡಲಗಳನ್ನು ನಾಗರಾಜ ತಕ್ಷಕನೂ ಕೂಡ ಕೇಳಿದ್ದಾನೆ85. ಅದ್ದರಿಂದ ಇವುಗಳನ್ನು ಜಾಗ್ರತೆಯಲ್ಲಿ ಕೊಂಡೊಯ್ಯಿ.”
01003120A ಸ ಏವಮುಕ್ತಸ್ತಾಂ ಕ್ಷತ್ರಿಯಾಂ ಪ್ರತ್ಯುವಾಚ।
01003120B ಭವತಿ ಸುನಿರ್ವೃತಾ ಭವ।
01003120C ನ ಮಾಂ ಶಕ್ತಸ್ತಕ್ಷಕೋ ನಾಗರಾಜೋ ಧರ್ಷಯಿತುಮಿತಿ।।
ಕ್ಷಾತ್ರಣಿಯಿಂದ ಈ ರೀತಿ ಕೇಳಿದ ಅವನು ಉತ್ತರಿಸಿದನು: “ಇದರ ಕುರಿತು ಯೋಚಿಸಬೇಡ. ನಾಗರಾಜ ತಕ್ಷಕನಿಗೆ ನನ್ನನ್ನು ಸೋಲಿಸಲು ಸಾಧ್ಯವಿಲ್ಲ.”
01003121A ಸ ಏವಮುಕ್ತ್ವಾ ತಾಂ ಕ್ಷತ್ರಿಯಾಮಾಮಂತ್ರ್ಯ ಪೌಷ್ಯಸಕಾಶಮಾಗಚ್ಛತ್।।
01003122A ಸ ತಂ ದೃಷ್ಟ್ವೋವಾಚ।
01003122B ಭೋಃ ಪೌಷ್ಯ ಪ್ರೀತೋಽಸ್ಮೀತಿ।।
ಕ್ಷಾತ್ರಿಣಿಗೆ ಹೀಗೆ ಹೇಳಿ, ಅವನು ಪೌಷ್ಯನಲ್ಲಿಗೆ ಬಂದನು. ಅವನನ್ನು ನೋಡಿ ಹೇಳಿದನು: “ಪೌಷ್ಯ! ನಾನು ಪ್ರೀತನಾಗಿದ್ದೇನೆ.”
01003123A ತಂ ಪೌಷ್ಯಃ ಪ್ರತ್ಯುವಾಚ।
01003123B ಭಗವಂಶ್ಚಿರಸ್ಯ ಪಾತ್ರಮಾಸಾದ್ಯತೇ।
01003123C ಭವಾಂಶ್ಚ ಗುಣವಾನತಿಥಿಃ।
01003123D ತತ್ಕರಿಷ್ಯೇ ಶ್ರಾದ್ಧಂ86।
01003123E ಕ್ಷಣಃ ಕ್ರಿಯತಾಂ ಇತಿ।।
ಪೌಷ್ಯನು ಉತ್ತರಿಸಿದನು: “ನಿನ್ನಂಥಹ ಪಾತ್ರವುಳ್ಳವನಿಗೆ ದಾನ ಕೊಡುವ ಅವಕಾಶವು ದುರ್ಲಭ. ನೀನೊಬ್ಬ ಗುಣವಂತ ಅತಿಥಿ. ಆದ್ದರಿಂದ ಶ್ರಾದ್ಧ ಮಾಡಲು ಬಯಸುತ್ತೇನೆ. ಸ್ವಲ್ಪ ಹೊತ್ತು ನಿಲ್ಲು.”
01003124A ತಮುತ್ತಂಕಃ ಪ್ರತ್ಯುವಾಚ।
01003124B ಕೃತಕ್ಷಣ ಏವಾಸ್ಮಿ।
01003124C ಶೀಘ್ರಮಿಚ್ಛಾಮಿ ಯಥೋಪಪನ್ನಮನ್ನಮುಪಹೃತಂ ಭವತೇತಿ।।
ಅವನಿಗೆ ಉತ್ತಂಕನು ಉತ್ತರಿಸಿದನು: “ಅವಸರದಲ್ಲಿದ್ದೇನೆ. ಆದ್ದರಿಂದ ಬೇಕಾಗುವ ಅನ್ನ ಮುಂತಾದವುಗಳು ಶೀಘ್ರವಾಗಿ ಬರಲಿ ಎಂದು ಬಯಸುತ್ತೇನೆ.”
01003125A ಸ ತಥೇತ್ಯುಕ್ತ್ವಾ ಯಥೋಪಪನ್ನೇನಾನ್ನೇನೈನಂ ಭೋಜಯಾಮಾಸ।।
01003126A ಅಥೋತ್ತಂಕಃ ಶೀತಮನ್ನಂ ಸಕೇಶಂ ದೃಷ್ಟ್ವಾ ಅಶುಚ್ಯೇತದಿತಿ ಮತ್ವಾ ಪೌಷ್ಯಮುವಾಚ।
ಇದಕ್ಕೆ ಒಪ್ಪಿಕೊಂಡು ಅವನಿಗೆ ಅನುಕೂಲವಾದ ಆಹಾರದಿಂದ ಭೋಜನವನ್ನು ನೀಡಿದನು. ತಂಗಳ ಅನ್ನದಲ್ಲಿ ಕೂದಲನ್ನು ಕಂಡ ಉತ್ತಂಕನು ಅಶುಚಿಯಾದೆನೆಂದು ತಿಳಿದು ಪೌಷ್ಯನಿಗೆ ಹೇಳಿದನು:
01003126B ಯಸ್ಮಾನ್ಮೇ ಅಶುಚ್ಯನ್ನಂ ದದಾಸಿ ತಸ್ಮದನ್ಧೋ ಭವಿಷ್ಯಸೀತಿ।।
01003127A ತಂ ಪೌಷ್ಯಃ ಪ್ರತ್ಯುವಾಚ।
01003127B ಯಸ್ಮಾತ್ತ್ವಮಪ್ಯದುಷ್ಟಮನ್ನಂ ದೂಷಯಸಿ ತಸ್ಮಾದನಪತ್ಯೋ ಭವಿಷ್ಯಸೀತಿ।।
“ನನಗೆ ಅಶುಚಿ ಅನ್ನವನ್ನು ಉಣಿಸಿರುವುದರಿಂದ ನೀನು ಅಂಧನಾಗುತ್ತೀಯೆ!” ಅದಕ್ಕೆ ಪೌಷ್ಯನು ಉತ್ತರಿಸಿದನು: “ಶುದ್ಧ ಅನ್ನವನ್ನು ದೂಷಿಸಿರುವುದರಿಂದ ನಿನಗೆ ಮಕ್ಕಳೇ ಆಗುವುದಿಲ್ಲ!”
01003128A 87ಸೋಽಥ ಪೌಷ್ಯಸ್ತಸ್ಯಾಶುಚಿಭಾವಮನ್ನಸ್ಯಾಗಮಯಾಮಾಸ।।
01003129A ಅಥ ತದನ್ನಂ ಮುಕ್ತಕೇಶ್ಯಾ ಸ್ತ್ರಿಯೋಪಹೃತಂ ಸಕೇಶಮಶುಚಿಮತ್ವೋತ್ತಂಕಂ ಪ್ರಸಾದಯಾಮಾಸ।
01003129B ಭಗವನ್ನಜ್ಞಾನಾದೇತದನ್ನಂ ಸಕೇಶಮುಪಹೃತಂ ಶೀತಂ ಚ।
01003129C ತತ್ ಕ್ಷಾಮಯೇ ಭವಂತಂ।
01003129D ನ ಭವೇಯಮಂಧ ಇತಿ।।
ನಂತರ ನೀಡಿದ ಅನ್ನವನ್ನು ಪರೀಕ್ಷಿಸಿ ಅದು ನಿಜವಾಗಿಯೂ ತಣ್ಣಗಿದೆ ಮತ್ತು ಆ ಅನ್ನವನ್ನು ಮುಕ್ತಕೇಶ ಸ್ತ್ರೀಯೊಬ್ಬಳು ತಯಾರಿಸಿದುದರಿಂದ ಅದರಲ್ಲಿ ಕೂದಲಿದೆ ಎಂದು ಖಾತ್ರಿಮಾಡಿಕೊಂಡ ಪೌಷ್ಯನು: “ಭಗವನ್! ಅಜ್ಞಾನದಿಂದ ನಿನಗೆ ಕೂದಲಿದ್ದ ತಂಗಳನ್ನವನ್ನು ನೀಡಿದೆ. ಕ್ಷಮಿಸಬೇಕು. ನಾನು ಅಂಧನಾಗದಂತೆ ಮಾಡು.”
01003130A ತಮುತ್ತಂಕಃ ಪ್ರತ್ಯುವಾಚ।
01003130B ನ ಮೃಷಾ ಬ್ರವೀಮಿ।
01003130C ಭೂತ್ವಾ ತ್ವಮಂಧೋ ನಚಿರಾದನಂಧೋ ಭವಿಷ್ಯಸೀತಿ।
01003130D ಮಮಾಪಿ ಶಾಪೋ ನ ಭವೇದ್ಭವತಾ ದತ್ತ ಇತಿ।।
ಆಗ ಉತ್ತಂಕನು ಹೇಳಿದನು: “ನಾನು ಹೇಳಿದ್ದುದು ಸುಳ್ಳಾಗುವುದಿಲ್ಲ. ನೀನು ಅಂಧನಾದ ಸ್ವಲ್ಪ ಸಮಯದಲ್ಲಿ ಅನಂಧನಾಗುತ್ತೀಯೆ. ನೀನು ನನಗೆ ಕೊಟ್ಟ ಶಾಪವೂ ನಡೆಯದಂತೆ ಮಾಡು.”
01003131A ತಂ ಪೌಷ್ಯಃ ಪ್ರತ್ಯುವಾಚ।
01003131B ನಾಹಂ ಶಕ್ತಃ ಶಾಪಂ ಪ್ರತ್ಯಾದಾತುಂ।
01003131C ನ ಹಿ ಮೇ ಮನ್ಯುರದ್ಯಾಪ್ಯುಪಶಮಂ ಗಚ್ಛತಿ।
01003131D ಕಿಂಚೈತದ್ಭವತಾ ನ ಜ್ಞಾಯತೇ ಯಥಾ।।
ಆಗ ಪೌಷ್ಯನು ಹೇಳಿದನು: “ಶಾಪವನ್ನು ಹಿಂದೆ ತೆಗೆದುಕೊಳ್ಳಲು ನನಗೆ ಸಾಧ್ಯವಿಲ್ಲ. ನನ್ನ ಸಿಟ್ಟು ಇನ್ನೂ ಕಡಿಮೆಯಾಗಲಿಲ್ಲ. ನಿನಗೆ ಇದು ತಿಳಿದಿಲ್ಲವೇ?
01003132a ನವನೀತಂ ಹೃದಯಂ ಬ್ರಾಹ್ಮಣಸ್ಯ ವಾಚಿ ಕ್ಷುರೋ ನಿಹಿತಸ್ತೀಕ್ಷ್ಣಧಾರಃ।
01003132c ವಿಪರೀತಮೇತದುಭಯಂ88 ಕ್ಷತ್ರಿಯಸ್ಯ ವಾಙ್ನಾವನೀತೀ ಹೃದಯಂ ತೀಕ್ಷ್ಣಧಾರಂ।।
01003133A ಇತಿ।
01003133B ತದೇವಂ ಗತೇ ನ ಶಕ್ತೋಽಹಂ ತೀಕ್ಷ್ಣಹೃದಯತ್ವಾತ್ತಂ ಶಾಪಮನ್ಯಥಾ ಕರ್ತುಂ।
01003133C ಗಮ್ಯತಾಮಿತಿ।।
ಬ್ರಾಹ್ಮಣನ ಹೃದಯವು ಬೆಣ್ಣೆಯಂತೆ ಆದರೆ ಮಾತು ಒಂದು ಹರಿತ ಖಡ್ಗದಂತೆ. ತದ್ವಿರುದ್ಧವಾಗಿ ಒಬ್ಬ ಕ್ಷತ್ರಿಯನ ಮಾತು ಬೆಣ್ಣೆಯ ಹಾಗೆ ಮತ್ತು ಹೃದಯವು ತೀಕ್ಷ್ಣ ಖಡ್ಗದ ಹಾಗೆ. ನನ್ನ ಹೃದಯವು ಇನ್ನೂ ಹರಿತಾಗಿರುವುದರಿಂದ ಶಾಪವನ್ನು ಹಿಂದೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀನು ಈಗ ಹೋಗಬಹುದು.”
01003134A ತಮುತ್ತಂಕಃ ಪ್ರತ್ಯುವಾಚ।
01003134B ಭವತಾಹಮನ್ನಸ್ಯಾಶುಚಿಭಾವಮಾಗಮಯ್ಯ ಪ್ರತ್ಯನುನೀತಃ।
01003134C ಪ್ರಾಕ್ ಚ ತೇಽಭಿಹಿತಂ।
01003134D ಯಸ್ಮಾದದುಷ್ಟಮನ್ನಂ ದೂಷಯಸಿ ತಸ್ಮಾದನಪತ್ಯೋ ಭವಿಷ್ಯಸೀತಿ।
01003134E ದುಷ್ಟೇ ಚಾನ್ನೇ ನೈಷ ಮಮ ಶಾಪೋ ಭವಿಷ್ಯತೀತಿ।।
01003135A ಸಾಧಯಾಮಸ್ತಾವದಿತ್ಯುಕ್ತ್ವಾ ಪ್ರಾತಿಷ್ಠತೋತ್ತಂಕಸ್ತೇ ಕುಂಡಲೇ ಗೃಹೀತ್ವಾ।।
ಉತ್ತಂಕನು ಹೇಳಿದನು: “ನನಗೆ ನೀಡಿದ್ದ ಅನ್ನವು ಅಶುಚಿಯಾದದ್ದು ಎಂದು ನೀನೇ ನೋಡಿದ್ದೀಯೆ. ಆದುದರಿಂದ ಅದುಷ್ಟ ಅನ್ನವನ್ನು ದೂಷಿಸಿರುವುದರಿಂದ ಅನಪತ್ಯನಾಗುತ್ತೀಯೆ ಎಂದು ನೀನು ನನಗಿತ್ತ ಶಾಪವು ಪರಿಣಾಮಕಾರಿಯಾಗುವುದಿಲ್ಲ.” ಹೀಗೆ ಹೇಳಿ ಉತ್ತಂಕನು ಕುಂಡಲಗಳನ್ನು ತೆಗೆದುಕೊಂಡು ಹೋದನು.
01003136A ಸೋಽಪಶ್ಯತ್ಪಥಿ ನಗ್ನಂ ಶ್ರಮಣಮಾಗಚ್ಛಂತಂ89 ಮುಹುರ್ಮುಹುರ್ದೃಶ್ಯಮಾನಮದೃಶ್ಯಮಾನಂ ಚ।
01003136B ಅಥೋತ್ತಂಕಸ್ತೇ ಕುಂಡಲೇ ಭೂಮೌ ನಿಕ್ಷಿಪ್ಯೋದಕಾರ್ಥಂ ಪ್ರಚಕ್ರಮೇ।90।
ದಾರಿಯಲ್ಲಿ ಒಬ್ಬ ನಗ್ನ ಭಿಕ್ಷುಕನು ಅವನ ಕಡೆ ಬರುತ್ತಿರುವುದನ್ನು, ಮತ್ತು ಅವನು ಒಂದು ಕ್ಷಣ ಕಂಡರೆ ಮತ್ತೊಂದು ಕ್ಷಣ ಮರೆಯಾಗುತ್ತಿರುವುದನ್ನು ನೋಡಿದನು. ಆಗ ಉತ್ತಂಕನು ಕುಂಡಲಗಳನ್ನು ಭೂಮಿಯಮೇಲೆ ಇಟ್ಟು ನೀರಿಗೆ ಹೋದನು.
01003137A ಏತಸ್ಮಿನ್ನಂತರೇ ಸ ಶ್ರಮಣಸ್ತ್ವರಮಾಣ91 ಉಪಸೃತ್ಯ ತೇ ಕುಂಡಲೇ ಗೃಹೀತ್ವಾ ಪ್ರಾದ್ರವತ್।
01003137B ತಮುತ್ತಂಕೋಽಭಿಸೃತ್ಯ ಜಗ್ರಾಹ92।
01003137C ಸ93 ತದ್ರೂಪಂ ವಿಹಾಯ ತಕ್ಷಕರೂಪಂ ಕೃತ್ವಾ ಸಹಸಾ ಧರಣ್ಯಾಂ ವಿವೃತಂ ಮಹಾಬಿಲಂ ವಿವೇಶ।।
01003138A ಪ್ರವಿಶ್ಯ ಚ ನಾಗಲೋಕಂ ಸ್ವಭವನಮಗಚ್ಛತ್।
01003138B 94ತಮುತ್ತಂಕೋಽನ್ವಾವಿವೇಶ ತೇನೈವ ಬಿಲೇನ।
01003138C ಪ್ರವಿಶ್ಯ ಚ 95ನಾಗಾನಸ್ತುವದೇಭಿಃ ಶ್ಲೋಕೈಃ।।
ಈ ಮಧ್ಯ ಆ ಭಿಕ್ಷುಕನು ಬೇಗ ಬಂದು ಕುಂಡಲಗಳನ್ನು ಎತ್ತಿಕೊಂಡು ಓಡಿಹೋದನು. ಇದನ್ನು ನೋಡಿ ಉತ್ತಂಕನೂ ಕೂಡ ಅವನನ್ನು ಬೆನ್ನಟ್ಟಿ ಓಡಿದನು. ಆಗ ಅವನು ತನ್ನ ರೂಪವನ್ನು ಬಿಟ್ಟು ತಕ್ಷಕನ ರೂಪವನ್ನು ತಾಳಿ ತಕ್ಷಣವೇ ನೆಲದಲ್ಲಿಯ ಒಂದು ದೊಡ್ಡ ಬಿಲವನ್ನು ಹೊಕ್ಕನು. ಬಿಲವನ್ನು ಪ್ರವೇಶಿಸಿ ನಾಗಲೋಕದಲ್ಲಿರುವ ತನ್ನ ಮನೆಗೆ ಹೋದನು. ಉತ್ತಂಕನೂ ಅದೇ ಬಿಲವನ್ನು ಪ್ರವೇಶಿಸಿದನು. ನಾಗಲೋಗವನ್ನು ಪ್ರವೇಶಿಸಿ ಈ ಶ್ಲೋಕಗಳಿಂದ ನಾಗಗಳನ್ನು ಪ್ರಾರ್ಥಿಸತೊಡಗಿದನು.
01003139a ಯ ಐರಾವತರಾಜಾನಃ ಸರ್ಪಾಃ ಸಮಿತಿಶೋಭನಾಃ।
01003139c ವರ್ಷಂತ96 ಇವ ಜೀಮೂತಾಃ ಸವಿದ್ಯುತ್ಪವನೇರಿತಾಃ।।
01003140a ಸುರೂಪಾಶ್ಚ ವಿರೂಪಾಶ್ಚ97 ತಥಾ ಕಲ್ಮಾಷಕುಂಡಲಾಃ।
01003140c ಆದಿತ್ಯವನ್ನಾಕಪೃಷ್ಠೇ ರೇಜುರೈರಾವತೋದ್ಭವಾಃ।।
01003141a ಬಹೂನಿ ನಾಗವರ್ತ್ಮಾನಿ98 ಗಂಗಾಯಾಸ್ತೀರ ಉತ್ತರೇ।
01003141c 99ಇಚ್ಛೇತ್ಕೋಽರ್ಕಾಂಶುಸೇನಾಯಾಂ ಚರ್ತುಮೈರಾವತಂ ವಿನಾ।।
01003142a ಶತಾನ್ಯಶೀತಿರಷ್ಟೌ ಚ ಸಹಸ್ರಾಣಿ ಚ ವಿಂಶತಿಃ।
01003142c ಸರ್ಪಾಣಾಂ ಪ್ರಗ್ರಹಾ ಯಾಂತಿ ಧೃತರಾಷ್ಟ್ರೋ ಯದೇಜತಿ।।
01003143a ಯೇ ಚೈನಮುಪಸರ್ಪಂತಿ ಯೇ ಚ ದೂರಂ ಪರಂ100 ಗತಾಃ।
01003143c ಅಹಮೈರಾವತಜ್ಯೇಷ್ಠಭ್ರಾತೃಭ್ಯೋಽಕರವಂ ನಮಃ।।
01003144a ಯಸ್ಯ ವಾಸಃ ಕುರುಕ್ಷೇತ್ರೇ ಖಾಂಡವೇ ಚಾಭವತ್ಸದಾ।
01003144c ತಂ ಕಾದ್ರವೇಯಮಸ್ತೌಷಂ ಕುಂಡಲಾರ್ಥಾಯ ತಕ್ಷಕಂ।।
01003145a ತಕ್ಷಕಶ್ಚಾಶ್ವಸೇನಶ್ಚ ನಿತ್ಯಂ ಸಹಚರಾವುಭೌ।
01003145c ಕುರುಕ್ಷೇತ್ರೇ ನಿವಸತಾಂ101 ನದೀಮಿಕ್ಷುಮತೀಮನು।।
01003146a ಜಘನ್ಯಜಸ್ತಕ್ಷಕಸ್ಯ ಶ್ರುತಸೇನೇತಿ ಯಃ ಶ್ರುತಃ।
01003146c ಅವಸದ್ಯೋ ಮಹದ್ದ್ಯುಮ್ನಿ ಪ್ರಾರ್ಥಯನ್ನಾಗಮುಖ್ಯತಾಂ।
01003146e ಕರವಾಣಿ ಸದಾ ಚಾಹಂ ನಮಸ್ತಸ್ಮೈ ಮಹಾತ್ಮನೇ।।
“ಮಿಂಚಿನಿಂದೊಡಗೂಡಿದ ಮೋಡಗಳು ಗಾಳಿಯಿಂದ ತಳ್ಳಲ್ಪಟ್ಟು ಮಳೆಸುರಿಸುವಂತೆ ಯುದ್ಧದಲ್ಲಿ ಶೋಭಿಸುವ ಐರಾವತ ರಾಜನ ಸರ್ಪಗಳೇ! ಸುಂದರ ರೂಪವುಳ್ಳವರೇ! ಬೇರೆ ಬೇರೆ ರೂಪಗಳನ್ನು ಧರಿಸಬಲ್ಲವರೇ! ಬಣ್ಣ ಬಣ್ಣದ ಕುಂಡಲಗಳನ್ನು ಧರಿಸಿದವರೇ! ಆಕಾಶದಲ್ಲಿ ಆದಿತ್ಯನಂತೆ ಹೊಳೆಯುತ್ತಿರುವವರೇ! ಐರಾವತನ ಮಕ್ಕಳೇ! ಗಂಗಾತೀರದ ಉತ್ತರದಲ್ಲಿ ಬಹಳ ಸಾಲುಗಳಲ್ಲಿರುವ ನಾಗಗಳೇ! ಐರಾವತನನ್ನು ಬಿಟ್ಟು ಯಾರು ಸುಡುತ್ತಿರುವ ಸೂರ್ಯನ ಕಿರಣಗಳಡಿಯಲ್ಲಿ ಸಂಚರಿಸಲು ಇಚ್ಛಿಸುವರು? ದೃತರಾಷ್ಟ್ರನು ಹೊರಟರೆ ಅವನ ಹಿಂದೆ 28,000 ನಾಗಗಳೂ ಹೋಗುತ್ತವೆ. ಹತ್ತಿರದಲ್ಲಿರಲಿ ಅಥವಾ ದೂರವಿರಲಿ, ಐರಾವತವನ್ನು ತಮ್ಮ ಅಣ್ಣನನ್ನಾಗಿ ಹೊಂದಿರುವ ಎಲ್ಲ ನಾಗಗಳಿಗೂ ನನ್ನ ನಮನಗಳು. ನನಗೆ ನನ್ನ ಕುಂಡಲಗಳನ್ನು ಹಿಂದಿರುಗಿಸಲು ಮೊದಲು ಕುರುಕ್ಷೇತ್ರ ಮತ್ತು ಖಾಂಡವಗಳಲ್ಲಿ ವಾಸಿಸಿದ ನಾಗರಾಜ ತಕ್ಷಕನನ್ನು ಪ್ರಾರ್ಥಿಸುತ್ತೇನೆ. ತಕ್ಷಕ ಮತ್ತು ಅಶ್ವಸೇನರು ಕುರುಕ್ಷೇತ್ರದಲ್ಲಿ ಇಕ್ಷುಮತಿ ನದಿಯ ತಟದಲ್ಲಿ ವಾಸಿಸುತ್ತಿರುವಾಗ ನಿತ್ಯವೂ ಸಹಚರರಿದ್ದರು. ಮಹಾದ್ಯುಮ್ನಿ ಎಂಬಲ್ಲಿ ನಾಗಮುಖ್ಯನಾಗಲು ಪ್ರಾರ್ಥಿಸುತ್ತ ವಾಸಿಸುತ್ತಿದ್ದ ತಕ್ಷಕನ ಜಘನ್ಯಜ ಶ್ರುತಸೇನನೆಂದು ಕರೆಯಲ್ಪಡುವ ಮಹಾತ್ಮನಿಗೂ ನಾನು ನಮಸ್ಕರಿಸುತ್ತೇನೆ.”
01003147A 102ಏವಂ ಸ್ತುವನ್ನಪಿ ನಾಗಾನ್ಯದಾ ತೇ ಕುಂಡಲೇನಾಲಭದಥಾಪಶ್ಯತ್ಸ್ತ್ರಿಯೌ ತಂತ್ರೇ ಅಧಿರೋಪ್ಯ ಪಟಂ ವಯಂತ್ಯೌ।।
01003148A ತಸ್ಮಿಂಶ್ಚ ತಂತ್ರೇ ಕೃಷ್ಣಾಃ ಸಿತಾಶ್ಚ ತಂತವಃ।
01003148B ಚಕ್ರಂ ಚಾಪಶ್ಯತ್ಷಢ್ಭಿಃ ಕುಮಾರೈಃ ಪರಿವರ್ತ್ಯಮಾನಂ।
01003148C ಪುರುಷಂ ಚಾಪಶ್ಯದ್ದರ್ಶನೀಯಂ।।
ಈ ರೀತಿ ನಾಗಗಳ ಸ್ತುತಿಗೈದರೂ ಕುಂಡಲಗಳು ದೊರೆಯದೇ ಇದ್ದಾಗ ಅವನು ಒಂದು ಮಗ್ಗವನ್ನೇರಿ ವಸ್ತ್ರವೊಂದನ್ನು ನೇಯುತ್ತಿರುವ ಇಬ್ಬರು ಸ್ತ್ರೀಯರನ್ನು ಕಂಡನು. ಮಗ್ಗದ ಮೇಲೆ ಕಪ್ಪು ಮತ್ತು ಬಿಳುಪಿನ ನೂಲುಗಳಿದ್ದವು. ಅಲ್ಲಿ ಅವನು ಆರು ಕುಮಾರರು ಒಂದು ಚಕ್ರವನ್ನು ತಿರುಗಿಸುತ್ತಿರುವುದನ್ನೂ ಮತ್ತು ಕುದುರೆಯನ್ನೇರಿದ ಸುಂದರ ಪುರುಷನೊಬ್ಬನನ್ನೂ ನೋಡಿದನು.
01003149A ಸ ತಾನ್ಸರ್ವಾಂಸ್ತುಷ್ಟಾವ ಏಭಿರ್ಮಂತ್ರವಾದಶ್ಲೋಕೈಃ103।।
01003150a ತ್ರೀಣ್ಯರ್ಪಿತಾನ್ಯತ್ರ ಶತಾನಿ ಮಧ್ಯೇ ಷಷ್ಟಿಶ್ಚ ನಿತ್ಯಂ ಚರತಿ ಧ್ರುವೇಽಸ್ಮಿನ್।
01003150c ಚಕ್ರೇ ಚತುರ್ವಿಂಶತಿಪರ್ವಯೋಗೇ ಷಢ್ಯತ್ಕುಮಾರಾಃ ಪರಿವರ್ತಯಂತಿ।।
01003151a ತಂತ್ರಂ ಚೇದಂ ವಿಶ್ವರೂಪಂ ಯುವತ್ಯೌ ವಯತಸ್ತಂತೂನ್ಸತತಂ ವರ್ತಯಂತ್ಯೌ।
01003151c ಕೃಷ್ಣಾನ್ಸಿತಾಂಶ್ಚೈವ ವಿವರ್ತಯಂತ್ಯೌ ಭೂತಾನ್ಯಜಸ್ರಂ ಭುವನಾನಿ ಚೈವ।।
01003152a ವಜ್ರಸ್ಯ ಭರ್ತಾ ಭುವನಸ್ಯ ಗೋಪ್ತಾ ವೃತ್ರಸ್ಯ ಹಂತಾ ನಮುಚೇರ್ನಿಹಂತಾ।
01003152c ಕೃಷ್ಣೇ ವಸಾನೋ ವಸನೇ ಮಹಾತ್ಮಾ ಸತ್ಯಾನೃತೇ ಯೋ ವಿವಿನಕ್ತಿ ಲೋಕೇ।।
01003153a ಯೋ ವಾಜಿನಂ ಗರ್ಭಮಪಾಂ ಪುರಾಣಂ ವೈಶ್ವಾನರಂ ವಾಹನಮಭ್ಯುಪೇತಃ।
01003153c ನಮಃ ಸದಾಸ್ಮೈ ಜಗದೀಶ್ವರಾಯ ಲೋಕತ್ರಯೇಶಾಯ ಪುರಂದರಾಯ।।
ಆಗ ಅವರೆಲ್ಲರನ್ನೂ ಈ ಮಂತ್ರಶ್ಲೋಕಗಳಿಂದ ಸ್ತುತಿಸಿ ಸಂತುಷ್ಟಗೊಳಿಸಿದನು. “ಅವಿರತವಾಗಿ ನಿರ್ದಿಷ್ಟವಾಗಿ ಆರು ಕುಮಾರರಿಂದ ತಿರುಗಿಸಲ್ಪಡುತ್ತಿರುವ ಈ ಚಕ್ರದ ಪರಿಧಿಯು ಪರ್ವಯೋಗಗಳನ್ನು ಸೂಚಿಸುವ 24 ಗುರುತುಗಳನ್ನು ಹೊಂದಿದೆ ಮತ್ತು ಮಧ್ಯದಲ್ಲಿ 300 ಹಲ್ಲುಗಳಿಂದ ಕೂಡಿದೆ. ವಿಶ್ವರೂಪಿ ಈ ಯುವತಿಯರೀರ್ವರು ಕಪ್ಪು ಮತ್ತು ಬಿಳುಪಿನ ನೂಲುಗಳಿಂದ ವಸ್ತ್ರವನ್ನು ಸತತವಾಗಿ ನೇಯುವುದರ ಮೂಲಕ ಅಸಂಖ್ಯ ವಿಶ್ವಗಳನ್ನು ಅಸಂಖ್ಯ ಜೀವಿಗಳನ್ನು ಸೃಷ್ಟಿಸುತ್ತಿದ್ದಾರೆ. ವಜ್ರದ ಒಡೆಯ! ಭುವನ ರಕ್ಷಕ! ವೃತ್ರ ಹಂತಕ! ನಮೂಚಿ ಹಂತಕ! ಕಪ್ಪು ವಸ್ತ್ರವನ್ನು ಧರಿಸಿದ ಮಹಾತ್ಮ! ಲೋಕದಲ್ಲಿ ಸತ್ಯ ಮತ್ತು ಅಸತ್ಯಗಳನ್ನು ತೋರಿಸಿಕೊಡುವವನೇ! ಹಿಂದೆ ಸಮುದ್ರದ ಗರ್ಭದಿಂದ ತೆಗೆದ, ವೈಶ್ವಾನರನಂತಿರುವ ಅಶ್ವವನ್ನು ವಾಹನವನ್ನಾಗಿ ಬಳಸಿದ, ಲೋಕತ್ರಯಗಳ ಈಶ! ಪುರಂದರ! ಜಗದೀಶ್ವರ! ನಿನಗೆ ನನ್ನ ನಮನಗಳು.”
01003154A ತತಃ ಸ ಏನಂ ಪುರುಷಃ ಪ್ರಾಹ।
01003154B ಪ್ರೀತೋಽಸ್ಮಿ ತೇಽಹಮನೇನ ಸ್ತೋತ್ರೇಣ।
01003154C ಕಿಂ ತೇ ಪ್ರಿಯಂ ಕರವಾಣೀತಿ।।
01003155A ಸ ತಮುವಾಚ।
01003155B ನಾಗಾ ಮೇ ವಶಮೀಯುರಿತಿ।।
01003156A ಸ ಏನಂ ಪುರುಷಃ ಪುನರುವಾಚ।
01003156B ಏತಮಶ್ವಮಪಾನೇ ಧಮಸ್ವೇತಿ।।
ಆಗ ಆ ಪುರುಷನು ಅವನಿಗೆ ಹೇಳಿದನು: “ನಿನ್ನ ಸ್ತೋತ್ರಗಳಿಂದ ನಾನು ಪ್ರೀತನಾಗಿದ್ದೇನೆ. ನಿನಗೆ ಪ್ರಿಯವಾದ ಏನನ್ನು ಮಾಡಲಿ?” ಅದಕ್ಕೆ ಅವನು ಹೇಳಿದನು: “ನಾಗಗಳು ನನ್ನ ವಶದಲ್ಲಾಗಲಿ!” ಪುರುಷನು ಹೇಳಿದನು: “ಈ ಕುದುರೆಯ ಗುದದ್ವಾರದಲ್ಲಿ ಊದು.”
01003157A ಸ ತಮಶ್ವಮಪಾನೇಽಧಮತ್।
01003157B ಅಥಾಶ್ವಾದ್ಧಮ್ಯಮಾನಾತ್ಸರ್ವಸ್ರೋತೋಭ್ಯಃ ಸಧೂಮಾರ್ಚಿಷೋಽಗ್ನೇರ್ನಿಷ್ಪೇತುಃ।।
01003158A ತಾಭಿರ್ನಾಗಲೋಕೋ ಧೂಪಿತಃ।।
ಅವನು ಕುದುರೆಯ ಗುದದ್ವಾರದಲ್ಲಿ ಊದಿದನು. ಕುದುರೆಯ ಎಲ್ಲ ರಂಧ್ರಗಳಿಂದಲೂ ಹೊಗೆಯಿಂದೊಡಗೂಡಿದ ಬೆಂಕಿಯ ಜ್ವಾಲೆಗಳು ಹೊರಹೊಮ್ಮಿದವು. ಇಡೀ ನಾಗಲೋಕವೇ ಹೊಗೆಯಿಂದ ತುಂಬಿಕೊಂಡಿತು.
01003159A ಅಥ ಸಸಂಭ್ರಮಸ್ತಕ್ಷಕೋಽಗ್ನಿತೇಜೋಭಯವಿಷಣ್ಣಸ್ತೇ ಕುಂಡಲೇ ಗೃಹೀತ್ವಾ ಸಹಸಾ ಸ್ವಭವನಾನ್ನಿಷ್ಕ್ರಮ್ಯೋತ್ತಂಕಮುವಾಚ।
01003159B ಏತೇ ಕುಂಡಲೇ ಪ್ರತಿಗೃಹ್ಣಾತು ಭವಾನಿತಿ।।
ಆಗ ಅಗ್ನಿತೇಜೋಭಯದಿಂದ ಸಂಭ್ರಾಂತಿಹೊಂದಿ ವಿಷಣ್ಣನಾದ ತಕ್ಷಕನು ಅವಸರದಲ್ಲಿ ಕುಂಡಲಗಳನ್ನು ಹಿಡಿದು ಸ್ವಭವನದಿಂದ ಹೊರಬಿದ್ದು ಉತ್ತಂಕನಿಗೆ “ನಿನ್ನ ಈ ಕುಂಡಲಗಳನ್ನು ಪ್ರತಿಗ್ರಹಿಸಬೇಕು” ಎಂದನು.
01003160A ಸ ತೇ ಪ್ರತಿಜಗ್ರಾಹೋತ್ತಂಕಃ।
01003160B ಕುಂಡಲೇ ಪ್ರತಿಗೃಹ್ಯಾಚಿಂತಯತ್।
01003160C ಅದ್ಯ ತತ್ಪುಣ್ಯಕಮುಪಾಧ್ಯಾಯಿನ್ಯಾಃ।
01003160D ದೂರಂ ಚಾಹಮಭ್ಯಾಗತಃ।
01003160E ಕಥಂ ನು ಖಲು ಸಂಭಾವಯೇಯಮಿತಿ।।
ಉತ್ತಂಕನು ಆ ಕುಂಡಲಗಳನ್ನು ಸ್ವೀಕರಿಸಿ ಯೋಚಿಸಿದನು: “ಇಂದು ಉಪಾಧ್ಯಾಯಿನಿಯ ಪುಣ್ಯಕ ದಿನ. ಆದರೆ ನಾನು ತುಂಬಾ ದೂರ ಬಂದುಬಿಟ್ಟಿದ್ದೇನೆ. ಇದು ಹೇಗೆ ತಾನೇ ಸಾಧ್ಯ?”
01003161A ತತ ಏನಂ ಚಿಂತಯಾನಮೇವ ಸ ಪುರುಷ ಉವಾಚ।
01003161B ಉತ್ತಂಕ ಏನಮಶ್ವಮಧಿರೋಹ।
01003161C ಏಷ ತ್ವಾಂ ಕ್ಷಣಾದೇವೋಪಾಧ್ಯಾಯಕುಲಂ ಪ್ರಾಪಯಿಷ್ಯತೀತಿ।।
ಈ ರೀತಿ ಚಿಂತಿಸುತ್ತಿದ್ದಾಗ ಆ ಪುರುಷನು ಹೇಳಿದನು: “ಉತ್ತಂಕ! ಈ ಅಶ್ವವನ್ನೇರು. ಇದು ನಿನ್ನನ್ನು ಕ್ಷಣಮಾತ್ರದಲ್ಲಿ ಉಪಾಧ್ಯಾಯನ ಮನೆಗೆ ತಲುಪಿಸುತ್ತದೆ.”
01003162A ಸ ತಥೇತ್ಯುಕ್ತ್ವಾ ತಮಶ್ವಮಧಿರುಹ್ಯ ಪ್ರತ್ಯಾಜಗಾಮೋಪಾಧ್ಯಾಯಕುಲಂ।
01003162B ಉಪಾಧ್ಯಾಯಿನೀ ಚ ಸ್ನಾತಾ ಕೇಶಾನಾವಪಯಂತ್ಯುಪವಿಷ್ಟೋತ್ತಂಕೋ ನಾಗಚ್ಛತೀತಿ ಶಾಪಾಯಾಸ್ಯ ಮನೋ ದಧೇ।।
ಇದನ್ನು ಕೇಳಿ ಅವನು ಆ ಕುದುರೆಯನ್ನೇರಿ ಉಪಾಧ್ಯಾಯನ ಮನೆಯನ್ನು ತಲುಪಿದನು. ಸ್ನಾನ ಮಾಡಿ ತಲೆಗೂದಲನ್ನು ಸಿಂಗರಿಸಿಕೊಳ್ಳುತ್ತಿದ್ದ ಉಪಾಧ್ಯಾಯನಿಯು “ಉತ್ತಂಕನು ಇನ್ನೂ ಬಂದಿಲ್ಲವಲ್ಲ” ಎಂದು ಅವನನ್ನು ಶಪಿಸುವವಳಿದ್ದಳು.
01003163A ಅಥೋತ್ತಂಕಃ ಪ್ರವಿಶ್ಯ ಉಪಾಧ್ಯಾಯಿನೀಮಭ್ಯವಾದಯತ್104।
01003163B ತೇ ಚಾಸ್ಯೈ ಕುಂಡಲೇ ಪ್ರಾಯಚ್ಛತ್।।
01003164A ಸಾ ಚೈನಂ ಪ್ರತ್ಯುವಾಚ।
01003164B ಉತ್ತಂಕ ದೇಶೇ ಕಾಲೇಽಭ್ಯಾಗತಃ।
01003164C ಸ್ವಾಗತಂ ತೇ ವತ್ಸ।
01003164D ಮನಾಗಸಿ ಮಯಾ ನ ಶಪ್ತಃ।
01003164E ಶ್ರೇಯಸ್ತವೋಪಸ್ಥಿತಂ।
01003164F ಸಿದ್ಧಿಮಾಪ್ನುಹೀತಿ।।
ಅದೇ ವೇಳೆಗೆ ಉತ್ತಂಕನು ಪ್ರವೇಶಿಸಿ ಉಪಾಧ್ಯಾಯಿನಿಯನ್ನು ನಮಸ್ಕರಿಸಿ ಅವಳಿಗೆ ಕುಂಡಲಗಳನ್ನಿತ್ತನು. ಅವಳು ಉತ್ತರಿಸಿದಳು: “ಉತ್ತಂಕ! ನೀನು ಸರಿಯಾದ ಹೊತ್ತಿಗೆ ಸರಿಯಾದ ಸ್ಥಳಕ್ಕೆ ಬಂದಿದ್ದೀಯೆ. ವತ್ಸ! ನಿನಗೆ ಸ್ವಾಗತ. ಅನಪರಾಧಿಯಾದ ನಿನ್ನನ್ನು ನಾನು ಶಪಿಸಲಿಲ್ಲ. ನಿನಗೆ ಶ್ರೇಯಸ್ಸಾಗುತ್ತದೆ. ಸಿದ್ಧಿಯನ್ನು ಹೊಂದುತ್ತೀಯೆ!”
01003165A ಅಥೋತ್ತಂಕ ಉಪಾಧ್ಯಾಯಮಭ್ಯವಾದಯತ್।
01003165B ತಮುಪಾಧ್ಯಾಯಃ ಪ್ರತ್ಯುವಾಚ।
01003165C ವತ್ಸೋತ್ತಂಕ ಸ್ವಾಗತಂ ತೇ।
01003165D ಕಿಂ ಚಿರಂ ಕೃತಮಿತಿ।।
ಬಳಿಕ ಉತ್ತಂಕನು ಉಪಾಧ್ಯಾಯನಿಗೆ ನಮಸ್ಕರಿಸಿದನು. ಉಪಾಧ್ಯಾಯನು ಅವನಿಗೆ ಹೇಳಿದನು: “ವತ್ಸ ಉತ್ತಂಕ! ನಿನಗೆ ಸ್ವಾಗತ! ಏಕೆ ತಡಮಾಡಿದೆ?”
01003166A ತಮುತ್ತಂಕ ಉಪಾಧ್ಯಾಯಂ ಪ್ರತ್ಯುವಾಚ।
01003166B ಭೋಸ್ತಕ್ಷಕೇಣ ನಾಗರಾಜೇನ ವಿಘ್ನಃ ಕೃತೋಽಸ್ಮಿನ್ ಕರ್ಮಣಿ।
01003166C ತೇನಾಸ್ಮಿ ನಾಗಲೋಕಂ ನೀತಃ105।।
01003167A ತತ್ರ ಚ ಮಯಾ ದೃಷ್ಟೇ ಸ್ತ್ರಿಯೌ ತಂತ್ರೇಽಧಿರೋಪ್ಯ ಪಟಂ ವಯಂತ್ಯೌ।
01003167B ತಸ್ಮಿಂಶ್ಚ ತಂತ್ರೇ ಕೃಷ್ಣಾಃ ಸಿತಾಶ್ಚ ತಂತವಃ।
01003167C ಕಿಂ ತತ್।।
01003168A ತತ್ರ ಚ ಮಯಾ ಚಕ್ರಂ ದೃಷ್ಟಂ ದ್ವಾದಶಾರಂ।
01003168B ಷಟ್ಚೈನಂ ಕುಮಾರಾಃ ಪರಿವರ್ತಯಂತಿ।
01003168C ತದಪಿ ಕಿಂ106।।
01003169A ಪುರುಷಶ್ಚಾಪಿ ಮಯಾ ದೃಷ್ಟಃ।
01003169B ಸ ಪುನಃ ಕಃ।।
01003170A ಅಶ್ವಶ್ಚಾತಿಪ್ರಮಾಣಯುಕ್ತಃ।
01003170B ಸ ಚಾಪಿ ಕಃ।।
01003171A ಪಥಿ ಗಚ್ಛತಾ ಮಯಾ ಋಷಭೋ ದೃಷ್ಟಃ।
01003171B ತಂ ಚ ಪುರುಷೋಽಧಿರೂಢಃ।
01003171C ತೇನಾಸ್ಮಿ ಸೋಪಚಾರಮುಕ್ತಃ।
01003171D ಉತ್ತಂಕಾಸ್ಯ ಋಷಭಸ್ಯ ಪುರೀಷಂ ಭಕ್ಷಯ।
01003171E ಉಪಾಧ್ಯಾಯೇನಾಪಿ ತೇ ಭಕ್ಷಿತಮಿತಿ।
01003171F ತತಸ್ತದ್ವಚನಾನ್ಮಯಾ ತದೃಷಭಸ್ಯ ಪುರೀಷಮುಪಯುಕ್ತಂ107।
01003171G ತದಿಚ್ಛಾಮಿ ಭವತೋಪದಿಷ್ಟಂ ಕಿಂ ತದಿತಿ108।।
ಉತ್ತಂಕನು ಉಪಾಧ್ಯಾಯನಿಗೆ ಉತ್ತರಿಸಿದನು: “ಸ್ವಾಮಿ! ನನ್ನ ಕಾರ್ಯದಲ್ಲಿ ವಿಘ್ನವನ್ನು ತಂದೊಡ್ಡಿದ ನಾಗರಾಜ ತಕ್ಷಕನಿಂದ ನಾನು ನಾಗಲೋಕದವರೆಗೆ ಎಳೆದೊಯ್ಯಲ್ಪಟ್ಟೆ. ಅಲ್ಲಿ ನಾನು ಸ್ತ್ರೀಯರೀರ್ವರು ಕಪ್ಪು ಮತ್ತು ಬಿಳಿ ನೂಲುಗಳಿಂದ ಬಟ್ಟೆಯನ್ನು ನೇಯುತ್ತಿರುವುದನ್ನು ನೋಡಿದೆ. ಅವರ್ಯಾರು? ಮತ್ತು ಅಲ್ಲಿ ಹನ್ನೆರಡು ಅರಗಳಿರುವ ಚಕ್ರವನ್ನು ಆರು ಕುಮಾರರು ತಿರುಗಿಸುತ್ತಿರುವುದನ್ನೂ ನೋಡಿದೆ. ಅವರು ಯಾರು? ಅಶ್ವವನ್ನೇರಿದ್ದ ಪುರುಷನೋರ್ವನನ್ನೂ ನೋಡಿದೆ. ಅವನು ಯಾರು? ಕುದುರೆಯು ಬಹಳ ದೊಡ್ಡದಾಗಿತ್ತು. ಅದು ಏನು? ಹೋಗುವಾಗ ದಾರಿಯಲ್ಲಿ ಒಂದು ಹೋರಿಯನ್ನು ನೋಡಿದೆ. ಅದನ್ನು ಒಬ್ಬ ಪುರುಷನು ಸವಾರಿಮಾಡುತ್ತಿದ್ದನು. ಅವನು ನನಗೆ ಪ್ರೀತಿಯಿಂದ “ಉತ್ತಂಕ! ಹೋರಿಯ ಸಗಣಿಯನ್ನು ತಿನ್ನು!” ಎಂದನು. ಅದೂ ಕೂಡ ಏನೆಂದು ನಿನ್ನಿಂದ ತಿಳಿಯಲು ಬಯಸುತ್ತೇನೆ.”
01003172A ತೇನೈವಮುಕ್ತ ಉಪಾಧ್ಯಾಯಃ ಪ್ರತ್ಯುವಾಚ।
01003172B ಯೇ ತೇ ಸ್ತ್ರಿಯೌ ಧಾತಾ ವಿಧಾತಾ ಚ।
01003172C ಯೇ ಚ ತೇ ಕೃಷ್ಣಾಃ ಸಿತಾಶ್ಚ ತಂತವಸ್ತೇ ರಾತ್ರ್ಯಹನೀ।।
01003173A ಯದಪಿ ತಚ್ಚಕ್ರಂ ದ್ವಾದಶಾರಂ ಷಟ್ಕುಮಾರಾಃ ಪರಿವರ್ತಯಂತಿ ತೇ ಋತವಃ ಷಟ್ಸಂವತ್ಸರಶ್ಚಕ್ರಂ109।
01003173B ಯಃ ಪುರುಷಃ ಸ ಪರ್ಜನ್ಯಃ।
01003173C ಯೋಽಶ್ವಃ ಸೋಽಗ್ನಿಃ।।
01003174A ಯ ಋಷಭಸ್ತ್ವಯಾ ಪಥಿ ಗಚ್ಛತಾ ದೃಷ್ಟಃ ಸ ಐರಾವತೋ ನಾಗರಾಜಃ।
01003174B ಯಶ್ಚೈನಂ ಅಧಿರೂಢಃ ಸ ಇಂದ್ರಃ।
01003174C ಯದಪಿ ತೇ ಪುರೀಷಂ ಭಕ್ಷಿತಂ ತಸ್ಯ ಋಷಭಸ್ಯ ತದಮೃತಂ।।
01003175A ತೇನ ಖಲ್ವಸಿ ನ ವ್ಯಾಪನ್ನಸ್ತಸ್ಮಿನ್ನಾಗಭವನೇ।
01003175B ಸ ಚಾಪಿ ಮಮ ಸಖಾ ಇಂದ್ರಃ।।
01003176A ತದನುಗ್ರಹಾತ್ಕುಂಡಲೇ ಗೃಹೀತ್ವಾ ಪುನರಭ್ಯಾಗತೋಽಸಿ।
01003176B ತತ್ಸೌಮ್ಯ ಗಮ್ಯತಾಂ।
01003176C ಅನುಜಾನೇ ಭವಂತಂ।
01003176D ಶ್ರೇಯೋಽವಾಪ್ಸ್ಯಸೀತಿ।।
ಉಪಾಧ್ಯಾಯನು ಉತ್ತರಿಸಿದನು: “ಆ ಸ್ತ್ರೀಯರು ಧಾತಾ ಮತ್ತು ವಿಧಾತರು. ಆ ಕಪ್ಪು ಮತ್ತು ಬಿಳಿ ತಂತುಗಳು ರಾತ್ರಿ-ಹಗಲುಗಳು. ಆರು ಕುಮಾರರಿಂದ ತಿರುಗಿಸಲ್ಪಡುತ್ತಿದ್ದ ಹನ್ನೆರಡು ಅರಗಳ ಆ ಚಕ್ರವು ಆರು ಋತುಗಳಿರುವ ವರ್ಷಚಕ್ರ. ಆ ಪುರುಷನು ಪರ್ಜನ್ಯ110 ಮತ್ತು ಕುದುರೆಯು ಅಗ್ನಿ. ಹೋಗುವಾಗ ದಾರಿಯಲ್ಲಿ ನೀನು ನೋಡಿದ ಹೋರಿಯು ಆನೆಗಳ ರಾಜ ಐರಾವತ. ಅದರ ಮೇಲೆ ಸವಾರಿಮಾಡುತ್ತಿದ್ದವನು ಇಂದ್ರ. ಮತ್ತು ನೀನು ಭಕ್ಷಿಸಿದ ಆ ಹೋರಿಯ ಸಗಣಿಯು ಅಮೃತ. ನನ್ನ ಸಖ ಇಂದ್ರನ ಸಹಾಯದಿಂದ ನೀನು ನಾಗಭವನದಲ್ಲಿ ಏನೂ ತೊಂದರೆಯನ್ನು ಅನುಭವಿಸಲಿಲ್ಲ. ಅವನ ಅನುಗ್ರಹದಿಂದಲೇ ನೀನು ಕುಂಡಲಗಳನ್ನು ತೆಗೆದುಕೊಂಡು ಹಿಂದಿರುಗಿರುವೆ. ಸೌಮ್ಯ! ನೀನು ಹೋಗಬಹುದು. ನಿನಗೆ ನನ್ನ ಅನುಮತಿ ಇದೆ. ನಿನಗೆ ಶ್ರೇಯಸ್ಸಾಗುತ್ತದೆ.”
01003177A ಸ ಉಪಾಧ್ಯಾಯೇನಾನುಜ್ಞಾತ ಉತ್ತಂಕಃ ಕ್ರುದ್ಧಸ್ತಕ್ಷಕಸ್ಯ ಪ್ರತಿಚಿಕೀರ್ಷಮಾಣೋ ಹಾಸ್ತಿನಪುರಂ ಪ್ರತಸ್ಥೇ।।
ಉಪಾಧ್ಯಾಯನನ್ನು ಬೀಳ್ಕೊಂಡು, ತಕ್ಷಕನ ಮೇಲೆ ಸಿಟ್ಟಿಗೆದ್ದ ಉತ್ತಂಕನು ಅವನ ಮೇಲೆ ಸೇಡು ತೀರಿಸುವ ಉದ್ದೇಶದಿಂದ ಹಸ್ತಿನಾಪುರಕ್ಕೆ ಹೊರಟನು.
01003178a ಸ ಹಾಸ್ತಿನಪುರಂ ಪ್ರಾಪ್ಯ ನಚಿರಾದ್ದ್ವಿಜಸತ್ತಮಃ।
01003178c ಸಮಾಗಚ್ಛತರಾಜಾನಮುತ್ತಂಕೋ ಜನಮೇಜಯಂ।।
ಹಸ್ತಿನಾಪುರವನ್ನು ತಲುಪಿದೊಡನೆಯೇ ಆ ದ್ವಿಜಸತ್ತಮ ಉತ್ತಂಕನು ರಾಜ ಜನಮೇಜಯನ ಬಳಿ ಹೋದನು.
01003179a ಪುರಾ ತಕ್ಷಶಿಲಾತಸ್ತಂ ನಿವೃತ್ತಮಪರಾಜಿತಂ।
01003179c ಸಮ್ಯಗ್ವಿಜಯಿನಂ ದೃಷ್ಟ್ವಾ ಸಮಂತಾನ್ಮಂತ್ರಿಭಿರ್ವೃತಂ।।
01003180a ತಸ್ಮೈ ಜಯಾಶಿಷಃ ಪೂರ್ವಂ ಯಥಾನ್ಯಾಯಂ ಪ್ರಯುಜ್ಯ ಸಃ।
01003180c ಉವಾಚೈನಂ ವಚಃ ಕಾಲೇ ಶಬ್ದಸಂಪನ್ನಯಾ ಗಿರಾ।।
ಅದಕ್ಕೂ ಮೊದಲು ತಕ್ಷಶಿಲೆಯನ್ನು ಗೆದ್ದು ಹಿಂದಿರುಗಿ, ಸಾಮಂತರು ಮತ್ತು ಮಂತ್ರಿಗಳಿಂದ ಸುತ್ತುವರೆದಿದ್ದ ಆ ವಿಜಯಿಯನ್ನು ಕಂಡು, ಯಥಾನ್ಯಾಯವಾಗಿ ಮೊದಲು ಜಯಾಶೀರ್ವಾದಗಳನ್ನು ನೀಡಿ, ಸರಿಯಾದ ಸಮಯದಲ್ಲಿ ಶಬ್ದ ಸಂಪನ್ನ ವಾಣಿಯಲ್ಲಿ ಹೇಳಿದನು:
01003181a ಅನ್ಯಸ್ಮಿನ್ಕರಣೀಯೇ ತ್ವಂ ಕಾರ್ಯೇ ಪಾರ್ಥಿವಸತ್ತಮ।
01003181c ಬಾಲ್ಯಾದಿವಾನ್ಯದೇವ ತ್ವಂ ಕುರುಷೇ ನೃಪಸತ್ತಮ।।
“ಪಾರ್ಥಿವಸತ್ತಮ! ನೃಪಸತ್ತಮ! ಮಾಡಬೇಕಾದ ಮುಖ್ಯ ಕಾರ್ಯವನ್ನು ಬಿಟ್ಟು ಬಾಲಕನಂತೆ ಬೇರೆ ಏನನ್ನೋ ಮಾಡುತ್ತಿರುವೆ!”
01003182a ಏವಮುಕ್ತಸ್ತು ವಿಪ್ರೇಣ ಸ ರಾಜಾ ಪ್ರತ್ಯುವಾಚ ಹ111।
01003182c ಜನಮೇಜಯಃ ಪ್ರಸನ್ನಾತ್ಮಾ ಸಮ್ಯಕ್ ಸಂಪೂಜ್ಯ ತಂ ಮುನಿಂ112।।
ಆ ವಿಪ್ರನು ಹೀಗೆ ಹೇಳಲು ಪ್ರಸನ್ನಾತ್ಮ ರಾಜಾ ಜನಮೇಜಯನು ಮುನಿಯನ್ನು ಸರಿಯಾಗಿ ಪೂಜಿಸಿ ಉತ್ತರಿಸಿದನು:
01003183a ಆಸಾಂ ಪ್ರಜಾನಾಂ ಪರಿಪಾಲನೇನ ಸ್ವಂ ಕ್ಷತ್ರಧರ್ಮಂ ಪರಿಪಾಲಯಾಮಿ।
01003183c ಪ್ರಬ್ರೂಹಿ ವಾ ಕಿಂ ಕ್ರಿಯತಾಂ ದ್ವಿಜೇಂದ್ರ ಶುಶ್ರೂಷುರಸ್ಮ್ಯದ್ಯ ವಚಸ್ತ್ವದೀಯಂ113।।
“ಪ್ರಜಾಪಾಲನೆಯ ನನ್ನ ಕ್ಷಾತ್ರಧರ್ಮವನ್ನು ಪರಿಪಾಲಿಸುತ್ತಿದ್ದೇನೆ. ದ್ವಿಜೇಂದ್ರ! ಯಾವ ಕಾರ್ಯವನ್ನು ಮಾಡಬೇಕು? ಇಂದು ನಿನ್ನ ಮಾತುಗಳನ್ನು ಕೇಳಿ ಅದರಂತೆಯೇ ಮಾಡುತ್ತೇನೆ. ಹೇಳು!”
01003184a ಸ ಏವಮುಕ್ತಸ್ತು ನೃಪೋತ್ತಮೇನ ದ್ವಿಜೋತ್ತಮಃ ಪುಣ್ಯಕೃತಾಂ ವರಿಷ್ಠಃ।
01003184c ಉವಾಚ ರಾಜಾನಮದೀನಸತ್ತ್ವಂ ಸ್ವಮೇವ ಕಾರ್ಯಂ ನೃಪತೇಶ್ಚ ಯತ್ತತ್114।।
ನೃಪೋತ್ತಮನ ಈ ಮಾತುಗಳನ್ನು ಕೇಳಿ ಪುಣ್ಯಕೃತರಲ್ಲಿ ವರಿಷ್ಠ ದ್ವಿಜೋತ್ತಮನು ರಾಜನಿಗೆ ಹೇಳಿದನು: “ನೃಪತೇ! ನಿನ್ನದೇ ಆದ ಒಂದು ಕಾರ್ಯವಿದೆ.
01003185a ತಕ್ಷಕೇಣ ನರೇಂದ್ರೇಂದ್ರಯೇನ ತೇ ಹಿಂಸಿತಃ ಪಿತಾ।
01003185c ತಸ್ಮೈ ಪ್ರತಿಕುರುಷ್ವ ತ್ವಂ ಪನ್ನಗಾಯ ದುರಾತ್ಮನೇ।।
ನರೇಂದ್ರೇಂದ್ರ! ನಿನ್ನ ತಂದೆಯು ಯಾವ ತಕ್ಷಕನಿಂದ ಹಿಂಸೆಗೊಳಗಾಗಿದ್ದನೋ ಆ ದುರಾತ್ಮ ಪನ್ನಗನಿಗೆ ಪ್ರತೀಕಾರವನ್ನೆಸಗು!
01003186a ಕಾರ್ಯಕಾಲಂ ಚ ಮನ್ಯೇಽಹಂ ವಿಧಿದೃಷ್ಟಸ್ಯ ಕರ್ಮಣಃ।
01003186c ತದ್ಗಚ್ಛಾಪಚಿತಿಂ ರಾಜನ್ಪಿತುಸ್ತಸ್ಯ ಮಹಾತ್ಮನಃ।।
ವಿಧಿದೃಷ್ಟ ಕರ್ಮದ ಕಾರ್ಯಕಾಲವು ಒದಗಿದೆಯೆಂದು ತಿಳಿಯುತ್ತೇನೆ115. ರಾಜನ್! ನಿನ್ನ ಮಹಾತ್ಮ ತಂದೆಯ ಮೃತ್ಯುವಿನ ಸೇಡನ್ನು ತೀರಿಸಿಕೋ!
01003187a ತೇನ ಹ್ಯನಪರಾಧೀ ಸ ದಷ್ಟೋ ದುಷ್ಟಾಂತರಾತ್ಮನಾ।
01003187c ಪಂಚತ್ವಮಗಮದ್ರಾಜಾ ವಜ್ರಾಹತ ಇವ ದ್ರುಮಃ।।
ಅನಪರಾಧಿಯಾದ ಆ ರಾಜನು ದುಷ್ಟಾಂತರಾತ್ಮನಿಂದ ಕಚ್ಚಲ್ಪಟ್ಟು ಮಿಂಚಿನಿಂದ ಹೊಡೆಯಲ್ಪಟ್ಟ ವೃಕ್ಷದಂತೆ ಪಂಚತ್ವವನ್ನು ಹೊಂದಿದನು.
01003188a ಬಲದರ್ಪಸಮುತ್ಸಿಕ್ತಸ್ತಕ್ಷಕಃ ಪನ್ನಗಾಧಮಃ।
01003188c ಅಕಾರ್ಯಂ ಕೃತವಾನ್ಪಾಪೋ ಯೋಽದಶತ್ಪಿತರಂ ತವ।।
ತನ್ನ ಬಲದರ್ಪದಿಂದ ಉನ್ಮತ್ತನಾದ ಆ ಪನ್ನಗಾಧಮ ತಕ್ಷಕನು ನಿನ್ನ ತಂದೆಯನ್ನು ಕಚ್ಚುವ ಪಾಪ ಕಾರ್ಯವನ್ನು ಮಾಡಿದ್ದಾನೆ.
01003189a ರಾಜರ್ಷಿವಂಶಗೋಪ್ತಾರಮಮರಪ್ರತಿಮಂ ನೃಪಂ।
01003189c ಜಘಾನ ಕಾಶ್ಯಪಂ ಚೈವ ನ್ಯವರ್ತಯತ ಪಾಪಕೃತ್।।
ರಾಜರ್ಷಿಗಳ ವಂಶೋದ್ಧಾರಕ ಅಮರಪ್ರತಿಮ ನೃಪನನ್ನು ರಕ್ಷಿಸಲು ಬರುತ್ತಿದ್ದ ಕಾಶ್ಯಪನನ್ನು ಕೂಡ ಆ ಪಾಪಕರ್ಮಿಯು ಹಿಂದೆ ಕಳುಹಿಸಿದನು.
01003190a ದಗ್ಧುಮರ್ಹಸಿ116 ತಂ ಪಾಪಂ ಜ್ವಲಿತೇ ಹವ್ಯವಾಹನೇ।
01003190c ಸರ್ಪಸತ್ರೇ ಮಹಾರಾಜ ತ್ವಯಿ ತದ್ಧಿ ವಿಧೀಯತೇ117।।
ಮಹಾರಾಜ! ನಿನಗೆ ವಿಧಿಸಿರುವ ಸರ್ಪಸತ್ರದ ಪ್ರಜ್ವಲಿಸುವ ಹವ್ಯವಾಹನನಲ್ಲಿ ಆ ಪಾಪಿಯನ್ನು ಸುಟ್ಟುಹಾಕಬೇಕು.
01003191a ಏವಂ ಪಿತುಶ್ಚಾಪಚಿತಿಂ ಗತವಾಂಸ್ತ್ವಂ118 ಭವಿಷ್ಯಸಿ।
01003191c ಮಮ ಪ್ರಿಯಂ ಚ ಸುಮಹತ್ಕೃತಂ ರಾಜನ್ಭವಿಷ್ಯತಿ।।
ಇದರಿಂದ ನಿನ್ನ ತಂದೆಯ ಮರಣದ ಸೇಡು ತೀರುತ್ತದೆ ಮತ್ತು ರಾಜನ್! ನನಗೆ ಪ್ರಿಯವಾದ ಒಂದು ದೊಡ್ಡ ಕೆಲಸವನ್ನು ಮಾಡಿಕೊಟ್ಟಹಾಗೂ ಆಗುತ್ತದೆ.
01003192a ಕರ್ಮಣಃ ಪೃಥಿವೀಪಾಲ ಮಮ ಯೇನ ದುರಾತ್ಮನಾ।
01003192c ವಿಘ್ನಃ ಕೃತೋ ಮಹಾರಾಜ ಗುರ್ವರ್ಥಂ ಚರತೋಽನಘ।।
ಪೃಥಿವೀಪಾಲಕ! ಮಹಾರಾಜ! ಅನಘ! ನಾನು ಗುರುದಕ್ಷಿಣೆಯನ್ನು ತರುವಾಗ ಆ ದುರಾತ್ಮನು ವಿಘ್ನವನ್ನು ತಂದೊಡ್ಡಿದ್ದನು.”
01003193a ಏತಚ್ಛೃತ್ವಾ ತು ನೃಪತಿಸ್ತಕ್ಷಕಸ್ಯ ಚುಕೋಪ ಹ।
01003193c ಉತ್ತಂಕವಾಕ್ಯಹವಿಷಾ ದೀಪ್ತೋಽಗ್ನಿರ್ಹವಿಷಾ ಯಥಾ।।
ಉತ್ತಂಕನ ಈ ಮಾತುಗಳನ್ನು ಕೇಳಿದ ನೃಪತಿಯು ಉರಿಯುತ್ತಿರುವ ಅಗ್ನಿಯಲ್ಲಿ ತುಪ್ಪದ ಹವಿಸ್ಸನ್ನು ಹಾಕಿದರೆ ಅದು ಹೇಗೆ ಪ್ರಜ್ವಲಿಸುತ್ತದೆಯೋ ಹಾಗೆ ತಕ್ಷಕನ ಮೇಲೆ ಸಿಟ್ಟಿಗೆದ್ದನು.
01003194a ಅಪೃಚ್ಛಚ್ಚ ತದಾ ರಾಜಾ ಮಂತ್ರಿಣಃ ಸ್ವಾನ್ಸುದುಃಖಿತಃ।
01003194c ಉತ್ತಂಕಸ್ಯೈವ ಸಾನ್ನಿಧ್ಯೇ ಪಿತುಃ ಸ್ವರ್ಗಗತಿಂ ಪ್ರತಿ।।
ಬಹು ದುಃಖಿತನಾದ ರಾಜನು ಉತ್ತಂಕನ ಸನ್ನಿಧಿಯಲ್ಲಿಯೇ ತನ್ನ ತಂದೆಯ ಸ್ವರ್ಗಗತಿಯ ಕುರಿತು ಮಂತ್ರಿಗಳಲ್ಲಿ ಕೇಳಿದನು.
01003195a ತದೈವ ಹಿ ಸ ರಾಜೇಂದ್ರೋ ದುಃಖಶೋಕಾಪ್ಲುತೋಽಭವತ್।
01003195c ಯದೈವ ಪಿತರಂ ವೃತ್ತಮುತ್ತಂಕಾದಶೃಣೋತ್ತದಾ।।
ಉತ್ತಂಕನಿಂದ119 ತನ್ನ ತಂದೆಯ ವೃತ್ತಾಂತವನ್ನು ಕೇಳಿದ ರಾಜೇಂದ್ರನು ದುಃಖಶೋಕದಲ್ಲಿ ಮುಳುಗಿದನು120.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಷ್ಯಪರ್ವಣಿ ತೃತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಷ್ಯಪರ್ವದಲ್ಲಿ ಮೂರನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಷ್ಯಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಷ್ಯಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-1/18, ಉಪಪರ್ವಗಳು-3/100, ಅಧ್ಯಾಯಗಳು-3, ಶ್ಲೋಕಗಳು-648.
-
ಇದು ಸರ್ಪಸತ್ರವಲ್ಲ. ಈ ಯಜ್ಞದ ಉಲ್ಲೇಖವು ಶತಪಥ ಬ್ರಾಹ್ಮಣದಲ್ಲಿ ಬರುವ ಜನಮೇಯನನು ಕುರುಕ್ಷೇತ್ರದಲ್ಲಿ ಪೂರೈಸಿದ ಅಶ್ವಮೇಧ ಯಜ್ಞ. ↩︎
-
ನಾಯಿ . ↩︎
-
ಸರಮೆಯ ಮಗ – ಸಾರಮೇಯ. ಸರಮೆಗೆ ದೇವಶುನಿ ಅಂದರೆ ದೇವಲೋಕದ ನಾಯಿ ಎನ್ನುವ ಹೆಸರೂ ಇದೆ. ಋಗ್ವೇದದಲ್ಲಿ ಸರಮೆಯು ಇಂದ್ರನಿಗೆ ಕಳೆದುಹೋಗಿದ್ದ ಆಂಗೀರಸರ ಹಸುಗಳನ್ನು ಹುಡುಕಿಕೊಡುವುದರಲ್ಲಿ ಸಹಾಯಮಾಡಿತೆಂಬ ವಿಷಯವು ಬರುತ್ತದೆ. ಪಾಣೀ ಎಂಬ ರಾಕ್ಷಸರು ಆಂಗೀರಸರ ಹಸುಗಳನ್ನು ಕದ್ದು ಗುಹೆಯೊಂದರಲ್ಲಿ ಅಡಗಿಸಿದ್ದಾಗ, ಸರಮೆಯು ತನ್ನ ಪ್ರಾಕೃತಿಕ ಬುದ್ಧಿಯಿಂದ ಹಸುಗಳನ್ನು ಹುಡುಕಿಕೊಡುವುದರಲ್ಲಿ ಇಂದ್ರನಿಗೆ ಸಹಾಯಮಾಡಿದ್ದಳು. ಲೋಕದ ಎಲ್ಲ ನಾಯಿಗಳೂ ಸರಮೆಯಿಂದ ಬಂದವೆಂದು ಪ್ರತೀತಿಯಿದೆ. ದಕ್ಷನ ಒಬ್ಬ ಮಗಳ ಹೆಸರೂ ಸರಮೆಯೆಂದಿತ್ತು. ↩︎
-
ನ ಕಿಂಚಿದುಕ್ತವಂತಸ್ತೇ ಸಾ ತಾನುವಾಚ। ಅರ್ಥಾತ್: ಅವರು ಏನನ್ನೂ ಹೇಳದೇ ಇರಲು ಅವಳು ಅವರಿಗೆ ಹೇಳಿದಳು. ↩︎
-
ಅದೃಷ್ಟ ಎಂದರೆ ಇಲ್ಲಿ ಕಾರಣವಿಲ್ಲದ ಎಂದರ್ಥ. ಅನಿರೀಕ್ಷಿತವಾದ ಈ ಭಯವಾದರೂ ಏನು? ಸರ್ಪಸತ್ರವೇ? ↩︎
-
ಗತಃ । ↩︎
-
ಕಸ್ಮಿಂಶ್ಚಿತ್ ಸ್ವವಿಷಯ ↩︎
-
ತಸ್ಯಾಭಿರತಃ । ↩︎
-
ಶ್ರುತಶ್ರವನು ನಾಗ ತಕ್ಷಕನ ತಮ್ಮನೆಂದು ಕೆಲವು ಮೂಲಗಳು ತಿಳಿಸುತ್ತವೆ. ↩︎
-
ಪ್ರತ್ಯುವಾಚ ಜನಮೇಜಯಂ। ↩︎
-
ಜಾತಃ । ↩︎
-
ಜನಮೇಜಯನ ಪುರೋಹಿತನಾಗಿ ಮುಂದೆ ಸರ್ಪಸತ್ರವನ್ನು ನಡೆಸಿಕೊಟ್ಟ ಸೋಮಶ್ರವನು ನಾಗಕನ್ಯೆಯಲ್ಲಿ ಹುಟ್ಟಿದವನು ಮತ್ತು ಅವನೇ ಆಸ್ತೀಕನು ಕೇಳಿದುದನ್ನು ನೀಡಿ ತಕ್ಷಕನನ್ನು ಉಳಿಸಿಕೊಟ್ಟನು ಎನ್ನುವುದು ಗಮನಾರ್ಹ. ಆದರೆ ಸರ್ಪಸತ್ರದ ವಿವರಣೆಯಿರುವ ಆಸ್ತೀಕ ಪರ್ವದಲ್ಲಿ ಎಲ್ಲಿಯೂ ಸೋಮಶ್ರವನ ಹೆಸರು ಬರುವುದಿಲ್ಲವೆನ್ನುವುದೂ ಗಮನಾರ್ಹ. ↩︎
-
ಬಹುಷಃ ಇದೇ ಪುರೋಹಿತನು ಮುಂದೆ ಸರ್ಪಯಾಗದಲ್ಲಿ ಆಸ್ತೀಕನಿಗೆ ಯಾಗವನ್ನು ನಿಲ್ಲಿಸುವ ವಚನವನ್ನು ಕೊಡುತ್ತಾನೆ. ↩︎
-
ಇವನು ಪಾಂಡವರ ಪುರೋಹಿತ ಧೌಮ್ಯಋಷಿಯಲ್ಲ. ↩︎
-
ನಾಶಕತ್ । ↩︎
-
ಶಯಾನೇ ಚ ತಥಾ ↩︎
-
ತೇ ತಂ ↩︎
-
ಭಗವಂಸ್ತ್ವಯೈವ । ↩︎
-
ತಸ್ಮಾತ್ತತ್ರ ಸರ್ವೇ ಗಚ್ಛಾಮೋ ಯತ್ರ ಸ ಗತ ಇತಿ।। ↩︎
-
ಸ ಏವಮುಕ್ತಃ ಉಪಾಧ್ಯಾಯಃ ಪ್ರತ್ಯುವಾಚ। ↩︎
-
ಪಾಂಚಾಲ ಆರುಣಿ ಉದ್ದಾಲಕನು ಮುಂದೆ ಮಹಾ ಜ್ಞಾನಿಯಾಗಿ ಬೃಹದಾರಣ್ಯಕ ಮತ್ತು ಛಾಂದೋಗ್ಯ ಉಪನಿಷತ್ತುಗಳಲ್ಲಿ ಅವನ ಚಿಂತನೆ-ಉಪದೇಶಗಳನ್ನು ನೀಡಿದನು. “ತತ್ವಮಸಿ” ಎನ್ನುವ ಸೂತ್ರವನ್ನು ಉದ್ದಾಲಕನು ನೀಡಿದನೆಂದು ಹೇಳುತ್ತಾರೆ. ಅವನ ಮಗ ಮತ್ತು ಶಿಷ್ಯನ ಹೆಸರು ಶ್ವೇತಕೇತು. ಅನೇಕ ಸಾಮುದಾಯಿಕ ಅನ್ನದಾನಗಳನ್ನು ನೆರವೇರಿಸಿದುದರಿಂದ ಇವನಿಗೆ ವಾಜಶ್ರವಸ ಎಂಬ ಹೆಸರೂ ಇತ್ತು. ಬಹಳ ಮುಂಗೋಪಿಯಾಗಿದ್ದ ಆ ವಾಜಶ್ರವಸನ ಮಗನೇ ನಚಿಕೇತ ಎಂದು ಕಠೋಪನಿಷತ್ತಿನಲ್ಲಿ ಬರುತ್ತದೆ. ↩︎
-
ತಂ ಚೋಪಾಧ್ಯಾಯಃ ↩︎
-
ದಿವಸಕ್ಷಯೇ ಗುರುಗೃಹಮಾಗಮ್ಯೋಪಾಧ್ಯಾಯಸ್ಯಾಗ್ರತಃ ↩︎
-
ಭೋ ಭೈಕ್ಷ್ಯೇಣ ↩︎
-
ಮಯ್ಯನಿವೇದ್ಯ । ↩︎
-
ಸ ತಥೇತ್ಯುಕ್ತ್ವಾ ಭೈಕ್ಷ್ಯಂ ಚರಿತ್ವೋಪಾಧ್ಯಾಯಾಯ ನ್ಯವೇದಯತ್। ಸ ತಸ್ಮಾದುಪಾಧ್ಯಾಯಃ ಸರ್ವಮೇವ ಭೈಕ್ಷ್ಯಮಗೃಹ್ಣಾತ್। ಅರ್ಥಾತ್: ಅವನು ಹಾಗೆಯೇ ಆಗಲೆಂದು ಹೇಳಿ ಭಿಕ್ಷೆಯನ್ನು ಬೇಡಿ, ಉಪಾಧ್ಯಾಯನಿಗೆ ನಿವೇದಿಸಿದನು. ಉಪಾಧ್ಯಾಯನು ಅವನ ಆ ಎಲ್ಲ ಭಿಕ್ಷೆಯನ್ನೂ ತಾನೇ ಸ್ವೀಕರಿಸಿದನು. ↩︎
-
ಅಹನಿ ರಕ್ಷಿತ್ವಾ ನಿಶಾಮುಖೇ ಗುರುಕುಲಮಾಗಮ್ಯ ಗುರೋರಗ್ರತಃ ಸ್ಥಿತ್ವಾ ನಮಶ್ಚಕ್ರೇ। ↩︎
-
ಉಪಾಧ್ಯಾಯಂ । ↩︎
-
ಅನ್ಯೇಷಾಮಪಿ ಭೈಕ್ಷ್ಯೋಪಜೀವಿನಾಂ ವೃತ್ಯುಪರೋಧಂ ಕರೋಪಿ ಇತ್ಯೇವಂ ವರ್ತಮಾನೋ। ↩︎
-
ವತ್ಸೋಪಮನ್ಯೋ ಅಹಂ ↩︎
-
ಭೃಶಂ ಕೇನ । ↩︎
-
ಸ ಏವಮುಕ್ತಸ್ತಮುಪಾಧ್ಯಾಯಂ ಪ್ರತ್ಯುವಾಚ। ↩︎
-
ತಮುವಾಚೋಪಾಧ್ಯಾಯೋ । ↩︎
-
ಮಯಾ ನಾಭ್ಯನುಜ್ಞಾತಮಿತಿ। ↩︎
-
ಪೀವಾನಮೇವ ದೃಷ್ಟ್ವೋವಾಚ। ↩︎
-
ವತ್ಸೋಪಮನ್ಯೋ । ↩︎
-
ಭೃಶಂ ಕೇನೇದಾನೀಂ ↩︎
-
ಸ್ತನಾತ್ ಪಿಬಂತ ಉದ್ಗಿರಂತಿ। ↩︎
-
ಸ ತಥೇತಿ ಪ್ರತಿಶ್ರುತ್ಯ ಪುನರರಕ್ಷದ್ಗಾಃ। ↩︎
-
ಕ್ಷಾರತಿಕ್ತಕಟುರೂಕ್ಷೈಸ್ತೀಕ್ಷ್ಣವಿಪಾಕೈಶ್ಚಕ್ಷುಷ್ಯುಪಹತೋಽಂಧೋ ಬಭೂವ। ↩︎
-
ತತಃ ಸೋಽಂಧೋಽಪಿ ಚಂಕ್ರಮ್ಯಮಾಣಃ ಕೂಪೇ ಪಪಾತ। ↩︎
-
ಅಥ ತಸ್ಮಿನ್ನನಾಗಚ್ಛತಿ ಸೂರ್ಯೇ ಚಾಸ್ತಾಚಲಾವಲಂಬಿನಿ ಉಪಾಧ್ಯಾಯಃ ಶಿಷ್ಯಾನವೋಚತ್। ↩︎
-
ನಾಯಾತ್ಯುಪಮನ್ಯುಸ್ತ ಊಚುರ್ವನಂ ಗತೋ ಗಾ ರಕ್ಷಿತುಮಿತಿ। ತಾನಾಹ ಉಪಾಧ್ಯಾಯೋ। ↩︎
-
ಋಗ್ವೇದದ ಪ್ರಕಾರ ಅಶ್ವಿನೀ ಕುಮಾರರು ದೇವಲೋಕದ ಅಶ್ವಾರೋಹಿಗಳು – ಮೋಡಗಳ ಅಧಿದೇವತೆ ಶರಣ್ಯ ಮತ್ತು ವಿವಸ್ವತನ ರೂಪದಲ್ಲಿದ್ದ ಸೂರ್ಯ – ಇವರಿಬ್ಬರಿಗೆ ಹುಟ್ಟಿದ ಅವಳಿ ಮಕ್ಕಳು. ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಬೆಳಕನ್ನು ಸೂಚಿಸುವ ಇವರೀರ್ವರು ವೈದಿಕ ದೇವತೆಗಳು ಈ ಎರಡು ಸಂಧ್ಯಾಕಾಲಗಳಲ್ಲಿ ಬಂಗಾರದ ರಥದ ಮೇಲೆ ಆಕಾಶದಲ್ಲಿ ಕಾಣಿಸಿಕೊಂಡು ಮನುಷ್ಯರಿಗೆ ಸಂಪತ್ತನ್ನು ನೀಡಿ, ವಿಘ್ನ ಮತ್ತು ರೋಗರುಜಿನಗಳಿಂದ ಮುಕ್ತಿಯನ್ನು ನೀಡುವರು ಎಂಬ ನಂಬಿಕೆ. ಇವರಿಬ್ಬರನ್ನೂ ದೇವವೈದ್ಯರೆಂದೂ ಆಯುರ್ವೇದದ ಅಧಿದೇವತೆಗಳೆಂದೂ ಪರಿಗಣಿಸಿದ್ದಾರೆ. ಋಗ್ವೇದದಲ್ಲಿ ಅವರನ್ನು ನಾಸತ್ಯ ಅಂದರೆ ಕರುಣೆಯುಳ್ಳವರು ಮತ್ತು ಸಹಾಯಶೀಲರು ಎಂದು ಕರೆಯಲ್ಪಟ್ಟಿದೆ. ಋಗ್ವೇದದಲ್ಲಿ ಅಶ್ವಿನಿಯರ ಹೆಸರು ಒಟ್ಟು 376 ಬಾರಿ ಕಂಡುಬರುತ್ತದೆ ಮತ್ತು ಅದರಲ್ಲಿ ಇವರಿಗೆ ಸಂಬಂಧಿಸಿದ 57 ಮಂತ್ರಗಳಿವೆ. ↩︎
-
ತಪಸಾ ಹ್ಯನಂತೌ ↩︎
-
ಕ್ಷಿಪಂತೌ । ↩︎
-
ಅಶ್ವಿನೀದೇವತೆಗಳು ಸೂರ್ಯ ಮತ್ತು ಸಂಜ್ಞೆಯರ ಮಕ್ಕಳು. ಸೂರ್ಯನ ತಾಪವನ್ನು ತಡೆಯಲಾರದೇ ಸಂಜ್ಞೆಯು ಅವನನ್ನು ತೊರೆದು ಉತ್ತರ ಕುರುವಿನಲ್ಲಿ ಕುದುರೆಯ ರೂಪವನ್ನು ಧರಿಸಿ ಸಂಚರಿಸುತ್ತಿರುವಾಗ ತನ್ನ ಭಾರ್ಯೆಯ ರೂಪವನ್ನೇ ಧರಿಸಿಕೊಂಡು ಸೂರ್ಯನು ಅವಳ ಮುಖದ ಎದಿರು ಬಂದನು. ಪರಪುರುಷನೊಂದಿಗೆ ಮೈಥುನವಾಗಬಾರದೆಂದು ಸಂಜ್ಞೆಯು ಸೂರ್ಯನ ವೀರ್ಯವನ್ನು ತನ್ನ ಮೂಗುಗಳಿಂದ ಹೊರಚೆಲ್ಲಿದಳು. ಅದರಿಂದ ಅಶ್ವಿನೀದೇವತೆಗಳಿಬ್ಬರು ಹುಟ್ಟಿದರು. (ಮಹಾಭಾರತದ ಖಿಲಭಾಗ ಹರಿವಂಶ, ಹರಿವಂಶಪರ್ವ, ಅಧ್ಯಾಯ 9). ↩︎
-
ದಿಕ್ಕಿನ ಮಾರ್ಗದರ್ಶಕರಾದ, ಆದಿಯಲ್ಲಿಯೇ ಹುಟ್ಟಿದ, ಅನಂತ ಮತ್ತು ಉರಿಯುತ್ತಿರುವ ಚಿತ್ರಭಾನುಗಳೇ ನಿಮ್ಮನ್ನು ನಾನು ಸ್ತುತಿಸುತ್ತಿದ್ದೇನೆ. ನೀವು ದಿವ್ಯರು, ಸುಪರ್ಣರು, ವಿಮಾನಗಳಲ್ಲಿ ವಿರಜಿಸುತ್ತಾ ವಿಶ್ವದ ಭುವನಗಳ ಮೇಲೆ ಇಳಿಯುವವರು. ↩︎
-
ಶುಕ್ಲಂ ವಯಂತೌ ತರಸಾ ಸುವೇಮಾವಧಿವ್ಯಯಂತಾವಸಿತಂ ವಿವಸ್ವತಃ ।। ↩︎
-
ಮೊನಚಾದ ಕೊಕ್ಕೆಗಳನ್ನುಳ್ಳ ಹಿರಣ್ಮಯ ಪಕ್ಷಿಗಳೇ, ನಾಸತ್ಯರೇ, ಸುನಸರೇ, ವೈಜಂತರೇ, ಮಗ್ಗದ ಮೇಲೆ ವೈವಸ್ವತನ ಬಿಳಿ ಮತ್ತು ಕಪ್ಪು ಕಿರಣಗಳ ನೂಲನ್ನು ಎಣೆಯುವವರೇ! ↩︎
-
ವಸತ್ತಮಾ । ↩︎
-
ಋಗ್ವೇದ ಸಂಹಿತೆ ಮಂಡಲ 1, ಅಧ್ಯಾಯ 17, ಸೂಕ್ತ 116ರಲ್ಲಿ ಈ ಮಂತ್ರವಿದೆ: ಅಸ್ನೋವ್ಯಕಸ್ಯ ವರ್ತಿಕಾಮಭೀಕೇ ಯುವಂ ಹ ನಾಸತ್ಯಾ ಮುಮುಕ್ತಮ್। ಉತೋಕವಿಂ ಪುರುಭುಜಾ ಯುವಂ ಹ ಕೃಪಮಾಣಮಕೃತಂ ವಿಚಕ್ಷೇ।। ಅರ್ಥಾತ್: ಅರಣ್ಯದಲ್ಲಿ ಒಂದು ನಾಯಿಗೂ ಗುಬ್ಬಚ್ಚಿಗೂ ಜಗಳವಾಗಿ ಗುಬ್ಬಚ್ಚಿಯನ್ನು ನಾಯಿಯು ಕಚ್ಚಿಕೊಂಡಾಗ ಅಶ್ವಿನೀದೇವತೆಗಳು ನಾಯಿಯ ಬಾಯಲ್ಲಿ ಸಿಕ್ಕಿಬಿದ್ದಿದ್ದ ಗುಬ್ಬಚ್ಚಿಯನ್ನು ರಕ್ಷಿಸಿದರು. (ಭಾರತ ದರ್ಶನ) ↩︎
-
ಸುಪರ್ಣನ ಬಲದಿಂದ ಗ್ರಸ್ತರಾದ ಸುಭಗವನ್ನು ಅಶ್ವಿನಿಯರು ಬಿಡುಗಡೆ ಮಾಡಿದರು. ನಿಮ್ಮ ಮಾಯಾ ಧನುಸ್ಸಿನಿಂದ ಅರುಣೋದಯದಲ್ಲಿ ಅಪಹರಿಸಲ್ಪಟ್ಟ ಗೋವುಗಳನ್ನು ರಕ್ಷಿಸಿದಿರಿ. ↩︎
-
ಘರ್ಮ ಎಂದರೆ ಬಿಸಿಯಾದ ತುಪ್ಪಕ್ಕೆ ಹಾಲನ್ನು ಸೇರಿಸಿದ ಒಂದು ದ್ರವ್ಯ ವಿಶೇಷ. ಹಾಲು ಮತ್ತು ತುಪ್ಪವನ್ನು ಸಂಗ್ರಹಲು ಪ್ರತ್ಯೇಕ ಹಸುಗಳನ್ನು ಬಳಸುತ್ತಾರೆ. ಗವಾಮಯನ ಎಂಬ ಒಂದು ವರ್ಷದ ಸತ್ರಯಾಗದಲ್ಲಿ 360 ದಿವಸಗಳಲ್ಲಿಯೂ ಅಶ್ವಿನೀದೇವತೆಗಳನ್ನು ಉದ್ದೇಶಿಸಿ ಘರ್ಮವನ್ನು ಹೋಮಮಾಡುತ್ತಾರೆ. (ಭಾರತ ದರ್ಶನ) ↩︎
-
ದಕ್ಷಿಣಾಯನದ ದೀರ್ಘವಾದ ಐದು ದಿನಗಳನ್ನೂ ಉತ್ತರಾಯಣದ ದೀರ್ಘವಾದ ಐದು ದಿನಗಳನ್ನೂ ಇಲ್ಲಿ ಉದ್ದ ಅರಗಳೆಂದು ವರ್ಣಿಸಿರುವಂತಿದೆ (ಭಾರತ ದರ್ಶನ) ↩︎
-
ಆರು ಕಬ್ಬಿಣದ ಅಥವಾ ಮರದ ಬಳೆಗಳನ್ನು ಕ್ರಮವಾಗಿ ಜೋಡಿಸಿ ಒಂದೊಂದು ಬಳೆಯಲ್ಲಿ ಎರಡೆರಡು ಮಾಸಗಳೆಂಬ ಗೂಟಗಳನ್ನು ಜೋಡಿಸಿದಂತಿದೆ ಎಂಬ ಕಲ್ಪನೆಯು ಇಲ್ಲಿ ಕಂಡುಬರುತ್ತದೆ. (ಭಾರತ ದರ್ಶನ) ↩︎
-
ಹಿಂದಿನ ಶ್ಲೋಕದಲ್ಲಿ ವರ್ಣಿಸಿರುವುದು 360 ದಿವಸಗಳ ಸಾವನವರ್ಷ. ಇಲ್ಲಿ ಚಾಂದ್ರ-ಸೌರಸಂವತ್ಸರಗಳನ್ನು ಚಕ್ರವೆಂದು ವರ್ಣಿಸಿರುವಂತಿದೆ. (ಭಾರತ ದರ್ಶನ) ↩︎
-
ತದ್ದಷ್ಟಿಮಹ್ನಾ ಪ್ರಸ್ಥಿತೌ ಬಲಸ್ಯ । ↩︎
-
ನೀರು ಉತ್ತಮವಾದ ಪ್ರಕೃತಿಚಿಕಿತ್ಸೆಯ ಔಷಧಿ ಎಂದು ವೇದಗಳು ಹೇಳುತ್ತವೆ. ಅಶ್ವಿನೀದೇವತೆಗಳು ನೀರಿನಿಂದಲೇ ಚಿಕಿತ್ಸೆಮಾಡುತ್ತಾರೆಂಬ ಅಭಿಪ್ರಾಯವನ್ನು ಈ ಸ್ತೋತ್ರವು ನೀಡುತ್ತದೆ. (ಭಾರತ ದರ್ಶನ) ↩︎
-
ತೌ ನಾಸತ್ಯಾವಶ್ವಿನೌ ವಾಂ ಮಹೇಽಹಂ । ↩︎
-
ಮಹಾಭಾರತದ ಖಿಲಭಾಗ ಹರಿವಂಶ, ಹರಿವಂಶಪರ್ವ, ಅಧ್ಯಾಯ 9. ↩︎
-
ವ್ಯಾಸರಹಸ್ಯಗಳೆಂದು ಹೇಳಲ್ಪಡುವ ಶ್ಲೋಕಗಳಲ್ಲಿ ಇದೂ ಒಂದು ಶ್ಲೋಕವೆಂದು ವಿದ್ವಾಂಸರು ಅಭಿಪ್ರಾಯಪಟ್ಟು ಇದಕ್ಕೆ ಅರ್ಥವಿವರಣೆಯನ್ನು ಈ ರೀತಿ ಮಾಡಿದ್ದಾರೆ. ಯಥಾರ್ಥವಾಗಿ ಇದರ ಅರ್ಥವು ಹೀಗಿದೆ: “ಇಬ್ಬರು ಯುವಕರು ಮುಖದಿಂದ ಗರ್ಭವನ್ನು ಧರಿಸಿದರು. ಮೃತನು ಇದನ್ನು ಪಾದತಲದಿಂದ ಹಡೆಯುತ್ತಾನೆ. ಹುಟ್ಟಿದ ಕೂಡಲೇ ಗರ್ಭವು ತಾಯಿಯನ್ನು ತಿಂದುಬಿಡುತ್ತದೆ. ಅಶ್ವಿನೀದೇವತೆಗಳೇ! ನೀವು ಜೀವನಕ್ಕಾಗಿ ಹಸುಗಳನ್ನು ಬಿಡುತ್ತೀರಿ!” ಈ ಅರ್ಥವು ಅನನ್ವಿತವೂ ವಿಚಿತ್ರವೂ ಆಗಿ ತೋರುತ್ತದೆ. ಆದರೆ ಈ ಶ್ಲೋಕದ ವಾಸ್ತವ ಅರ್ಥವು ಹೀಗಿರಬಹುದು: ಯುವಾನೌ=ಯುವಕ-ಯುವತಿಯರು ಮುಖೇನ=ಬಾಯಿಂದ ಗರ್ಭಂ=ಗರ್ಭಕ್ಕೆ ಕಾರಣವಾದ ಅನ್ನವನ್ನು ಲಭೇತಾಂ=ಪಡೆಯುತ್ತಾರೆ. ಅನಂತರ ಗತಾಸುಃ=ಅಚೇತನವಾದ ದೇಹವು ಏತತ್=ಈ ಗರ್ಭವನ್ನು ಪ್ರಪದೇನ=ಯೋನಿಯ ಮೂಲಕ ಸೂತೇ=ಪ್ರಸವಿಸುತ್ತದೆ. ಸದ್ಯೋಜಾತಃ=ಆಗತಾನೇ ಹುಟ್ಟಿದ ಗರ್ಭಃ=ಶಿಶುವು ಮಾತರಂ=ತಾಯಿಯ ಸ್ತನ್ಯವನ್ನು ಆತ್ತಿ=ಪಾನಮಾಡುತ್ತದೆ. ತೌ=ಚೇತನಾರೂಪವಾದ ಬ್ರಹ್ಮವಸ್ತುವೇ ಅಶ್ವಿನೌ=ಅಶ್ವಿನೀದೇವತೆಗಳಾಗಿ (ಸ್ತಃ=ಇದ್ದೀರಿ). ಜೀವಸೇ=ನನ್ನ ಜೀವನ ನಿರ್ವಾಹಕ್ಕಾಗಿ ಗಾಃ=ಕಣ್ಣುಗಳನ್ನು ಮುಂಚಥಃ=ದಯಪಾಲಿಸಿರಿ. ಅನ್ನವು ಶುಕ್ಲ-ಶೋಣಿತ ರೂಪವನ್ನು ಹೊಂದಿ ಗರ್ಭವಾಗಿ ಪರಿಣಮಿಸುತ್ತದೆ. ಆದರಿಂದ ಅನ್ನವನ್ನು ಗರ್ಭವೆಂದೂ ಕರೆಯುತ್ತಾರೆ. ಶಿಶುವಿಗೆ ಸ್ತನ್ಯಪಾನವನ್ನು ಮಾಡಬೇಕೆಂದು ಯಾರು ಹೇಳಿಕೊಡುತ್ತಾರೆ? ಅದಕ್ಕೆ ಜನ್ಮಾಂತರಸಂಸ್ಕಾರವೇ ಕಾರಣವೆಂದು ಒಪ್ಪಬೇಕಾಗುತ್ತದೆ. ಆ ಸಂಸ್ಕಾರವು ಈ ಶರೀರಕ್ಕಿಲ್ಲ. ಆದುದರಿಂದ ಶರೀರಗಳಲ್ಲಿ ಅನುಸ್ಯೂತವಾದ ಆತ್ಮನಿರುವನೆಂದು ಸಿದ್ಧವಾಗುತ್ತದೆ. ಆತ್ಮನು ಶರೀರವನ್ನು ಸನ್ಯಪಾನ ಮಾಡುವಂತೆ ಪ್ರೇರಿಸುತ್ತಾನೆ. (ಭಾರತ ದರ್ಶನ) ↩︎
-
ಸ್ತೋತುಂ ನ ಶಕ್ನೋಮಿ ಗುಣೈರ್ಭವಂತೌ ಚಕ್ಷುರ್ವಿಹೀನಃ ಪಥಿ ಸಂಪ್ರಮೋಹಃ। ದುರ್ಗೇಽಹಮಸ್ಮಿನ್ ಪತಿತೋಽಸ್ಮಿ ಕೂಪೇ ಯುವಾಂ ಶರಣ್ಯೌ ಶರಣಂ ಪ್ರಪದ್ಯೇ।। ಅರ್ಥಾತ್: ಗುಣವಂತರಾದ ನಿಮ್ಮನ್ನು ನಾನು ಸ್ತುತಿಸಲು ಶಕ್ಯನಿಲ್ಲ. ಕಣ್ಣುಗಳಿಲ್ಲದೇ ದಾರಿತಪ್ಪಿ ಈ ಕಷ್ಟಕರ ಬಾವಿಯಲ್ಲಿ ಬಿದ್ದಿದ್ದೇನೆ. ಶರಣ್ಯರಾದ ನಿಮ್ಮನ್ನು ಶರಣುಬಂದಿದ್ದೇನೆ. ↩︎
-
ಗುರವೇಽನಿವೇದ್ಯೇತಿ । ↩︎
-
ಸ ಏವಮುಕ್ತಃ ಪ್ರತ್ಯುವಾಚ । ↩︎
-
ಗುರವೋಽಪೂಪಮುಪಯೋಕ್ತುಮಿತಿ । ↩︎
-
ಗುರುಭಕ್ತ್ಯಾ । ↩︎
-
ಪ್ರತಿಭಾಸ್ಯಂತಿ ಸರ್ವಾಣಿ ಚ ಧರ್ಮಶಾಸ್ತ್ರಾಣೀತಿ । ↩︎
-
ಉಪಮನ್ಯುವಿನ ಕಥೆಯು ಮಹಾಭಾರತದ ಅನುಶಾಸನ ಪರ್ವದಲ್ಲಿ ಮುಂದುವರೆಯುತ್ತದೆ. ಉಪಮನ್ಯುವು ಶ್ರೀಕೃಷ್ಣನಿಗೆ ಶಿವ ಪರಮೇಶ್ವರನ ಮಹಿಮೆಗಳನ್ನು ಹೇಳಿ ಅವನಿಗೆ ಶಿವಮಂತ್ರವನ್ನು ಉಪದೇಶಿಸುತ್ತಾನೆ. ↩︎
-
ತಾವನ್ಮಮ ಗೃಹೇ ಕಂಚಿತ್ಕಾಲಂ ಶುಶ್ರೂಷುಣಾ ಚ ಭವಿತವ್ಯಂ । ↩︎
-
ಅಥ ಕಸ್ಮಿಂಶ್ಚಿತ್ ಕಾಲೇ ↩︎
-
ಕರಣೀಯಂ । ↩︎
-
ಸರ್ವಾನೇವ ಕಾಮಾನವಾಪ್ಸ್ಯಸಿ । ↩︎
-
ಏವಮಾಹುಃ । ↩︎
-
ಕುಂಡಲೇ ಭಿಕ್ಷಿತುಂ ತಸ್ಯ ಕ್ಷತ್ರಿಯಯಾ ಪಿನದ್ಧೇ । ↩︎
-
ತತ್ ಸಂಪಾದಯಸ್ವ ಏವಂ ಹಿ ಕುರ್ವತಃ ಶ್ರೇಯೋ ಭವಿತಾನ್ಯಥಾ ಕುತಃ ಶ್ರೇಯ ಇತಿ । ↩︎
-
ಪೌಷ್ಯ ಪರ್ವ ಎಂಬ ಹೆಸರನ್ನು ಈ ಪರ್ವಕ್ಕಿಡಲು ಇದೇ ಕಾರಣ ಎನ್ನಬಹುದು. ಆದರೆ ಈ ಪೌಷ್ಯರಾಜನು ಯಾರು? ಹಿಂದಿನ ಶ್ಲೋಕವೊಂದರಲ್ಲಿ ಜಯಮೇಜಯ ಮತ್ತು ಪೌಷ್ಯರಾಜರು ವೇದನನ್ನು ಪೌರೋಹಿತ್ಯಕ್ಕೆ ಕರೆದೊಯ್ಯುತ್ತಿದ್ದರು ಎಂದಿದೆ. ↩︎
-
ಆ ಕ್ಷಾತ್ರಿಣಿಯ ಕರ್ಣಕುಂಡಲಗಳ ವಿಶೇಷತೆ ಏನಿದ್ದಿರಬಹುದು? ↩︎
-
ಸಂಭ್ರಮಾದುತ್ಥಿತ ಏವಾಪ ಉಪಸ್ಪೃಶ್ಯ ಪ್ರತಸ್ಥೇ ಯತ್ರ ಸ ಕ್ಷತ್ರಿಯಃ । ↩︎
-
ಸ ಏವಮುಕ್ತಃ ಪೌಷ್ಯಃ ಕ್ಷಣಮಾತ್ರಂ ವಿಮೃಶ್ಯೋತ್ತಂಕಂ ಪ್ರತ್ಯುವಾಚ । ↩︎
-
ನಿಯತಂ ಭವಾನುಚ್ಛಿಷ್ಠಃ । ↩︎
-
ಅಸ್ತಿ ಖಲು ಮಯೋತ್ಥಿತೇನೋಪಸ್ಪೃಷ್ಟಂ ಗಚ್ಛತಾ ಚೇತಿ । ↩︎
-
ಏಷ ತೇ ವ್ಯತಿಕ್ರಮೋ ನೋತ್ಠಿತೇನೋಪಸ್ಪೃಷ್ಟಂ ಭವತೀತಿ ಶೀಘ್ರಂ ಗಚ್ಛತಾ ಚೇತಿ । ↩︎
-
ಸಂಭೃಶಂ ಪ್ರಾರ್ಥಯತಿ। ↩︎
-
ತಕ್ಷಕನಿಗೆ ಈ ಕುಂಡಲಗಳ ಅವಶ್ಯಕತೆ ಏನಿದ್ದಿರಬಹುದು? ↩︎
-
ತದಿಚ್ಛೇ ಶ್ರಾದ್ಧಂ ಕರ್ತುಂ ಕ್ರಿಯತಾಂ ಕ್ಷಣ ಇತಿ। ↩︎
-
ತಮುತ್ತಂಕಃ ಪ್ರತ್ಯುವಾಚ। ನ ಯುಕ್ತಂ ಭವತಾನ್ನಮಶುಚಿ ದತ್ವಾ ಪ್ರತಿಶಾಪಂ ದಾತುಂ ತಸ್ಮಾದನ್ನಮೇವ ಪ್ರತ್ಯಕ್ಷೀಕುರು। ಅರ್ಥಾತ್: ಅವನಿಗೆ ಉತ್ತಂಕನು ಹೇಳಿದನು: “ಅಶುಚಿ ಅನ್ನವನ್ನಿತ್ತು ಪ್ರತಿಶಾಪವನ್ನು ಕೊಡುವುದು ಯುಕ್ತವಲ್ಲ. ಆದುದರಿಂದ ಈ ಅನ್ನವನ್ನು ಪ್ರತ್ಯಕ್ಷ ನೋಡು!” ↩︎
-
ತದುಭಯಮೇದ್ ವಿಪರೀತಂ ↩︎
-
ಕ್ಷಪಣಕಮಾಗಚ್ಛಂತಂ । ↩︎
-
ಅಥೋತ್ತಂಕಸ್ತೇ ಕುಂಡಲೇ ಸಂನ್ಯಸ್ಯ ಭೂಮಾವುದಕಾರ್ಥಂ ಪ್ರಚಕ್ರಮೇ। ↩︎
-
ಕ್ಷಪಣಕಸ್ತ್ವರಮಾಣ । ↩︎
-
ತಮುತ್ತಂಕೋಽಭಿಸೃತ್ಯ ಕೃತೋದಕಕಾರ್ಯಃ ಶುಚಿಃ ಪ್ರಯತೋ ನಮೋ ದೇವೇಭ್ಯೋ ಗುರುಭ್ಯಶ್ಚ ಕೃತ್ವಾ ಮಹತಾ ಜವೇನ ತಮನ್ವಯಾತ್। ತಸ್ಯ ತಕ್ಷಕೋ ದೃಢಮಾಸನ್ನ ಸ ತಂ ಜಗ್ರಾಹ। ↩︎
-
ಗೃಹೀತಮಾತ್ರಃ ಸ ↩︎
-
ಅಥೋತ್ತಂಕಸ್ತಸ್ಯಾಃ ಕ್ಷತ್ರಿಯಾಯಾ ವಚಃ ಸ್ಮೃತ್ವಾ ತಂ ತಕ್ಷಕಮನ್ವಗಚ್ಛತ್। ಸ ತದ್ಬಿಲಂ ದಂಡಕಾಷ್ಠೇನ ಚಖಾನ ನ ಚಾಶಾಕತ್। ತಂ ಕ್ಲಿಶ್ಯಮಾನಮಿಂದ್ರೋಽಪಶ್ಯತ್ಸ ವಜ್ರಂ ಪ್ರೇಷಯಾಮಾಸ। ಗಚ್ಛಾಸ್ಯ ಬ್ರಾಹ್ಮಣಸ್ಯ ಸಾಹಾಯ್ಯಂ ಕುರುಷ್ವೇತಿ। ಅಥ ವಜ್ರಂ ದಂಡಕಾಷ್ಠಮನುಪ್ರವಿಷ್ಯ ತದ್ಬಿಲಮದಾರಯತ್। ಅರ್ಥಾತ್: ಆಗ ಉತ್ತಂಕನು ಆ ಕ್ಷತ್ರಿಣಿಯ ಮಾತನ್ನು ಸ್ಮರಿಸಿಕೊಂಡು ಆ ತಕ್ಷಕನನ್ನು ಅನುಸರಿಸಿದನು. ಅವನು ಆ ಬಿಲವನ್ನು ಮರದ ಕೋಲಿನಿಂದ ಅಗೆಯತೊಡಗಿದನು. ಅದರಿಂದ ಶಕ್ಯವಾಗಲಿಲ್ಲ. ಅವನು ಕಷ್ಟಪಡುತ್ತಿರುವುದನ್ನು ನೋಡಿ ಇಂದ್ರನು ವಜ್ರವನ್ನು “ಹೋಗು! ಈ ಬ್ರಾಹ್ಮಣನಿಗೆ ಸಹಾಯ ಮಾಡು!” ಎಂದು ಕಳುಹಿಸಿದನು. ಆಗ ವಜ್ರವು ದಂಡಕಾಷ್ಠವನ್ನು ಪ್ರವೇಶಿಸಿ ಆ ಬಿಲವನ್ನು ಕೊರೆಯಿತು. ↩︎
-
ತಂ ನಾಗಲೋಕಮಪರ್ಯಂತಮನೇಕವಿಧಪ್ರಾಸಾದಹರ್ಮ್ಯವಲಭೀನಿರ್ಯೂಹಶತಸಂಕುಲಮುಚ್ಚಾವಚಕ್ರೀಡಾಶ್ಚರ್ಯಸ್ಥಾನಾವಕೀರ್ಣಮಪಶ್ಯತ್। ಸ ತತ್ರ ↩︎
-
ಕ್ಷರಂತ । ↩︎
-
ಸುರೂಪಾ ಬಹುರೂಪಾಶ್ಚ । ↩︎
-
ನಾಗವೇಶ್ಮಾನಿ । ↩︎
-
ತತ್ರಸ್ಥಾನಪಿ ಸಂಸ್ತೌಮಿ ಮಹತಃ ಪನ್ನಗಾನಹಮ್। ↩︎
-
ದೂರಪಥಂ । ↩︎
-
ಕುರುಕ್ಷೇತ್ರಂ ಚ ವಸತಾಂ ↩︎
-
ಏವಂ ಸ್ತುತ್ವಾ ಸ ವಿಪ್ರರ್ಷಿರುತ್ತಂಕೋ ಭುಜಗೋತ್ತಮಾನ್। ನೈವ ತೇ ಕುಂಡಲೇ ಲೇಭೇ ತತಶ್ಚಿಂತಾಮುಪಾಗಮತ್।। ಅರ್ಥಾತ್: ಹೀಗೆ ವಿಪ್ರರ್ಷಿ ಉತ್ತಂಕನು ಭುಜಗೋತ್ತಮರನ್ನು ಸ್ತುತಿಸಿದರೂ ಅವನಿಗೆ ಕುಂಡಲಗಳು ಲಭಿಸಲಿಲ್ಲ. ಆಗ ಅವನಿಗೆ ಚಿಂತೆಯುಂಟಾಯಿತು. ↩︎
-
ಸ ತಾನ್ ಸರ್ವಾಸ್ತುಷ್ಟಾವ ಏಭಿರ್ಮಂತ್ರವದೇವ ಶ್ಲೋಕೈಃ। ↩︎
-
ಅಥ ತಸ್ಮಿನ್ನಂತರೇ ಸ ಉತ್ತಂಕಃ ಪ್ರವಿಶ್ಯ ಉಪಾಧ್ಯಾಯಕುಲಮುಪಾಧ್ಯಾಯನೀಮಭ್ಯವಾದಯತ್। ↩︎
-
ಗತಃ । ↩︎
-
ಸ ಚಾಪಿ ಕಿಂ। ↩︎
-
ಪುರೀಷಮುಪಯುಕ್ತಂ ಸ ಚಾಪಿ ಕಃ। ↩︎
-
ತದೇತದ್ ಭವತೋಪದಿಶ್ಃಟಮಿಚ್ಛೇಯಂ ಶ್ರೋತುಂ ಕಿಂ ತದಿತಿ। ↩︎
-
ತದಪಿ ತಚ್ಚಕ್ರಂ ದ್ವಾದಶಾರಂ ಷಡ್ವೈ ಕುಮಾರಾಃ ಪರಿವರ್ತಯಂತಿ ತೇಽಪಿ ಷಡೃತವಃ ದ್ವಾದಶಾರಾ ದ್ವಾದಶ ಮಾಸಾಃ ಸಂವತ್ಸರಶ್ಚಕ್ರಮ್। ↩︎
-
ಇಂದ್ರ । ↩︎
-
ಏವಮುಕ್ತಸ್ತು ವಿಪ್ರೇಣ ಸ ರಾಜಾ ಜನಮೇಜಯಃ। ↩︎
-
ಅರ್ಚಯಿತ್ವಾ ಯಥಾನ್ಯಾಯಂ ಪ್ರತ್ಯುವಾಚ ದ್ವಿಜೋತ್ತಮಮ್।। ↩︎
-
ಪ್ರಬ್ರೂಹಿ ಮೇ ಕಿಂ ಕರಣೀಯಮದ್ಯ ಯೇನಾಸಿ ಕಾರ್ಯೇಣ ಸಮಾಗತಸ್ತ್ವಮ್।। ↩︎
-
ಸ್ವಮೇವ ಕಾರ್ಯಂ ನೃಪತೇ ಕುರುಷ್ವ। ↩︎
-
ಉತ್ತಂಕನು ಸೂಚಿಸುತ್ತಿರುವ ಸರ್ಪಸತ್ರವು ವಿಧಿದೃಷ್ಟ ಅಂದರೆ ವಿಧಿವಿಹಿತವಾಗಿದ್ದುದು ಎನ್ನುವುದು ಆಸ್ತೀಕಪರ್ವದಲ್ಲಿಯೂ ಬರುತ್ತದೆ. ↩︎
-
ಹೋತುಮರ್ಹಸಿ । ↩︎
-
ಸರ್ಪಸತ್ರೇ ಮಹಾರಾಜ ತ್ವರಿತಂ ತದ್ವಿಧೀಯತಾಮ್। ↩︎
-
ಕೃತವಾಂಸ್ತ್ವಂ । ↩︎
-
ಉತ್ತಂಕನ ಕಥೆಯು ಮಹಾಭಾರತದ ಅಶ್ವಮೇಧಿಕ ಪರ್ವದಲ್ಲಿ ಇನ್ನೊಮ್ಮೆ ಬರುತ್ತದೆ. ಅದರಲ್ಲಿ ಉತ್ತಂಕನ ಗುರು ಗೌತಮ. ವನಪರ್ವದ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಮಧು-ಕೈಟಭರ ಮಗ ದುಂಧುವಿನ ಸಂಹಾರದ ಸನ್ನಿವೇಶದಲ್ಲಿ ಕೂಡ ಉತ್ತಂಕನೆಂಬ ಮುನಿಯ ಕಥೆಯು ಬರುತ್ತದೆ. ↩︎
-
ಗೋರಖಪುರ ಸಂಪುಟದಲ್ಲಿ ಈ ಅಧ್ಯಾಯದಲ್ಲಿರುವ ಶ್ಲೋಕಗಳ ಒಟ್ಟು ಸಂಖ್ಯೆ 188. ↩︎